ಬೆಂಗಳೂರು | ಅಟ್ಟಿಸಿಕೊಂಡು ಹೋಗಿ ಲಿವ್‌ ಇನ್‌ ಗೆಳತಿಯ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಕೊಂದ

ಬೆಂಗಳೂರು: ಅನೈತಿಕ ಸಂಬಂಧದ ಶಂಕೆಯಿಂದ ವ್ಯಕ್ತಿಯೋರ್ವ ತನ್ನ ಲಿವ್ ಇನ್ ಗೆಳತಿಯನ್ನು ಅಟ್ಟಿಸಿಕೊಂಡು ಹೋಗಿ ಪೆಟ್ರೋಲ್ ಸುರಿದು ಸುಟ್ಟುಹಾಕಿರುವ ಭೀಕರ ಘಟನೆ ಬೆಂಗಳೂರು ನಗರದ ಹೊರವಲಯದ ಹುಳಿಮಾವು ಬಳಿ ನಡೆದಿದೆ ಎಂದು ವರದಿಯಾಗಿದೆ.
ಮೃತ ಮಹಿಳೆಯನ್ನು ವನಜಾಕ್ಷಿ (35 ) ಎಂದು ಗುರುತಿಸಲಾಗಿದ್ದು, ಕೊಲೆ ಆರೋಪಿ ವಿಠ್ಠಲ (52) ಎಂದು ಹೇಳಲಾಗಿದೆ.
ಈತ ಕ್ಯಾಬ್‌ ಚಾಲಕನಾಗಿದ್ದ. ಮದ್ಯವ್ಯಸನಿಯಾಗಿದ್ದ ಈತ ಈ ಹಿಂದೆ ಮೂರು ಬಾರಿ ಮದುವೆಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ವನಜಾಕ್ಷಿ ಕೂಡ ಸುಮಾರು ನಾಲ್ಕು ವರ್ಷಗಳ ಹಿಂದೆ ಎರಡು ಬಾರಿ ಮದುವೆಯಾಗಿದ್ದಳು, ಕಳೆದ ಮೂರು ವರ್ಷಗಳಿಂದ ಇಬ್ಬರು ಲಿವಿಂಗ್ ಟುಗೆದರ್‌ನಲ್ಲಿದ್ದು, ಮಲ್ಲಸಂಸ್ರದಲ್ಲಿದ್ದರು ಎಂದು ಹೇಳಲಾಗಿದೆ.

ಆದರೆ ಇತ್ತೀಚೆಗೆ ಮೃತ ವನಜಾಕ್ಷಿ ಬೇರೊಬ್ಬ ವ್ಯಕ್ತಿಯ ಜೊತೆಗೆ ಸಂಬಂಧ ಹೊಂದಿದ್ದಾಳೆ ಎಂದು ಈತನಿಗೆ ಅನುಮಾನ ಶುರುವಾಗಿತ್ತು. ಇದರಿಂದಾಗಿ ವಿಠ್ಠಲ ಆಕೆಯನ್ನು ಫಾಲೋ ಮಾಡಲು ಶುರು ಮಾಡಿದ್ದ. ಇದೇ ಸಮಯದಲ್ಲಿ ವನಜಾಕ್ಷಿ ಬೇರೊಬ್ಬ ವ್ಯಕ್ತಿಯ ಜೊತೆಗೆ ಕಾರಿನಲ್ಲಿ ಹೋಗುತ್ತಿದ್ದುದನ್ನು ನೋಡಿ ತೀವ್ರ ಅಸಮಾಧಾನಗೊಂಡಿದ್ದ. ನಂತರ ಆಕೆಯ ಕಾರನ್ನು ಹಿಂಬಾಲಿಸಿಕೊಂಡು ಹೋಗಿ ಅಡ್ಡಗಟ್ಟಿದ್ದ. ಈ ವೇಳೆ ಇಬ್ಬರ ನಡುವೆ ಮಾತಿನ ಘರ್ಷಣೆ ಶುರುವಾಗಿ ಆರೋಪಿ ಕೋಪದಲ್ಲಿ ತನ್ನ ಕಾರಿನಲ್ಲಿದ್ದ 5 ಲೀಟರ್ ಪೆಟ್ರೋಲ್ ತೆಗೆದು ವನಜಾಕ್ಷಿ ಮೇಲೆ ಸುರಿಯಲು ಮುಂದಾದ.

ಪ್ರಮುಖ ಸುದ್ದಿ :-   ಆದಿತ್ಯ ಎಲ್‌1, ಪ್ರೋಬಾ-3 ಉಪಗ್ರಹಗಳ ನೆರವಿನಿಂದ ಸೌರ ಸ್ಫೋಟಗಳ ರಹಸ್ಯ ಬಯಲು ಮಾಡಿದ ವಿಜ್ಞಾನಿಗಳು

ಇದರಿಂದ ಭಯಭೀತಳಾದ ವನಜಾಕ್ಷಿ ಕಾರಿನಿಂದ ಇಳಿದು ತಪ್ಪಿಸಿಕೊಳ್ಳಲು ಓಡಿಹೋಗಿದ್ದಾಳೆ. ಆದರೆ ಆಕೆಯನ್ನು ಬಿಡದ ಆರೋಪಿ ಅಟ್ಟಿಸಿಕೊಂಡು ಹೋಗಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ಆರೋಪಿಸಲಾಗಿದೆ.
ಆ ಭಯಾನಕ ಕೃತ್ಯ ಗಮನಿಸಿದ ವ್ಯಕ್ತಿಯೊಬ್ಬರು ಅವಳನ್ನು ರಕ್ಷಣೆಗೆ ಧಾವಿಸಿದರು. ಇತರರೊಂದಿಗೆ ಅವಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ರಕ್ಷಣೆ ಮಾಡುವಾಗ ಅವರಿಗೂ ಸಣ್ಣಪುಟ್ಟ ಸುಟ್ಟ ಗಾಯಗಳಾಗಿದ್ದವು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಇಂದು, ಸೋಮವಾರ (ಸೆಪ್ಟೆಂಬರ್‌ 1) ಮೃತಪಟ್ಟಿದ್ದಾಳೆ. ಈ ಸಂಬಂಧ ಹುಳಿಮಾವು ಪೊಲೀಸರು ಆರೋಪಿ ವಿಠ್ಠಲನನ್ನು ಬಂಧಿಸಿದ್ದಾರೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement