ಬಾರ್ಮರ್ (ರಾಜಸ್ಥಾನ): ತನ್ನ ಪ್ರಿಯಕರನನ್ನು ಭೇಟಿಯಾಗಲು 600 ಕಿ.ಮೀ. ಕಾರು ಚಲಾಯಿಸಿಕೊಂಡ ಹೋಗಿದ್ದ 37 ವರ್ಷದ ಮಹಿಳೆಯೊಬ್ಬರುಮರುದಿನ ತನ್ನ ಕಾರಿನಲ್ಲಿ ಶವವಾಗಿ ಪತ್ತೆಯಾದ ಘಟನೆ ವರದಿಯಾಗಿದೆ. ಕಬ್ಬಿಣದ ರಾಡ್‌ನಿಂದ ಕೊಲೆ ಮಾಡಿದ ಆರೋಪದ ಮೇಲೆ ಆಕೆಯ ಪ್ರಿಯಕರ, ಶಾಲಾ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನದ ಜುನ್ಜುನುವಿನ ಅಂಗನವಾಡಿ ಮೇಲ್ವಿಚಾರಕಿ ಮುಖೇಶಕುಮಾರಿ ಸುಮಾರು ಒಂದು ದಶಕದ ಹಿಂದೆ ತನ್ನ ಪತಿಯಿಂದ ಡೈವೋರ್ಸ್ ಪಡೆದಿದ್ದಳು. ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಈಕೆ ಬಾರ್ಮರ್‌ನ ಶಾಲಾ ಶಿಕ್ಷಕ ಮನರಾಮ್ ಎಂಬಾತನ ಜೊತೆ ಫೇಸ್‌ಬುಕ್‌ನಲ್ಲಿ ಸಂಪರ್ಕಕ್ಕೆ ಬಂದಿದ್ದಳು. ನಂತರ ಇಬ್ಬರೂ ಭೇಟಿಯಾಗಲು ಪ್ರಾರಂಭಿಸಿದರು ಮತ್ತು ನಂತರ ಅವರಿಬ್ಬರು ಸನಿಹವಾದರು. ಮುಖೇಶಕುಮಾರಿ ಆಗಾಗ್ಗೆ ಮನರಾಮ್ ನನ್ನು ಭೇಟಿಯಾಗಲು ಜುನ್ಜುನುವಿನಿಂದ ಬಾರ್ಮರ್‌ಗೆ – ಸುಮಾರು 600 ಕಿ.ಮೀ. ದೂರ ಕಾರು ಚಲಾಯಿಸುತ್ತಿದ್ದಳು.
ಮುಖೇಶಕುಮಾರಿ ಆತನ ಜೊತೆ ಬದುಕಲು ಬಯಸಿದ್ದಳು. ಮುಖೇಶಕುಮಾರಿ ತನ್ನ ಪತಿಗೆ ವಿಚ್ಛೇದನ ನೀಡಿದ್ದರೂ, ಮನರಾಮ್ ವಿಚ್ಛೇದನ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ಬಾಕಿ ಇತ್ತು. ಪೊಲೀಸರ ಪ್ರಕಾರ, ಆಕೆ ಮದುವೆಯಾಗುವಂತೆ ಮನರಾಮ್ ಮೇಲೆ ಒತ್ತಡ ಹೇರುತ್ತಿದ್ದಳು ಮತ್ತು ಇದು ಆಗಾಗ್ಗೆ ಅವರಿಬ್ಬರ ಮಧ್ಯೆ ಜಗಳಕ್ಕೆ ಕಾರಣವಾಗುತ್ತಿತ್ತು.
ಸೆಪ್ಟೆಂಬರ್ 10 ರಂದು, ಮಹಿಳೆ ತನ್ನ ಆಲ್ಟೋ ಕಾರನ್ನು ಜುನ್ಜುನುವಿನಿಂದ 600 ಕಿ.ಮೀ.ದೂರದ ಬಾರ್ಮರ್‌ನಲ್ಲಿರುವ ಮನರಾಮನ ಗ್ರಾಮಕ್ಕೆ ಕಾರು ಚಲಾಯಿಸಿದ್ದಳು. ಅವಳು ಅಲ್ಲಿದ್ದವರನ್ನು ಕೇಳಿ ತಿಳಿದುಕೊಂಡು ಮನರಾಮನ ಮನೆಗೆ ಹೋಗಿದ್ದಳು. ಹಾಗೂ ಆತನ ಕುಟುಂಬ ಸದಸ್ಯರಿಗೆ ತಮ್ಮಿಬ್ಬರ ಸಂಬಂಧದ ಬಗ್ಗೆ ತಿಳಿಸಿದ್ದಳು. ಇದು ಮನರಾಮ್ ಕೋಪಗೊಳ್ಳಲು ಕಾರಣವಾಯಿತು. ನಂತರ ಸ್ಥಳೀಯ ಪೊಲೀಸರನ್ನು ಕರೆಸಲಾಯಿತು. ಪೊಲೀಸರು ಅವರಿಗೆ ಪರಸ್ಪರ ಸಮಸ್ಯೆ ಬಗೆಹರಿಸಿಕೊಳ್ಳಲು ಸಲಹೆ ನೀಡಿದರು.
ಸಂಜೆ, ಇಬ್ಬರೂ ಒಟ್ಟಿಗೆ ಇದ್ದಾಗ ಮನರಾಮ ಆಕೆಯ ತಲೆಗೆ ಕಬ್ಬಿಣದ ರಾಡ್‌ನಿಂದ ಹೊಡೆದು ಸಾಯಿಸಿದ್ದಾನೆ. ನಂತರ ಆಕೆಯ ಶವವನ್ನು ಅವಳ ಕಾರಿನ ಡ್ರೈವರ್ ಸೀಟಿನಲ್ಲಿ ಇರಿಸಿ ಅಪಘಾತವೆಂದು ಬಿಂಬಿಸಲು ಕಾರನ್ನು ರಸ್ತೆಯಿಂದ ಪಲ್ಟಿ ಹೊಡೆಸಿದ್ದಾನೆ. ನಂತರ ಮನೆಗೆ ಬಂದು ಮಲಗಿದ್ದಾನೆ. ಮರುದಿನ ಬೆಳಿಗ್ಗೆ, ಮುಖೇಶಕುಮಾರಿ ಅಪಘಾತದಲ್ಲಿ ಮೃತಪಟ್ಟಿದ್ದರ ಬಗ್ಗೆ ಪೊಲೀಸರಿಗೆ ಬೇರೆಯವರ ಮೂಲಕ ತಿಳಿಸಿದ್ದ.
ವಿಷಯ ತಿಳಿದ ಪೊಲೀಸರು ಘಟನೆಯ ತನಿಖೆ ಪ್ರಾರಂಭಿಸಿದಾಗ, ಅವರಿಗೆ ಈ ಬಗ್ಗೆ ಅನುಮಾನ ಬಂದಿದೆ. ಯಾಕೆಂದರೆ ಆಕೆಯ ಸಾವಿನ ಸಮಯದಲ್ಲಿ ಮನರಾಮ್ ಮತ್ತು ಆಕೆಯ ಫೋನ್ ಸ್ಥಳಗಳು ಒಂದೇ ಆಗಿರುವುದು ಕಂಡುಬಂದಿದೆ. ವಿಚಾರಣೆಯ ಸಮಯದಲ್ಲಿ, ಮನರಾಮ್ ನಡೆದ ಸಂಗತಿಯನ್ನು ಬಾಯ್ಬಿಟ್ಟಿದ್ದಾನೆ. ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ