
ನವದೆಹಲಿ : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ ತೂಗುದೀಪ, ಪವಿತ್ರಾ ಗೌಡ ಹಾಗೂ ಇತರ ಐವರಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ಗುರುವಾರ ರದ್ದುಗೊಳಿಸಿದೆ.
ಹೈಕೋರ್ಟ್ ಆದೇಶ ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಆರ್ ಮಹಾದೇವನ್ ಅವರಿದ್ದ ಪೀಠವು “ಹೈಕೋರ್ಟ್ ಆದೇಶ ಬದಿಗೆ ಸರಿಸಲಾಗಿದೆ. ಆರೋಪಿಗೆ ನೀಡಲಾದ ಜಾಮೀನನ್ನು ರದ್ದುಗೊಳಿಸಲಾಗಿದೆ” ಎಂದು ಹೇಳಿದೆ.
ಜಾಮೀನು ಮಂಜೂರು ಮಾಡಿದರೆ ಅದು ವಿಚಾರಣೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಉಂಟಾಗಬಹುದು” ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಲ್ಲದೆ, ಜೈಲಿನಲ್ಲಿ ಆರೋಪಿಗಳನ್ನು ವಿಶೇಷವಾಗಿ ನಡೆಸಿಕೊಳ್ಳುವುದರ ವಿರುದ್ಧವೂ ನ್ಯಾಯಾಲಯ ಎಚ್ಚರಿಕೆ ನೀಡಿದೆ.

“ಆರೋಪಿಗಳಿಗೆ ಪಂಚತಾರಾ ಉಪಚಾರ ನೀಡಲಾಗುತ್ತಿದೆ ಎಂದು ನಮಗೆ ತಿಳಿದರೆ, ಮೊದಲ ಹೆಜ್ಜೆಯಾಗಿ ಸೂಪರಿಂಟೆಂಡೆಂಟ್ ಆದಿಯಾಗಿ ಎಲ್ಲ ಅಧಿಕಾರಿಗಳನ್ನು ಅಮಾನತುಗೊಳಿಸುವುದು” ಎಂದು ಪೀಠವು ಕಟುವಾಗಿ ಹೇಳಿದೆ
ಚಿತ್ರದುರ್ಗ ಮೂಲದ 33 ವರ್ಷದ ರೇಣುಕಸ್ವಾಮಿ ಅವರ ಮೃತದೇಹ ̄2024ರ ಜೂನ್ 9 ರಂದು ಪತ್ತೆಯಾಗಿತ್ತು. ದರ್ಶನ್ ಸೂಚನೆ ಮೇರೆಗೆ ನಡೆದ ಹಲ್ಲೆಯಲ್ಲಿ ಉಂಟಾದ ಗಾಯಗಳಿಂದಾಗಿ ಅವರು ಸಾವಿಗೀಡಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಪವಿತ್ರಾ ಗೌಡ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ರೇಣುಕಾಸ್ವಾಮಿ ಅಶ್ಲೀಲ ಸಂದೇಶವನ್ನು ಕಳುಹಿಸಿದ್ದ ಹಿನ್ನೆಲೆಯಲ್ಲಿ ದರ್ಶನ್ ಸೂಚನೆ ಮೇರೆಗೆ ದರ್ಶನ್ ಸಹಚರರು ರೇಣುಕಾಸ್ವಾಮಿ ಅವರನ್ನು ಅಪಹರಿಸಿ ಬೆಂಗಳೂರಿನ ಶೆಡ್ ಒಂದರಲ್ಲಿ ಹಲ್ಲೆ ನಡೆಸಿ ಹತ್ಯೆಗೈಯಲಾಗಿತ್ತು. ಖುದ್ದು ದರ್ಶನ್ ಸಹ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿತ್ತು.
ಕಳೆದ ವರ್ಷ ಜೂನ್ 11 ರಂದು ದರ್ಶನ್ ಅವರನ್ನು ಬಂಧಿಸಲಾಗಿತ್ತು. ಕಳೆದ ವರ್ಷ ಅಕ್ಟೋಬರ್ 30ರಂದು, ವೈದ್ಯಕೀಯ ಆಧಾರದ ಮೇಲೆ ಹೈಕೋರ್ಟ್ ಅವರಿಗೆ ಆರು ವಾರಗಳ ಮಧ್ಯಂತರ ಜಾಮೀನು ನೀಡಿತ್ತು. ತರುವಾಯ, ಡಿಸೆಂಬರ್ 13, 2024 ರಂದು ದರ್ಶನ್, ಪವಿತ್ರಾ ಮತ್ತು ಇತರ ಐದು ಆರೋಪಿಗಳಿಗೆ ನಿಯಮಿತ ಜಾಮೀನು ದೊರೆತಿತ್ತು.
ರಾಜ್ಯ ಸರ್ಕಾರ ಜಾಮೀನು ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಜನವರಿ 6 ರಂದು ಅರ್ಜಿ ಸಲ್ಲಿಸಿತ್ತು. ರಾಜ್ಯ ಸರ್ಕಾರದ ಪರ ಲಿಖಿತ ವಾದ ಸಲ್ಲಿಸಿದ್ದ ಹಿರಿಯ ನ್ಯಾಯವಾದಿ ಸಿದ್ಧಾರ್ಥ್ ಲೂತ್ರ ಅವರು ರೇಣುಕಾ ಸ್ವಾಮಿಗೆ ಆದ ಗಾಯಗಳು ಕೊಲೆಯ ಉದ್ದೇಶವನ್ನು ಸ್ಪಷ್ಟವಾಗಿ ಹೇಳುತ್ತವೆ.
ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು ಸ್ಥಿರವಾಗಿದ್ದು ವಿಧಿವಿಜ್ಞಾನ ಮತ್ತು ಎಲೆಕ್ಟ್ರಾನಿಕ್ ಪುರಾವೆಗಳಿಂದ ದೃಢೀಕರಿಸಲ್ಪಟ್ಟಿವೆ. ಹೇಳಿಕೆಗಳಲ್ಲಿನ ವಿಳಂಬವನ್ನು ಪುರಾವೆಗಳೊಂದಿಗೆ ಸಮರ್ಥಿಸಲಾಗಿದೆ. ಸಾಕಷ್ಟು ವಿಧಿವಿಜ್ಞಾನ, ಸಿಡಿಆರ್ ಮತ್ತು ಎಲೆಕ್ಟ್ರಾನಿಕ್ ದಾಖಲೆಗಳು ಆರೋಪಿಗಳಿಗೆ ಕೊಲೆಯೊಂದಿಗೆ ನಂಟು ಇರುವುದನ್ನು ಹೇಳುತ್ತವೆ. ಜಾಮೀನು ಹಂತದಲ್ಲಿ ಹೈಕೋರ್ಟ್ ತಪ್ಪಾಗಿ “ಮಿನಿ-ವಿಚಾರಣೆ” ನಡೆಸಿದೆ ಎಂದು ವಾದಿಸಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ