ಮುಂಬೈ: ಮುಂಬೈನ ಆಕಾಶವಾಣಿ ಶಾಸಕರ ನಿವಾಸದಲ್ಲಿ ಶಾಸಕ ಸಂಜಯ ಗಾಯಕ್ವಾಡ್, ತಮಗೆ ನೀಡಲಾದ ಆಹಾರದ ಗುಣಮಟ್ಟದ ಬಗ್ಗೆ ಅಸಮಾಧಾನಗೊಂಡು ಕ್ಯಾಂಟೀನ್ ಮ್ಯನೇಜರ್ ಅವರನ್ನು ಥಳಿಸುತ್ತಿರುವ ವೀಡಿಯೊವೊಂದು ವೈರಲ್ ಆಗಿದೆ. ಬುಲ್ದಾನಾ ಕ್ಷೇತ್ರ ಪ್ರತಿನಿಧಿಸುವ ಶಾಸಕ ಸಂಜಯ ಗಾಯಕವಾಡ್ ಅವರು ಶಾಸಕರ ಅತಿಥಿ ಗೃಹ ಕ್ಯಾಂಟೀನ್‌ನಲ್ಲಿ ನೀಡಲಾಗುವ ಆಹಾರದ ಗುಣಮಟ್ಟ ಕಳಪೆಯಾಗಿರುವ ಬಗ್ಗೆ ತೀವ್ರ ಅಸಮಾಧಾನಗೊಂಡಿದ್ದರು ಎಂದು ಹೇಳಲಾಗಿದೆ.
ಬುಲ್ದಾನಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿರುವ ಶಾಸಕ ಗಾಯಕವಾಡ್, ಶಾಸಕರಿಗೆ ಸರ್ಕಾರ ನಿಗದಿಪಡಿಸಿದ ಆಕಾಶವಾಣಿ ಶಾಸಕರ ನಿವಾಸದಲ್ಲಿ ತಂಗಿದ್ದರು. ಶಿವಸೇನೆಯ ಏಕನಾಥ ಶಿಂಧೆ ಬಣದ ಶಾಸಕರಾದ ಇವರು ನೆಲ ಮಹಡಿಯಲ್ಲಿರುವ ಕ್ಯಾಂಟೀನ್‌ನಿಂದ ಆಹಾರವನ್ನು ಆರ್ಡರ್ ಮಾಡಿದ್ದರು ಎಂದು ಹೇಳಲಾಗಿದೆ.
ಆಹಾರ, ವಿಶೇಷವಾಗಿ ದಾಲ್ ಕಳಪೆ ಗುಣಮಟ್ಟದ್ದಾಗಿತ್ತು ಮತ್ತು ತಿಂದ ಸ್ವಲ್ಪ ಸಮಯದ ನಂತರ ತಾನು ತೊಂದರೆ ಅನುಭವಿಸಿರುವುದಾಗಿ ಗಾಯಕವಾಡ್ ಅವರು ಹೇಳಿಕೊಂಡಿದ್ದಾರೆ.
ಟವಲ್ ಅನ್ನು ಸೊಂಟಕ್ಕೆ ಸುತ್ತಿಕೊಂಡು ಕ್ಯಾಂಟೀನ್‌ಗೆ ಬಂದ ಅವರು ಕ್ಯಾಂಟೀನ್ ಮ್ಯಾನೇಜರ್ ಜೊತೆ ಈ ಬಗ್ಗೆ ಮಾತನಾಡಿದ್ದಾರೆ. ನಂತರ ಅವರು ದಾಲ್ ಹೊಂದಿರುವ ಪ್ಯಾಕೆಟ್‌ನ ವಾಸನೆಯನ್ನು ಅವರಿಗೆ ಮೂಸಿ ನೋಡುವಂತೆ ಹೇಳುವುದು ವೀಡಿಯೊದಲ್ಲಿ ಕಂಡುಬಂದಿದೆ.
ಸೆಕೆಂಡುಗಳ ನಂತರ, ಶಾಸಕರು ಕ್ಯಾಂಟೀನ್ ನಿರ್ವಾಹಕನಿಗೆ ಬಡಿಯುತ್ತಾರೆ, ಕೆಲವೇ ಸೆಕೆಂಡುಗಳ ನಂತರ ಮುಖಕ್ಕೆ ಬಲವಾಗಿ ಗುದ್ದುತ್ತಾರೆ. ಅದರ ಪರಿಣಾಮ ಎಷ್ಟು ಬಲವಾಗಿತ್ತೆಂದರೆ ಪಂಚ್ ರಭಸಕ್ಕೆ ಮ್ಯಾನೇಜರ್ ನೆಲದ ಮೇಲೆ ಬಿದ್ದಿದ್ದಾರೆ. ಅವರುಎದ್ದು ನಿಂತಾಗ, ಶಾಸಕರು ಮತ್ತೆ ಆತನಿಗೆ ಕಪಾಳಮೋಕ್ಷ ಮಾಡಿದ್ದಾರೆ.
ವೀಡಿಯೊ ವೈರಲ್ ಆಗುತ್ತಿದ್ದಂತೆ, ಬುಲ್ದಾನಾ ಶಾಸಕರು ಕ್ಯಾಂಟೀನ್ ತಮಗೆ ನೀಡಿದ ಆಹಾರ ಕಳಪೆ ಗುಣಮಟ್ಟದ್ದಾಗಿತ್ತು ಎಂದು ಹೇಳಿದ್ದಾರೆ. ನಾನು ಮೊದಲ ತುತ್ತು ತಿಂದ ತಕ್ಷಣ ಅದು ಹುಳಿಯಾಗಿರವುದು ಕಂಡುಬಂತು. ಎರಡನೇ ತುತ್ತಿನಲ್ಲಿ, ನನಗೆ ನಿಜವಾಗಿಯೂ ವಾಂತಿ ಬಂದಿತು. ಅದರ ವಾಸನೆಯಿಂದ ಅದು ಹಳಸಿದ ಆಹಾರ ಎಂದು ನನಗೆ ಅರಿವಾಯಿತು ಎಂದು ಅವರು ಹೇಳಿದ್ದಾರೆ. ಮತ್ತು ವಿಧಾನಸಭಾ ಅಧಿವೇಶನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವುದಾಗಿ ಹೇಳಿದ್ದಾರೆ.
“ಕಳಪೆ ಗುಣಮಟ್ಟದ ಆಹಾರದ ಬಗ್ಗೆ ನಾನು ಎರಡು ಅಥವಾ ಮೂರು ಬಾರಿ ದೂರು ನೀಡಿದ್ದೆ. ಈ ಬಾರಿ ಆಹಾರವು ಸಂಪೂರ್ಣವಾಗಿ ಹಳಸಿದ ಸ್ಥಿತಿಯಲ್ಲಿತ್ತು. ಈಗ ನಡೆಯುತ್ತಿರುವ ವಿಧಾನಸಭೆ ಅಧಿವೇಶನದಲ್ಲಿ ನಾನು ಈ ವಿಷಯವನ್ನು ಪ್ರಸ್ತಾಪಿಸುತ್ತೇನೆ” ಎಂದು ಗಾಯಕ್ವಾಡ್ ಹೇಳಿದ್ದಾರೆ.
ಘಟನೆ ಬಗ್ಗೆ ನನಗೆ ಯಾವುದೇ ವಿಷಾದವಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ. ನಾನು ವಿಧಾನಸಭೆಯಲ್ಲಿಯೂ ಈ ವಿಷಯವನ್ನು ಎತ್ತುತ್ತೇನೆ” ಎಂದು ಪ್ರತಿಕ್ರಿಯಿಸಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.
ನಿಮ್ಮ ಕಾಮೆಂಟ್ ಬರೆಯಿರಿ