
ಪಾದರಕ್ಷೆಗಳು ಮನುಷ್ಯನಿಗೆ ಅತ್ಯಗತ್ಯ ವಸ್ತುವಾಗಿದೆ. ಇದು ನಮ್ಮ ಪಾದಗಳನ್ನು ರಕ್ಷಿಸುತ್ತದೆ, ಆರಾಮ ನೀಡುತ್ತದೆ ಮತ್ತು ಸುಲಭವಾಗಿ ಜಗತ್ತನ್ನು ಸುತ್ತಲು ನೆರವಾಗುತ್ತದೆ. ಆದರೆ, ಪಾದರಕ್ಷೆಯು ತನ್ನ ಸಾಮಾನ್ಯ ಕಾರ್ಯವನ್ನು ಮೀರಿ ಐಷಾರಾಮಿ ವಸ್ತುವಾಗಿ, ಸ್ಥಾನಮಾನದ ಸಂಕೇತವಾಗಿ ಅಥವಾ ಕಲಾತ್ಮಕ ವಸ್ತುವಾಗಿ ಮಾರ್ಪಡುವ ಸಾಮರ್ಥ್ಯವನ್ನು ಹೊಂದಿದೆ. ಇದಕ್ಕೆ ಒಂದು ಸ್ಪಷ್ಟ ಉದಾಹರಣೆಯೆಂದರೆ, ಡೆಬ್ಬಿ ವಿಂಗ್ಹ್ಯಾಮ್ ಹೀಲ್ಸ್ (Debbie Wingham Heels). ಇದು ತನ್ನ ಮೌಲ್ಯದ ಮೂಲಕವೇ ವಿಶ್ವದ ಗಮನ ಸೆಳೆದ ಪಾದರಕ್ಷೆಯಾಗಿದೆ. ಇದರ ಮೌಲ್ಯವು 15.1 ಮಿಲಿಯನ್ ಡಾಲರ್ (ಸುಮಾರು ₹1,33,37,25,750 ಅಥವಾ ಸುಮಾರು 133.37 ಕೋಟಿ ರೂ.ಗಳು…!) ಆಗಿದೆ. ಇದು ಒಂದು ಸಾಮಾನ್ಯ ವಸ್ತುವನ್ನು ಸಂಪತ್ತು, ಐಷಾರಾಮಿ, ಸೃಜನಶೀಲತೆ ಮತ್ತು ಅತಿರಂಜಿತ ಪ್ರದರ್ಶನವಾಗಿ ಹೇಗೆ ಪರಿವರ್ತಿಸಬಹುದು ಎಂಬುದಕ್ಕೆ ಈ ಪಾದರಕ್ಷೆಯ ವಿನ್ಯಾಸ ಮತ್ತು ಮೌಲ್ಯ ಅತ್ಯುತ್ತಮ ನಿದರ್ಶನವಾಗಿದೆ.

ಡೆಬ್ಬಿ ವಿಂಗ್ಹ್ಯಾಮ್ ಹೀಲ್ಸ್ ಇಷ್ಟೊಂದು ದುಬಾರಿಯಾಗಲು ಕಾರಣವೇನು?
ಬ್ರಿಟಿಷ್ ವಿನ್ಯಾಸಕಿ ಮತ್ತು ಕಲಾವಿದೆ ಡೆಬ್ಬಿ ವಿಂಗ್ಹ್ಯಾಮ್ ಅವರು ನಿರಂತರವಾಗಿ ಹೊಸತನ್ನು ಸೃಷ್ಟಿಸುತ್ತಾ, ಐಷಾರಾಮಿಯ ವ್ಯಾಖ್ಯಾನವನ್ನೇ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಾರೆ. ಅತ್ಯಂತ ದುಬಾರಿ ಮತ್ತು ಅತಿರಂಜಿತ ವಸ್ತುಗಳ ಸಂಗ್ರಹಕ್ಕಾಗಿ ಹೆಸರುವಾಸಿಯಾದ ವಿಂಗ್ಹ್ಯಾಮ್, 2017 ರಲ್ಲಿ ಈ ವಿಶ್ವದ ಅತ್ಯಂತ ದುಬಾರಿ ಶೂಗಳನ್ನು ರಚಿಸುವ ಮೂಲಕ ತಮ್ಮ ಹಿಂದಿನ ಎಲ್ಲಾ ದಾಖಲೆಗಳನ್ನು ಮೀರಿಸಿದ್ದಾರೆ.
ಈ ಐಷಾರಾಮಿ ಸ್ಯಾಂಡಲ್ಗಳನ್ನು ಅನಾಮಧೇಯ, ಶ್ರೀಮಂತ ಕುಟುಂಬವೊಂದರ ಜನ್ಮದಿನದ ಉಡುಗೊರೆಯಾಗಿ ವಿನ್ಯಾಸಗೊಳಿಸಲಾಗಿತ್ತು. ಇದಕ್ಕೆ ಇಷ್ಟೊಂದು ದುಬಾರಿ ಬೆಲೆ ಬರಲು ಕಾರಣ ಖಗೋಳ ಜ್ಯೋತಿಷ್ಯದಲ್ಲಿ ಮಹತ್ವ ಪಡೆದ ಅಪರೂಪದ ಮತ್ತು ದೋಷರಹಿತ ರತ್ನದ ಕಲ್ಲುಗಳ (rare and flawless gemstones) ಸಂಗ್ರಹ ಇರುವುದು.
ಈ ಚಪ್ಪಲಿಗಳನ್ನು ವಿಶ್ವದ ಅತ್ಯಂತ ಅಪರೂಪದ ವಜ್ರಗಳಲ್ಲಿ ಒಂದಾದ ದೊಡ್ಡದಾದ ಗುಲಾಬಿ ಮತ್ತು ನೀಲಿ ವಜ್ರಗಳ ಜೊತೆ ತಯಾರಿಸಲಾಗಿದೆ. ಇದು ಮೂರು ಕ್ಯಾರೆಟ್ ಗಳ ನಾಲ್ಕು ಬಿಳಿ ವಜ್ರಗಳು ಮತ್ತು ವಿನ್ಯಾಸದಲ್ಲಿ ಸೂಕ್ಷ್ಮವಾಗಿ ಇರಿಸಲಾದ 1,000 ಚಿಕ್ಕ ವಜ್ರಗಳನ್ನು ಒಳಗೊಂಡಿದೆ.
ಎಲ್ಲ ವಜ್ರಗಳನ್ನು ಸೂಕ್ಷ್ಮವಾದ ಪ್ಲಾಟಿನಮ್ ಸೆಟ್ಟಿಂಗ್ಗಳಲ್ಲಿ ಅಳವಡಿಸಲಾಗಿದ್ದು, ಇದು ಅತ್ಯುತ್ತಮ ಕರಕುಶಲತೆಯನ್ನು ಹೊಂದಿದೆ.
ಒಟ್ಟಾರೆಯಾಗಿ, ಈ ಪಾದರಕ್ಷೆಯು ಕೇವಲ ಶೂ ಅಲ್ಲ, ಬದಲಿಗೆ ಅಮೂಲ್ಯ ಕಲ್ಲುಗಳು, ಔಜ್ರದ ಹರಳುಗಳು ಮತ್ತು ಪ್ಲಾಟಿನಂನಿಂದ ತಯಾರಾದ ಕಲಾಕೃತಿ ಎಂದು ಹೇಳಬಹುದು.


ನಿಮ್ಮ ಕಾಮೆಂಟ್ ಬರೆಯಿರಿ