ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾದ ವಿರುದ್ಧ ಹೊಸ ವ್ಯಾಪಾರ ಸುಂಕಗಳನ್ನು ಘೋಷಿಸಿದ್ದಾರೆ. ನವೆಂಬರ್ 1 ರಿಂದ ಜಾರಿಗೆ ಬರುವಂತೆ, ಚೀನಾದಿಂದ ಆಮದಾಗುವ ಎಲ್ಲ ಉತ್ಪನ್ನಗಳ ಮೇಲೆ ಹೆಚ್ಚುವರಿಯಾಗಿ ಶೇಕಡಾ 100 ರಷ್ಟು ಸುಂಕ ವಿಧಿಸುವುದಾಗಿ ಹಾಗೂ ಅಮೆರಿಕದಲ್ಲಿ ತಯಾರಾದ ಪ್ರಮುಖ ಸಾಫ್ಟ್‌ವೇರ್‌ಗಳ ರಫ್ತಿನ ಮೇಲೆ ಕಠಿಣ ನಿಯಂತ್ರಣಗಳನ್ನು ಹೇರುವುದಾಗಿ ಅವರು ಶುಕ್ರವಾರ ಪ್ರಕಟಿಸಿದ್ದಾರೆ. ಟ್ರಂಪ್ ಅವರ ಈ ನಿರ್ಧಾರದಿಂದ ವಿಶ್ವದ ಎರಡು ಅತಿದೊಡ್ಡ ಆರ್ಥಿಕತೆಗಳಾದ ಅಮೆರಿಕ ಹಾಗೂ ಚೀನಾ ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಲಿದೆ.
ತಮ್ಮ ‘ಟ್ರೂತ್ ಸೋಶಿಯಲ್’ (Truth Social) ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಟ್ರಂಪ್, ವ್ಯಾಪಾರದ ವಿಷಯದಲ್ಲಿ ಚೀನಾವು ಅಸಾಮಾನ್ಯವಾದ ಆಕ್ರಮಣಕಾರಿ ನಿಲುವು ತಳೆದಿದೆ ಎಂದು ಆರೋಪಿಸಿದ್ದು, ಅಮೆರಿಕವು ಇದಕ್ಕೆ ತಕ್ಕ ಪ್ರತಿಕ್ರಿಯೆ ನೀಡಲಿದೆ ಎಂದು ಎಚ್ಚರಿಸಿದ್ದಾರೆ.
ನವೆಂಬರ್ 1 ರಿಂದ ಜಾರಿ:
“ನವೆಂಬರ್ 1, 2025 ರಿಂದ ಅಥವಾ ಚೀನಾ ಮತ್ತಷ್ಟು ಕ್ರಮಗಳನ್ನು ತೆಗೆದುಕೊಂಡರೆ ಅದಕ್ಕಿಂತಲೂ ಮುಂಚಿತವಾಗಿ, ಅಮೆರಿಕವು ಚೀನಾದ ಮೇಲೆ, ಅವರು ಪ್ರಸ್ತುತ ಪಾವತಿಸುತ್ತಿರುವ ಯಾವುದೇ ಸುಂಕದ ಮೇಲೆ ಹೆಚ್ಚುವರಿಯಾಗಿ ಶೇಕಡಾ 100 ರಷ್ಟು ಸುಂಕವನ್ನು ವಿಧಿಸುತ್ತದೆ,” ಎಂದು ಟ್ರಂಪ್ ಘೋಷಿಸಿದ್ದಾರೆ.
ಚೀನಾವು ತನ್ನ ಬಹುತೇಕ ಎಲ್ಲ ಉತ್ಪನ್ನಗಳ ಮೇಲೆ ವ್ಯಾಪಕ ರಫ್ತು ನಿರ್ಬಂಧಗಳನ್ನು ವಿಧಿಸಲು ಯೋಜಿಸಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಟ್ರಂಪ್ ತಿಳಿಸಿದ್ದು, ಇದನ್ನು “ಇತರ ರಾಷ್ಟ್ರಗಳೊಂದಿಗೆ ವ್ಯವಹರಿಸುವಲ್ಲಿ ಒಂದು ನೈತಿಕ ಅವಮಾನ” ಎಂದು ಬಣ್ಣಿಸಿದ್ದಾರೆ.
“ವ್ಯಾಪಾರದ ಕುರಿತು ಚೀನಾ ಅಸಾಮಾನ್ಯವಾಗಿ ಆಕ್ರಮಣಕಾರಿ ನಿಲುವು ತಳೆದಿದೆ ಎಂಬುದು ಈಗ ತಿಳಿದುಬಂದಿದೆ,” ಎಂದು ಟ್ರಂಪ್ ಬರೆದಿದ್ದಾರೆ. “ಇದು ಎಲ್ಲಾ ದೇಶಗಳ ಮೇಲೆ ಪರಿಣಾಮ ಬೀರುತ್ತದೆ, ಮತ್ತು ಇದು ವರ್ಷಗಳ ಹಿಂದೆಯೇ ಅವರಿಂದ ರೂಪಿಸಲಾದ ಯೋಜನೆ ಎಂಬುದು ಸ್ಪಷ್ಟವಾಗಿದೆ” ಎಂದು ಅವರು ಹೇಳಿದ್ದಾರೆ.
ಪ್ರಮುಖ ಸಾಫ್ಟ್‌ವೇರ್‌ಗಳಿಗೆ ರಫ್ತು ನಿಯಂತ್ರಣ:
“ನಾವು ನವೆಂಬರ್ 1 ರಿಂದ ಎಲ್ಲಾ ನಿರ್ಣಾಯಕ ಸಾಫ್ಟ್‌ವೇರ್‌ಗಳ ಮೇಲೆ ರಫ್ತು ನಿಯಂತ್ರಣಗಳನ್ನು ಹೇರುತ್ತೇವೆ” ಎಂದು ಟ್ರಂಪ್ ಹೇಳಿದ್ದಾರೆ.
ಈ ಕ್ರಮವು ಜಾರಿಯಾದರೆ, ಈಗಾಗಲೇ ಇರುವ ಸುಂಕಗಳಿಂದ ತತ್ತರಿಸಿರುವ ಗ್ರಾಹಕ ಎಲೆಕ್ಟ್ರಾನಿಕ್ಸ್‌ನಿಂದ ಹಿಡಿದು ಎಲೆಕ್ಟ್ರಿಕ್ ವಾಹನಗಳವರೆಗಿನ ವಲಯಗಳಿಗೆ ತೀವ್ರ ಹೊಡೆತ ನೀಡುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಟ್ರಂಪ್ ಅವರ ಈ ಘೋಷಣೆಯು ಚೀನೀ ಸರಕುಗಳ ಮೇಲೆ ಹೊಸ ಸುಂಕ ಹೇರಿಕೆಯ ಮುನ್ಸೂಚನೆ ನೀಡಿದ ಹಿಂದಿನ ಪೋಸ್ಟ್‌ನ ನಂತರ ಬಂದಿದೆ. ಅಲ್ಲದೆ, ಟ್ರಂಪ್ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗಿನ ಸಭೆಯನ್ನು ರದ್ದುಗೊಳಿಸುವುದಾಗಿ ಬೆದರಿಕೆ ಹಾಕಿದ್ದರು. ಈ ಬೆಳವಣಿಗೆಯು ವಿಶ್ವದ ಅತಿದೊಡ್ಡ ಆರ್ಥಿಕತೆಗಳ ನಡುವಿನ ಸಂಬಂಧ ಮತ್ತು ಮಾರುಕಟ್ಟೆಗಳನ್ನು ಸಂಕಷ್ಟಕ್ಕೆ ತಳ್ಳಿದೆ.
ಮೂರು ವಾರಗಳಲ್ಲಿ ದಕ್ಷಿಣ ಕೊರಿಯಾದಲ್ಲಿ ಕ್ಸಿ ಅವರನ್ನು ಭೇಟಿಯಾಗಲು ಸಿದ್ಧರಾಗಿದ್ದ ಟ್ರಂಪ್, ಅಪರೂಪದ ಭೂಮಿಯ ಅಂಶಗಳ (rare earth elements) ರಫ್ತು ನಿಯಂತ್ರಣವನ್ನು ಚೀನಾ ವಿಸ್ತರಿಸಿದ ನಂತರ, ಟ್ರಂಪ್ ಅವರು, ಚೀನಾವು ಜಾಗತಿಕ ಆರ್ಥಿಕತೆಯನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಲು ಯೋಜಿಸುತ್ತಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ತಂತ್ರಜ್ಞಾನ ಉತ್ಪಾದನೆಗೆ ಅತ್ಯಗತ್ಯವಾಗಿರುವ ಅಪರೂಪದ ಭೂಮಿಯ ವಸ್ತುಗಳ ಮಾರುಕಟ್ಟೆಯಲ್ಲಿ ಚೀನಾ ಪ್ರಾಬಲ್ಯ ಹೊಂದಿದೆ.


ನಿಮ್ಮ ಕಾಮೆಂಟ್ ಬರೆಯಿರಿ