ಕಸೌಲಿ (ಹಿಮಾಚಲ ಪ್ರದೇಶ): ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಆದೇಶದ ಮೇರೆಗೆ 1984ರಲ್ಲಿ ಅಮೃತಸರದ ಗೋಲ್ಡನ್ ಟೆಂಪಲ್‌ನಿಂದ ಉಗ್ರರನ್ನು ಹೊರಹಾಕಲು ನಡೆಸಿದ ‘ಆಪರೇಷನ್ ಬ್ಲೂ ಸ್ಟಾರ್’ ಒಂದು “ತಪ್ಪು ಮಾರ್ಗ”ವಾಗಿತ್ತು. ಈ ತಪ್ಪಿಗೆ ಕಾಂಗ್ರೆಸ್ ನಾಯಕಿ ಇಂದಿರಾ ಗಾಂಧಿಯವರು ತಮ್ಮ ಪ್ರಾಣವನ್ನೇ ತೆತ್ತರು ಎಂದು ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಹೇಳಿದ್ದಾರೆ.
ಆದಾಗ್ಯೂ, ಈ ಕಾರ್ಯಾಚರಣೆಯು ಕೇವಲ ಇಂದಿರಾ ಗಾಂಧಿಯವರ ನಿರ್ಧಾರವಾಗಿರಲಿಲ್ಲ. ಬದಲಿಗೆ ಇದು “ಸೇನೆ, ಪೊಲೀಸ್, ಗುಪ್ತಚರ ಮತ್ತು ನಾಗರಿಕ ಸೇವೆಗಳ ಸಂಚಿತ ನಿರ್ಧಾರ”ವಾಗಿತ್ತು. ಆದ್ದರಿಂದ ಈ ತಪ್ಪಿಗೆ ಕೇವಲ ಇಂದಿರಾ ಗಾಂಧಿಯವರನ್ನು ಮಾತ್ರ ದೂಷಿಸಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರದ ಮಾಜಿ ಗೃಹ ಮತ್ತು ಹಣಕಾಸು ಸಚಿವರಾದ ಚಿದಂಬರಂ ಅವರು ಶನಿವಾರ ಹಿಮಾಚಲ ಪ್ರದೇಶದ ಕಸೌಲಿಯಲ್ಲಿ ನಡೆದ ಖುಷ್ವಂತ್ ಸಿಂಗ್ ಸಾಹಿತ್ಯ ಉತ್ಸವದಲ್ಲಿ ಪತ್ರಕರ್ತ ಹರಿಂದರ್ ಬವೇಜಾ ಅವರ ‘They Will Shoot You, Madam’ ಪುಸ್ತಕದ ಕುರಿತ ಚರ್ಚೆಯನ್ನು ನಡೆಸುತ್ತಿದ್ದಾಗ ಈ ಹೇಳಿಕೆ ನೀಡಿದ್ದಾರೆ.
“ಇಲ್ಲಿ ಉಪಸ್ಥಿತರಿರುವ ಯಾವುದೇ ಸೇನಾ ಅಧಿಕಾರಿಗಳಿಗೆ ಅಗೌರವ ತೋರುವುದು ನನ್ನ ಉದ್ದೇಶವಲ್ಲ, ಆದರೆ ಗೋಲ್ಡನ್ ಟೆಂಪಲ್ ಅನ್ನು ವಶಪಡಿಸಿಕೊಳ್ಳಲು ನಡೆಸಿದ ʼಆಪರೇಷನ್ ಬ್ಲೂ ಸ್ಟಾರ್’ ಕಾರ್ಯಾಚರಣೆ ತಪ್ಪು ಮಾರ್ಗವಾಗಿತ್ತು. ಮೂರರಿಂದ ನಾಲ್ಕು ವರ್ಷಗಳ ನಂತರ, ನಾವು ಸೇನೆಯನ್ನು ಹೊರಗಿಟ್ಟು ಗೋಲ್ಡನ್ ಟೆಂಪಲ್ ಅನ್ನು ವಶಪಡಿಸಿಕೊಳ್ಳುವ ಸರಿಯಾದ ಮಾರ್ಗವನ್ನು ತೋರಿಸಿದೆವು” ಎಂದು ಹಿರಿಯ ಕಾಂಗ್ರೆಸ್ ನಾಯಕರು ಹೇಳಿದರು.
“ಎಲ್ಲಾ ಉಗ್ರಗಾಮಿಗಳನ್ನು ವಶಕ್ಕೆ ಪಡೆಯಲು ಒಂದು ಸರಿಯಾದ ಮಾರ್ಗವಿತ್ತು. ಬ್ಲೂ ಸ್ಟಾರ್ ಕಾರ್ಯಾಚರಣೆ ತಪ್ಪು ಮಾರ್ಗವಾಗಿತ್ತು. ಆ ತಪ್ಪಿಗಾಗಿ ಶ್ರೀಮತಿ ಗಾಂಧಿ ತಮ್ಮ ಪ್ರಾಣವನ್ನು ತೆತ್ತರು ಎಂಬುದನ್ನು ನಾನು ಒಪ್ಪುತ್ತೇನೆ, ಆದರೆ ಆ ತಪ್ಪು ಸೇನೆ, ಪೊಲೀಸ್, ಗುಪ್ತಚರ ಮತ್ತು ನಾಗರಿಕ ಸೇವೆಗಳ ಸಂಚಿತ ನಿರ್ಧಾರವಾಗಿತ್ತು. ಕೇವಲ ಶ್ರೀಮತಿ ಗಾಂಧಿಯವರ ಮೇಲೆ ಮಾತ್ರ ದೋಷಾರೋಪಣೆ ಮಾಡಲು ಸಾಧ್ಯವಿಲ್ಲ” ಎಂದು ಅವರು ಪುನರುಚ್ಚರಿಸಿದರು.
ಆಪರೇಷನ್ ಬ್ಲೂ ಸ್ಟಾರ್ ಮತ್ತು ಅದರ ನಂತರದ ಘಟನೆಗಳು
ಉಗ್ರಗಾಮಿ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ನೇತೃತ್ವದಲ್ಲಿ ಪಂಜಾಬ್‌ನಲ್ಲಿ ಪ್ರತ್ಯೇಕತಾವಾದಿ ಚಳುವಳಿಯನ್ನು ಹತ್ತಿಕ್ಕಲು ಇಂದಿರಾ ಗಾಂಧಿ ಸರ್ಕಾರವು 1984ರ ಜೂನ್ 1 ರಿಂದ ಜೂನ್ 8ರ ನಡುವೆ ‘ಆಪರೇಷನ್ ಬ್ಲೂ ಸ್ಟಾರ್’ ಅನ್ನು ನಡೆಸಿತ್ತು.
ಅಮೃತ ಸರದ ಗೋಲ್ಡನ್ ಟೆಂಪಲ್ ಒಳಗೆ ಅಡಗಿಕೊಂಡಿದ್ದ ಭಿಂದ್ರನ್‌ವಾಲೆ, ಭಾರತೀಯ ಸೇನೆಯು ಸಿಖ್ಖರ ಪವಿತ್ರ ತಾಣಗಳಲ್ಲಿ ಒಂದಾದ ಆ ಆವರಣಕ್ಕೆ ನುಗ್ಗಿದ ನಂತರ ಹತನಾದನು. ಈ ಸೇನಾ ಕಾರ್ಯಾಚರಣೆಯ ಸಮಯದಲ್ಲಿ ಅಕಾಲ ತಖ್ತ್ ಕಟ್ಟಡಕ್ಕೆ ಹಾನಿಯಾಗಿ ಸಂಪೂರ್ಣವಾಗಿ ನೆಲಸಮವಾಯಿತು. ಈ ಘಟನೆಯು ಸಿಖ್ ಸಮುದಾಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಯಿತು.
ಈ ಕಾರ್ಯಾಚರಣೆ ನಡೆದ ಕೆಲವೇ ತಿಂಗಳುಗಳ ನಂತರ, ಇಂದಿರಾ ಗಾಂಧಿಯವರನ್ನ ಅವರ ಸಿಖ್ ಅಂಗರಕ್ಷಕರು ಗುಂಡಿಕ್ಕಿ ಕೊಂದರು. ಅವರ ಹತ್ಯೆಯ ನಂತರ, ಸಿಖ್ ಸಮುದಾಯದ ವಿರುದ್ಧ ದೇಶಾದ್ಯಂತ ವ್ಯಾಪಕ ಹಿಂಸಾಚಾರ ಭುಗಿಲೆದ್ದಿತು.


ನಿಮ್ಮ ಕಾಮೆಂಟ್ ಬರೆಯಿರಿ