ನವದೆಹಲಿ: 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ದೇಶಾದ್ಯಂತ ಅದ್ಧೂರಿಯಾಗಿ ಆಚರಣೆ ಮಾಡಿದ ಸಂದರ್ಭದಲ್ಲಿ ವಿಶೇಷ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹೊರಹೊಮ್ಮಿವೆ.
ವೈರಲ್ ಆಗಿರುವ ಈ ವೀಡಿಯೊವೊಂದರಲ್ಲಿ ಭಾರತದ ರಾಷ್ಟ್ರೀಯ ಪ್ರಾಣಿ (National Animal) ಹುಲಿ ಮತ್ತು ರಾಷ್ಟ್ರೀಯ ಪಕ್ಷಿ ನವಿಲು (National Bird) ಕಾಡಿನ ಹಾದಿಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ಒಂದೇ ಫ್ರೇಮ್‍ನಲ್ಲಿ ಸೆರೆಹಿಡಿಯಲಾಗಿದೆ. ಸ್ವಾತಂತ್ರ್ಯ ದಿನಾಚರಣೆಯಂದು ಐಎಫ್‌ಎಸ್ ಅಧಿಕಾರಿಯೊಬ್ಬರು ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.
ವೀಡಿಯೊದಲ್ಲಿ ಹುಲಿ ಮತ್ತು ನವಿಲು ಕಾಡಿನ ಒಂದೇ ದಾರಿಯಲ್ಲಿ ಕೆಲವೇ ಅಡಿಗಳ ಅಂತರದಲ್ಲಿ ನಡೆದುಕೊಂಡು ಹೋಗುವುದನ್ನು ತೋರಿಸುತ್ತದೆ. ಈ ವೀಡಿಯೊವನ್ನು ರಾಕೇಶ್ ಭಟ್ ಎಂಬವರು ಸೆರೆ ಹಿಡಿದಿದ್ದು, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಪಿ.ಎಂ. ಧಕಾಟೆ (ಐಎಫ್‌ಎಸ್) ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. “ನಮ್ಮ ರಾಷ್ಟ್ರೀಯ ಪ್ರಾಣಿ ಮತ್ತು ರಾಷ್ಟ್ರೀಯ ಪಕ್ಷಿ, ಒಂದೇ ಫ್ರೇಮ್‌ನಲ್ಲಿ ಒಟ್ಟಿಗೆ ಇರುವ ಅದ್ಭುತ ವೀಡಿಯೊ. ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು” ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಇದು ರಾಷ್ಟ್ರೀಯತೆಯ ಹಾದಿಯಲ್ಲಿ ನಡೆಯುವ ವೈವಿಧ್ಯತೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ನವಿಲಿನ ಬಳಿ ಹುಲಿ ತುಂಬಾ ಶಾಂತವಾಗಿ ನಡೆದುಕೊಂಡು ಬರುವುದು ಕಾಣುತ್ತದೆ. ಎಂತಹ ಅಪರೂಪದ ಮತ್ತು ಸುಂದರವಾದ ದೃಶ್ಯ ಎಂದು ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಒಂದೇ ಫ್ರೇಮ್‌ನಲ್ಲಿ ಹುಲಿ ಮತ್ತು ನವಿಲಿನ ಸುಂದರ ದೃಶ್ಯ ಬಹಳ ಅದ್ಭುತವಾಗಿದೆ ಎಂದು ಮಗದೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ