
ಮೈಸೂರು: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕೇರಳದ ಪ್ರವಾಸಿಯೊಬ್ಬರ ಮೇಲೆ ಕಾಡು ಆನೆ ದಾಳಿ ನಡೆಸಿದೆ. ಪ್ರವಾಸಿಗನನ್ನು ನೆಲಕ್ಕೆ ತಳ್ಳಿದ ಆನೆ ಕಾಲಿನಿಂದ ತುಳಿದಿದೆ. ಆದರೆ ಉಳಿದ ಪ್ರವಾಸಿಗರು ಬೊಬ್ಬೆ ಹೊಡೆದ ನಂತರ ಆತನನ್ನು ಬಿಟ್ಟುಹೋಗಿದೆ. ಪ್ರವಾಸಿಗನಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಈಗ ವೈರಲ್ ಆಗಿರುವ ಘಟನೆಯ ವೀಡಿಯೊದಲ್ಲಿ, ವಾಹನಗಳು ಮತ್ತು ಜನರಿಂದ ತುಂಬಿದ್ದ ರಸ್ತೆಯಲ್ಲಿ ನಿಂತಿದ್ದ ಆನೆ, ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪ್ರವಾಸಿಗನ ಮೇಲೆ ಇದ್ದಕ್ಕಿದ್ದಂತೆ ದಾಳಿ ಮಾಡುವುದು ಕಂಡುಬಂದಿದೆ.
ವಾಹನದಿಂದ ಕೆಳಕ್ಕೆ ಇಳಿದು ಪ್ರವಾಸಿಗ ಫೋಟೋ ತೆಗೆಯಲು ಪ್ರಯತ್ನಿಸುತ್ತಿದ್ದ ಎನ್ನಲಾಗಿದೆ.

ಪ್ರವಾಸಿಗನ ಮೇಲೆ ಕಾಡು ಆನೆ ಇದಕ್ಕಿದ್ದಂತೆ ದಾಳಿ ಮಾಡಿದೆ. ಆ ವ್ಯಕ್ತಿ ಜೀವಭಯದಿಂದ ಓಡಿದ್ದಾನೆ. ಆದರೆ ಆನೆಯೂ ಆತನನ್ನು ಹಿಂಬಾಲಿಸಿದೆ. ಆನೆಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ರಸ್ತೆಗೆ ಜಿಗಿದ ಪ್ರವಾಸಿಗ ಎಡವಿ ರಸ್ತೆ ಮೇಲೆ ಬಿದ್ದಿದ್ದಾನೆ. ಆ ಸಮಯದಲ್ಲಿ ಆನೆ ಅವನನ್ನು ಕಾಲಿನಿಂದ ತುಳಿದಿದೆ. ಆಗ ಪ್ರವಾಸಿಗರು ಬೊಬ್ಬೆ ಹೊಡೆದ ನಂತರ ಆನೆ ಆತನನ್ನು ಅಷ್ಟಕ್ಕೆ ಬಿಟ್ಟು ತೆರಳಿದೆ. ಪ್ರವಾಸಿಗನಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ಗುರುತು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಬಂಡೀಪುರ ಪ್ರದೇಶದಲ್ಲಿ ಇದು ಪ್ರತ್ಯೇಕ ಘಟನೆಯಲ್ಲ, ಇದು ಪ್ರಮುಖ ವನ್ಯಜೀವಿ ಕಾರಿಡಾರ್ ಮತ್ತು ಪ್ರವಾಸಿಗರ ಜನಪ್ರಿಯ ತಾಣವಾಗಿದೆ. ಮಾನವ-ಆನೆಗಳ ಮುಖಾಮುಖಿಯ ಹಲವಾರು ದಾಖಲಿತ ಪ್ರಕರಣಗಳಿವೆ, ಅವುಗಳಲ್ಲಿ ಕೆಲವು ಸಾವುನೋವುಗಳಿಗೆ ಕಾರಣವಾಗಿವೆ. ಈ ವರ್ಷದ ಫೆಬ್ರವರಿಯಲ್ಲಿ, ಚಾಮರಾಜನಗರ ಜಿಲ್ಲೆಯ ರಾಷ್ಟ್ರೀಯ ಉದ್ಯಾನವನದಲ್ಲಿ ಆನೆಯೊಂದು ಇಬ್ಬರು ಪ್ರವಾಸಿಗರನ್ನು ಬೆನ್ನಟ್ಟಿತ್ತು. ಆನೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿದ ನಂತರ ಆನೆ ಅವರನ್ನು ಬೆನ್ನಟ್ಟಿತ್ತು. ಕೇರಳಕ್ಕೆ ಹೋಗುತ್ತಿದ್ದ ಇಬ್ಬರೂ ಯಾವುದೇ ಹಾನಿಯಾಗದಂತೆ ಪಾರಾದರು.
ಸುರಕ್ಷತಾ ಶಿಷ್ಟಾಚಾರಗಳನ್ನು ಪಾಲಿಸುವಂತೆ ಅರಣ್ಯಾಧಿಕಾರಿಗಳು ಪ್ರವಾಗರಿಗೆ ಪದೇಪದೇ ಮಾನವಿ ಮಾಡುತ್ತಲೇ ಇದ್ದಾರೆ. ವಾಹನಗಳ ಒಳಗೆಯೇ ಇರಬೇಕು ಮತ್ತು ಕಾಡು ಪ್ರಾಣಿಗಳನ್ನು ಎಂದಿಗೂ ಪ್ರಚೋದಿಸಬೇಡಿ ಅಥವಾ ಸಮೀಪಿಸಬೇಡಿ ಎಂದು ಪದೇ ಪದೇ ಮನವಿ ಮಾಡಿದರೂ ಪ್ರವಾಸಿಗರು ಇದನ್ನು ಉಲ್ಲಂಘಿಸಿ ಅಪಾಯವನ್ನು ತಂದೊಡ್ಡಿಕೊಳ್ಳುತ್ತಾರೆ. ಬಂಡೀಪುರ ಹುಲಿ ಅಭಯಾರಣ್ಯವು ಹುಲಿಗಳು, ಚಿರತೆಗಳು, ಆನೆಗಳು ಮತ್ತು ಇತರ ವನ್ಯಜೀವಿಗಳಿಗೆ ನೆಲೆಯಾಗಿದ್ದು, ಮಾನವ ಮತ್ತು ಪ್ರಾಣಿಗಳ ಸುರಕ್ಷತೆಗೆ ಎಚ್ಚರಿಕೆ ಮುಖ್ಯವಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ