ಪಾಟ್ನಾ : ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನವು ಗುರುವಾರ (ನವೆಂಬರ್ 6) ಮುಕ್ತಾಯಗೊಂಡಿದ್ದು, ಶೇ. 64.66 ರಷ್ಟು ಮತದಾನ ನಡೆದಿದೆ. ಈ ಮತದಾನದ ಪ್ರಮಾಣವು ಬಿಹಾರದ ಚುನಾವಣಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ.
ಪ್ರಸ್ತುತ ಮತದಾನದ ಪ್ರಮಾಣವು ಈ ಹಿಂದೆ 2000ರ ವಿಧಾನಸಭಾ ಚುನಾವಣೆಯಲ್ಲಿ ದಾಖಲಾಗಿದ್ದ ಶೇ. 62.57 ರ ಹಿಂದಿನ ದಾಖಲೆಯನ್ನು ಮೀರಿದೆ. ಅಲ್ಲದೆ, ರಾಜ್ಯದಲ್ಲಿ 1998ರಲ್ಲಿ ಆಗಿದ್ದ ಈವರೆಗೆ ದಾಖಲಾದ ಗರಿಷ್ಠ ಲೋಕಸಭಾ ಚುನಾವಣೆಯ ಮತದಾನದ ಪ್ರಮಾಣ ಶೇ. 64.6ರ ಪ್ರಮಾಣವನ್ನೂ ಮೀರಿಸಿರುವುದು ಗಮನಾರ್ಹ.
ಈ ಐತಿಹಾಸಿಕ ಮತದಾರರ ಭಾಗವಹಿಸುವಿಕೆಯು ವಾಸ್ತವವಾಗಿ ಯಾವ ರಾಜಕೀಯ ಪಕ್ಷಕ್ಕೆ ಅನುಕೂಲಕರವಾಗಿದೆ ಎಂಬ ಬಗ್ಗೆ ತೀವ್ರ ಕುತೂಹಲವಿದೆ.
ಕೆಲ ವಿಶ್ಲೇಷಕರು ಹೇಳುವಂತೆ “ಇದು ಯಾರಿಗೆ ಲಾಭ? ಇಲ್ಲಿನ ಸಂದೇಶವೇನು? ಇದು ಆಡಳಿತ ವಿರೋಧಿ ಅಲೆಯೇ ಅಥವಾ ನಿತೀಶಕುಮಾರ ಅವರ ಆಡಳಿತಕ್ಕೆ ಅನುಮೋದನೆಯೇ ಎಂಬ ಪ್ರಶ್ನೆಗಳಿಗೆ ಉತ್ತರ ಅಸ್ಪಷ್ಟವಾಗಿದೆ. ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಮತ್ತು ಪ್ರತಿಪಕ್ಷಗಳ ಮಹಾಘಟಬಂಧನ (INDIA ಒಕ್ಕೂಟ) ಎರಡೂ ಪಕ್ಷಗಳು ಈ ಹೆಚ್ಚಿನ ಮತದಾನ ತಮ್ಮ ಪರವಾದ ಅಲೆಯ ಸಂಕೇತ ಎಂದು ಪ್ರತಿಪಾದಿಸಿವೆ.
ಸಾಮಾನ್ಯವಾಗಿ, ಹೆಚ್ಚಿನ ಮತದಾನವು ಬದಲಾವಣೆಯನ್ನು ಬಯಸುವ ಪ್ರೇರಿತ ಮತದಾರರಿಂದ ಉಂಟಾಗುತ್ತದೆ, ಇದು ಆಡಳಿತ ವಿರೋಧಿ ಅಲೆಯನ್ನು ಸೂಚಿಸುತ್ತದೆ (ಆದರೂ ಯಾವಾಗಲೂ ಅಲ್ಲ) ಎಂದು ವಿಪಕ್ಷಗಳ ಮೈತ್ರಿಕೂಟ ಮಹಾಘಟಬಂಧನದವರು ಹೇಳುತ್ತಾರೆ.
ಆದರೆ ಇದಕ್ಕೆ ವಿರುದ್ಧವಾಗಿ, ಈ ಐತಿಹಾಸಿಕ ಮತದಾನವನ್ನು “ನಿತೀಶ ಅವರ ಆಡಳಿತ ಮಾದರಿ” ಯ ದೃಢೀಕರಣ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಕಲ್ಯಾಣ ಯೋಜನೆಗಳ ಯಶಸ್ಸಿನ ಪ್ರತೀಕ ಎಂದು ಎನ್‌ಡಿಎ ಸೇರಿದಂತೆ ಕೆಲವರು ಪರಿಗಣಿಸಿದ್ದಾರೆ. ಅವರು ತಮ್ಮ ಪ್ರತಿಪಾದನೆಗೆ ಮಹಿಳಾ ಮತದಾರರು ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದರತ್ತ ಬೊಟ್ಟು ಮಾಡುತ್ತಾರೆ.. ನಿತೀಶಕುಮಾರ ಅವರ ಸಮಾಜ ಕಲ್ಯಾಣ ಮತ್ತು ಸಬಲೀಕರಣ ಯೋಜನೆಗಳಿಂದಾಗಿ ಮಹಿಳಾ ಮತದಾರರು ಸತತವಾಗಿ ಅವರಿಗೆ ಬೆಂಬಲ ನೀಡುತ್ತಾ ಬಂದಿದ್ದಾರೆ ಎಂದು ಎನ್‌ಡಿಎ ಪ್ರತಿಪಾದಿಸುತ್ತದೆ.
ಪ್ರಮುಖ ಸ್ಪರ್ಧೆಗಳು ಮತ್ತು ಅಭ್ಯರ್ಥಿಗಳು
45,000ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ 1,314 ಅಭ್ಯರ್ಥಿಗಳ ಭವಿಷ್ಯವನ್ನು ಈ ಚುನಾವಣೆಯಲ್ಲಿ ನಿರ್ಧರಿಸಲಾಗಿದೆ. ಮೊದಲ ಹಂತದ ಚುನಾವಣೆಯಲ್ಲಿ ಹಲವಾರು ಹೈ-ಪ್ರೊಫೈಲ್ ಕ್ಷೇತ್ರಗಳು ಗಮನ ಸೆಳೆದಿದ್ದವು:
ರಘೋಪುರ: ಮಹಾಘಟಬಂಧನದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ (RJD) ಅವರು ಬಿಜೆಪಿಯ ಸತೀಶಕುಮಾರ ವಿರುದ್ಧ ತಮ್ಮ ಮೂರನೇ ಗೆಲುವನ್ನು ಸಾಧಿಸಲು ಸ್ಪರ್ಧಿಸಿದ್ದಾರೆ.
ತಾರಾಪುರ: ಉಪಮುಖ್ಯಮಂತ್ರಿ ಮತ್ತು ಬಿಜೆಪಿಯ ಪ್ರಮುಖ ನಾಯಕರಾದ ಸಾಮ್ರಾಟ ಚೌಧರಿ ಅವರು ತಮ್ಮ ಚುನಾವಣಾ ಅದೃಷ್ಟವನ್ನು ಪರೀಕ್ಷೆಗೆ ಒಡ್ಡಿದ್ದಾರೆ.
ಮಹುವಾ: ಆರ್‌ಜೆಡಿ ನಾಯಕ ಹಾಗೂ ಲಾಲು ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ ಯಾದವ್ ತಾವು ಹೊಸದಾಗಿ ರಚಿಸಿರುವ ಜನಶಕ್ತಿ ಜನತಾ ದಳ (JJD) ಅಡಿಯಲ್ಲಿ ಸ್ಪರ್ಧಿಸಿದ್ದಾರೆ.
ಬಹುತೇಕ ಶಾಂತಿಯುತ ಮತದಾನ
ಮತದಾನವು ಹೆಚ್ಚಾಗಿ ಶಾಂತಿಯುತವಾಗಿತ್ತು ಎಂದು ಭಾರತೀಯ ಚುನಾವಣಾ ಆಯೋಗ (ECI) ತಿಳಿಸಿದೆ. ಈ ಬಾರಿ ಬಿಹಾರದಲ್ಲಿ ಮೊದಲ ಬಾರಿಗೆ, ಎಲ್ಲಾ ಮತಗಟ್ಟೆಗಳಲ್ಲಿ ಶೇ. 100ರಷ್ಟು ವೆಬ್‌ಕಾಸ್ಟಿಂಗ್ ಅನ್ನು ಜಾರಿಗೆ ತರಲಾಗಿತ್ತು, ಇದು ಆಯೋಗಕ್ಕೆ ಮತದಾನ ಪ್ರಕ್ರಿಯೆಯನ್ನು ಹತ್ತಿರದಿಂದ ಮೇಲ್ವಿಚಾರಣೆ ಮಾಡಲು ಅನುವು ಮಾಡಿಕೊಟ್ಟಿತು. ಆದಾಗ್ಯೂ, ಕೆಲವೇ ಕೆಲವು ಸಣ್ಣ ಘಟನೆಗಳು ವರದಿಯಾಗಿವೆ.
ಲಖಿಸರಾಯ್ ಜಿಲ್ಲೆಯಲ್ಲಿ ಉಪಮುಖ್ಯಮಂತ್ರಿ ವಿಜಯಕುಮಾಯ ಸಿನ್ಹಾ ಅವರ ಬೆಂಗಾವಲು ವಾಹನದ ಮೇಲೆ ದಾಳಿ ನಡೆದಿದೆ ಎಂದು ಆರೋಪಿಸಲಾಗಿದೆ.
ಎರಡನೇ ಹಂತದ ಮತದಾನ ನವೆಂಬರ್ 11 ರಂದು ನಡೆಯಲಿದೆ. ಎಲ್ಲಾ 243 ಸ್ಥಾನಗಳ ಅಂತಿಮ ಫಲಿತಾಂಶಗಳನ್ನು ನವೆಂಬರ್ 14 ರಂದು ಪ್ರಕಟಿಸಲಾಗುತ್ತದೆ.


ನಿಮ್ಮ ಕಾಮೆಂಟ್ ಬರೆಯಿರಿ