ಡೆಹ್ರಾಡೂನ್: ಉತ್ತರಾಖಂಡದ ಉಧಮ್ ಸಿಂಗ್ ನಗರ ಜಿಲ್ಲೆಯ ಖಾಸಗಿ ಶಾಲೆಯಲ್ಲಿ ಗಂಗನ್ದೀಪ್ ಸಿಂಗ್ ಕೊಹ್ಲಿ ಎಂಬ ಶಿಕ್ಷಕರು ಭೌತಶಾಸ್ತ್ರ ಬೋಧಿಸುತ್ತಿದ್ದಾಗ ತಮ್ಮ ವಿದ್ಯಾರ್ಥಿಯೊಬ್ಬನಿಗೆ ಕಪಾಳಮೋಕ್ಷ ಮಾಡಿದ್ದರು. ಬುಧವಾರ, ಅದೇ ವಿದ್ಯಾರ್ಥಿ ತನ್ನ ಟಿಫಿನ್ ಬಾಕ್ಸ್ನಲ್ಲಿ ಬಂದೂಕನ್ನು ತಂದು ಕೊಹ್ಲಿಯ ಬೆನ್ನಿಗೆ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುನಾನಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಶಿಕ್ಷಕನ ಬೆನ್ನಿಗೆ ಗುಂಡೇಟಿನ ಗಾಯವಾಗಿದೆ. ಹಾರಿದ ಗುಂಡು ಬೆನ್ನಿನ ಕುತ್ತಿಗೆ ಭಾಗಕ್ಕೆ ತಗುಲಿತು. ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರಿಗೆ ತುರ್ತು ಶಸ್ತ್ರಚಿಕಿತ್ಸೆ ಮಾಡಲಾಯಿತು. ಅವರ ಚಿಕಿತ್ಸೆಯನ್ನು ನೋಡಿಕೊಳ್ಳುತ್ತಿರುವ ವೈದ್ಯರಾದ ಡಾ. ಮಾಯಾಂಕ ಅಗರ್ವಾಲ್ ಅವರು ಗುಂಡನ್ನು ಯಶಸ್ವಿಯಾಗಿ ತೆಗೆದುಹಾಕಲಾಗಿದೆ ಎಂದು ದೃಢಪಡಿಸಿದ್ದಾರೆ. ಕೊಹ್ಲಿಯ ಸ್ಥಿತಿ ಸ್ಥಿರವಾಗಿದೆ ಮತ್ತು ಹೆಚ್ಚಿನ ಮೇಲ್ವಿಚಾರಣೆಗಾಗಿ ಅವರನ್ನು ಐಸಿಯುಗೆ ಸ್ಥಳಾಂತರಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು. ಪೊಲೀಸರ ಪ್ರಕಾರ, ಎರಡು ದಿನಗಳ ಹಿಂದೆ ತರಗತಿಯಲ್ಲಿ ಪ್ರಶ್ನೆಗೆ ಉತ್ತರಿಸಲು ವಿಫಲವಾದ ಕಾರಣ ಶಿಕ್ಷಕರು ಕಪಾಳಮೋಕ್ಷ ಮಾಡಿ ಗದರಿಸಿದ್ದರಿಂದ ವಿದ್ಯಾರ್ಥಿ ಕೋಪಗೊಂಡಿದ್ದ.
ಪೊಲೀಸರ ಪ್ರಕಾರ, ಸಮರತ್ ಬಾಜ್ವಾ ಎಂದು ಗುರುತಿಸಲಾದ ವಿದ್ಯಾರ್ಥಿ ತನ್ನ ಊಟದ ಡಬ್ಬಿಯೊಳಗೆ ಪಿಸ್ತೂಲನ್ನು ಮುಚ್ಚಿಟ್ಟುಕೊಂಡು ತರಗತಿಯೊಳಗೆ ತಂದಿದ್ದ. ಬೆಳಗಿನ ವಿರಾಮದ ನಂತರ, ಶಿಕ್ಷಕ ಕೊಹ್ಲಿ ತರಗತಿಯಿಂದ ಹೊರಬರುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ತಿಳಿಸಿದ್ದಾರೆ. ಬಾಲಕ ತನ್ನ ಟಿಫಿನ್ ಬಾಕ್ಸ್ನಿಂದ ಪಿಸ್ತೂಲ್ ಅನ್ನು ಹೊರತೆಗೆದು ಶಿಕ್ಷಕರ ಮೇಲೆ ಗುಂಡು ಹಾರಿಸಿದ ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ತಿಳಿಸಿದ್ದಾರೆ. ವಿದ್ಯಾರ್ಥಿ ಪರಾರಿಯಾಗಲು ಯತ್ನಿಸಿದಾಗ ಇತರ ಶಿಕ್ಷಕರು ಅವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು.
ಪೊಲೀಸರು ಅಪ್ರಾಪ್ತ ವಿದ್ಯಾರ್ಥಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 109 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹದಿಹರೆಯದವನಿಗೆ ಬಂದೂಕು ಹೇಗೆ ಸಿಕ್ಕಿತು ಎಂಬುದರ ಬಗ್ಗೆಯೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ.ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ