ಸತ್ತು ಅಂತ್ಯಸಂಸ್ಕಾರವಾದ ವ್ಯಕ್ತಿ ವಾರದ ನಂತರ ಬದುಕಿ ‘ಮನೆಗೆ’ ಬಂದ…! ಗ್ರಾಮದಲ್ಲಿ ಆಶ್ಚರ್ಯ…ಗೊಂದಲ….ಆನಂದ

ಸೂರಜಪುರ: ಛತ್ತೀಸ್‌ಗಢದ ಒಂದು ಗ್ರಾಮದಲ್ಲಿ ಕೇವಲ ಒಂದು ವಾರದ ಅವಧಿಯಲ್ಲಿ, 25 ವರ್ಷದ ಯುವಕನೊಬ್ಬ ದುಃಖ, ಆಘಾತ ಮತ್ತು ಕೊನೆಯಲ್ಲಿ ಸಂತೋಷಕ್ಕೆ ಕಾರಣವಾದ ಘಟನೆಯ ಕೇಂದ್ರಬಿಂದುವಾಗಿದ್ದಾನೆ.
ಯುವಕ ಪುರುಷೋತ್ತಮ (Purushottam) ಮೃತಪಟ್ಟಿದ್ದಾನೆಂದು ನಂಬಿ ಶವವೊಂದನ್ನು ಅಂತ್ಯ ಸಂಸ್ಕಾರ ಮಾಡಿದ ಆತನ ಕುಟುಂಬ ಶೋಕದಲ್ಲಿ ಮುಳುಗಿತ್ತು. ಆದರೆ, ನಂತರ ಪುರುಷೋತ್ತಮ ಬೇರೆಡೆ ಕಾಣಿಸಿಕೊಂಡಿದ್ದಾನೆ ಎಂಬ ಸುದ್ದಿ ಸಂಬಂಧಿಕರಿಂದ ತಿಳಿದುಬಂದಿದೆ. ಕುಟುಂಬದವರು ಆತನನ್ನು ಪತ್ತೆ ಹಚ್ಚಿ ಮನೆಗೆ ಕರೆತಂದಿದ್ದು, ಇಡೀ ಗ್ರಾಮ ಮೊದಲು ಗೊಂದಲಕ್ಕೆ ಒಳಗಾಗಿ ನಂತರ ಸಂಭ್ರಮಿಸಿದೆ.
ಈ ನಾಟಕೀಯ ಬೆಳವಣಿಗೆಯು ನವೆಂಬರ್ 1 ರಂದು ಸೂರಜಪುರ ಜಿಲ್ಲೆಯ ಮನ್ಪುರ ಪ್ರದೇಶದಲ್ಲಿ ಬಾವಿಯಲ್ಲಿ ಶವವೊಂದು ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ಪ್ರಸಾರ ಮಾಡಿದ ನಂತರ ಆರಂಭವಾಯಿತು. ಅದೇ ಸಮಯದಲ್ಲಿ, ನೆರೆಯ ಚಂದರಪುರ ಗ್ರಾಮದ ನಿವಾಸಿ ಪುರುಷೋತ್ತಮ ಎರಡು ದಿನಗಳಿಂದ ಕಾಣೆಯಾಗಿದ್ದ ಕಾರಣ ಆತನ ಕುಟುಂಬವು ಪೊಲೀಸರನ್ನು ಸಂಪರ್ಕಿಸಿತು. ಶವವನ್ನು ನೋಡಿದ ಕುಟುಂಬದವರು, ಮೃತದೇಹವನ್ನು ಪುರುಷೋತ್ತಮ ಎಂದು ‘ಗುರುತಿಸಿದರು’ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ ಮಹತೋ ತಿಳಿಸಿದ್ದಾರೆ.
ನಂತರ ಪೊಲೀಸರು ಆಕಸ್ಮಿಕ ಸಾವಿನ ಪ್ರಕರಣ ದಾಖಲಿಸಿ, ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಿದರು. ಕುಟುಂಬದವರು ಸ್ಥಳೀಯ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ಮಾಡಿ, ವಿಧಿವಿಧಾನಗಳನ್ನು ನೆರವೇರಿಸಿದರು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಪ್ರಮುಖ ಸುದ್ದಿ :-   ತೃಣಮೂಲ ಬಂಡಾಯ ಸಂಸದರನ್ನು ಯಾಕೆ ಆಹ್ವಾನಿಸಿದ್ದೀರಿ ? : ಸರ್ವಪಕ್ಷ ಸಭೆಗೆ ಕೆಲಕಾಲ ಬಹಿಷ್ಕರಿಸಿದ ವಿಪಕ್ಷಗಳು

ಅಂಬಿಕಾಪುರದಲ್ಲಿ ಪತ್ತೆ
ತಮ್ಮ ಮಗ ‘ಸತ್ತ’ ಸುದ್ದಿ ಕೇಳಿ ಬಂದ ಸಂಬಂಧಿಕರು, ದುಃಖದಲ್ಲಿದ್ದ ಕುಟುಂಬಕ್ಕೆ ಪುರುಷೋತ್ತಮ ಸುಮಾರು 45 ಕಿ.ಮೀ. ದೂರದಲ್ಲಿರುವ ಅಂಬಿಕಾಪುರದಲ್ಲಿ ಕಾಣಿಸಿಕೊಂಡಿರುವುದಾಗಿ ಕೆಲವರು ತಿಳಿಸಿದ್ದಾರೆ. ತಕ್ಷಣ ಶೋಧ ಕಾರ್ಯಾಚರಣೆ ಆರಂಭಿಸಲಾಯಿತು. ಕೊನೆಗೆ ನವೆಂಬರ್ 4 ರಂದು ಆತ ಸಂಬಂಧಿಕರ ಮನೆಯಲ್ಲಿ ಪತ್ತೆಯಾಗಿದ್ದು, ಆತನನ್ನು ಮನೆಗೆ ಕರೆತರಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
“ನಾನು ಸುರ್ಗುಜಾ ಜಿಲ್ಲೆಯ ಅಂಬಿಕಾಪುರಕ್ಕೆ ಹೋಗಿದ್ದೆ. ನಂತರ ನನ್ನ ಕುಟುಂಬದವರು ನಾನು ಸತ್ತಿದ್ದೇನೆ ಎಂದು ಭಾವಿಸಿ ಬೇರೆ ವ್ಯಕ್ತಿಯ ಶವ ಸಂಸ್ಕಾರ ಮಾಡಿದ್ದಾರೆಂದು ಸಂಬಂಧಿಕರಿಂದ ತಿಳಿದುಬಂತು,” ಎಂದು ಪುರುಷೋತ್ತಮ ತಿಳಿಸಿದ್ದಾನೆ.

ಶವದ ಗುರುತು ಪತ್ತೆಗೆ ಪ್ರಯತ್ನ
ಈಗ ಪುರುಷೋತ್ತಮ ಅವರ ಕುಟುಂಬದಿಂದ ಅಂತ್ಯ ಸಂಸ್ಕಾರಗೊಂಡ ವ್ಯಕ್ತಿ ಯಾರು ಎಂಬುದನ್ನು ಪೊಲೀಸರು ಇನ್ನೂ ಪತ್ತೆಹಚ್ಚಬೇಕಿದೆ. ಮೃತನ ಡಿಎನ್‌ಎ ಮಾದರಿಗಳು, ಬೆರಳಚ್ಚುಗಳು, ಬಟ್ಟೆ ಮತ್ತು ಇತರ ವಸ್ತುಗಳನ್ನು ಸಂಗ್ರಹಿಸಿಡಲಾಗಿದೆ. ಜೊತೆಗೆ ಶವದ ಫೋಟೋ ಮತ್ತು ವೀಡಿಯೊ ಮಾಡಲಾಗಿದೆ ಎಂದು ಮಹತೋ ಹೇಳಿದ್ದಾರೆ. ಮರಣೋತ್ತರ ಪರೀಕ್ಷಾ ವರದಿಯ ಪ್ರಕಾರ, ಆ ವ್ಯಕ್ತಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ಅವರು ಹೇಳಿದ್ದಾರೆ.
ಪುರುಷೋತ್ತಮ್ ಬದುಕುಳಿದಿರುವುದಕ್ಕೆ ಆತನ ತಾಯಿ ಮನಕುನ್ವರ್ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. “ನನಗೆ ಶವದ ಫೋಟೋ ತೋರಿಸಲಾಯಿತು, ಮತ್ತು ಗ್ರಾಮದ ಜನರು ಅದು ನನ್ನ ಮಗನೇ ಎಂದು ಹೇಳಿದರು. ನನ್ನ ಮಗ ಬದುಕಿರುವುದು ನನಗೆ ತುಂಬಾ ಸಂತೋಷ ತಂದಿದೆ. ಬೇರೆ ಏನನ್ನೂ ಹೇಳಲು ನನಗಿಲ್ಲ,” ಎಂದು ಅವರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ವಿಡಿಯೊ | ಸಿಜೆಪಿ ಸಂಸ್ಥಾಪಕ ಅಭಿಜೀತ ದೀಪ್ಕೆ ಮುಖಕ್ಕೆ ಶಾಯಿ ಎಸೆದ ಮಹಿಳೆ ; ಹೈಡ್ರಾಮಾಕ್ಕೆ ಸಾಕ್ಷಿಯಾದ ಜಂತರ್ ಮಂತರ್‌ ಪ್ರತಿಭಟನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement