ನವದೆಹಲಿ: 29 ವರ್ಷದ ಮಾನಿ ಪವಾರ್ ಅವರಿಗೆ ಹೊಸ ಮಹೀಂದ್ರಾ ಥಾರ್ ಖರೀದಿಸಿದ ಸಂತೋಷ ವಿವರಿಸಲಾಗದು. ಅದನ್ನು ರಸ್ತೆಗೆ ಇಳಿಸುವ ಮೊದಲು, ಅವರು ಶೋರೂಮ್ ಒಳಗೆ ಒಂದು ಸಾಂಪ್ರದಾಯಿಕ ಪದ್ಧತಿ ಅನುಸರಿಸಲು ನಿರ್ಧರಿಸಿದರು. ಈ ಆಚರಣೆಯಲ್ಲಿ ಕಾರಿನ ಟೈರ್ ಅಡಿಯಲ್ಲಿ ನಿಂಬೆ ಹಣ್ಣನ್ನು ಇಟ್ಟು ಅದರ ಮೇಲೆ ಥಾರ್ ಅನ್ನು ಹತ್ತಿಸುವುದು ಅದರಲ್ಲಿ ಸೇರಿತ್ತು. ಆದರೆ ನಿಂಬೆ ಹಣ್ಣಿನ ವಾಹನ ಹತ್ತಿಸುವಾಗ ಮಾನಿ ಪವಾರ್ ಆಕಸ್ಮಿಕವಾಗಿ ಜೋರಾಗಿ ಆಕ್ಸಿಲರೇಟರ್ ಅನ್ನು ಒತ್ತಿದ್ದರಿಂದ ವಾಹನವು ಶೋರೂಮಿನ ಮೊದಲ ಮಹಡಿಯಿಂದ ಹಾರಿ ಹೋಗಿ ಕೆಳಗೆ ಬಿದ್ದ ಘಟನೆ ದೆಹಲಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಸೋಮವಾರ ಸಂಜೆ, ಮಾನಿ ಪವಾರ್ ದೆಹಲಿಯ ನಿರ್ಮಾಣ ವಿಹಾರದಲ್ಲಿರುವ ಮಹೀಂದ್ರಾ ಶೋರೂಮಿಗೆ 27 ಲಕ್ಷ ರೂ. ಮೌಲ್ಯದ ತಮ್ಮ ಹೊಚ್ಚ ಹೊಸ ಥಾರ್ ಅನ್ನು ಮನೆಗೆ ತರಲು ಹೋಗಿದ್ದರು. ಶೋರೂಮ್‌ನಿಂದ ಕಾರನ್ನು ಓಡಿಸುವ ಮೊದಲು ಪೂಜೆ ಮತ್ತು ಸಾಂಪ್ರದಾಯಿಕ ಆಚರಣೆ ಮಾಡಲು ನಿರ್ಧರಿಸಿದರು.
ಶೋರೂಮ್‌ನ ಮೊದಲ ಮಹಡಿಯಲ್ಲಿ ನಿಂತಿದ್ದ ಥಾರ್‌ನ ಚಕ್ರದ ಮುಂದೆ ನಿಂಬೆ ಹಣ್ಣನ್ನು ಇರಿಸಲಾಯಿತು. ಮಾನಿ ಪವಾರ್ ನಿಧಾನವಾಗಿ ಚಾಲನೆ ಮಾಡಿ ಕಾರನ್ನು ಲಘುವಾಗಿ ಓಡಿಸಿ ನಿಂಬೆ ಹಣ್ಣಿನ ಮೇಲೆ ಟೈರ್ ಅನ್ನು ಹತ್ತಿಸಬೇಕಾಗಿತ್ತು. ಆದರೆ ಅವರು ಜೋರಾಗಿ ಆಕ್ಸಿಲರೇಟರ್ ಅನ್ನು ಒತ್ತಿದ್ದರಿಂದ ಜೋರಾಗಿ ಓಡಿದ ಕಾರು ಮಾನಿ ಪವಾರ್ ಮತ್ತು ಕಾರಿನ ಒಳಗೆ ಕುಳಿತಿದ್ದ ಶೋರೂಮ್ ಉದ್ಯೋಗಿ ವಿಕಾಸ ಎಂಬ ವ್ಯಕ್ತಿಯ ಸಮೇತ ಗಾಜು ಒಡೆದುಕೊಂಡು ಶೋರೂಮಿನಿಂದ ಹೊರಗೆ ಹಾರಿ ಪಾದಚಾರಿ ರಸ್ತೆಗೆ ಬಿದ್ದಿದೆ. ಅಪಘಾತದ ನಂತರದ ವೀಡಿಯೊವು ಶೋರೂಮ್‌ನ ಕೆಳಗಿನ ರಸ್ತೆಯಲ್ಲಿ ತಲೆಕೆಳಗಾಗಿ ಬಿದ್ದ ಕಾರನ್ನು ತೋರಿಸಿದೆ.
ಏರ್‌ಬ್ಯಾಗ್‌ಗಳು ತಕ್ಷಣ ತೆರೆದುಕೊಂಡಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಲಿಲ್ಲ. ನಂತರ ಅವರನ್ನು ಹತ್ತಿರದ ಮಲಿಕ್ ಆಸ್ಪತ್ರೆಗೆ ಸಾಗಿಸಲಾಯಿತು. ಪ್ರಥಮ ಚಿಕಿತ್ಸೆಯ ನಂತರ ಇಬ್ಬರನ್ನು ಬಿಡುಗಡೆ ಮಾಡಲಾಯಿತು.


ನಿಮ್ಮ ಕಾಮೆಂಟ್ ಬರೆಯಿರಿ