ಮುಂಬೈ: ಮಕ್ಕಳಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧದ ಪ್ರವೃತ್ತಿಯ ಬಗ್ಗೆ ಎತ್ತಿ ತೋರಿಸಲು ಬಾಲಿವುಡ್ ನಟ ಅಕ್ಷಯಕುಮಾರ ತಮ್ಮ 13 ವರ್ಷದ ಮಗಳು ವೀಡಿಯೊ ಗೇಮ್ ಆಡುತ್ತಿದ್ದಾಗಿನ ಘಟನೆಯನ್ನು ಶುಕ್ರವಾರ ನೆನಪಿಸಿಕೊಂಡಿದ್ದಾರೆ. ಕೆಲತಿಂಗಳ ಹಿಂದೆ ತಮ್ಮ ಮಗಳು ಆನ್‌ಲೈನ್ ವೀಡಿಯೊ ಗೇಮ್ ಆಡುತ್ತಿದ್ದಾಗ, ಅನಾಮಿಕ ವ್ಯಕ್ತಿಯೊಬ್ಬ ಆನ್‌ಲೈನ್‌ಗೆ ಬಂದು ಆಕೆಯ ಚಿತ್ರವನ್ನು ಕಳಿಸುವಂತೆ ಹೇಳಿದ್ದ ಎಂದು ಅಕ್ಷಯಕುಮಾರ ತಿಳಿಸಿದ್ದಾರೆ.
ಮುಂಬೈನ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ನಡೆದ ಸೈಬರ್ ಜಾಗೃತಿ ತಿಂಗಳು 2025 ರ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ ನಟ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.”ಕೆಲವು ತಿಂಗಳ ಹಿಂದೆ ನನ್ನ ಮನೆಯಲ್ಲಿ ನಡೆದ ಒಂದು ಸಣ್ಣ ಘಟನೆಯನ್ನು ನಾನು ನಿಮಗೆಲ್ಲರಿಗೂ ಹೇಳಲು ಬಯಸುತ್ತೇನೆ. ನನ್ನ ಮಗಳು ವೀಡಿಯೊ ಗೇಮ್ ಆಡುತ್ತಿದ್ದಳು, ಮತ್ತು ನೀವು ಯಾರೊಂದಿಗಾದರೂ ಆಡಬಹುದಾದ ಕೆಲವು ವೀಡಿಯೊ ಗೇಮ್‌ಗಳಿವೆ. ಅದರಲ್ಲಿ ನೀವು ಅಪರಿಚಿತರೊಂದಿಗೆ ಆಟವಾಡುತ್ತೀರಿ” ಎಂದು ಅಕ್ಷಯಕುಮಾರ ಹೇಳಿದರು.
“ನೀವು ಆಟವಾಡುತ್ತಿರುವಾಗ, ಕೆಲವೊಮ್ಮೆ ಅಲ್ಲಿಂದ ಒಂದು ಸಂದೇಶ ಬರುತ್ತದೆ… ಅದೇರೀತಿ ಒಂದು ಸಂದೇಶ ನನ್ನ ಮಗಳಿಗೂ ಬಂತು. ನೀವು ಗಂಡೋ ಅಥವಾ ಹೆಣ್ಣೊ ಎಂಬ ಸಂದೇಶ ಬಂದಿತು, ಅದಕ್ಕೆ ನನ್ನ ಮಗಳು ಹೆಣ್ಣು ಎಂದು ಉತ್ತರಿಸಿದಳು. ತದನಂತರ ಅಪರಿಚಿತ ಮತ್ತೊಂದು ಸಂದೇಶ ಕಳುಹಿಸಿ ನೀನು ನನಗೆ ನಿನ್ನ ನಗ್ನ ಚಿತ್ರಗಳನ್ನು ಕಳುಹಿಸಬಹುದೇ? ಎಂದು ಕೇಳಿದ್ದಾನೆ. ಆಗ ನನ್ನ ಮಗಳು ಎಲ್ಲವನ್ನೂ ಆಫ್ ಮಾಡಿದಳು ಮತ್ತು ಹೋಗಿ ನನ್ನ ಪತ್ನಿಗೆ ವಿಷಯ ತಿಳಿಸಿದಳು. ವಿಷಯಗಳು ಹೀಗೆ ಪ್ರಾರಂಭವಾಗುತ್ತವೆ. ಇದು ಸೈಬರ್ ಅಪರಾಧದ ಒಂದು ಭಾಗವೂ ಆಗಿದೆ ಎಂದು ಅವರು ಹೇಳಿದರು.
ಮಹಾರಾಷ್ಟ್ರದಲ್ಲಿ, ಪ್ರತಿ ವಾರ ಏಳನೇ, ಎಂಟನೇ, ಒಂಬತ್ತನೇ ಮತ್ತು ಹತ್ತನೇ ತರಗತಿಗಳಲ್ಲಿ, ಮಕ್ಕಳಿಗೆ ಇದರ ಬಗ್ಗೆ ವಿವರಿಸಬೇಕಾದ ಸೈಬರ್ ಅವಧಿ ಇರಬೇಕು ಎಂದು ನಾನು ಮುಖ್ಯಮಂತ್ರಿಯನ್ನು ವಿನಂತಿಸುತ್ತೇನೆ. ಈ ಅಪರಾಧವು ಬೀದಿ ಅಪರಾಧಕ್ಕಿಂತ ದೊಡ್ಡದಾಗುತ್ತಿದೆ ಎಂದು ನಿಮಗೆಲ್ಲರಿಗೂ ತಿಳಿದಿದೆ. ಈ ಅಪರಾಧವನ್ನು ನಿಲ್ಲಿಸುವುದು ಬಹಳ ಮುಖ್ಯ…” ಎಂದು ಅಕ್ಷಯಕುಮಾರ ಹೇಳಿದರು.
ಶಾಲಾ ವಿದ್ಯಾರ್ಥಿಗಳಿಗೆ (7-10 ನೇ ತರಗತಿ) ವಾರದ ವಿಷಯವಾಗಿ ಸೈಬರ್ ಶಿಕ್ಷಣವನ್ನು ಸೇರಿಸಬೇಕೆಂದು ಅವರು ಸರ್ಕಾರಕ್ಕೆ ಮನವಿ ಮಾಡಿದರು, ಇದರಿಂದ ಅವರು ವೇಗವಾಗಿ ಬದಲಾಗುತ್ತಿರುವ ಡಿಜಿಟಲ್ ಸ್ಥಳದಲ್ಲಿ ಸುರಕ್ಷಿತವಾಗಿ ಮತ್ತು ಜಾಗೃತವಾಗಿ ಇರುತ್ತಾರೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಅಕ್ಷಯಕುಮಾರ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಪೊಲೀಸ್ ಮಹಾನಿರ್ದೇಶಕರು (ಮಹಾರಾಷ್ಟ್ರ ರಾಜ್ಯ), ರಶ್ಮಿ ಶುಕ್ಲಾ, ಇಕ್ಬಾಲ್ ಸಿಂಗ್ ಚಾಹಲ್ (ಐಪಿಎಸ್) ಮತ್ತು ರಾಣಿ ಮುಖರ್ಜಿ ಮೊದಲಾದವರು ಪಾಲ್ಗೊಂಡಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ