
ಬೆಂಗಳೂರು : ಹಾಸನ ಜಿಲ್ಲೆಯ ಹೊಳೆನರಸೀಪುರದ ತೋಟದ ಮನೆಯಲ್ಲಿ ಮನೆ ಕೆಲಸದಾಕೆಯ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶನಿವಾರ ಜೀವಾವಧಿ ಕಾರಾಗೃಹ ಶಿಕ್ಷೆ ವಿಧಿಸಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376(2)(n) ಅಡಿಯಲ್ಲಿ (ಅತ್ಯಾಚಾರ) ಅಪರಾಧಕ್ಕಾಗಿ ರೇವಣ್ಣ ಅವರಿಗೆ ನ್ಯಾಯಾಲಯವು 10 ಲಕ್ಷ ರೂ. ದಂಡ ವಿಧಿಸಿದೆ. ಒಟ್ಟು 10 ಲಕ್ಷ ರೂ. ದಂಡದಲ್ಲಿ 7 ಲಕ್ಷ ರೂ.ಗಳನ್ನು ಸಂತ್ರಸ್ತೆಗೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿರುವ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣಗೆ ಸೇರಿದ ಗನ್ನಿಗಢ ತೋಟದ ಮನೆಯಲ್ಲಿ ಮತ್ತು ಬೆಂಗಳೂರಿನ ಬನಶಂಕರಿಯಲ್ಲಿನ ರೇವಣ್ಣ ನಿವಾಸದಲ್ಲಿ ಮನೆಗೆಲಸದ ಮಹಿಳೆಯ ಮೇಲೆ ಪದೇಪದೇ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಶುಕ್ರವಾರ ಪ್ರಜ್ವಲ್ ರೇವಣ್ಣ ಅವರನ್ನು ನ್ಯಾಯಾಧೀಶರಾದ ಸಂತೋಷ ಗಜಾನನ್ ಭಟ್ ಅವರು ಅಪರಾಧಿ ಎಂದು ತೀರ್ಮಾನಿಸಿದ್ದರು.

ಇಂದು ಶಿಕ್ಷೆ ನಿರ್ಧರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಪರ ವಿಶೇಷ ಸರ್ಕಾರಿ ಅಭಿಯೋಜಕರಾದ ಅಶೋಕ್ ನಾಯಕ್ ಮತ್ತು ಬಿ ಎನ್ ಜಗದೀಶ್ ಹಾಗೂ ಪ್ರಜ್ವಲ್ ಪರ ಹಿರಿಯ ವಕೀಲೆ ನಳಿನಾ ಮಾಯೇಗೌಡ ಅವರ ವಾದವನ್ನು ನ್ಯಾಯಾಲಯ ಆಲಿಸಿತು.
ಇದಕ್ಕೂ ಮುನ್ನ, ಪ್ರಾಸಿಕ್ಯೂಷನ್ ಪರ ಬಿ.ಎನ್. ಜಗದೀಶ ಅವರು “ಜೀವನೋಪಾಯಕ್ಕಾಗಿ ಮನೆಕೆಲಸಕ್ಕೆ ಸೇರಿದ ಅನಕ್ಷರಸ್ಥೆಯ ಮೇಲೆ ಪ್ರಜ್ವಲ್ ಪದೇಪದೇ ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರದ ವೇಳೆ ಸೆರೆ ಹಿಡಿದಿರುವ ವಿಡಿಯೊಗಳು ವೈರಲ್ ಆಗುತ್ತಿದ್ದಂತೆ ಸಂತ್ರಸ್ತೆ ಮಾನಸಿಕವಾಗಿ ಹಿಂಸೆ ಅನುಭವಿಸಿ, ಆತ್ಮಹತ್ಯೆ ಪ್ರಯತ್ನವನ್ನೂ ಮಾಡಿದ್ದರು. ಸಾಕಷ್ಟು ಮಹಿಳೆಯರ ಅಶ್ಲೀಲ ದೃಶ್ಯಗಳನ್ನು ಪ್ರಜ್ವಲ್ ವಿಡಿಯೋ ಮಾಡಿದ್ದಾನೆ. ಆತನ ವಿರುದ್ಧ ಇನ್ನೂ ಮೂರು ಅತ್ಯಾಚಾರ ಪ್ರಕರಣ ಬಾಕಿ ಇವೆ. ಹೀಗಾಗಿ, ಪ್ರಜ್ವಲ್ಗೆ ಕಠಿಣ ಶಿಕ್ಷೆ ವಿಧಿಸಬೇಕು” ಎಂದು ಕೋರಿದ್ದರು.
ವಿಶೇಷ ಸರ್ಕಾರಿ ಅಭಿಯೋಜಕ ಅಶೋಕ ನಾಯಕ್ ಅವರು “ಅತ್ಯಂತ ಎಳೆಯ ವಯಸ್ಸಿನಲ್ಲಿ ಸಂಸದರಾಗಿ ಆಯ್ಕೆಯಾಗಿದ್ದ ಪ್ರಜ್ವಲ್ ಎಸಗಿರುವ ಕೃತ್ಯ ಹೀನವಾದುದು. ಹೀಗಾಗಿ, ಪ್ರಜ್ವಲ್ಗೆ ದುಬಾರಿ ದಂಡ ಮತ್ತು ಕಠಿಣ ಶಿಕ್ಷೆ ವಿಧಿಸಬೇಕು. ದಂಡದ ಪೈಕಿ ಹೆಚ್ಚಿನ ಮೊತ್ತವನ್ನು ಸಂತ್ರಸ್ತೆಗೆ ಪರಿಹಾರವಾಗಿ ನೀಡಬೇಕು. ವೀಡಿಯೊ ವೈರಲ್ ಆದುದರಿಂದ ಸಂತ್ರಸ್ತೆಯು ಸಾಮಾಜಿಕವಾಗಿ ಮುಜುಗರ, ಅವಮಾನ ಅನುಭವಿಸಿದ್ದಾರೆ. ಇದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಬೇಕು” ಎಂದು ಮನವಿ ಮಾಡಿದ್ದರು.
ಪ್ರಜ್ವಲ್ ಪರ ಹಿರಿಯ ವಕೀಲ ನಳಿನಾ ಮಾಯೇಗೌಡ ಅವರು “ಪ್ರಜ್ವಲ್ ಹಣ ಮಾಡಬೇಕು ಎಂದು ರಾಜಕೀಯಕ್ಕೆ ಬಂದಿರಲಿಲ್ಲ. ಜನಸೇವೆಗೆ ಅವರು ರಾಜಕಾರಣಕ್ಕೆ ಬಂದಿದ್ದರು. 2024ರ ಲೋಕಸಭಾ ಚುನಾವಣೆಯ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇದ್ದಾಗ ಅಶ್ಲೀಲ ವಿಡಿಯೊಗಳನ್ನು ಬಹಿರಂಗಗೊಳಿಸಲಾಗಿದೆ. ಪ್ರಜ್ವಲ್ ರಾಜಕೀಯ ಹಿನ್ನೆಲೆಯನ್ನು ಶಿಕ್ಷೆ ವಿಧಿಸಲು ಪರಿಗಣಿಸಬಾರದು ಎಂದು ವಾದಿಸಿದ್ದರು.
ಏಪ್ರಿಲ್ 3 ರಂದು ಸೆಷನ್ಸ್ ನ್ಯಾಯಾಲಯವು ರೇವಣ್ಣ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 376(2)(ಕೆ) (ಪ್ರಾಬಲ್ಯದ ಸ್ಥಾನದಲ್ಲಿರುವ ವ್ಯಕ್ತಿಯಿಂದ ಅತ್ಯಾಚಾರ), 376(2)(ಎನ್) (ಪುನರಾವರ್ತಿತ ಅತ್ಯಾಚಾರ), 354(ಎ) (ಲೈಂಗಿಕ ಕಿರುಕುಳ), 354(ಬಿ) (ವಿವಸ್ತ್ರಗೊಳಿಸುವ ಉದ್ದೇಶದಿಂದ ಹಲ್ಲೆ ಅಥವಾ ಬಲಪ್ರಯೋಗ), 354(ಸಿ) (ವಾಯೂರಿಸಂ), 506 (ಕ್ರಿಮಿನಲ್ ಬೆದರಿಕೆ), ಮತ್ತು 201 (ಸಾಕ್ಷ್ಯಗಳ ಕಣ್ಮರೆಗೆ ಕಾರಣವಾಗುವುದು) ಮತ್ತು ಸೆಕ್ಷನ್ 66(ಇ) ಅಡಿಯಲ್ಲಿ ಆರೋಪಗಳನ್ನು ಹೊರಿಸಿತ್ತು.
ಪ್ರಾಸಿಕ್ಯೂಷನ್ ಪ್ರಕಾರ, ಸಂತ್ರಸ್ತೆ ರೇವಣ್ಣ ಕುಟುಂಬದ ಒಡೆತನದ ಫಾರ್ಮ್ಹೌಸ್ನಲ್ಲಿ ಮನೆ ಕೆಲಸ ಮಾಡುತ್ತಿದ್ದರು. 2021 ರಿಂದ, ಕೋವಿಡ್-19 ಲಾಕ್ಡೌನ್ ಸಮಯದಲ್ಲಿ, ರೇವಣ್ಣ ಪದೇ ಪದೇ ಆಕೆಯ ಮೇಲೆ ಅತ್ಯಾಚಾರ ಎಸಗಿದರು ಎಂದು ಹೇಳಲಾಗಿದೆ. ಇದಲ್ಲದೆ, ರೇವಣ್ಣ ಆಕೆಯನ್ನು ಬೆದರಿಸಲು ಮತ್ತು ಮೌನಗೊಳಿಸಲು ವೀಡಿಯೊ ಬಳಸಿ ಆಕೆ ದೂರು ನೀಡದಂತೆ ತಡೆದರು ಎಂದು ಆರೋಪಿಸಲಾಗಿದೆ. ಪ್ರಜ್ವಲ್ ವಿರುದ್ಧ ದಾಖಲಾಗಿರುವ ಮೂರು ಪ್ರಕರಣಗಳನ್ನು ಎಸ್ಐಟಿ ತನಿಖೆ ನಡೆಸುತ್ತಿದೆ ಮತ್ತು ಅಕಳೆದ ವರ್ಷ ಮೇ 30 ರಂದು ಜರ್ಮನಿಯಿಂದ ಆಗಮಿಸಿದ ಪ್ರಜ್ವಲ್ ಅವರನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಎಸ್ಐಟಿ ಬಂಧಿಸಿತ್ತು. ಹೊಳೆನರಸೀಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅಪರಾಧ ಸಂಖ್ಯೆ 107/2024 ರಲ್ಲಿ ಅವರನ್ನು ಬಂಧಿಸಲಾಗಿತ್ತು.


ನಿಮ್ಮ ಕಾಮೆಂಟ್ ಬರೆಯಿರಿ