
ಶಿರಸಿ : ಕೃತಿಯಲ್ಲಿ ಕೃತಿಕಾರ ತಲ್ಲೀನವಾದರೆ ಮಾತ್ರ ಅತ್ಯುತ್ತಮ, ಜೀವಂತಿಕೆ ಇರುವ ಕೃತಿಗಳು ಹೊರಬರಲು ಸಾಧ್ಯ. ಬರಹಗಾರನ ತಲ್ಲಣ, ತುಡಿತದ ಸಂವಹನದಿಂದ ಕೃತಿ ರಚನೆ ಸಾಧ್ಯವಾಗುತ್ತದೆ. ಆದರೆ ಅಂಥ ಕೃತಿಗಳು ಅಧ್ಯಯನಶೀಲವೂ ಆಗುವ ಅಗತ್ಯವಿದೆ ಎಂದು ವಾಗ್ಮಿ, ಖ್ಯಾತ ನಟ, ನಿರ್ದೇಶಕ ಸುಚೇಂದ್ರಪ್ರಸಾದ ತ್ರಿವೇದಿ ಹೇಳಿದರು.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ರಂಗಧಾಮದಲ್ಲಿ ಭಾನುವಾರ ನಡೆದ ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ ಬರೆದ ಯಾಜಿ ಪ್ರಕಾಶನ ಪ್ರಕಟಿಸಿದ ‘ಕರ್ಮಫಲ’ ಕಾದಂಬರಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಪೂರ್ವಿಕರು ಬೋಧಿಸಿದ ಧರ್ಮವು ಕರ್ಮಫಲದ ಓದಿನೊಂದಿಗೆ ಮತ್ತೆ ಮತ್ತೆ ಮೆಲುಕು ಹಾಕಿದ ಅನುಭವವಾಗುತ್ತದೆ’ ಎಂದು ಪುಸ್ತಕದ ಕುರಿತು ಶ್ಲಾಘಿಸಿದರು. ಕರ್ಮಫಲ ಕಾದಂಬರಿಯ ಹೊಳೆ ಸಾಲಿನ ವಿಸ್ಮಯದಲ್ಲಿ ಕೃತಿಕಾರ ತನ್ಮಯರಾಗಿ ಒಳಹೊಕ್ಕು ಬರೆದಿದ್ದು ಕಾಣಿಸುತ್ತದೆ. ಯಾವುದೇ ಕೃತಿ ಓದುಗರನ್ನು ಹಿಡಿದಿಟ್ಟುಕೊಳ್ಳುವಂತಿದ್ದರೆ, ಕಾಡುವಂತಿದ್ದರೆ ಬರೆದವರಿಗೆ ಸಾರ್ಥಕ ಭಾವ ಸಿಗುತ್ತದೆ. ಸತೀಶ ಹೆಗಡೆಯವರ ಬಾಲ್ಯದ ನೆನಪುಗಳು ಕಾದಂಬರಿ ಚೌಕಟ್ಟಿನಲ್ಲಿ ದಾಖಲಾಗಿದೆ. ಈ ನೆಲದ ಸತ್ವ ದಾಖಲಾದರೆ ಮುಂದಿನ ತಲೆಮಾರಿಗೆ ಅದು ದಾಖಲೆಯಾಗಲು ಸಾಧ್ಯವಿದೆ ಎಂದರು.

ಕರ್ಮಫಲ ಎಂಬುದು ಇರುವುದು ನಿಜ. ಆದರೆ ನಾವು ಅದನ್ನು ಅರ್ಥೈಸಿಕೊಳ್ಳುವುದಿಲ್ಲ. ಈ ಕೃತಿಯಲ್ಲಿ ಇದನ್ನು ಕಟ್ಟಿಕೊಡಲಾಗಿದೆ. ಓದುತ್ತ ಹೋದಂತೆ ಈ ಕೃತಿ ನಮ್ಮನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುತ್ತದೆ. ಇದನ್ನು ನಾನು ಈ ಕಾದಂಬರಿಗೆ ಮುನ್ನುಡಿ ಬರೆಯುವಾಗ ಅನುಭವಿಸಿದ್ದೆ ಎಂದು ಹೇಳಿದರು.
ಸತೀಶ ಹೆಗಡೆಯವರು ಆಡಳಿತಯಂತ್ರದಲ್ಲಿದ್ದರೂ ಸಾಹಿತ್ಯ ಸಂಗ ಇದ್ದವರಾಗಿದ್ದಾರೆ. ಅವರ ಕೃತಿಯನ್ನು ಓದಿದರೆ ಅವರು ಕೃತಿಯ ಒಳಹೊಕ್ಕು ರಚಿಸಿದಂತೆ ಕಾಣುತ್ತದೆ. ಕೃತಿಕಾರ ಸಾಹಿತ್ಯ ಸೃಷ್ಟಿಗೆ ತನ್ಮಯರಾಗಬೇಕು. ತಮ್ಮ ಕೃತಿಗಳ ಮೂಲಕ ಸಮಷ್ಟಿ ಪ್ರಜ್ಞೆಯ ಸಾಹಿತ್ಯ ರಚಿಸಬೇಕು. ಸಾಹಿತ್ಯ ಲೋಕದ ಭಾವ ಉತ್ತಮ ಕೃತಿಗಳ ಮೂಲಕ ಧ್ವನಿಸಬೇಕು. ಯಾವುದೇ ವಿಷಯವಿರಲಿ ಆಳವಾದ ಅಧ್ಯಯನದ ಮೂಲಕ ಕೃತಿ ರಚಿಸಿದರೆ ಹೆಚ್ಚು ಅನುಕೂಲವಾಗುತ್ತದೆ ಹಾಗೂ ಕೃತಿಯೂ ಶ್ರೀಮಂತವಾಗುತ್ತ ಹೋಗುತ್ತದೆ. ಸಾಹಿತಿಗಳು ಕೃತಿ ರೂಪದಲ್ಲಿ ಅನೇಕ ಸಂಗತಿಗಳನ್ನು ದಾಖಲೀಕರಣ ಮಾಡುತ್ತಾರೆ. ಅಂಥ ಉತ್ತಮ ಕೃತಿಗಳು ಓದುಗರ ತೆಕ್ಕೆಗೆ ಬೀಳಬೇಕು ಎಂದರು.
ಇಂದು ಸವಿಗನ್ನಡದ ಜೊತೆಗೆ ಸರಿಗನ್ನಡ ಕುರಿತು ಅಭಿಯಾನವಾಗ. ಪುಸ್ತಕ ಹಾಗೂ ಓದು ಎಲ್ಲರ ತೆಕ್ಕೆಗೆ ಸಿಗುವಂತಾಗಬೇಕು ಎಂದು ಪ್ರತಿಪಾದಿಸಿದರು.
ಅತಿಥಿಯಾಗಿ ಪಾಲ್ಗೊಂಡಿದ್ದ ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಐನಕೈ ಮಾತನಾಡಿ, ಇಡೀ ಕಾದಂಬರಿ ಕರ್ಮಫಲದ ಬಗ್ಗೆ ಹೇಳುತ್ತದೆ. ಒಳ್ಳೆಯದ್ದನ್ನು ಮಾಡಿದರೆ ಒಳ್ಳೆಯದಾಗುತ್ತದೆ. ಅದು ಈ ನಮ್ಮ ಸಿದ್ಧಾಂತ. ಜೊತೆಗೆ ಈ ಕಾದಂಬರಿ ನಮ್ಮ ಬಾಲ್ಯದ ನೆನಪು ಬರುವಂತೆ ಮಾಡುತ್ತದೆ. ಕಾದಂಬರಿಯ ಕಥನ ಚೌಕಟ್ಟು, ಕಥನಗಾರಿಕೆ ದೃಷ್ಟಿಯಿಂದ ಮೊದಲನೇ ಕೃತಿ ಎಂದು ಅನ್ನಿಸುವುದಿಲ್ಲ ಎಂದರು.
ಕರ್ಮಫಲ ಕಾದಂಬರಿಯ ಪಾತ್ರಗಳು ಮತ್ತು ಸನ್ನಿವೇಶಗಳು ಪ್ರಸ್ತುತ ಬದುಕಿನೊಂದಿಗೆ ಸಹ ಅನ್ವಯ ಆಗುವಂತಿದೆ. ಇಲ್ಲಿ ಬರುವ ಪಾತ್ರಗಳು ಈಗಲೂ ನಮ್ಮ ನಡುವೆ ಇದೆ. ಇರುತ್ತದೆ ಎಂದರು. ಓದುವ ಸಂಸ್ಕೃತಿ ಬೆಳೆಸುವುದು ಕಷ್ಟದ ಕೆಲಸ. ನಮ್ಮ ಮಕ್ಕಳಿಗೆ ಓದುವುದನ್ನು ಕಲಿಸಬೇಕಾಗಿದೆ ಎಂದರು.
ಸಾಹಿತ್ಯ ಚಿಂತಕರ ಚಾವಡಿಯ ಎಸ್ ಎಸ್ ಭಟ್ಟ ಮಾತನಾಡಿ, ಸತೀಶ ಹೆಗಡೆಯವರು ದಿನ ದಿನದ ಕಂತು ಬರೆಯುವಾಗ ಅದಕ್ಕೆ ನಾನು ಕಟು ವಿಮರ್ಶೆ ಮಾಡುತ್ತಿದ್ದೆ, ಒಂದು ಹಂತದಲ್ಲಿ ಅವರು ಬರೆಯುವುದನ್ನೇ ಬಿಡುವ ಮಾತು ಸಹ ಆಡಿದ್ದರು. ಆದರೆ ಪುನಃ ಒತ್ತಾಯ ಮಾಡಿ ಬರೆಸಿದ್ದರಿಂದ ಒಂದು ಅಪೂರ್ವ ಕೃತಿ ಸಾರಸ್ವತ ಲೋಕಕ್ಕೆ ಸಿಗುವಂತಾಯಿತು ಎಂದರು.
ಕೃತಿ ಕುರಿತು ವಿಮರ್ಶಕ ಸುಬ್ರಾಯ ಮತ್ತಿಹಳ್ಳಿ ಮಾತನಾಡಿ, ವ್ಯಥೆ ಕಥೆಯಾದದ್ದು ಮಹಾಭಾರತ, ಶೋಕ ಶ್ಲೋಕ ಆದದ್ದು ರಾಮಾಯಣ. ಹಾಗೆಯೇ ಕರ್ಮಫಲ ಶರಾವತಿ ಬದುಕಿನ ಕಥಾವರಣ ಆಗಿದೆ. ಕರ್ಮಫಲ ನಮ್ಮ ನಮ್ಮ ಬದುಕಿನಲ್ಲಿ ಕಂಡುಂಡ ಫಲವಾಗಿ ನಿರ್ವಹಿಸುತ್ತದೆ. ಈ ಕಾದಂಬರಿ ಕಥೆಯಲ್ಲ, ಮನುಷ್ಯನ ಜೀವಿತದ ಕಥನ ಎಂದರು.
ಉತ್ತರ ಕನ್ನಡ ಜಿಲ್ಲೆಯ ಕತೆ ಹೇಳುವ ಅನೇಕ ಕಾದಂಬರಿಗಳ ಜೊತೆಗೆ ನಿಲ್ಲಬಲ್ಲ ಸತ್ವ ಹೊಂದಿರುವ ಕರ್ಮಫಲ ಕಾದಂಬರಿ ಲೇಖಕರ ಮೊದಲ ಕಾದಂಬರಿ ಎಂದು ಅನ್ನಿಸುವುದಿಲ್ಲ, ಶರಾವತಿ ನದಿ ತಟದ ಜನಜೀವನ, ನೋವು, ನಲಿವುಗಳು, ಸಂಸ್ಕೃತಿಯ ಸೊಗಸು, ಭಾಷೆಗಳ ವಿವರಣೆಯನ್ನು ಒಳಗೊಂಡ ಪ್ರಬುದ್ಧ ಬರವಣಿಗೆಯಿಂದ ಓದಿಸಿಕೊಂಡು ಹೋಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿ ಡಾ. ಬಿ.ಪಿ. ಸತೀಶ ಅವರು ಕಾದಂಬರಿ, ಕತೆಗಳನ್ನು ಬರೆಯುವವರು ಎಂದರೆ ನನಗೆ ನನ್ನದೇ ಆದ ಕಲ್ಪನೆಗಳಿದ್ದವು. ಆದರೆ ಸತೀಶ ಹೆಗಡೆಯವರು ಅದನ್ನೆಲ್ಲ ಸುಳ್ಳು ಮಾಡಿದರು. ನನ್ನ ಸಹೋದ್ಯೋಗಿಯಾದ ಅವರು ತಮಗೆ ಕೊಟ್ಟ ಕೆಲಸವನ್ನು ಸರಿಯಾಗಿ ಮುಗಿಸುವುದರ ಜೊತೆಯಲ್ಲಿ ಬಿಡುವಿನ ಸಮಯವನ್ನು ಸಾಹಿತ್ಯ ರಚನೆಗೆ ಮೀಸಲಿಟ್ಟು ಉತ್ತಮ ಕೃತಿಯನ್ನು ಹೊರತಂದಿರುವುದು ನಮಗೆ ಹೆಮ್ಮೆಯ ಸಂಗತಿ ಎಂದರು.
ಕೃತಿಕಾರ ಸತೀಶ ಹೆಗಡೆ ಕೃತಿ ರಚನೆಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ನಾನು ಸಾಹಿತ್ಯದ ವಿದ್ಯಾರ್ಥಿಯಲ್ಲ. ನಾನು ಈ ಕಾದಂಬರಿಯನ್ನು ೧೫೩ ದಿನಗಳಲ್ಲಿ ಬರೆದಿದ್ದೇನೆ. ಸಮಯ ಸಿಕ್ಕಾಗ ಮೊಬೈಲ್‌ನಲ್ಲೇ ಟೈಪ್ ಮಾಡಿ ಈ ಕಾದಂಬರಿ ಬರೆದಿದ್ದೇನೆ. ಶರಾವತಿ ದಂಡೆಯ ಸುತ್ತಲಿನ ಕಥೆಯನ್ನು ಪುಸ್ತಕದ ರೂಪದಲ್ಲಿ ತರುವ ಕೆಸ ಮಾಡಿದ್ದೇನೆ ಎಂದರು. ಈ ಕಾದಂಬರಿ ಹೊರಬರಲು ಕಾರಣರಾದ ಎಲ್ಲರನ್ನೂ ಸ್ಮರಿಸಿಕೊಂಡರು.
ಯಾಜಿ ಪ್ರಕಾಶನದ ಮುಖ್ಯಸ್ಥೆ ಸವಿತಾ ಯಾಜಿ ಮಾತನಾಡಿ ಪುಸ್ತಕ ಪ್ರಕಟಣೆಯ ಹಿನ್ನೆಲೆ ವಿವರಿಸಿದರು. ಇಂದು ಪುಸ್ತಕ ಓದುವ ಸಂಸ್ಕೃತಿ ಬೆಳೆಸುವ ಅಗತ್ಯವಿದೆ. ಪುಸ್ತಕ ಕೊಂಡು ಓದಿ ಲೇಖಕರನ್ನು ಮತ್ತು ಪ್ರಕಾಶಕರನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಿ ಎಂದರು.
ಸೌಜನ್ಯ ಹೆಗಡೆ, ಸಂಚಿತಾ ಹೆಗಡೆ ಪ್ರಾರ್ಥಿಸಿದರು. ನಾರಾಯಣ ಭಾಗ್ವತ ನಿರ್ವಹಿಸಿದರು. ರಾಘವೇಂದ್ರ ಬೆಟ್ಟಕೊಪ್ಪ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಕುಮಾರ ವಾಸನ್ ಪುಸ್ತಕ ಗೌರವ ಕಾರ್ಯಕ್ರಮ ನಿರ್ವಹಿಸಿದರು. ಪರಶುರಾಮ ಮಲವಳ್ಳಿ ವಂದಿಸಿದರು.


ನಿಮ್ಮ ಕಾಮೆಂಟ್ ಬರೆಯಿರಿ