
ಅಂಕೋಲಾ: ಬಳ್ಳಾರಿಯಿಂದ ಕುಮಟಾ ಕಡೆಗೆ ಪ್ರಯಾಣಿಸುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಉತ್ತರ ಕನ್ನಡ ಜಿಲ್ಲೆಯ ವಡ್ಡಿ ಘಾಟ್ ತಿರುವಿನಲ್ಲಿ ಮೂರು ಪಲ್ಟಿ ಹೊಡೆದು ಕಂದಕಕ್ಕೆ ಉರುಳಿದ ಪರಿಣಾಮ ಬಸ್ಸಿನಲ್ಲಿದ್ದ ಚಾಲಕ ನಿರ್ವಾಹಕ ಸೇರಿ 49 ಪ್ರಯಾಣಿಕರಿಗೆ ಗಾಯಗಳಾದ ಘಟನೆ ಶನಿವಾರ ಸಂಜೆ ನಡೆದಿದೆ ಎಂದು ವರದಿಯಾಗಿದೆ.
ಕುಮಟಾ ಶಿರಸಿ ರಸ್ತೆಯು ಕಾಮಗಾರಿಯ ನಿಮಿತ್ತ ಬಂದ್ ಮಾಡಲಾಗಿದ್ದು, ಹೀಗಾಗಿ ಅಂಕೋಲಾದಿಂದ ಶಿರಸಿಗೆ ಪ್ರಯಾಣಿಸುವ ಬಸ್ಗಳು ವಡ್ಡಿ ಮಾರ್ಗವಾಗಿ ಹೋಗುತ್ತವೆ. ರಾಜ್ಯ ಹೆದ್ದಾರಿಯಾದ ಈ ರಸ್ತೆಯ ಘಟ್ಟದ ಪ್ರದೇಶದಲ್ಲಿ ಭಾರೀ ತಿರುವು ಇದ್ದು, ಈ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಉರುಳಿ ಕಂದಕಕ್ಕೆ ಬಿದ್ದಿದೆ. ಈ ಸಂದರ್ಭದಲ್ಲಿ ಬಸ್ನಲ್ಲಿ ಒಟ್ಟು 49 ಮಂದಿ ಪ್ರಯಾಣಿಕರು ಇದ್ದರು. ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯವಾಗಿಲ್ಲ. ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು ಖಾಸಗಿ ವಾಹನಗಳ ಮೂಲಕ ಅಂಕೋಲಾ ಮತ್ತು ಕುಮಟಾ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಅಂಕೋಲಾ ಪೊಲೀಸರು ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



ನಿಮ್ಮ ಕಾಮೆಂಟ್ ಬರೆಯಿರಿ