ಬಿಸಿಸಿಐ ನೂತನ ಅಧ್ಯಕ್ಷರಾಗಿ ದೆಹಲಿಯ ಮಾಜಿ ಕ್ರಿಕೆಟಿಗ ಮಿಥುನ್ ಮನ್ಹಾಸ್ ಆಯ್ಕೆ

 ಮುಂಬೈ : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ವಾರ್ಷಿಕ ಸಾಮಾನ್ಯ ಸಭೆಯ ನಂತರ ಮಿಥುನ್ ಮನ್ಹಾಸ್ ಅವರನ್ನು ಬಿಸಿಸಿಐ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಯಾವುದೇ ಪ್ರತಿಸ್ಪರ್ಧಿ ಇಲ್ಲದ ಕಾರಣ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ, ಸೌರವ್ ಗಂಗೂಲಿ ಮತ್ತು ರೋಜರ್ ಬಿನ್ನಿಯ ನಂತರ ನಿರಂತರವಾಗಿ ಬಿಸಿಸಿಐ ಅಧ್ಯಕ್ಷರಾಗಿ ನೇಮಕಗೊಂಡ ಮೂರನೇ ಕ್ರಿಕೆಟಿಗರಾಗಿದ್ದಾರೆ.
ರೋಜರ್ ಬಿನ್ನಿಯ ನಂತರ ಈ ಜವಾಬ್ದಾರಿಯನ್ನು ವಹಿಸಿಕೊಂಡಿರುವ 45 ವರ್ಷದ ಮಿಥುನ್ ಮನ್ಹಾಸ್, ಇದಕ್ಕೂ ಮೊದಲು ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಅಸೋಸಿಯೇಷನ್‌ನಲ್ಲಿ ಕ್ರಿಕೆಟ್ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಶನಿವಾರ ನಡೆದ ಮಹತ್ವದ ಸಭೆಯ ಬಳಿಕ ಅಧ್ಯಕ್ಷ ಸ್ಥಾನಕ್ಕಾಗಿ ಮುಂದಾಳತ್ವದ ಅಭ್ಯರ್ಥಿಯಾಗಿ ಹೊರಹೊಮ್ಮಿದರು. ಈ ಸಭೆಯಲ್ಲಿ ಖಜಾಂಚಿ ಮತ್ತು ಐಪಿಎಲ್ ಅಧ್ಯಕ್ಷ ಸ್ಥಾನಗಳಿಗೆ ಕೂಡ ಅಭ್ಯರ್ಥಿಗಳ ಆಯ್ಕೆಯ ಬಗ್ಗೆಯೂ ಚರ್ಚೆ ಮಾಡಲಾಯಿತು.
ರಾಜೀವ್ ಶುಕ್ಲಾ ಅವರು ಬಿಸಿಸಿಐ ಉಪಾಧ್ಯಕ್ಷರಾಗಿ ಆಯ್ಕೆಯಾದರು. ದೇವಜಿತ್ ಸೈಕಿಯಾ ಅವರು ಪ್ರಧಾನ ಕಾರ್ಯದರ್ಶಿಯಾಗಿ, ಪ್ರಭಜೀತ್ ಸಿಂಗ್ ಭಾಟಿಯಾ ಜಂಟಿ ಕಾರ್ಯದರ್ಶಿಯಾಗಿ ಹಾಗೂ ಕರ್ನಾಟಕದ ಎ. ರಘುರಾಮ ಭಟ್ ಅವರು ಖಜಾಂಚಿಯಾಗಿ ಆಯ್ಕೆಯಾದರು.
ಜಯದೇವ ನಿರಂಜನ್ ಶಾ ಅವರನ್ನು ಎಪೆಕ್ಸ್ ಕೌನ್ಸಿಲ್‌ನ ಏಕೈಕ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ. ಇದರ ಜೊತೆಗೆ, ಅರುಣ್ ಸಿಂಗ್ ಧುಮಾಲ್ ಮತ್ತು ಎಂ. ಖೈರುಲ್ ಜಮಾಲ್ ಮಜುಂದಾರ್ ಅವರನ್ನು ಗವರ್ನಿಂಗ್ ಕೌನ್ಸಿಲ್‌ನ ಹೊಸ ಸದಸ್ಯರಾಗಿ ನೇಮಕ ಮಾಡಲಾಗಿದೆ, ಈ ಸಂಸ್ಥೆ ಭಾರತದ ಕ್ರಿಕೆಟ್ ಕ್ಷೇತ್ರದ ಹೆಚ್ಚಿನ ಯೋಜನೆಗಳನ್ನು ಮೇಲ್ವಿಚಾರಣೆ ಮಾಡುತ್ತದೆ.

ಪ್ರಮುಖ ಸುದ್ದಿ :-   ದೆಹಲಿ ಹೋಟೆಲ್‌ನಲ್ಲಿ ಅಗ್ನಿ ಅವಘಡ : 21 ಮಂದಿ ಸಾವು ; ಜೀವ ಉಳಿಸಿಕೊಳ್ಳಲು ಕಟ್ಟಡದಿಂದ ಧುಮುಕಿದ ಇಬ್ಬರು ಮಹಿಳೆಯರು

ಮಿಥುನ್ ಮನ್ಹಾಸ್‌ ಯಾರು?
1979 ಅಕ್ಟೋಬರ್ 12ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಜನಿಸಿದ ಮಿಥುನ್ ಮನ್ಹಾಸ್‌ ಅವರು, ಭಾರತೀಯ ಪ್ರಾದೇಶಿಕ ಕ್ರಿಕೆಟ್‌ನ ಅತ್ಯಂತ ಭರವಸೆಯ ಆಟಗಾರರಾಗಿ ಹೊರಹೊಮ್ಮಿದರು. ಅವರು ಭಾರತದ ರಾಷ್ಟ್ರೀಯ ತಂಡದಲ್ಲಿ ಆಡದಿದ್ದರೂ, ಅವರು ದೇಶೀಯ ಕ್ರಿಕೆಟ್‌ನಲ್ಲಿ ದೆಹಲಿ ಹಾಗೂ ಜಮ್ಮು ಮತ್ತು ಕಾಶ್ಮೀರ ತಂಡಗಳಿಗೆ ಬಲವಾದ ಸಹಾಯ ನೀಡಿದರು. ಬಲಗೈ ಬ್ಯಾಟ್ಸ್‌ಮನ್ ಆಗಿರುವ ಮನ್ಹಾಸ್‌ ಆವಶ್ಯಕತೆ ಇದ್ದಾಗ ಆಫ್‌ಸ್ಪಿನ್ ಬೌಲಿಂಗ್ ಮತ್ತು ಕೀಪಿಂಗ್ ಕೂಡ ಮಾಡುತ್ತಿದ್ದರು.
ಅನೇಕ ಹಿರಿಯ ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್‌ ಆಟದಲ್ಲಿ ನಿರತರಾಗಿರುವಾಗ, ದೆಹಲಿ ತಂಡವನ್ನು ಮುನ್ನಡೆಸಿದ ಅವರು, ವಿರಾಟ್ ಕೊಹ್ಲಿ ಅವರ ರಣಜಿ ಕ್ರಿಕೆಟ್ ಆರಂಭದ ವೇಳೆ ನಾಯಕನಾಗಿದ್ದರು ಮತ್ತು ಅವರನ್ನು ಪ್ರೋತ್ಸಾಹಿಸಿದರು.

18 ವರ್ಷಗಳ ಮೊದಲ ದರ್ಜೆ ಕ್ಲಾಸ್ ಕ್ರಿಕೆಟ್ ನಲ್ಲಿ, 157 ಪಂದ್ಯಗಳಲ್ಲಿ 9,714 ರನ್ ಗಳಿಸಿರುವ ಮನ್ಹಾಸ್‌, 46 ರನ್‌ ಗಳ ಸರಾಸರಿ ಹೊಂದಿದ್ದಾರೆ. ಅವರು 27 ಶತಕಗಳು ಮತ್ತು 49 ಅರ್ಧಶತಕಗಳನ್ನು ಬಾರಿಸಿದ್ದಾರೆ. 2007-08ರ ಸೀಸನ್ ಅವರ ಶ್ರೇಷ್ಠ ಕಾಲವಾಗಿದ್ದು, ಅವರು ದೆಹಲಿ ತಂಡವನ್ನು ರಣಜಿ ಟ್ರೋಫಿ ಗೆಲ್ಲಿಸಿದ ನಂತರ ಆ ವರ್ಷ 57.56 ರನ್‌ಗಳ ಸರಾಸರಿಯಲ್ಲಿ 921 ರನ್ ಗಳಿಸಿದ್ದರು,
ಐಪಿಎಲ್ ನಲ್ಲಿ ಮಿಥುನ್‌ ಮನ್ಹಾಸ್‌ ಪಾತ್ರ:
ಐಪಿಎಲ್ ನಲ್ಲಿ, ಮಿಥುನ್ ಮನ್ಹಾಸ್‌ ಮೂರು ಫ್ರಾಂಚೈಸಿ ತಂಡಗಳಿಗೆ ಆಡಿದ್ದಾರೆ. ಅವರು 2008-2010ರ ನಡುವೆ ಡೆಲ್ಲಿ ಡೇರಿಡೆವಿಲ್ಸ್ (ಈಗಿನ ಡೆಲ್ಲಿ ಕ್ಯಾಪಿಟಲ್ಸ್) ತಂಡದಲ್ಲಿ ಆಡಿದರು. 2011-2013ರ ಅವಧಿಯಲ್ಲಿ ಪುಣೆ ವಾರಿಯರ್ಸ್ ತಂಡದಲ್ಲಿ ಆಡಿದರು. 2014ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೇರ್ಪಡೆಗೊಂಡು, ತಮ್ಮ ಟ್ವೆಂಟಿ20 ಕ್ರಿಕೆಟ್ ಪ್ರಯಾಣದಲ್ಲಿ ಮತ್ತೊಂದು ಅಧ್ಯಾಯವನ್ನು ಬರೆದರು.

ಪ್ರಮುಖ ಸುದ್ದಿ :-   ಕರ್ನಾಟಕ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ ಪ್ರಮಾಣ ವಚನ, 13 ಸಚಿವರಿಂದಲೂ ಪ್ರಮಾಣವಚನ ಸ್ವೀಕಾರ

.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement