ಪ್ರತಿದಿನ ರೈಲ್ವೆ ನಿಲ್ದಾಣಗಳಲ್ಲಿ ಓಡಿ ಹೋಗುವ ರೈಲಿಗೆ ಹತ್ತಲು ಪ್ರಯಾಣಿಕರು ಮತ್ತು ವ್ಯಾಪಾರಿಗಳು ಅಪಾಯಕಾರಿಯಾಗಿ ಏರುವ-ಇಳಿಯುವ ದೃಶ್ಯಗಳು ಸಾಮಾನ್ಯ. ರೈಲ್ವೆ ಅಧಿಕಾರಿಗಳ ಪದೇಪದೇ ಎಚ್ಚರಿಕೆಗಳ ಹೊರತಾಗಿಯೂ ಅನೇಕರು ಅದನ್ನು ನಿರ್ಲಕ್ಷಿಸಿ ತಮ್ಮ ಪ್ರಾಣವನ್ನು ಪಣಕ್ಕಿಡುತ್ತಾರೆ.
ಇಂತಹದ್ದೇ ಆಘಾತಕಾರಿ ಘಟನೆಯ ವಿಡಿಯೋವೊಂದು ಈಗ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ಚಲಿಸುತ್ತಿರುವ ರೈಲಿನ ಕೆಳಗೆ ಬಿದ್ದ ಬಾಲಕನೊಬ್ಬ ಗಾಬರಿಗೊಳಗಾಗದೆ ಸಂಪೂರ್ಣ ಶಾಂತವಾಗಿ ಪರಿಸ್ಥಿತಿ ನಿಭಾಯಿ ಪ್ರಾಣ ಉಳಿಸಿಕೊಂಡ ಪವಾಡ ಸದೃಶ ದೃಶ್ಯ ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಸಂಪೂರ್ಣ ಗೊಂದಲದ ಕ್ಷಣದಲ್ಲಿ ಆತ ತೋರಿದ ಸಮಯಪ್ರಜ್ಞೆಗೆ ಬಹುತೇಕರು ಬೆರಗಾಗಿದ್ದಾರೆ.
ಘಟನೆ ನಡೆದಿದ್ದು ಹೇಗೆ?
ಯಾವುದೋ ರೈಲ್ವೆ ನಿಲ್ದಾಣದಲ್ಲಿ (ಯಾವುದೆಂದು ಗೊತ್ತಿಲ್ಲ) ಪ್ರಾರಂಭವಾಗುವ ಈವೀಡಿಯೊದಲ್ಲಿ ಆ ಬಾಲಕ ಏನನ್ನೋ ಮಾರಾಟ ಮಾಡುವ ಸಲುವಾಗಿ ಓಡುತ್ತಿರುವ ರೈಲಿಗೆ ಹತ್ತಲು ಪ್ರಯತ್ನಿಸುತ್ತಿರುವುದು ಕಾಣುತ್ತದೆ. ಆತ ಒಂದು ಕೈಯಲ್ಲಿ ಕೆಲವು ವಸ್ತುಗಳನ್ನು ಹಿಡಿದುಕೊಂಡಿದ್ದು, ಇನ್ನೊಂದು ಕೈಯಿಂದ ರೈಲಿನ ಹ್ಯಾಂಡಲ್ ಅನ್ನು ಹಿಡಿದಿದ್ದಾನೆ. ಆದರೆ, ಒಂದು ಕ್ಷಣದಲ್ಲಿ ಆತನ ಕಾಲು ಜಾರಿ, ರೈಲು ಮತ್ತು ಹಳಿಗಳ ನಡುವಿನ ಕಿರಿದಾದ ಜಾಗಕ್ಕೆ ಬೀಳುವುದು ಕಂಡುಬರುತ್ತದೆ.
ಇದನ್ನು ಕಂಡ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಜನರು ಭಯದಿಂದ ಕೂಗಿ, ರೈಲಿನ ಅಂಚಿಗೆ ಓಡಿ ಹೋಗಿ ಕೆಳಗೆ ಇಣುಕಿ ನೋಡಲು ಯತ್ನಿಸುತ್ತಾರೆ. ಆದರೆ, ಮುಂದೆ ನಡೆದದ್ದು ಎಲ್ಲರನ್ನು ಅಚ್ಚರಿಗೊಳಿಸಿದೆ; ರೈಲು ಆತನ ಮೇಲೆ ಹಾದು ಹೋಗುತ್ತಿದ್ದರೂ ಆ ಬಾಲಕ ಸ್ವಲ್ಪವೂ ಗಾಬರಿಗೊಳ್ಳದೆ ಸಂಪೂರ್ಣವಾಗಿ ನೆಲಕ್ಕೆ ಅಂಟಿಕೊಂಡು, ನಿಶ್ಚಲನಾಗಿ ಮಲಗಿದ್ದಾನೆ.
ಶಾಂತಚಿತ್ತತೆ ಪ್ರಾಣ ಉಳಿಸಿತು…
ಗಾಬರಿಗೊಳ್ಳುವ ಬದಲಿಗೆ, ಆ ಬಾಲಕ ಕೊನೆಯ ಕೋಚ್ ಹಾದುಹೋಗುವವರೆಗೂ ಕದಲದೆ ಮಲಗಿಯೇ ಇರುತ್ತಾನೆ. ರೈಲು ಹಳಿಗಳನ್ನು ದಾಟಿದ ತಕ್ಷಣ, ಕೆಲವರು ಕೆಳಗೆ ಇಳಿದು ಆತನನ್ನು ರಕ್ಷಿಸುತ್ತಾರೆ. ಪವಾಡವೆಂಬಂತೆ, ಆತನು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾನೆ. ಜನರೆಲ್ಲ ಸೇರಿ ಆತನನ್ನು ಮೇಲೆತ್ತಿ ಪ್ಲಾಟ್‌ಫಾರ್ಮ್‌ಗೆ ಕರೆತರುತ್ತಾರೆ.


ನಿಮ್ಮ ಕಾಮೆಂಟ್ ಬರೆಯಿರಿ