
ನವದೆಹಲಿ: 13,000 ಕೋಟಿ ರೂಪಾಯಿ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಹಗರಣದ ಪ್ರಮುಖ ಆರೋಪಿ, ದೇಶದಿಂದ ಪರಾರಿಯಾಗಿರುವ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ ವಿರುದ್ಧ ಭಾರತವು ಪ್ರಮುಖ ಯಶಸ್ಸನ್ನು ಕಂಡಿದೆ.
ಬೆಲ್ಜಿಯಂನ ನ್ಯಾಯಾಲಯವು ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸಲು ಅನುಮೋದನೆ ನೀಡಿದ್ದು, ಭಾರತದ ಮಾಡಿದ ಹಸ್ತಾಂತರ ವಿನಂತಿಯನ್ನು ಎತ್ತಿಹಿಡಿದ್ದು ಚೋಕ್ಸಿಯ ಬಂಧನ ಕಾನೂನುಬದ್ಧವಾಗಿದೆ ಎಂದು ಹೇಳಿದೆ. ಚೋಕ್ಸಿಯನ್ನು ಭಾರತಕ್ಕೆ ಮರಳಿ ಕರೆತಂದು ಕಾನೂನು ಕ್ರಮಕ್ಕೆ ಒಳಪಡಿಸಲು ಭಾರತಕ್ಕೆ ನ್ಯಾಯಾಲಯ ನೀಡಿದ ಈ ತೀರ್ಪು ಮಹತ್ವದ ಹೆಜ್ಜೆಯಾಗಿದೆ. ಆದಾಗ್ಯೂ, ಚೋಕ್ಸಿಗೆ ಈ ನಿರ್ಧಾರ ಪ್ರಶ್ನಿಸಿ ಬೆಲ್ಜಿಯಂ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ.

ಸೆಪ್ಟೆಂಬರ್ ತಿಂಗಳಲ್ಲಿ ನಡೆದ ವಿಚಾರಣೆಯ ನಂತರ ಆಂಟ್ವೆರ್ಪ್ ನ್ಯಾಯಾಲಯವು ಈ ತೀರ್ಪನ್ನು ನೀಡಿದೆ ಎಂದು ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ. ವಿಚಾರಣೆಯ ವೇಳೆ ಬೆಲ್ಜಿಯಂನ ಪ್ರಾಸಿಕ್ಯೂಟರ್‌ಗಳು ಭಾರತೀಯ ವಿದೇಶಾಂಗ ಸಚಿವಾಲಯ ಮತ್ತು ಸಿಬಿಐ ಅಧಿಕಾರಿಗಳ ಜೊತೆ ಬಲವಾದ ವಾದಗಳನ್ನು ಮಂಡಿಸಿದರು. ಚೋಕ್ಸಿ ಮತ್ತು ಅವರ ಸೋದರಳಿಯ ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ನಲ್ಲಿ 13,000 ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ಪ್ರಾಸಿಕ್ಯೂಟರ್‌ಗಳು ನ್ಯಾಯಾಲಯಕ್ಕೆ ತಿಳಿಸಿದರು. ಚೋಕ್ಸಿಯ ವಕೀಲರ ವಾದಗಳನ್ನು ನ್ಯಾಯಾಲಯ ತಿರಸ್ಕರಿಸಿತು ಹಾಗೂ ಆತನ ಬಂಧನವನ್ನು ಎತ್ತಿಹಿಡಿಯಿತು.
ಭಾರತದ ಕೋರಿಕೆಯ ಮೇರೆಗೆ ಮೆಹುಲ್ ಚೋಕ್ಸಿಯನ್ನು 2025ರ ಏಪ್ರಿಲ್ 11ರಂದು ಬೆಲ್ಜಿಯಂನಲ್ಲಿ ಬಂಧಿಸಲಾಯಿತು. ಚೋಕ್ಸಿ ಈ ಹಿಂದೆ ಕೆರಿಬಿಯನ್ ದೇಶವಾದ ಆಂಟಿಗುವಾ ಮತ್ತು ಬಾರ್ಬುಡಾದಲ್ಲಿ ಅಡಗಿಕೊಂಡಿದ್ದ. ಚೋಕ್ಸಿ ಆ ದೇಶದ ಪೌರತ್ವ ಪಡೆದಿದ್ದ. ನಂತರ ಬೆಲ್ಜಿಯಂನಲ್ಲಿ ವಾಸ್ತವ್ಯದ ನಂತರ, ಸಿಬಿಐ, ವಿದೇಶಾಂಗ ಸಚಿವಾಲಯ ಮತ್ತು ಗೃಹ ಸಚಿವಾಲಯವು ತ್ವರಿತವಾಗಿ ಕಾರ್ಯನಿರ್ವಹಿಸಿ ಚೋಕ್ಸಿಯ ಹಸ್ತಾಂತರಕ್ಕೆ ಅಗತ್ಯವಾದ ದಾಖಲೆಗಳನ್ನು ಪೂರ್ಣಗೊಳಿಸಿದವು.
ಚೋಕ್ಸಿಗೆ ಜೈಲಿನಲ್ಲಿ ಯುರೋಪಿಯನ್ ಮಾನದಂಡಗಳಿಗೆ ಅನುಗುಣವಾಗಿ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಭಾರತ ಬೆಲ್ಜಿಯಂಗೆ ಭರವಸೆ ನೀಡಿತು. ಸೆಪ್ಟೆಂಬರ್ 4ರಂದು ಗೃಹ ಸಚಿವಾಲಯವು ಬೆಲ್ಜಿಯಂಗೆ ಮಾಹಿತಿ ನೀಡಿದ್ದು, 12ನೇ ಬ್ಯಾರಕ್‌ನಲ್ಲಿರುವ ಪ್ರತಿಯೊಬ್ಬ ಕೈದಿಗೆ ಯುರೋಪಿಯನ್ ಸಮಿತಿ ಫಾರ್ ದಿ ಪ್ರಿವೆನ್ಷನ್ ಆಫ್ ಟಾರ್ಚರ್ (CPT) ಮಾನದಂಡಗಳ ಪ್ರಕಾರ ಸಾಕಷ್ಟು ಸ್ಥಳಾವಕಾಶವನ್ನು ಒದಗಿಸಲಾಗುವುದು ಎಂದು ತಿಳಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ