ಗುಂಡ್ಲುಪೇಟೆ | ಕೊಡಸೋಗೆ ರಸ್ತೆಯಲ್ಲಿ 20ಕ್ಕೂ ಹೆಚ್ಚು ಮಂಗಗಳ ಶವಗಳು ಪತ್ತೆ, ವಿಷಪ್ರಾಶನದ ಶಂಕೆ

ಚಾಮರಾಜನಗರ: ಐದು ಹುಲಿಗಳಿಗೆ ವಿಷಪ್ರಾಶನ ಮಾಡಿದ ಆಘಾತಕಾರಿ ಘಟನೆಯ ಬೆನ್ನಲ್ಲೇ, ಚಾಮರಾಜನಗರ ಜಿಲ್ಲೆಯಲ್ಲಿ 20 ಮಂಗಗಳ ಶವಗಳು ಬುಧವಾರ ಪತ್ತೆಯಾಗಿವೆ…!
ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಂದೇಗಾಲ-ಕೊಡಸೋಗೆ ರಸ್ತೆಯ ಉದ್ದಕ್ಕೂ ಮಂಗಗಳ ಮೃತದೇಹಗಳು ಪತ್ತೆಯಾಗಿವೆ. ಮಂಗಗಳಿಗೆ ವಿಷಪ್ರಾಶನ ಮಾಡಲಾಗಿದೆ ಎಂದು ಅರಣ್ಯ ಮತ್ತು ಪೊಲೀಸ್ ಅಧಿಕಾರಿಗಳು ಶಂಕಿಸಿದ್ದಾರೆ.
ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯಿಂದ ಕೋತಿಗಳನ್ನು ಬೇರೆಡೆ ವಿಷ ಹಾಕಿ ಕೊಂದು, ರಸ್ತೆಯ ಬಳಿ ತಂದು ಬಿಸಾಡಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಪೊಲೀಸರು ಈ ಯೋಜಿತ ಕೃತ್ಯವೇ ಎಂಬುದನ್ನು ಖಚಿತಪಡಿಸಲು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಗುಂಡ್ಲುಪೇಟೆ ಪೊಲೀಸರು ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿ, ಕೋತಿಗಳ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ವಿಷಪ್ರಾಶನದ ಆರೋಪ ದೃಢವಾದರೆ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇದಕ್ಕೂ ಮೊದಲು, ಕಳೆದ ವಾರ ಅಭಯಾರಣ್ಯದ ಚಾಮರಾಜನಗರ ಜಿಲ್ಲೆಯ ಹೂಗ್ಯಂ ವ್ಯಾಪ್ತಿಯ ಮೀಣ್ಯಂ ಅರಣ್ಯ ಪ್ರದೇಶದಲ್ಲಿ ಹುಲಿ ಮತ್ತು ನಾಲ್ಕು ಮರಿಗಳ ಮೃತದೇಹಗಳು ಪತ್ತೆಯಾಗಿದ್ದವು. ಅಧಿಕಾರಿಗಳು ಪ್ರಕರಣವನ್ನು ಭೇದಿಸಿ ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದ್ದರು. ಬಂಧಿತ ವ್ಯಕ್ತಿಗಳನ್ನು ಕೊಪ್ಪ ಗ್ರಾಮದ ನಿವಾಸಿಗಳಾದ ಕೋಣಪ್ಪ, ಮಾದರಾಜು ಮತ್ತು ನಾಗರಾಜು ಎಂದು ಗುರುತಿಸಲಾಗಿದೆ.
ಆರೋಪಿಗಳಲ್ಲಿ ಒಬ್ಬನ ಹಸುವನ್ನು ಹುಲಿ ಕೊಂದು ಕಾಡಿಗೆ ಎಳೆದೊಯ್ದಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಹಸುವಿನ ಮಾಂಸವನ್ನು ತಾಯಿ ಹುಲಿ ಹಾಗೂ ನಾಲ್ಕು ಮರಿಗಳು ಮಾಂಸವನ್ನು ಭಾಗಶಃ ತಿಂದಿದ್ದವು. ನಂತರ ಉಳಿದ ಹಸುವಿನ ದೇಹಕ್ಕೆ ವಿಷ ಹಾಕಲಾಗಿತ್ತು. ಅದನ್ನು ತನ್ನಲು ಬಂದಾಗ ತಾಯಿ ಹುಲಿ ಹಾಗೂ ನಾಲ್ಕು ಮರಿಗಳು ಮೃತಪಟ್ಟಿದ್ದವು.

ಪ್ರಮುಖ ಸುದ್ದಿ :-   ದೇಶದಲ್ಲಿ ಮೊದಲ ಬಾರಿಗೆ ಜಾತಿಗಣತಿ ಕೈಗೊಂಡಿದ್ದು ಕಾಂಗ್ರೆಸ್ ಸರ್ಕಾರ ; ಬಿಜೆಪಿ ವಿರುದ್ಧ ವಸಂತ ಲದವಾ ವಾಗ್ದಾಳಿ

ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಹುಲಿ ಮತ್ತು ಅದರ ನಾಲ್ಕು ಮರಿಗಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರವು ಮೂವರು ಹಿರಿಯ ಅಧಿಕಾರಿಗಳನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿತ್ತು. ಐದು ಹುಲಿಗಳು ರಸ್ತೆಯಿಂದ ಕೇವಲ 100 ಮೀಟರ್ ದೂರದಲ್ಲಿ ಸತ್ತಿರುವುದು ಕಂಡುಬಂದಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಹಲವಾರು ದಿನಗಳವರೆಗೆ ಅಲ್ಲಿ ಶವಗಳು ಬಿದ್ದಿದ್ದರೂ, ಅಧಿಕಾರಿಗಳಿಗೆ ತಿಳಿದಿರಲಿಲ್ಲ. ಸ್ಥಳವು ಬೇಟೆ ವಿರೋಧಿ ಶಿಬಿರದಿಂದ ಕೇವಲ 800 ಮೀಟರ್ ದೂರದಲ್ಲಿದೆ. ಬೇಟೆ ವಿರೋಧಿ ಶಿಬಿರದಲ್ಲಿರುವ ಸಿಬ್ಬಂದಿಗೆ ಕಳೆದ ಮೂರು ತಿಂಗಳಿನಿಂದ ವೇತನ ನೀಡಲಾಗಿಲ್ಲ ಎಂದು ಸಹ ಉಲ್ಲೇಖಿಸಲಾಗಿದೆ.

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement