
ದಿನ ಕಳೆದಂತೆ ಭಾರತದ ವಿರುದ್ಧ ಸ್ಪರ್ಧಿಸುವುದು ಪಾಕಿಸ್ತಾನಕ್ಕೆ ಕಷ್ಟಸಾಧ್ಯವಾಗುತ್ತಿದ್ದಂತೆಯೇ ಮೈದಾನದಲ್ಲಿ ಅದರ ಆಟಗಾರರ ನಡವಳಿಕೆಯ ಮಟ್ಟವೂ ಕುಸಿಯುತ್ತಿದೆ. ಭಾನುವಾರ ನಡೆದ ಏಷ್ಯಾ ಕಪ್ 2025 ಸೂಪರ್ 4 ಪಂದ್ಯದಲ್ಲಿ ಪಾಕಿಸ್ತಾನವು ಭಾರತದ ವಿರುದ್ಧ ಮತ್ತೊಮ್ಮೆ ಸೋತಿತು. ವಿಕೆಟ್‌ಗಳನ್ನು ಪಡೆಯಲು ಹೆಣಗಾಡಿದ ಪಾಕಿಸ್ತಾನ ವೇಗಿ ಹ್ಯಾರಿಸ್ ರೌಫ್, ಬೌಂಡರಿ ಹಗ್ಗದ ಬಳಿ ಭಾರತದ ಅಭಿಮಾನಿಗಳ ಜೊತೆ ಸಂವಹನ ನಡೆಸುವಾಗ ಅವರು ಮಾಡಿದ ‘ವಿಮಾನ ಬೀಳುವ ಸನ್ನೆ’ ಭಾರತೀಯ ಅಭಿಮಾನಿಗಳನ್ನು ಕೆರಳಿಸಿದ್ದು, ಇದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಭಾನುವಾರ (ಸೆಪ್ಟೆಂಬರ್ 21) ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಏಷ್ಯಾ ಕಪ್ 2025 ಪಂದ್ಯದಲ್ಲಿ, ಪಾಕಿಸ್ತಾನದ ವೇಗಿ ಹ್ಯಾರಿಸ್ ರೌಫ್ ಅವರು ವಿವಾದಾತ್ಮಕ 6-0 ಸನ್ನೆಯೊಂದಿಗೆ ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳನ್ನು ಕೆಣಕಿರುವುದು ಕಂಡುಬಂದಿದೆ.

ಪಹಲ್ಗಾಮ್ ದಾಳಿಯ ನಂತರ ನಡೆದ ಆಪರೇಷನ್ ಸಿಂಧೂರದ ವೇಳೆ ನಾಲ್ಕು ದಿನಗಳ ಘರ್ಷಣೆಯಲ್ಲಿ ಆರು ಭಾರತೀಯ ಫೈಟರ್ ಜೆಟ್‌ಗಳನ್ನು ಹೊಡೆದುರುಳಿಸಿದ ಪಾಕಿಸ್ತಾನದ ಆಧಾರರಹಿತ ಹೇಳಿಕೆಗಳನ್ನು ಈ 6-0 ಸನ್ನೆ ಸಂಕೇತಿಸುತ್ತದೆ ಎಂದು ಹೇಳಲಾಗಿದೆ.
ಬೌಂಡರಿಯ ಬಳಿ ಫೀಲ್ಡಿಂಗ್ ಮಾಡುವಾಗ, ಅಭಿಮಾನಿಗಳು ‘ವಿರಾಟ್ ಕೊಹ್ಲಿʼ ಹೆಸರನ್ನು ಕೂಗಿದ್ದು ರೌಫ್ ಅವರನ್ನು ಕೆರಳಿಸಿತು. ನಂತರ ರೌಫ್ ಮಾಡಿದ ಸನ್ನೆ ಅತ್ಯಂತ ಪ್ರಚೋದನಕಾರಿಯಾಗಿತ್ತು. ಪಾಕಿಸ್ತಾನದ ವೇಗಿ ಅಭಿಮಾನಿಗಳ ಕಡೆಗೆ ‘6-0’ ಸನ್ನೆಯನ್ನು ಮಾಡಿದರು. ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಯಾಗಿ ಭಾರತೀಯ ಸೈನಿಕರು ಆಪರೇಶನ್ ಸಿಂಧೂರ ಹೆಸರಿನಲ್ಲಿ ಪಾಕಿಸ್ತಾನದ ಮೇಲೆ ವಾಯು ದಾಳಿ ನಡೆಸಿತ್ತು.
ಈ ವೇಳೆ 6 ಭಾರತೀಯ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎಂದು ಪಾಕಿಸ್ತಾನವು ಆಧಾರರಹಿತ ಹೇಳಿಕೆ ನೀಡಿ ವಿಶ್ವದ ಮುಂದೆ ನಗೆಪಟಲಿಗೀಡಾಗಿತ್ತು. ಇದನ್ನೆ 6-0 ಎಂದು ಕೈ ಸನ್ನೆಯ ಮೂಲಕ ತೋರಿಸಿ ಹಾರಿಸ್ ರೌಫ್ ಭಾರತೀಯ ಅಭಿಮಾನಿಗಳನ್ನು ಕೆಣಕಲು ಹೋಗಿದ್ದಾರೆ. ರೌಫ್ ವಿಮಾನಗಳು ಬೀಳುವುದನ್ನು ಅನುಕರಿಸುತ್ತಾ ಕೈ ಸನ್ನೆಗಳ ಮೂಲಕ ಭಾರತದ ಅಭಿಮಾನಿಗಳನ್ನು ಕೆಣಕಿದ್ದಾರೆ.
ಈ ಪಂದ್ಯದಲ್ಲಿ 171 ರನ್‌ಗಳನ್ನು ಗಳಿಸಿದ್ದ ಪಾಕಿಸ್ತಾನದ ವಿರುದ್ಧ ಭಾರತವು 6 ವಿಕೆಟ್‌ಗಳಿಂದ ಭರ್ಜರಿ ಜಯಗಳಿಸಿತು. ಈ ಪಂದ್ಯದಲ್ಲಿ, ರೌಫ್ ನಾಲ್ಕು ಓವರ್‌ಗಳನ್ನು ಬೌಲಿಂಗ್ ಮಾಡಿ 26 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಪಡೆದರು. ಅವರು ಭಾರತದ ತಂಡದ ನಾಯಕ ಸೂರ್ಯಕುಮಾರ ಯಾದವ್ ಹಾಗೂ ಸಂಜು ಸ್ಯಾಮ್ಸನ್ ಅವರ ವಿಕೆಟ್ ಪಡೆದರು.


ನಿಮ್ಮ ಕಾಮೆಂಟ್ ಬರೆಯಿರಿ