ಭಾರತದ ಜೊತೆಗಿನ ಸಂಬಂಧಕ್ಕೆ ಧಕ್ಕೆಯಾಗದಂತೆ…: ಪಾಕಿಸ್ತಾನದ ಜೊತೆ ಅಮೆರಿಕ ಸಂಬಂಧ ವೃದ್ಧಿ ಬಗ್ಗೆ ಮಾರ್ಕೊ ರೂಬಿಯೊ

ವಾಷಿಂಗ್ಟನ್: ತಮ್ಮ ಸಮತೋಲಿತ ರಾಜತಾಂತ್ರಿಕ ನಿಲುವನ್ನು ಎತ್ತಿಹಿಡಿದಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು, ಪಾಕಿಸ್ತಾನದೊಂದಿಗೆ ತನ್ನ “ಕಾರ್ಯತಂತ್ರದ ಸಂಬಂಧ” (strategic relationship)ವನ್ನು ಹೆಚ್ಚಿಸಲು ಅಮೆರಿಕ ಕಾರ್ಯನಿರ್ವಹಿಸುತ್ತಿದ್ದರೂ ಈ ಸಂಬಂಧಗಳು ಅಮೆರಿಕ ಭಾರತದೊಂದಿಗಿನ “ಆಳವಾದ, ಐತಿಹಾಸಿಕ ಮತ್ತು ಪ್ರಮುಖ” (deep, historic, and important) ಸ್ನೇಹಕ್ಕೆ ಧಕ್ಕೆ ತರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕತಾರ್‌ಗೆ ಪ್ರಯಾಣಿಸುವ ಮಾರ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ರೂಬಿಯೊ, ಅಮೆರಿಕಕ್ಕೆ ಇಷ್ಟವಿಲ್ಲದ ದೇಶಗಳೊಂದಿಗೆ ಭಾರತ ಸಂಬಂಧವನ್ನು ಹೊಂದಿರುವುದು ಹೇಗೆ ಸಹಜವೋ, ಹಾಗೆಯೇ ಭಾರತದೊಂದಿಗಿನ ಸಂಬಂಧವು ಅಮೆರಿಕದ್ದಾಗಿದೆ. ಇದು “ಪರಿಪಕ್ವ, ಪ್ರಾಯೋಗಿಕ ವಿದೇಶಾಂಗ ನೀತಿಯ” ಭಾಗವಾಗಿದೆ ಎಂದು ಹೇಳಿದರು.

ಭಾರತದೊಂದಿಗಿನ ಸ್ನೇಹ ಪ್ರಮುಖವಾದುದು: ರೂಬಿಯೊ
“ಪಾಕಿಸ್ತಾನದೊಂದಿಗೆ ನಾವು ಮಾಡುತ್ತಿರುವ ಯಾವುದೇ ಕೆಲಸದಿಂದಾಗಿ, ಭಾರತದೊಂದಿಗಿನ ನಮ್ಮ ಸಂಬಂಧ ಅಥವಾ ಸ್ನೇಹಕ್ಕೆ ಧಕ್ಕೆಯಾಗುತ್ತದೆ ಎಂದು ನಾನು ಭಾವಿಸುವುದಿಲ್ಲ. ನಮ್ಮ ಸ್ನೇಹ ಆಳವಾಗಿದೆ. ಮತ್ತು ಅದು ಪ್ರಮುಖವಾದುದು,” ಎಂದು ರೂಬಿಯೊ ಒತ್ತಿ ಹೇಳಿದರು.
ಕದನ ವಿರಾಮಕ್ಕೆ (ceasefire) ಮಧ್ಯಸ್ಥಿಕೆ ವಹಿಸಿದ್ದೇವೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ದೃಢೀಕರಿಸದ ಹೇಳಿಕೆಯಿಂದಾಗಿ ಅಮೆರಿಕ-ಪಾಕಿಸ್ತಾನ ಸಂಬಂಧಗಳು ಬೆಳೆದಿವೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರೂಬಿಯೊ, ತಾವು ಎರಡೂ ಕಡೆಯವರೊಂದಿಗೆ ಮಾತನಾಡಿದ್ದು, ಎರಡೂ ದೇಶಗಳೊಂದಿಗೆ ಕಾರ್ಯತಂತ್ರದ ಪಾಲುದಾರಿಕೆಯನ್ನು ಪುನಃ ನಿರ್ಮಿಸಲು ಅಮೆರಿಕ ಆಸಕ್ತಿ ಹೊಂದಿದೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಉಪವಾಸ ಸತ್ಯಾಗ್ರಹದ 21ನೇ ದಿನ : ಜಂತರ್ ಮಂತರ್‌ನಿಂದ ಸೋನಂ ವಾಂಗ್ಚುಕ್‌ರನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

ಭಾರತದೊಂದಿಗಿನ ಸವಾಲುಗಳ ಬಗ್ಗೆ ಸಂಪೂರ್ಣ ಅರಿವಿದೆ..
“ಭಾರತ ಮತ್ತು ಇತರ ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆ ಇರುವ ಸವಾಲುಗಳ ಬಗ್ಗೆ ನಮಗೆ ಸಂಪೂರ್ಣ ಅರಿವಿದೆ. ಆದರೆ, ನಮ್ಮ ಕೆಲಸವೇನೆಂದರೆ, ಸಾಧ್ಯವಿರುವಲ್ಲಿ ಆ ದೇಶಗಳೊಂದಿಗೆ ಪಾಲುದಾರಿಕೆಗಾಗಿ ಅವಕಾಶಗಳನ್ನು ಸೃಷ್ಟಿಸುವುದು. ಭಯೋತ್ಪಾದನಾ ನಿಗ್ರಹ (counter-terror) ಮತ್ತು ಅಂತಹ ವಿಷಯಗಳಲ್ಲಿ ಪಾಕಿಸ್ತಾನದೊಂದಿಗೆ ನಮಗೆ ಬಹಳ ಹಿಂದಿನ ಸಹಭಾಗಿತ್ವದ ಇತಿಹಾಸವಿದೆ ಎಂದು ಅವರು ಹೇಳಿದರು.
“ಸಾಧ್ಯವಾದರೆ, ಅದರಾಚೆಗೂ ವಿಸ್ತರಿಸಲು ನಾವು ಬಯಸುತ್ತೇವೆ. ಆದರೆ, ಕೆಲವು ತೊಂದರೆಗಳು ಮತ್ತು ಸವಾಲುಗಳು ಇರುತ್ತವೆ ಎಂಬುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಈಗ ಬಲಗೊಂಡಿರುವ ರೀತಿ ಬಹಳ ಪ್ರೋತ್ಸಾಹದಾಯಕವಾಗಿದೆ ಮತ್ತು ಇದರಿಂದ ಭಾರತದೊಂದಿಗೆ ಅಥವಾ ಬೇರೆ ಯಾವುದೇ ದೇಶದೊಂದಿಗಿನ ಉತ್ತಮ ಸಂಬಂಧಕ್ಕೆ ಧಕ್ಕೆಯಾಗುತ್ತದೆ ಎಂದು ನಾನು ಭಾವಿಸುವುದಿಲ್ಲ,” ಎಂದು ಅವರು ಹೇಳಿದರು.
ಮೇ ತಿಂಗಳಲ್ಲಿ ಭಾರತ-ಪಾಕಿಸ್ತಾನ ಸಂಘರ್ಷದ ನಂತರ ಪಾಕಿಸ್ತಾನದ ಕಡೆಗೆ ಅಮೆರಿಕದ ರಾಜತಾಂತ್ರಿಕ ನಿಲುವಿನ ಬಗ್ಗೆ ಕಳವಳಗಳು ವ್ಯಕ್ತವಾದ ಬೆನ್ನಲ್ಲೇ ಈ ಹೇಳಿಕೆ ಬಂದಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement