ನವದೆಹಲಿ: “ಆಪ್ ಇತನಿ ಪಡಿ ಲಿಖಿ ಹೈ. ಆಪಕೋ ಖುದ್ ಮಾಂಗನಾ ನಹಿ ಚಾಹಿಯೇ, ಆಪಕೋ ಖುದ್ ಕಾಮ ಕೆ ಖಾನಾ ಚಾಹಿಯೇ” (ನೀವು ಉತ್ತಮ ವಿದ್ಯಾವಂತರು; ನೀವು ವಸ್ತುಗಳನ್ನು ಕೇಳಬಾರದು, ಬದಲಿಗೆ ನಿಮ್ಮ ಜೀವನೋಪಾಯಕ್ಕೆ ಸಂಪಾದಿಸಿಕೊಳ್ಳಬೇಕು) ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ವೈವಾಹಿಕ ವಿಚ್ಛೇದನ ಪ್ರಕರಣದಲ್ಲಿ ತನ್ನ ಪರಿತ್ಯಕ್ತ ಪತಿಯಿಂದ ಭಾರಿ ಮೊತ್ತದ ಜೀವನಾಂಶವನ್ನು ಕೋರಿರುವ ಮಹಿಳೆಗೆ ಸಲಹೆ ನೀಡಿದ್ದಾರೆ.
ತಮ್ಮ ಪರಿತ್ಯಕ್ತ ಪತಿಯು ತಮಗೆ ಮುಂಬೈನಲ್ಲಿ ಐಷಾರಾಮಿ ಫ್ಲಾಟ್, ನಿರ್ವಹಣೆಗಾಗಿ 12 ಕೋಟಿ ರೂ. ಮತ್ತು ಬಿಎಂಡಬ್ಲ್ಯೂ ಕಾರು ನೀಡಬೇಕು ಎಂದು ಕೋರಿ ಮಹಿಳೆ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಬೇಡಿಕೆಗಳು ವಿಪರೀತವಾಗಿವೆ ಎಂದು ಗಮನಿಸಿದ ಮುಖ್ಯ ನ್ಯಾಯಮೂರ್ತಿಗಳು, ಅಂತಹ ದುಂದುವೆಚ್ಚದ ಹಾಗೂ ಭಾರಿ ಮೊತ್ತದ ಬೇಡಿಕೆಗಳನ್ನು ಸಲ್ಲಿಸಿದ್ದಕ್ಕಾಗಿ ಅವರನ್ನು ತರಾಟೆಗೆ ತೆಗೆದುಕೊಂಡರು. ಬದಲಿಗೆ ತಮ್ಮ ಅರ್ಹತೆಗಳನ್ನು ಗಮನದಲ್ಲಿಟ್ಟುಕೊಂಡು ನೀವೇ ಕೆಲಸ ಮಾಡಿ ಜೀವನ ನಡೆಸಬೇಕು ಎಂದು ಸೂಚಿಸಿದರು.
ಮಹಿಳೆ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಐಷಾರಾಮಿ ಫ್ಲಾಟ್ ಬೇಕೆಂದು ಒತ್ತಾಯಿಸಿದಾಗ “ಆದರೆ ಆ ಮನೆ ಕಲ್ಪತರುನಲ್ಲಿದೆ, ಅದನ್ನು ಉನ್ನತ ಬಿಲ್ಡರ್ಗಳಲ್ಲಿ ಒಬ್ಬರು ನಿರ್ಮಿಸಿದ್ದಾರೆ ಎಂದು ಮುಖ್ಯ ನ್ಯಾಯಮೂರ್ತಿಗಳು ಪ್ರತಿಕ್ರಿಯಿಸಿದರು. ನ್ಯಾಯಾಲಯವು ಮಹಿಳೆಗೆ ಐಟಿ ಹಿನ್ನೆಲೆ ಇದೆ ಎಂದು ಗಮನಿಸಿ ತಮ್ಮ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಸಲಹೆ ನೀಡಿತು. “ನೀವು ಎಂಬಿಎ ಮಾಡಿದ್ದೀರಿ. ಬೆಂಗಳೂರು ಮತ್ತು ಹೈದರಾಬಾದ್ನಲ್ಲಿ ನಿಮಗೆ ಬೇಡಿಕೆ ಇದೆ. ನೀವು ಏಕೆ ಕೆಲಸ ಮಾಡಬಾರದು?” ಎಂದು ಸಿಜೆಐ ಕೇಳಿದರು.
ಇಷ್ಟು ದೊಡ್ಡ ಜೀವನಾಂಶ ಕೇಳಿರುವ ಹಿಂದಿನ ತಾರ್ಕಿಕತೆಯನ್ನು ಪ್ರಶ್ನಿಸಿದ ನ್ಯಾಯಾಲಯ, “ನೀವು ಮದುವೆಯಾಗಿ ಕೇವಲ 18 ತಿಂಗಳುಗಳಾಗಿವೆ. ಮತ್ತು ನಿಮಗೆ ಬಿಎಂಡಬ್ಲ್ಯೂ ಬೇಕೇ?” ಎಂದು ಪ್ರಶ್ನಿಸಿತು. “ನೀವು ಪ್ರಾಯೋಗಿಕವಾಗಿ ನಿಮ್ಮ 18 ತಿಂಗಳ ದಾಂಪತ್ಯಕ್ಕೆ ಪ್ರತಿಯಾಗಿ ತಿಂಗಳಿಗೆ 1 ಕೋಟಿ ರೂಪಾಯಿ ಜೀವನಾಂಶ ಕೇಳುತ್ತಿದ್ದೀರಿ” ಎಂದು ಸಿಜೆಐ ಗಮನಿಸಿದರು.
ತನ್ನ ಪ್ರತಿವಾದದಲ್ಲಿ, ಮಹಿಳೆ ತನ್ನ ಗಂಡನ ಸಂಪತ್ತಿನ ಆಧಾರದ ಮೇಲೆ ತನ್ನ ಬೇಡಿಕೆಯನ್ನು ಸಮರ್ಥಿಸಿಕೊಂಡರು ಮತ್ತು ಅವರು ತನ್ನನ್ನು ಅನ್ಯಾಯವಾಗಿ ಕೈಬಿಟ್ಟಿದ್ದಾರೆ ಎಂದು ಆರೋಪಿಸಿದರು. “ಅವರು ತುಂಬಾ ಶ್ರೀಮಂತರು. ನಾನು ಸ್ಕಿಜೋಫ್ರೇನಿಕ್ ಎಂದು ಹೇಳಿಕೊಂಡು ವಿವಾಹ ರದ್ದತಿಯನ್ನು ಕೋರಿದ್ದಾರೆ. ನಾನು ಸ್ಕಿಜೋಫ್ರೇನಿಕ್ ಆಗಿ ಕಾಣುತ್ತಿದ್ದೇನೆಯೇ, ನನ್ನ ಪ್ರಭುಗಳೇ?” ಎಂದು ಮಹಿಳೆ ಪೀಠವನ್ನು ಕೇಳಿದರು.
ಈಗ ಎರಡು ವ್ಯವಹಾರಗಳನ್ನು ನಡೆಸುತ್ತಿರುವ ಸಿಟಿಬ್ಯಾಂಕ್ನ ಮಾಜಿ ವ್ಯವಸ್ಥಾಪಕರಾಗಿರುವ ತನ್ನ ಪತಿ ತನಗೆ ಕೆಲಸವನ್ನು ತ್ಯಜಿಸುವಂತೆ ಒತ್ತಾಯಿಸಿದ್ದರು ಎಂದು ಮಹಿಳೆ ವಾದಿಸಿದರು.
ದುಬಾರಿ ಜೀವನಾಂಶದ ಬೇಡಿಕೆಯಿಂದಾಗಿ, ನ್ಯಾಯಾಲಯವು ಪತಿಯ ತೆರಿಗೆ ರಿಟರ್ನ್ಗಳನ್ನು ಪರಿಶೀಲಿಸಿತು, ಏಕೆಂದರೆ ಅವರ ವಕೀಲರು ಕೆಲಸ ಬಿಟ್ಟ ನಂತರ ಅವರ ಆದಾಯ ಕಡಿಮೆಯಾಗಿದೆ ಎಂದು ವಾದಿಸಿದರು.
ಎರಡೂ ಕಡೆಯವರ ವಾದಿಗಳನ್ನು ಆಲಿಸಿದ ನಂತರ, ಮುಖ್ಯ ನ್ಯಾಯಮೂರ್ತಿಗಳು ಮಹಿಳೆಗೆ ಫ್ಲಾಟ್ನಿಂದ “ತೃಪ್ತರಾಗಿ” ಮತ್ತು ” ಉದ್ಯೋಗ ಮಾಡಿ ಎಂದು ಸಲಹೆ ನೀಡಿದರು.
ರಚನಾತ್ಮಕ ಸಲಹೆಯಲ್ಲಿ, ನ್ಯಾಯಾಲಯವು, “ನೀವು ಆ ನಾಲ್ಕು ಕೋಟಿ ರೂ. ಹಣವನ್ನು ತೆಗೆದುಕೊಳ್ಳುವುದು ಉತ್ತಮ. ಪುಣೆ, ಹೈದರಾಬಾದ್ ಅಥವಾ ಬೆಂಗಳೂರಿನಲ್ಲಿ ಉತ್ತಮ ಉದ್ಯೋಗವನ್ನು ಕಂಡುಕೊಳ್ಳಿ. ಐಟಿ ಕೇಂದ್ರಗಳಲ್ಲಿ ಬೇಡಿಕೆ ಇದೆ ಎಂದು ನ್ಯಾಯಾಲಯವು ಸಲಹೆ ನೀಡಿತು.
ಪರಿತ್ಯಕ್ತ ಪತಿಯನ್ನು ಪ್ರತಿನಿಧಿಸುವ ಹಿರಿಯ ವಕೀಲರಾದ ಮಾಧವಿ ದಿವಾನ್, ಮಹಿಳೆ ತನ್ನ ಜೀವನೋಪಾಯದ ಜವಾಬ್ದಾರಿಯನ್ನು ಸಹ ತೆಗೆದುಕೊಳ್ಳಬೇಕು ಎಂದು ಹೇಳಿದರು. “ಮಹಿಳೆ ಕೂಡ ಕೆಲಸ ಮಾಡಬೇಕು. ಈ ರೀತಿ ಬೇಡಿಕೆ ಇಡಲು ಸಾಧ್ಯವಿಲ್ಲ” ಎಂದು ದಿವಾನ್ ಹೇಳಿದರು.


ನಿಮ್ಮ ಕಾಮೆಂಟ್ ಬರೆಯಿರಿ