ನವದೆಹಲಿ : ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆಯಡಿ ಪಾಕಿಸ್ತಾನ ವಾಯು ನೆಲೆಗಳ ಮೇಲೆ ಭಾರತದ ನಿಖರವಾದ ದಾಳಿ ನಡೆಸಿದ ನಂತರ ಪಾಕಿಸ್ತಾನ ನಕಲಿ ಉಪಗ್ರಹ ಚಿತ್ರಗಳು, ಫೋಟೋಗಳನ್ನು ಹಂಚಿಕೊಂಡು ಭಾರತದ ಮೇಲೆ ದಾಳಿ ನಡೆಸಿದ್ದೇವೆ ಎಂದು ತಪ್ಪು ಮಾಹಿತಿ ನೀಡುತ್ತಿರುವುದು ಈಗ ಬಯಲಾಗಿದೆ.
ಪಂಜಾಬ್ನ ಆದಂಪುರ ಮತ್ತು ಗುಜರಾತ್ನ ಭುಜ್ನಲ್ಲಿ ಭಾರತೀಯ ವಾಯುನೆಲೆಗಳ ಮೇಲೆ ಯಶಸ್ವಿ ದಾಳಿಗಳನ್ನು ನಡೆಸಿರುವುದಾಗಿ ಪಾಕಿಸ್ತಾನ ಹೇಳಿಕೊಂಡಿದೆ. ಆದರೆ, ಬಹು ಸ್ಯಾಟಲೈಟ್ ಚಿತ್ರಗಳ ಸ್ವತಂತ್ರ ಪರಿಶೀಲನೆಯಲ್ಲಿ ಪಾಕಿಸ್ತಾನದ ಈ ಹೇಳಿಕೆಗಳು ಕಟ್ಟುಕಥೆಗಳೆಂದು ಗೊತ್ತಾಗಿದೆ.
ಈ ವಿಚಾರದಲ್ಲಿ ಉಭಯ ರಾಷ್ಟ್ರಗಳ ಹೇಳಿಕೆಯನ್ನು ವ್ಯವಸ್ಥಿತವಾಗಿ ಪರಿಶೀಲಿಸಿದ ಟಾಪ್ ಓಪನ್ ಸೋರ್ಸ್ ಇಂಟೆಲಿಜೆನ್ಸ್ (OSINT) ವಿಶ್ಲೇಷಕ ಡೇಮಿಯನ್ ಸೈಮನ್ ಅವರು, ಇದರ ಹಿಂದಿನ ಸತ್ಯವನ್ನು ಬಹಿರಂಗಪಡಿಸಿದ್ದಾರೆ ಹಾಗೂ ಪಾಕಿಸ್ತಾನದ ಹೇಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಭಾರತದ ಸೇನಾಪಡೆಗಳಿಂದ ಆದ ಹಾನಿಯ ಮುಜುಗರಿಂದ ತಪ್ಪಿಸಿಕೊಳ್ಳಲು ಪಾಕಿಸ್ತಾನ ತಪ್ಪು ಮಾಹಿತಿ ನೀಡುತ್ತಿದೆ. ಇದಕ್ಕಾಗಿ ಹಳೆಯ ಚಿತ್ರಗಳನ್ನು ಬಳಸಿದೆ ಎಂಬುದು ಸೈಮನ್ ಅವರ ವಿಶ್ಲೇಷಣೆಯಲ್ಲಿ ಬಹಿರಂಗವಾಗಿದೆ
‘ಸುಖೋಯ್’ ಹಾನಿ ಕುರಿತು ವರದಿ ಸುಳ್ಳು: ಕಳೆದ ತಿಂಗಳು ನಡೆದ ನಾಲ್ಕು ದಿನಗಳ ಮಿಲಿಟರಿ ಸಂಘರ್ಷದ ವೇಳೆಯಲ್ಲಿ ಆದಂಪುರ ವಾಯುನೆಲೆಯಲ್ಲಿ ಚೀನಾ ನಿರ್ಮಿತ ಜೆಎಫ್-17 ಫೈಟರ್, ಭಾರತದ ಜೆಟ್ ಸುಖೋಯ್ ಸು-30 ಯುದ್ಧ ವಿಮಾನವನ್ನು ಹಾನಿಗೊಳಿಸಿದೆ ಎಂದು ಪಾಕಿಸ್ತಾನದ ವರದಿಗಳು ಹೇಳಿದ್ದವು. ಆದರೆ ಅದು ಹೇಳಿಕೊಂಡ ಚಿತ್ರವು ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷಕ್ಕೂ ಮುಂಚಿನ ದಿನಾಂಕವನ್ನು ಹೊಂದಿದೆ. ವಿಮಾನವು ನಿಯಮಿತ ನಿರ್ವಹಣೆಯಲ್ಲಿರುವ ಮಿಗ್-29 ಆಗಿತ್ತು. ಹಾನಿ ಎಂದು ಹೇಳಿರುವುದು ಕ್ಷಿಪಣಿ ಹೊಡೆತದ್ದಲ್ಲ, ಪರೀಕ್ಷೆಯಿಂದ ಎಂಜಿನ್ನಲ್ಲಿ ಮಸಿ ಸಂಗ್ರಹವಾಗಿರುವುದು ಎಂದು ಉನ್ನತ ಚಿತ್ರಣ ವಿಶ್ಲೇಷಕ ಡೇಮಿಯನ್ ಸೈಮನ್ ಸ್ಪಷ್ಟಪಡಿಸಿದ್ದಾರೆ.
ಅದಂಪುರದಲ್ಲಿ S-400 ಕ್ಷಿಪಣಿ ಹಾನಿಯಾಗಿದೆ ಎಂದು ಪಾಕ್ ಹೇಳಿಕೊಂಡಿತ್ತು.ಆದರೆ, ನಿಜವಾದ ಉಪಗ್ರಹ ಚಿತ್ರಗಳ ಜೊತೆ ಹೋಲಿಸಿದರೆ ಸ್ಥಳದಲ್ಲಿ ಅಂತಹ ಯಾವುದೇ ಗುರುತುಗಳು ಕಂಡುಬಂದಿಲ್ಲ ಎಂಬುದು ಸ್ಪಷ್ಟವಾಗಿದೆ. ಈ ಉಪಗ್ರಹ ಚಿತ್ರವನ್ನು ಡಿಜಿಟಲ್ ಆಗಿ ಸಂಪಾದಿಸಲಾಗಿದೆ. ಬಾಂಬ್ ಕುಳಿಗಳು ಇರುವಂತಹ ಕಪ್ಪು ಚುಕ್ಕೆಗಳನ್ನು ಸೇರಿಸಲಾಗಿದೆ. ಕದನ ವಿರಾಮ ಒಪ್ಪಂದ ಜಾರಿಯಾದ ಮೂರು ದಿನಗಳ ನಂತರ ಮೇ 13 ರಂದು ಪ್ರಧಾನಿ ನರೇಂದ್ರ ಮೋದಿ ಅದಂಪುರ ವಾಯುನೆಲೆಗೆ ಭೇಟಿ ನೀಡಿದಾಗ ಪಾಕಿಸ್ತಾನದ ಹೇಳಿಕೆ ಸುಳ್ಳು ಎಂಬುದು ಜಗ ಜಾಹೀರ್ ಆಗಿತ್ತು. ಮಿಗ್-29 ಮತ್ತು ಎಸ್-400 ರಕ್ಷಣಾ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿರುವುದು ಪ್ರಧಾನಿ ಭೇಟಿ ವೇಳೆಯಲ್ಲಿನ ಫೋಟೋಗಳಲ್ಲಿ ಸ್ಪಷ್ಪವಾಗಿ ಕಂಡುಬಂದಿತ್ತು.
ಭುಜ್ ವಾಯುನೆಲೆಯಲ್ಲಿ S-400 ರಾಡಾರ್ ಮೇಲೆ ದಾಳಿ ನಡೆಸಲಾಗಿದೆ ಎಂಬ ಪಾಕಿಸ್ತಾನದ ಹೇಳಿಕೆಯೂ ಸುಳ್ಳು. ಭುಜ್ ವಾಯುನೆಲೆಯಲ್ಲಿ S-400 ರಾಡಾರ್ ಘಟಕವನ್ನು ನಾಶಪಡಿಸಿದೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ. ಸೈಮನ್ರ ಸಾಕ್ಷ್ಯದವಿಶ್ಲೇಷಣೆಯಲ್ಲಿ ಅದು ಬೇರೆ ರೀತಿಯಲ್ಲಿ ತೋರಿಸಿದೆ. ಇದು ಭುಜ್ ವಾಯು ನೆಲೆಯ ವಾಹನ ಸೇವಾ ಯಾರ್ಡ್ನಲ್ಲಿನ ಕೇವಲ ತೈಲ ಕಲೆಗಳು. ಇದು ಫೆಬ್ರವರಿ 2025 ರಲ್ಲಿ ತೆಗೆದಂತಹ ಫೋಟೋ ಆಗಿದೆ ಎಂದು ಸೈಮನ್ ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ