ಬಾಲೇಶ್ವರ: ಒಡಿಶಾದ ಬಾಲಸೋರ್ ನಲ್ಲಿ ವಿದ್ಯಾರ್ಥಿನಿಯೊಬ್ಬಳು ಕಾಲೇಜು ಆವರಣದಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು, ನಗರವನ್ನೇ ಬೆಚ್ಚಿಬೀಳಿಸಿದೆ.
ಫಕೀರ್ ಮೋಹನ್ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಕಾಲೇಜು ಆವರಣದಲ್ಲೇ ಬೆಂಕಿ ಹಚ್ಚಿಕೊಂಡಿದ್ದಾಳೆ. ಕಾಲೇಜಿನ ಶಿಕ್ಷಕನ ದೀರ್ಘಕಾಲದ ಕಿರುಕುಳದಿಂದಾಗಿ ಹತಾಶಳಾದ ವಿದ್ಯಾರ್ಥಿನಿ ಈ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ. ಘಟನೆ ಕಾಲೇಜಿನ ಹೊರಗೆ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದರಲ್ಲಿ ಬಾಲಕಿ ಸುಟ್ಟುಕೊಂಡ ನಂತರ ನೋವಿನಿಂದ ಓಡುತ್ತಿರುವುದು ಸೆರೆಯಾಗಿದೆ. ವಿದ್ಯಾರ್ಥಿನಿ ಶೇ. 95 ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದರೆ, ಆಕೆಯನ್ನು ಉಳಿಸಲು ಪ್ರಯತ್ನಿಸಿದ ಸಹ ವಿದ್ಯಾರ್ಥಿನಿಯೊಬ್ಬಳು ಶೇ. 70 ರಷ್ಟು ಸುಟ್ಟ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದಾಳೆ.
ಈ ಘಟನೆ ಶನಿವಾರ ಮಧ್ಯಾಹ್ನ ಫಕೀರ್ ಕಾಲೇಜು ಆವರಣದಲ್ಲಿ ನಡೆದಿದೆ. ವಿದ್ಯಾರ್ಥಿನಿ ಇಂಟಿಗ್ರೇಟೆಡ್ ಬಿ.ಇಡಿ ಕಾರ್ಯಕ್ರಮದ ಎರಡನೇ ವರ್ಷದಲ್ಲಿ ಓದುತ್ತಿದ್ದಾಳೆ. ಕಾಲೇಜಿನ ಇಂಟಿಗ್ರೇಟೆಡ್ ಬಿ.ಇಡಿ ವಿಭಾಗದ ಮುಖ್ಯಸ್ಥ ಸಮೀರಕುಮಾರ ಸಾಹು ವಿರುದ್ಧ ವಿದ್ಯಾರ್ಥಿನಿ ಲೈಂಗಿಕ ಸಹಕಾರ ಕೋರಿದ ಮತ್ತು ಮಾನಸಿಕ ಕಿರುಕುಳ ನೀಡಿದ ಆರೋಪ ಮಾಡಿದ್ದಾಳೆ. ಈ ಕಿರುಕುಳದ ಬಗ್ಗೆ ವಿದ್ಯಾರ್ಥಿನಿ ಹಲವು ಬಾರಿ ದೂರು ನೀಡಿದ್ದಳು. ಆದರೆ ಅದನ್ನು ನಿರ್ಲಕ್ಷಿಸಲಾಗಿತ್ತು ಎಂದು ಹೇಳಲಾಗಿದೆ.
ವಿಭಾಗದ ಮುಖ್ಯಸ್ಥರನ್ನು ಬಂಧಿಸಲಾಗಿದೆ. ಅವರು ಮತ್ತು ಕಾಲೇಜು ಪ್ರಾಂಶುಪಾಲರನ್ನು ಉನ್ನತ ಶಿಕ್ಷಣ ಇಲಾಖೆ ಅಮಾನತುಗೊಳಿಸಿದೆ. “ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ರಾಜ್ಯದ ಉನ್ನತ ಶಿಕ್ಷಣ ಸಚಿವ ಸೂರ್ಯಬಂಶಿ ಸೂರಜ್ ಹೇಳಿದ್ದಾರೆ.
ಇಂಟಿಗ್ರೇಟೆಡ್ ಬಿ.ಎಡ್ ಕಾರ್ಯಕ್ರಮದ ವಿದ್ಯಾರ್ಥಿನಿಯಾಗಿರುವ ಈಕೆ ಜುಲೈ 1 ರಂದು ಫಕೀರ್ ಮೋಹನ್ ಕಾಲೇಜಿನ ಆಂತರಿಕ ದೂರು ಸಮಿತಿಗೆ ಈ ಬಗ್ಗೆ ದೂರು ನೀಡಿದ್ದರು. ತನ್ನ ವಿಭಾಗದ ಮುಖ್ಯಸ್ಥ ಸಮೀರಕುಮಾರ ಸಾಹು ತನ್ನಿಂದ “ಸಹಕಾರ” ಕೇಳುತ್ತಿದ್ದಾರೆ ಮತ್ತು ತನಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದರು. ಏಳು ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ವಿದ್ಯಾರ್ಥಿನಿಗೆ ಭರವಸೆ ನೀಡಲಾಗಿತ್ತು, ಆದರೆ ಏನೂ ಆಗಲಿಲ್ಲ ಎಂದು ಮೂಲಗಳು ತಿಳಿಸಿವೆ.
ಶನಿವಾರ, ಆ ಮಹಿಳೆ ಮತ್ತು ಇತರ ಹಲವಾರು ವಿದ್ಯಾರ್ಥಿಗಳು ಕಾಲೇಜಿನ ಗೇಟ್ ಹೊರಗೆ ಪ್ರತಿಭಟನೆ ಆರಂಭಿಸಿದರು. ಆಕೆಯ ಸಹ ವಿದ್ಯಾರ್ಥಿಗಳು ಹೇಳುವಂತೆ ಈಕೆ ಇದ್ದಕ್ಕಿದ್ದಂತೆ ಎದ್ದು, ಪ್ರಾಂಶುಪಾಲರ ಕಚೇರಿಯ ಸಮೀಪವಿರುವ ಪ್ರದೇಶಕ್ಕೆ ಓಡಿಹೋಗಿ, ತನ್ನ ಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ.
ಮಹಿಳೆ ಬೆಂಕಿ ಹಚ್ಚಿಕೊಂಡು ಕಾಲೇಜಿನ ಕಾರಿಡಾರ್‌ಗೆ ಓಡುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಒಬ್ಬ ವ್ಯಕ್ತಿ ಅವಳನ್ನು ಪಾರು ಮಾಡಲು ಪ್ರಯತ್ನಿಸುತ್ತಾನೆ. ಆದರೆ ಆತನ ಟಿ-ಶರ್ಟ್ ಬೆಂಕಿ ಹೊತ್ತಿಕೊಂಡ ನಂತರ ಹಿಂದೆ ಸರಿಯುತ್ತಾನೆ. ವಿದ್ಯಾರ್ಥಿನಿ ಕಾರಿಡಾರ್‌ನಿಂದ ಹೊರಗೆ ಓಡುತ್ತಾಳೆ. ಇತರರು ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ.
ಕಾಲೇಜು ಪ್ರಾಂಶುಪಾಲರಾದ ದಿಲೀಪ ಘೋಷ್, ವಿದ್ಯಾರ್ಥಿನಿಯ ದೂರನ್ನು ದಾಖಲಿಸಲಾಗಿದೆ ಮತ್ತು ಆಂತರಿಕ ಸಮಿತಿಯು ವರದಿಯನ್ನು ಸಲ್ಲಿಸುವ ಪ್ರಕ್ರಿಯೆಯಲ್ಲಿತ್ತು ಎಂದು ಹೇಳಿದ್ದಾರೆ.
“ವಿದ್ಯಾರ್ಥಿನಿ ಇಂದು ನನ್ನ ಕಚೇರಿಯಲ್ಲಿ ನನ್ನನ್ನು ಭೇಟಿಯಾಗಿ ತಾನು ತೀವ್ರ ಮಾನಸಿಕ ಒತ್ತಡವನ್ನು ಎದುರಿಸುತ್ತಿದ್ದೇನೆ ಎಂದು ಹೇಳಿದಳು. ಸಾಹು ಅವರನ್ನು ಕಚೇರಿಗೆ ಕರೆಯುವಂತೆ ಅವಳು ನನ್ನನ್ನು ಕೇಳಿಕೊಂಡಳು, ನಾನು ಕೂಡ ಹಾಗೆ ಮಾಡಿದೆ” ಎಂದು ಘೋಷ್ ಹೇಳಿದರು.
“ಅವರ ಯಾವುದೇ ಹೇಳಿಕೆಗಳು ಸುಳ್ಳು ಎಂದು ಕಂಡುಬಂದರೆ ಅದರ ಪರಿಣಾಮಗಳ ಬಗ್ಗೆ ನಾನು ವಿದ್ಯಾರ್ಥಿನಿ ಮತ್ತು ಶಿಕ್ಷಕರಿಗೆ ಇಬ್ಬರಿಗೂ ತಿಳಿಸಿದ್ದೇನೆ. ಸಾಹು ಆರೋಪಗಳನ್ನು ನಿರಾಕರಿಸಿದರು ಮತ್ತು ವಿದ್ಯಾರ್ಥನಿ ಕೂಡ ತನ್ನ ಹೇಳಿಕೆಗೆ ಬದ್ಧವಾಗಿದ್ದಳು” ಎಂದು ಅವರು ಹೇಳಿದರು.
ಮಹಿಳೆ ತನ್ನನ್ನು ತಾನು ಬೆಂಕಿಯಿಂದ ಸುಟ್ಟುಕೊಮಡ ನಂತರ ಕಾಲೇಜಿನಲ್ಲಿ ಪ್ರತಿಭಟನೆಗಳು ತೀವ್ರಗೊಂಡವು. “ಶಿಕ್ಷಕನನ್ನು ಬಂಧಿಸಲಾಗಿದೆ. ಹಲವಾರು ತಂಡಗಳು ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿವೆ. ಯಾರ ಮೇಲೆ ತಪ್ಪು ಕಂಡುಬಂದರೂ ಅವರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ” ಎಂದು ಪೊಲೀಸ್ ವರಿಷ್ಠಾಧಿಕಾರಿ (ಬಾಲಸೋರ್) ರಾಜಪ್ರಸಾದ ತಿಳಿಸಿದ್ದಾರೆ.
ಆಕೆಯನ್ನು ಉಳಿಸಲು ಪ್ರಯತ್ನಿಸಿದ ಮಹಿಳೆ ಮತ್ತು ವಿದ್ಯಾರ್ಥಿನಿಗೂ ಸುಟ್ಟಗಾಯಗಳಾಗಿದ್ದು, ಭುವನೇಶ್ವರದ ಏಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


ನಿಮ್ಮ ಕಾಮೆಂಟ್ ಬರೆಯಿರಿ