ಹೊನ್ನಾವರ | ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ : ಆಗಸ್ಟ್‌ 24 ರಂದು ಬಂಗಾರಮಕ್ಕಿಯಲ್ಲಿ ವಿಚಾರಗೋಷ್ಠಿ

ಹೊನ್ನಾವರ : ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಸಾಧಕ-ಬಾಧಕಗಳ ಕುರಿತು ಆಗಸ್ಟ್‌ 24 ರಂದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಬಂಗಾರಮಕ್ಕಿಯಲ್ಲಿ ವಿಚಾರಗೋಷ್ಠಿ ನಡೆಯಲಿದೆ ಎಂದು ಬಂಗಾರಮಕ್ಕಿಯ ಶ್ರೀ ವೀರಾಂಜನೇಯ ದೇವಸ್ಥಾನದ ಧರ್ಮದರ್ಶಿ ಶ್ರೀ ಮಾರುತಿ ಗುರೂಜಿ ಹೇಳಿದ್ದಾರೆ.
ಹೊನ್ನಾವರ ತಾಲೂಕಿನ ಬಂಗಾರಮಕ್ಕಿಯ ಶ್ರೀ ವೀರಾಂಜನೇಯ ದೇವಸ್ಥಾನದ ಸಭಾಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಚಾರಗೋಷ್ಠಿಯಲ್ಲಿ ತಜ್ಞರು, ವಿಜ್ಞಾನಿಗಳು, ಚಿಂತಕರು, ‌ಸಂಶೋಧಕರು, ಸಂಘ ಸಂಸ್ಥೆಯವರು, ಸಾರ್ವಜನಿಕರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಪಶ್ಚಿಮಘಟ್ಟ ಯುನೆಸ್ಕೋದಿಂದ ಮಾನ್ಯತೆ ಪಡೆದಿದೆ. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ 142 ಹೆಕ್ಟೇರ್ ಅರಣ್ಯ ನಾಶವಾಗಲಿವೆ. ಇದು ಅಳಿವಿನಂಚಿನಲ್ಲಿರುವ ಸಿಂಗಳೀಕ, ಹುಲಿ, ಕಾಳಿಂಗ ಸರ್ಪಗಳ ಸಂರಕ್ಷಿತ ಪ್ರದೇಶ. ಪ್ರಪಂಚದಲ್ಲೇ ಬೇರೆಡೆಗೆ ಇಲ್ಲದ ಅಪರೂಪದ ಸಸ್ಯಗಳು, ವನ್ಯಜೀವಿಗಳು ಇಲ್ಲಿವೆ. ಅರಣ್ಯ ನಾಶದಿಂದ ಈ ಜೀವ ಸಂಕುಲಗಳಿಗೆ ಕಂಟಕವಾಗಲಿದೆ ಎಂದರು.

ಈ ಯೋಜನೆಗೆ ಹೊರದೇಶ ದಿಂದ 10 ಸಾವಿರ ಕೋಟಿ ರೂ. ಸಾಲ ಮಾಡುತ್ತಿದ್ದಾರೆ. ಇದರ ಬದಲು ಪರ್ಯಾಯ ವಿದ್ಯುತ್ ಉತ್ಪಾದನೆಗೆ ಅವಕಾಶವಿದೆ. ಗುಡ್ಡಕೊರೆದು ಮಾಡುವ ಈ ಯೋಜನೆಯಿಂದ ನೆತ್ತಿಯ ಮೇಲೆ ತೂಗುಗತ್ತಿ ಕಟ್ಟಿಕೊಂಡಂತೆ ಆಗಲಿದೆ. ಅಂಕೋಲಾದ ಶಿರೂರಿನಂತಹ ಗುಡ್ಡಕುಸಿತದ ಪ್ರಕರಣಗಳು ಕಣ್ಮುಂದೆ ಇರುವಾಗ ಇಂತಹ ಸೂಕ್ಷ್ಮ ಪರಿಸರದಲ್ಲಿ ಈ ತರಹದ ಭೂಗತ ಯೋಜನೆಗಳು ಬೇಕೇ ಎಂದು ಪ್ರಶ್ನಿಸಿದರು.
60 ವರ್ಷಗಳ ಹಿಂದೆ ಜೋಗದಲ್ಲಿ ಡ್ಯಾಂ ನಿರ್ಮಾಣ ಮಾಡಿದಾಗ ಭೂಮಿ ಕಳೆದುಕೊಂಡವರಿಗೆ ಇನ್ನೂ ಸೂಕ್ತ ಪರಿಹಾರ ಕೊಟ್ಟಿಲ್ಲ. ಸುಪ್ರೀಂ ಕೋರ್ಟ್ ಛಿಮಾರಿ ಹಾಕಿದೆ. ಶರಾವತಿ ಟೇಲರೇಸ್ ನಲ್ಲಿ ವಿದ್ಯುತ್ ಉತ್ಪಾದನೆ ಆರಂಭವಾದಾಗಿನಿಂದ ಸುತ್ತಲಿನ ಊರುಗಳಿಗೆ ಕೆಪಿಸಿಯಿಂದ ಯಾವ ಕೊಡುಗೆಯೂ ಸಿಕ್ಕಿಲ್ಲ ಎಂದರು.
ನಾವು ಅಭಿವೃದ್ಧಿ ವಿರೋಧಿಗಳಲ್ಲ, ಆದರೆ ವಿದ್ಯುತ್ ಉತ್ಪಾದನೆಗೆ ಪರ್ಯಾಯ ವ್ಯವಸ್ಥೆ ಇದೆ. ಗುಡ್ಡ ಕೊರೆದು ಭೂಗತವಾಗಿ ಮಾಡುವ ಯೋಜನೆ ಯಾಕೆ ಬೇಕು ? ಪ್ರಪಂಚದಲ್ಲೇ ಇಲ್ಲದೆ ಇರುವ ಸಸ್ಯ ಸಂಕುಲ ಇಲ್ಲಿಯ ಅರಣ್ಯದಲ್ಲಿದೆ. ಸರ್ಕಾರವೇ ರಚಿಸಿದ ಕಾನೂನು ಅರಣ್ಯ ಹಕ್ಕು, ವನ್ಯ ಜೀವಿ ಸಂಕುಲ, ಪರಿಸರ ಸಂಸರಕ್ಷಣೆ ಹೀಗೆ ನೀವೇ ಹಾಕಿದ ಬೇಲಿಯನ್ನು ಸರ್ಕಾರವೇ ಮುರಿಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಮುಖ ಸುದ್ದಿ :-   ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement