ಕುಟುಂಬದಲ್ಲಿ ದುರಂತ ; ಪಾಪ ಪ್ರಜ್ಞೆಯಿಂದ ನರಳಿ ಪೊಲೀಸ್‌ ಠಾಣೆಗೆ ಬಂದು 39 ವರ್ಷಗಳ ಹಿಂದೆ ಕೊಲೆ ಮಾಡಿದ್ದನ್ನು ಒಪ್ಪಿಕೊಂಡ ವ್ಯಕ್ತಿ….!

ಕೋಝಿಕ್ಕೋಡ್ : ಒಂದು ತಿಂಗಳ ಹಿಂದೆ ಕೇರಳದ ಮಲ್ಲಪುರಂ ಜಿಲ್ಲೆಯ ವೆಂಗಾರ ಪೊಲೀಸ್ ಠಾಣೆಗೆ ಆಗಮಿಸಿದ 54 ವರ್ಷದ ವ್ಯಕ್ತಿಯೊಬ್ಬ ಅಲ್ಲಿನ ಪೊಲೀಸ್ ಅಧಿಕಾರಿಗಳ ಮುಂದೆ 39 ವರ್ಷಗಳ ಹಿಂದೆ ತಾನು ಮಾಡಿದ್ದ ಕೊಲೆ ಮಾಡಿದ್ದಾಗಿ ಹೇಳಿ ಅದನ್ನು ಒಪ್ಪಿಕೊಂಡಿದ್ದಾನೆ…!
ವೆಂಗಾರ ಬಳಿಯ ಕಣ್ಣಮಂಗಲಂ ನಿವಾಸಿ ಮೊಹಮ್ಮದಲಿ ಥೈಪರಂಬಿಲ್ ಎಂಬಾತ, 1986 ರಲ್ಲಿ ಕೋಝಿಕೋಡ್ ಜಿಲ್ಲೆಯ ಕೂಡರಿಂಜಿಯ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಅಪರಿಚಿತ ಯುವಕನನ್ನು ಕೊಂದಿದ್ದಾಗಿ ಒಪ್ಪಿಕೊಂಡಿದ್ದಾನೆ. ಆಗ ಈತನಿಗೆ ಕೇವಲ 15 ವರ್ಷ ವಯಸ್ಸಾಗಿತ್ತು.
ವರದಿಗಳ ಪ್ರಕಾರ,  ತನ್ನ ಕುಟುಂಬದಲ್ಲಿ ಸಂಭವಿಸಿದ ಒಬ್ಬ ಮಗನ ಸಾವು ಮತ್ತು ಇನ್ನೊಬ್ಬ ಮಗನಿಗೆ ಗಂಭೀರ ಅಪಘಾತವಾಗಿ ಕಾಲು ಕಳೆದುಕೊಂಡ ಘಟನೆ ಸೇರಿದಂತೆ ಈತನ ಕುಟುಂಬದಲ್ಲಿ ಸಂಭವಿಸಿದ ದುರಂತಗಳಿಂದಾಗಿ ಈತನಿಗೆ ಕಾಡಲಾರಂಭಿಸಿದ ಪಾಪ ಪ್ರಜ್ಞೆ ಸುಮಾರು ನಾಲ್ಕು ದಶಕಗಳಿಂದ ತನ್ನ ಮನಸ್ಸಿನಲ್ಲಿ ಹುದುಗಿದ್ದ ಅಪರಾಧವನ್ನು ಒಪ್ಪಿಕೊಳ್ಳುವಂತೆ ಮಾಡಿದೆ.

ಕೋಝಿಕೋಡ್ ಜಿಲ್ಲೆಯ ಕೂಡರಿಂಜಿಯಲ್ಲಿ ದೇವಸ್ಸಿ ಎಂಬವರ ಒಡೆತನದ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ತನ್ನ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದಾಗ ಇದಕ್ಕೆ ಪ್ರತಿರೋಧ ಒಡ್ಡುವಾಗ ತಾನು ಆ ಯುವಕನಿಗೆ ಒದ್ದಿದ್ದೆ, ಆತನ ಪಕ್ಕದ ಕಾಲುವೆಗೆ ಬಿದ್ದ. ನಂತರ ತಾನು ಅಲ್ಲಿಂದ ಓಡಿಹೋದೆ ಎರಡು ದಿನಗಳ ನಂತರ ತೋಟಕ್ಕೆ ಹಿಂತಿರುಗಿದಾಗ ಆ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವುದು ತಿಳಿಯಿತು ಎಂದು ಮೊಹಮ್ಮದಲಿ ಪೊಲೀಸರಿಗೆ ತಿಳಿಸಿದ್ದಾನೆ. ಈ ಘಟನೆ 1986 ರ ನವೆಂಬರ್ ಅಂತ್ಯದಲ್ಲಿ ನಡೆದಿದೆ ಎಂದು ವರದಿಯಾಗಿದೆ, ಆದರೂ ಘಟನೆ ನಡೆದ ನಿಖರವಾದ ದಿನಾಂಕದ ಬಗ್ಗೆ ಸ್ಪಷ್ಟತೆಯಿಲ್ಲ.ಈತ ಈ ಘಟನೆಯನ್ನು 39 ವರ್ಷಗಳ ಕಾಲ ರಹಸ್ಯವಾಗಿಟ್ಟಿದ್ದ.
ಕೂದರಿಂಜಿಯಲ್ಲಿರುವ ಸ್ಥಳೀಯರಿಂದ ಮೃತ ಆ ವ್ಯಕ್ತಿ ನಿರಾಶ್ರಿತ ಮತ್ತು ಆತನಿಗೆ ಅಪಸ್ಮಾರ ಕಾಯಿಲೆಯಿದೆ ಎಂಬುದು ಈತನಿಗೆ ತಿಳಿದುಬಂದಿತ್ತು. ಅಲ್ಲದೆ ಮೃತನ ಹೆಸರು ಯಾರಿಗೂ ತಿಳಿದಿರಲಿಲ್ಲ. ಯಾವುದೇ ದೂರುಗಳು ಅಥವಾ ಅನುಮಾನಗಳಿಲ್ಲದ ಕಾರಣ, ಆ ವ್ಯಕ್ತಿಯ ಸಾವು ಅಪಸ್ಮಾರದಿಂದಾಗಿರಬಹುದು ಎಂದು ಪೊಲೀಸರು ತೀರ್ಮಾನಿಸಿದ್ದರು. ಶವವನ್ನು ಯಾರೂ ಪಡೆಯುವವರಿಲ್ಲದ ಕಾರಣ ಗುರುತಿಸಲಾಗದ ವ್ಯಕ್ತಿಯೆಂದು ಶವವನ್ನು ಸಮಾಧಿ ಮಾಡಲಾಯಿತು ಎಂದು ವರದಿಗಳು ತಿಳಿಸಿವೆ.

ಪ್ರಮುಖ ಸುದ್ದಿ :-   ಪುತ್ತೂರು | ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ ಪ್ರಕರಣ ; ಬಿಜೆಪಿ ಮುಖಂಡನ ಪುತ್ರ ಅರೆಸ್ಟ್‌

ಕಳೆದ ಜೂನ್ 5 ರಂದು ಪೊಲೀಸ್‌ ಠಾಣೆಗೆ ಆಗಮಿಸಿದ ಮೊಹಮ್ಮದಾಲಿ ಈ ವಿಷಯವನ್ನು ಬಹಿರಂಪಡಿಸಿ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡ ನಂತರ ಪೊಲೀಸರೇ ಗೊಂದಲಕ್ಕೊಳಗಾದರು. ನಂತರ ಮೊಹಮ್ಮದಾಲಿಯನ್ನು ಕೂಡರಿಂಜಿಗೆ ಕರೆದುಕೊಂಡು ಹೋದಾಗ ಘಟನೆ ನಡೆದ ಸ್ಥಳವನ್ನು ಈತ ನಿಖರವಾಗಿ ತಿಳಿಸಿದ ನಂತರ ಪೊಲೀಸರು ಈತನ ಹೇಳಿಕೆಯನ್ನು ನಂಬಬೇಕಾಯಿತು. ಆರಂಭದಲ್ಲಿ ವೆಂಗಾರ ಪೊಲೀಸರನ್ನು ಬೆಚ್ಚಿಬೀಳಿಸಿದ ಮೊಹಮ್ಮದಾಲಿಯ ಈ ವಿಚಿತ್ರ ಪ್ರಕರಣವು ಶೀಘ್ರದಲ್ಲೇ ಕೂಡರಿಂಜಿಯ ವ್ಯಾಪ್ತಿಯನ್ನು ಹೊಂದಿರುವ ಕೋಝಿಕ್ಕೋಡ್ ಜಿಲ್ಲೆಯ ತಿರುವಾಂಬಾಡಿ ಪೊಲೀಸರಿಗೆ ಒಂದು ಗೊಂದಲಮಯ ಸವಾಲಾಗಿ ಪರಿಣಮಿಸಿತು.

ಪೊಲೀಸರು ಹಳೆಯ ದಾಖಲೆಗಳನ್ನು ಹುಡುಕಿ, ಅಪರಿಚಿತ ವ್ಯಕ್ತಿಯ ಸಾವಿಗೆ ಸಂಬಂಧಿಸಿದ ಪ್ರಕರಣ ಸಂಖ್ಯೆ 116/86 ಅನ್ನು ಹುಡುಕಿ ತೆಗೆದರು. ಡಿಸೆಂಬರ್ 5, 1986 ರಂದು ಕೂಡರಿಂಜಿಯಲ್ಲಿ ಪ್ರಕಟವಾದ ಒಂದು ಸಣ್ಣ ಸ್ಥಳೀಯ ಪತ್ರಿಕೆ ವರದಿ ಅವರಿಗೆ ಸಿಕ್ಕಿತು, ಅದು ಕೂಡರಿಂಜಿಯ ಮಿಷನ್ ಆಸ್ಪತ್ರೆಯ ಹಿಂದಿನ ಹೊಳೆಯಲ್ಲಿ 20 ವರ್ಷದ ವ್ಯಕ್ತಿಯ ಸಾವಿನ ಬಗ್ಗೆ ವರದಿ ಮಾಡಿತ್ತು.
ಪೊಲೀಸರು ಮೊಹಮ್ಮದಲಿಯನ್ನು ಕೊಲೆ ಆರೋಪದ ಮೇಲೆ ಬಂಧಿಸಿ ತನಿಖೆಯನ್ನು ಪ್ರಾರಂಭಿಸಿದರು. ಮೃತ ಯುವಕನ ಬಗ್ಗೆ ಸ್ಥಳೀಯರಲ್ಲಿ ಸಂಘರ್ಷದ ಕಥೆಗಳಿದ್ದವು. ಕೆಲವರು ಅವನು ಇರಿಟ್ಟಿಯವನೆಂದು ಹೇಳಿದರೆ, ಇನ್ನು ಕೆಲವರು ಅವನು ಪಾಲಕ್ಕಾಡ್‌ನವನೆಂದು ಹೇಳಿದ್ದರು.
ಮೃತ ವ್ಯಕ್ತಿಯನ್ನು ಗುರುತಿಸುವಲ್ಲಿ ಪೊಲೀಸರು ಪ್ರಮುಖ ಸವಾಲನ್ನು ಎದುರಿಸುತ್ತಿದ್ದಾರೆ. ಈಗ, ಈ ಸೀಮಿತ ಮಾಹಿತಿಯ ಆಧಾರದ ಮೇಲೆ ಪೊಲೀಸರು ಹೊಸ ತನಿಖೆಯನ್ನು ಪ್ರಾರಂಭಿಸಬೇಕಾಗಿದೆ.

ಪ್ರಮುಖ ಸುದ್ದಿ :-   ರಾಜ್ ಠಾಕ್ರೆ ಸಂಕಲ್ಪ, ಉದ್ಧವರಿಂದ ದೊಡ್ಡ ಸುಳಿವು : 20 ವರ್ಷಗಳ ನಂತರ ಠಾಕ್ರೆ ಸಹೋದರರ ಪುನರ್ಮಿಲನ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement