
ಟೋಕಿಯೊ : ಜಪಾನ್ ಪ್ರಧಾನಿ ಶಿಗೇರು ಇಶಿಬಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದು, ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾದ ಜಪಾನ್ ಅನ್ನು ಯಾರು ಮುನ್ನಡೆಸುತ್ತಾರೆ ಎಂಬುದರ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ.
ಯುದ್ಧಾನಂತರದ ಹೆಚ್ಚಿನ ಅವಧಿಗೆ ಜಪಾನ್ ನಲ್ಲಿ ಆಡಳಿತ ನಡೆಸಿದ ಇಶಿಬಾ ಅವರ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ (ಎಲ್ಡಿಪಿ) ಮತ್ತು ಅದರ ಒಕ್ಕೂಟದ ಪಕ್ಷಗಳು ತಮ್ಮ ಅಧಿಕಾರಾವಧಿಯಲ್ಲಿ ಸಂಸತ್ತಿನ ಎರಡೂ ಸದನಗಳಲ್ಲಿ ಬಹುಮತವನ್ನು ಕಳೆದುಕೊಂಡ ಕಾರಣ ಜಪಾನ್ನ ಮುಂದಿನ ನಾಯಕನನ್ನು ಆಯ್ಕೆ ಮಾಡುವ ಪ್ರಕ್ರಿಯೆಯು ಮೊದಲಿಗಿಂತ ಹೆಚ್ಚು ಜಟಿಲವಾಗಿದೆ.

ಚುನಾವಣಾ ಸೋಲು
ಜುಲೈನಲ್ಲಿ ನಡೆದ ಚುನಾವಣೆಯಲ್ಲಿ ಎಲ್ಡಿಪಿ (LDP)ಗೆ ಭಾರಿ ಹೊಡೆತ ಬಿದ್ದ ನಂತರ ಇಶಿಬಾ ಅವರ ರಾಜೀನಾಮೆ ಘೋಷಣೆ ಬಂದಿದೆ. ಇಶಿಬಾ ಅವರ ಎಲ್ಡಿಪಿ ನೇತೃತ್ವದ ಆಡಳಿತಾರೂಢ ಒಕ್ಕೂಟವು ಕೆಳಮನೆ ಮತ್ತು ಡಯಟ್ ನ ಮೇಲ್ಮನೆ ಎರಡರಲ್ಲೂ ಬಹುಮತವನ್ನು ಕಳೆದುಕೊಂಡಿತು. 248 ಸ್ಥಾನಗಳ ಮೇಲ್ಮನೆಯಲ್ಲಿ ಎಲ್ಡಿಪಿ ಬಹುಮತವನ್ನು ಗಳಿಸುವಲ್ಲಿ ವಿಫಲವಾಯಿತು.
ಸರ್ಕಾರದ ಬಗ್ಗೆ ಸಾರ್ವಜನಿಕ ಅಸಮಾಧಾನ ಹೆಚ್ಚಾದಂತೆ, ಚುನಾವಣಾ ಸೋಲಿನ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಇಶಿಬಾ ಅವರ ಪಕ್ಷದೊಳಗಿನಿಂದ ಒತ್ತಾಯಗಳು ಹೆಚ್ಚಾದವು.
ಒಂದು ತಿಂಗಳಿಗೂ ಹೆಚ್ಚು ಕಾಲ ಎಲ್ಡಿಪಿಯೊಳಗಿನ ಬಲಪಂಥೀಯ ಬಣಗಳಿಂದ ಅವರು ಒತ್ತಡವನ್ನು ನಿಭಾಯಿಸಿದರೂ, ಅವರ ನಾಯಕತ್ವದ ಬಗ್ಗೆ ಪಕ್ಷದ ಆಂತರಿಕ ಭಿನ್ನಾಭಿಪ್ರಾಯಗಳು ತೀವ್ರಗೊಳ್ಳುತ್ತಲೇ ಇದ್ದವು, ಅಂತಿಮವಾಗಿ ಇದು ಅವರು ರಾಜೀನಾಮೆ ನೀಡುವ ನಿರ್ಧಾರಕ್ಕೆ ಕಾರಣವಾಯಿತು.
ಗಮನಾರ್ಹವೆಂದರೆ, ಇಶಿಬಾ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಪಾನ್ ಮೇಲೆ ವಿಧಿಸಿದ ಸುಂಕವನ್ನು 25% ರಿಂದ 15% ಕ್ಕೆ ಇಳಿಸಲು ಯಶಸ್ವಿಯಾಗಿದ್ದಾರೆ.
ಪಕ್ಷದಲ್ಲಿ ವಿಭಜನೆಯನ್ನು ತಪ್ಪಿಸಲು ಪ್ರಧಾನಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಜಪಾನಿನ ಕೆಲ ಮಾಧ್ಯಮಗಳು ಹೇಳಿವೆ.


ನಿಮ್ಮ ಕಾಮೆಂಟ್ ಬರೆಯಿರಿ