
ನವದೆಹಲಿ: ಲೈಂಗಿಕ ದೌರ್ಜನ್ಯ, ಪೊಲೀಸ್ ದೂರು, ಶೌಚಾಲಯ ಕ್ಲೀನರ್‌ನಿಂದ ಸುಟ್ಟ ಗಾಯಗಳು, ವ್ಯಕ್ತಿಯೊಬ್ಬ ಹಿಂಬಾಲಿಸಿದ್ದಾನೆ (Stalker) ಎಂಬ ಕಟ್ಟು ಕಥೆ, ಮತ್ತು ಇವೆಲ್ಲದರ ನಾಟಕ ಕೊನೆಗೂ ಬಯಲು. ಇವೆಲ್ಲ ದೆಹಲಿಯ ಆಸಿಡ್ ದಾಳಿ ಎಂಬ ಪ್ರಕರಣದ ಕಟ್ಟುಕತೆಯ ಪ್ರಮುಖ ಅಂಶಗಳು. ಈ”ಆಸಿಡ್ ದಾಳಿ” ಪ್ರಕರಣದ ತಿರುವುಗಳು ನಿಜಕ್ಕೂ ಬೆಚ್ಚಿ ಬೀಳಿಸುವಂತಿವೆ. ಕೊನೆಗೆ ಇದು ಆಸಿಡ್ ದಾಳಿಯೇ ಅಲ್ಲ ಎಂದು ತಿಳಿದುಬಂದಿದೆ.
ಅಕೀಲ್ ಖಾನ್ ಎಂಬ ವ್ಯಕ್ತಿ, ಮಹಿಳೆಯ ಮೇಲಿನ ತನ್ನ ಲೈಂಗಿಕ ಅಪರಾಧಗಳನ್ನು ಮುಚ್ಚಿಹಾಕಲು ತನ್ನ ಮಗಳನ್ನು ಹೇಗೆ ಬಳಸಿಕೊಂಡಿದ್ದಾನೆ ಮತ್ತು ಮಹಿಳೆಯರನ್ನು ರಕ್ಷಿಸಲು ರೂಪಿಸಲಾದ ಕಾನೂನನ್ನು ಕುಟುಂಬವು ಹೇಗೆ ದುರುಪಯೋಗಪಡಿಸಿಕೊಂಡಿದೆ ಎಂಬುದನ್ನು ಈ ಪ್ರಕರಣವು ಬಯಲು ಮಾಡಿದೆ.
ಪೊಲೀಸರಿಂದ ತನಿಖೆ: ತಂದೆ ಬಂಧನ
20 ವರ್ಷದ ಕಾಲೇಜು ವಿದ್ಯಾರ್ಥಿನಿ ನಿರೂಪಿಸಿದ ಆಸಿಡ್ ದಾಳಿಯ ಕಥೆಯನ್ನು ದೆಹಲಿ ಪೊಲೀಸರು ಒಂದೂವರೆ ದಿನದ ಅವಧಿಯಲ್ಲಿ ಕೂಲಂಕಷವಾಗಿ ಪರಿಶೀಲಿಸಿ, ನಿಜಾಂಶವನ್ನು ಹೊರಗೆಳೆದಿದ್ದಾರೆ. ಯುವತಿ ಆಸ್ಪತ್ರೆಗೆ ದಾಖಲು ಮತ್ತು ಅವಳ ಆಘಾತಕಾರಿ ಆರೋಪಗಳೊಂದಿಗೆ ಪ್ರಾರಂಭವಾದ ತನಿಖೆಯು, ಅಂತಿಮವಾಗಿ ಆಕೆಯ ತಂದೆಯ ಬಂಧನದೊಂದಿಗೆ ಕೊನೆಗೊಂಡಿದೆ.
ದೆಹಲಿ ಪೊಲೀಸ್‌ನ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ವಿಶೇಷ ಆಯುಕ್ತ ರವೀಂದ್ರ ಯಾದವ್ ಅವರು, ಪೊಲೀಸರು ಈ ವಿಚಿತ್ರ ಪ್ರಕರಣವನ್ನು ಹೇಗೆ ಭೇದಿಸಿದರು ಎಂದು ತಿಳಿಸಿದ್ದಾರೆ ಎಂದು ಅವರನ್ನು ಉಲ್ಲೇಖಿಸಿ NDTV ವರದಿ ಮಾಡಿದೆ.

ಒಂದು ಬಾಣ, ಹಲವು ಟಾರ್ಗೆಟ್‌ಗಳು..
ಈ ಪಿತೂರಿಯಲ್ಲಿ ಅಕೀಲ್ ಖಾನ್‌ನ ಕುಟುಂಬದ ಹಲವು ಸದಸ್ಯರು ಭಾಗಿಯಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಆರೋಪಿತ ಆಸಿಡ್ ದಾಳಿ ಪ್ರಕರಣ ನಡೆಯುವ ಎರಡು ದಿನಗಳ ಮೊದಲು, 2021 ರಿಂದ 2024 ರವರೆಗೆ ಅಕೀಲ್ ಖಾನ್‌ನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಈತನ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದರು. ಲೈಂಗಿಕ ಶೋಷಣೆ ಮತ್ತು ಖಾಸಗಿ ಫೋಟೋ-ವೀಡಿಯೊಗಳನ್ನು ಬಳಸಿ ಬ್ಲಾಕ್‌ಮೇಲ್ ಮಾಡಿದ ಆರೋಪವನ್ನು ಆಕೆ ಹೊರಿಸಿದ್ದರು. ಇದಕ್ಕೆ ಸೇಡು ತೀರಿಸಿಕೊಳ್ಳಲು ಖಾನ್ ಒಂದು ವಿಸ್ತೃತ ಸಂಚು ರೂಪಿಸಿದ್ದ.
ಸಂಚಿನ ಭಾಗವಾಗಿ ಖಾನ್ ಮಗಳು ಆಸಿಡ್ ದಾಳಿ ನಡೆದಿದೆ ಎಂದು ಕಟ್ಟುಕಥೆಯನ್ನು ಸೃಷ್ಟಿಸಿದಳು. ಅತ್ಯಾಚಾರದ ಆರೋಪ ಮಾಡಿದ ಮಹಿಳೆಯ ಪತಿಯನ್ನು ಮುಖ್ಯ ಆರೋಪಿ ಎಂದು ಹೆಸರಿಸಿದಳು. ಆತ ತನ್ನನ್ನು ಬಹಳ ಸಮಯದಿಂದ ಹಿಂಬಾಲಿಸುತ್ತಿದ್ದ ಎಂದು ಪೊಲೀಸರಿಗೆ ತಿಳಿಸಿದ್ದಳು.
ಆಸಿಡ್ ದಾಳಿ ಸಂಚಿನಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪ ಹೊರಿಸಲಾದ ಇತರ ಇಬ್ಬರಾದ ಅರ್ಮಾನ್ ಮತ್ತು ಇಶಾನ್ ಸಹ ಖಾನ್‌ನ ಸಂಬಂಧಿಕರೇ ಆಗಿದ್ದಾರೆ. 2018 ರಲ್ಲಿ, ಇವರಿಬ್ಬರ ತಾಯಿ ಖಾನ್ ವಿರುದ್ಧ ಲೈಂಗಿಕ ದೌರ್ಜನ್ಯ ಮತ್ತು ಆಸಿಡ್ ದಾಳಿ ಎರಡಕ್ಕೂ ಸಂಬಂಧಿಸಿದ ಪ್ರಕರಣ ದಾಖಲಿಸಿದ್ದರು. ಕುಟುಂಬಗಳ ನಡುವೆ ಆಸ್ತಿ ವಿವಾದವೂ ಇದೆ ಎಂದು ಆಕೆ ಪೊಲೀಸರಿಗೆ ಹೇಳಿದ್ದಾರೆ. ನಾವು ಇವರನ್ನು ಸಿಲುಕಿಸುವ ಖಾನ್‌ನ ಈ ಸಂಚನ್ನು ಬಯಲು ಮಾಡಿದ್ದೇವೆ. ಇದು ‘ಒಂದು ಬಾಣದಿಂದ ಹಲವು ಗುರಿಗಳನ್ನು ಹೊಡೆಯುವ’ ಯೋಜನೆಯಾಗಿತ್ತು,” ಎಂದು ವಿಶೇಷ ಆಯುಕ್ತ ಯಾದವ್ ತಿಳಿಸಿದರು ಎಂದು NDTV ವರದಿ ತಿಳಿಸಿದೆ.
ಆಸಿಡ್ ದಾಳಿಯ ನಾಟಕ
ಖಾನ್‌ನ ಮಗ ತನ್ನ ಸಹೋದರಿಯನ್ನು ಭಾನುವಾರ ವಾಯುವ್ಯ ದೆಹಲಿಯ ಲಕ್ಷ್ಮೀಬಾಯಿ ಕಾಲೇಜು ಬಳಿ ಬಿಟ್ಟಿದ್ದ. ಆಕೆ ತನ್ನೊಂದಿಗೆ ಆಮ್ಲೀಯ ಶೌಚಾಲಯ ಕ್ಲೀನರ್ ಮತ್ತು ಬಿಡಿ ಬಟ್ಟೆಯನ್ನು ತೆಗೆದುಕೊಂಡು ಹೋಗಿದ್ದಳು. ಆಕೆ ತನ್ನ ಕೈಗಳ ಮೇಲೆ ವಿಷಕಾರಿ ರಾಸಾಯನಿಕವನ್ನು ಸುರಿದು ಸುಟ್ಟುಕೊಂಡಿದ್ದಳು. ಆಸ್ಪತ್ರೆಗೆ ದಾಖಲಾದ ನಂತರ, ಮೂವರು ವ್ಯಕ್ತಿಗಳು ಬೈಕ್‌ನಲ್ಲಿ ಬಂದು ಆಸಿಡ್ ಎಸೆದರು ಎಂದು ಆಕೆ ಹೇಳಿದ್ದಳು. ಮುಖವನ್ನು ರಕ್ಷಿಸಿಕೊಳ್ಳಲು ಕೈಯೆತ್ತಿದ್ದರಿಂದ ಕೈಗಳಿಗೆ ಸುಟ್ಟ ಗಾಯಗಳಾಗಿವೆ ಎಂದು ಆ 20 ವರ್ಷದ ಯುವತಿ ಪೊಲೀಸರಿಗೆ ತಿಳಿಸಿದ್ದಳು.
ತನಿಖೆ ಆರಂಭವಾದಾಗ, ಮಹಿಳೆಯ ಹೇಳಿಕೆಯಲ್ಲಿ ಲೋಪದೋಷಗಳು ಕಂಡುಬಂದವು. ನೆಲದ ಮೇಲೆ ಆಸಿಡ್ ಕುರುಹುಗಳಿದ್ದರೂ, ದಾಳಿ ನಡೆದಿದೆ ಎಂದು ಆಕೆ ಹೇಳಿದ ಗೋಡೆಯ ಮೇಲೆ ಯಾವುದೇ ಕುರುಹುಗಳಿರಲಿಲ್ಲ. ಅಲ್ಲದೆ, ಆಸ್ಪತ್ರೆ ಅಧಿಕಾರಿಗಳು ಆಕೆಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಹೇಳಿದ್ದರೆ, ಆಕೆಯ ಸಹೋದರ ಮಾಧ್ಯಮಗಳಿಗೆ ಆಕೆಯ ಸ್ಥಿತಿ “ಗಂಭೀರ”ವಾಗಿದೆ ಎಂದು ಹೇಳಿದ್ದ.
ಪೊಲೀಸರು ಸಂಚನ್ನು ಭೇದಿಸಿದ್ದು ಹೇಗೆ?
“ನಾವು ಮುಖ್ಯ ಆರೋಪಿಯ ವಿಚಾರಣೆ ಮಾಡಿದಾಗ, ಆತ ಇಡೀ ದಿನ ಕರೋಲ್ ಬಾಗ್‌ನಲ್ಲಿ ಇದ್ದೆ ಎಂದು ಹೇಳಿದ. ನಾವು ಇದನ್ನು ಮೂರು ವಿಧಾನಗಳಿಂದ ದೃಢಪಡಿಸಿದೆವು. ತಾಂತ್ರಿಕ ವಿಶ್ಲೇಷಣೆಯಿಂದ ಆತನ ಫೋನ್ ಸ್ಥಳವನ್ನು ಟ್ರ್ಯಾಕ್ ಮಾಡಿದೆವು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದೆವು ಮತ್ತು ಆತ ಕೆಲಸ ಮಾಡುತ್ತಿದ್ದ ಸ್ಥಳದಲ್ಲಿಯೂ ಪರಿಶೀಲಿಸಿದೆವು. ಆತ ನಿರಪರಾಧಿ ಎಂದು ಮನವರಿಕೆಯಾದ ನಂತರ, ನಾವು ಈ ಸಂಚನ್ನು ಬೇರುಮಟ್ಟದಿಂದ ಭೇದಿಸಲು ಪ್ರಾರಂಭಿಸಿದೆವು,” ಎಂದು ಹಿರಿಯ ಅಧಿಕಾರಿ ಹೇಳಿದರು.
ಪೊಲೀಸ್ ತನಿಖೆಯಲ್ಲಿ ತಿಳಿದುಬಂದ ಅಂಶಗಳು:
ಪ್ರಕರಣದಲ್ಲಿ ಸುಳ್ಳಾಗಿ ಸಿಲುಕಿಸಲಾಗಿದ್ದ ಮುಖ್ಯ ಆರೋಪಿ, ಖಾನ್ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ ಮಹಿಳೆಯ ಪತಿ.
ಅರ್ಮಾನ್ ಮತ್ತು ಇಶಾನ್ ಅವರ ತಾಯಿ ಶಬ್ನಮ್ ದಾಖಲಿಸಿದ ಆಸಿಡ್ ದಾಳಿ ಪ್ರಕರಣದಲ್ಲಿ ಖಾನ್ ಒಬ್ಬ ಆರೋಪಿ. “ಪ್ರಕರಣವು ವಿಚಾರಣೆಯಲ್ಲಿದೆ. ತನಗೆ ಶಿಕ್ಷೆಯಾಗಬಹುದು ಎಂದು ಭಾವಿಸಿ, ಖಾನ್ ಈ ಇಬ್ಬರನ್ನು ಸಿಲುಕಿಸಲು ಪ್ರಯತ್ನಿಸಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದರು.
ಖಾನ್ ಮತ್ತು ಆತನ ಮಗಳ ಜೊತೆಗೆ, ಆತನ ಮಗ ಮತ್ತು ಸಹೋದರ ಕೂಡ ಈ ಸಂಚಿನಲ್ಲಿ ಭಾಗಿಯಾಗಿದ್ದರು. “ಇಡೀ ವಿಷಯವನ್ನು ಸೃಷ್ಟಿಸಲಾಗಿತ್ತು; ಆಕೆ ತನ್ನ ಕೈಗಳ ಮೇಲೆ ಆಸಿಡ್ ಸುರಿದುಕೊಂಡು ಸುಳ್ಳು ಆರೋಪಗಳನ್ನು ಹೊರಿಸಿದ್ದಳು,” ಎಂದು ಅಧಿಕಾರಿ ತಿಳಿಸಿದ್ದಾರೆ. ಸುಳ್ಳು ದೂರು ನೀಡಿದ್ದಕ್ಕಾಗಿ ಖಾನ್ ಕುಟುಂಬದ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾನ್‌ನನ್ನು ಕಳೆದ ರಾತ್ರಿ ಬಂಧಿಸಲಾಗಿದ್ದು, ಆತನ ವಿಚಾರಣೆಯು ಆಸಿಡ್ ದಾಳಿ ಪ್ರಕರಣಗಳಲ್ಲಿ ಮಹಿಳೆಯರಿಗೆ ನ್ಯಾಯ ಒದಗಿಸಲು ತಂದ ಕಾನೂನನ್ನು ದುರುಪಯೋಗಪಡಿಸಿಕೊಳ್ಳುವ ಪ್ರಯತ್ನದ ಆಘಾತಕಾರಿ ಸತ್ಯವನ್ನು ಹೊರಹಾಕಿದೆ. ಅತ್ಯಾಚಾರದ ಆರೋಪ ಹೊರಿಸಿದ ಮಹಿಳೆಯ 60ಕ್ಕೂ ಹೆಚ್ಚು ಖಾಸಗಿ ಫೋಟೋಗಳು ಮತ್ತು ವೀಡಿಯೊಗಳು ಕೂಡ ಖಾನ್ ಬಳಿ ಪತ್ತೆಯಾಗಿವೆ.


ನಿಮ್ಮ ಕಾಮೆಂಟ್ ಬರೆಯಿರಿ