ಸ್ಪೀಕರ್ ಯು.ಟಿ ಖಾದರ್ ವಿರುದ್ಧ ‘ಭ್ರಷ್ಟಾಚಾರ’ ಆರೋಪ; ನ್ಯಾಯಾಂಗ ತನಿಖೆಗೆ ಕಾಗೇರಿ ಆಗ್ರಹ

ಬೆಂಗಳೂರು: ಸ್ಪೀಕರ್ ಯು.ಟಿ. ಖಾದರ್ ಅವರ (UT Khader) ಅವಧಿಯಲ್ಲಿ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿವೆ ಎಂದು ಸಂಸದ ಮತ್ತು ರಾಜ್ಯ ವಿಧಾನಸಭೆಯ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಪೀಕರ್ ಸ್ಥಾನದ ವಿರುದ್ಧ ಬಂದಿರುವ ಆರೋಪಗಳಿಂದ ಆ ಸ್ಥಾನವು ಮುಕ್ತವಾಗಬೇಕು. ಯು.ಟಿ. ಖಾದರ್ ಸ್ಪೀಕರ್ ಹುದ್ದೆಯ ಘನತೆಗೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ. ಇದಕ್ಕಾಗಿ ಹಾಲಿ ನ್ಯಾಯಮೂರ್ತಿಗಳಿಂದ ಆರೋಪಗಳ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಸ್ಪೀಕರ್ ಕಾರ್ಯಾಲಯದ ಟೆಂಡರ್ ಮಂಗಳೂರು ಮೂಲದವರಿಗೇ ಯಾಕೆ ಸಿಗುತ್ತಿದೆ ಎಂದು ಕೇಳಿದ ಅವರು, ಅದು ಯಾರೋ ಕೆಲವರಿಗೇ ಯಾಕೆ ಸಿಗುತ್ತಿದೆ ಎಂದು ಪ್ರಶ್ನಿಸಿದ ಅವರು, ನನಗೆ ಗೊತ್ತಿರುವ ಪ್ರಕಾರ ಹಣಕಾಸು ಇಲಾಖೆ ಈ ಖರೀದಿಗಳನ್ನು ತಿರಸ್ಕರಿಸಿದೆ. ಬಳಿಕ ಹಣಕಾಸು ಇಲಾಖೆ ಹೊಣೆ ಹೊತ್ತ ಮುಖ್ಯಮಂತ್ರಿಗಳೇ ಅದಕ್ಕೆ ಒಪ್ಪಿಗೆ ಕೊಡಿಸಿರುವ ಆರೋಪವಿದೆ. ಅಷ್ಟು ತುರ್ತಾಗಿ ಖರೀದಿ ಮಾಡಬೇಕಾದ ಕೆಲಸ ಏನಿತ್ತು  ಎಂದು ಪ್ರಶ್ನಿಸಿದರು.

ವಿಧಾನಸಭೆಯ ಪ್ರಧಾನ ಬಾಗಿಲಿಗೆ ರೋಸ್‌ವುಡ್‍ನ ಮರದ ಕೆತ್ತನೆಯ ಚೌಕಟ್ಟನ್ನು ಮಾಡಿಸಿದಲ್ಲಿಂದ ಭ್ರಷ್ಟಾಚಾರದ ಆರೋಪಗಳು ಆರಂಭವಾಗಿತ್ತು. ಸಭಾಂಗಣಕ್ಕೆ ಹೊಸ ಟಿ.ವಿ. ಸೆಟ್ ಅನ್ನು ಅಳವಡಿಸಿದ್ದರು. ಎಐ ಮಾನಿಟರ್ ಸಿಸ್ಟಂ ಅನ್ನು ಹಾಕಲು ಸಾಕಷ್ಟು ಖರ್ಚು ವೆಚ್ಚಗಳಾಗಿವೆ. ಎಲ್ಲ ಶಾಸಕರಿಗೆ ಗಂಡಭೇರುಂಡ ಹೋಲಿಕೆಯ ಗಡಿಯಾರಗಳನ್ನು ನೀಡಲಾಗಿದೆ. ಮೊಗಸಾಲೆಯಲ್ಲಿ ಮಸಾಜ್ ಪಾರ್ಲರ್ ರೀತಿ ರಿಕ್ಲೇನರ್ ಚೇರ್, ಮಸಾಜ್ ಚೇರ್ ಹಾಕಿಸಿದ್ದಾರೆ. ಇದಕ್ಕೆ ಶಾಸಕರು, ಮಂತ್ರಿಗಳಿಂದ ವಿರೋಧ ವ್ಯಕ್ತವಾಗಿತ್ತು ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಬೆಂಗಳೂರು : ಓವರ್‌ಟೇಕ್‌ ವಿಚಾರಕ್ಕೆ ವಿದ್ಯಾರ್ಥಿಯ ಮೇಲೆ ಹಲ್ಲೆ ಆರೋಪ: ನಟ ದುನಿಯಾ ವಿಜಯ ಪುತ್ರನ ವಿರುದ್ಧ ದೂರು

ಸರ್ಕಾರದ ವತಿಯಿಂದ ಊಟ, ಉಪಹಾರ ಅಗತ್ಯವಿತ್ತೆ..?
ಸರ್ಕಾರದ ವತಿಯಿಂದ ಊಟ, ಉಪಹಾರ ಕೊಡಲು ಸ್ಪೀಕರ್ ಆರಂಭಿಸಿದರು. ಇದು ಅಗತ್ಯವಿತ್ತೇ? ಎಂದು ಪ್ರಶ್ನಿಸಿದ ಮಾಜಿ ಸ್ಪೀಕರ್‌ ಆಗಿರುವ ಕಾಗೇರಿ, ಹಾಸು ಹೊದಿಕೆ ಬದಲಿಸಿ, ಕಾರ್ಪೆಟ್ ಹಾಕಿಸಿದ್ದಾರೆ, ಇದರಲ್ಲೆಲ್ಲ ಅನುಮಾನ ಬರುತ್ತದೆ ಎಂದು ಹೇಳಿದರು.
ಶಾಸಕರ ಭವನದಲ್ಲಿ ಶಾಸಕರ ಕೊಠಡಿಗಳನ್ನು ಭದ್ರಪಡಿಸಲು, ಇನ್ನಷ್ಟು ವ್ಯವಸ್ಥೆ ಕಲ್ಪಿಸಿಕೊಡಲು ಸ್ಮಾರ್ಟ್ ಡೋರ್ ಲಾಕರ್ ಹಾಕಿಸಿದರು. ಇದಕ್ಕೆ 49 ಸಾವಿರ ರೂ. ವೆಚ್ಚ ತೋರಿಸಲಾಗಿದೆ, ಸ್ಮಾರ್ಟ್ ಸೇಫ್ ಲಾಕರ್ ಹಾಕಿಸಿದರು. ಮಾರುಕಟ್ಟೆಯಲ್ಲಿ 10-15 ಸಾವಿರ ರೂ.ಗಳಿಗೆ ಸಿಗುವ ಸ್ಮಾರ್ಟ್ ಸೇಫ್ ಲಾಕರ್ ಗೆ 35 ಸಾವಿರ ದರ ವಿಧಿಸಿದ್ದಾರೆ ಎಂದು ಆರೋಪಿಸಿದರು.
ರಾಜಕೀಯ, ಸಾರ್ವಜನಿಕ ಜೀವನದ ಸಾಕಷ್ಟು ಅನುಭವ ಇರುವ ಯು.ಟಿ.ಖಾದರ್ ಅವರು ಸ್ಪೀಕರ್ ಹುದ್ದೆಯ ಘನತೆ, ಗೌರವಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement