ಸಾಫ್ಟ್‌ವೇರ್ ದೋಷ ; ದೆಹಲಿಯಲ್ಲಿ 300 ವಿಮಾನಗಳು ವಿಳಂಬ, ಕೆಲವು ವಿಮಾನಗಳು ರದ್ದಾಗುವ ಸಾಧ್ಯತೆ

ನವದೆಹಲಿ: ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಐಜಿಐ) ಶುಕ್ರವಾರ ಏರ್ ಟ್ರಾಫಿಕ್ ಕಂಟ್ರೋಲ್ (ATC) ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ 300ಕ್ಕೂ ಹೆಚ್ಚು ವಿಮಾನಗಳ ಸಂಚಾರಕ್ಕೆ ತೀವ್ರ ವ್ಯತ್ಯಯ ಉಂಟಾಗಿದೆ. ಇದರಿಂದ ನೂರಾರು ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಸಿಲುಕಿದ್ದು, ಉತ್ತರ ಭಾರತದ ಹಲವು ವಿಮಾನ ನಿಲ್ದಾಣಗಳಲ್ಲೂ ಇದರ ಪರಿಣಾಮ ಕಂಡುಬಂದಿದೆ.
ಗುರುವಾರ ಸಂಜೆ ಆರಂಭವಾದ ಈ ತಾಂತ್ರಿಕ ದೋಷವು, ವಿಮಾನಗಳ ಸಂಚಾರ ನಿರ್ವಹಣೆಗೆ ನಿರ್ಣಾಯಕವಾಗಿರುವ ‘ಆಟೋಮ್ಯಾಟಿಕ್ ಮೆಸೇಜ್ ಸ್ವಿಚಿಂಗ್ ಸಿಸ್ಟಮ್’ (AMSS) ಅನ್ನು ಬಾಧಿಸಿದೆ ಎಂದು ಮೂಲಗಳು ತಿಳಿಸಿವೆ. ವಿಮಾನ ನಿಯಂತ್ರಕರಿಗೆ ಅಗತ್ಯವಾದ ಫ್ಲೈಟ್ ಪ್ಲಾನ್‌ಗಳನ್ನು ಒದಗಿಸುವ ‘ಆಟೋ ಟ್ರ್ಯಾಕ್ ಸಿಸ್ಟಮ್’ (ATS) ಗೆ ಆಟೋಮ್ಯಾಟಿಕ್ ಮೆಸೇಜ್ ಸ್ವಿಚಿಂಗ್ ಸಿಸ್ಟಮ್’ (AMSS) ಪ್ರಮುಖ ಸಂವಹನ ಜಾಲವಾಗಿದೆ.
ಸ್ವಯಂಚಾಲಿತ ವ್ಯವಸ್ಥೆ ಸ್ಥಗಿತಗೊಂಡ ಕಾರಣ, ವಾಯು ಸಂಚಾರ ನಿಯಂತ್ರಕರು ಲಭ್ಯವಿರುವ ದತ್ತಾಂಶಗಳನ್ನು ಬಳಸಿ ಕೈಯಾರೆ (Manually) ಫ್ಲೈಟ್ ಪ್ಲಾನ್‌ಗಳನ್ನು ಸಿದ್ಧಪಡಿಸಬೇಕಾಯಿತು. ಈ ಪ್ರಕ್ರಿಯೆಯು ನಿಧಾನನದ್ದಾಗಿದ್ದು, ದೆಹಲಿ ಸುತ್ತಮುತ್ತ ವಾಯುಪ್ರದೇಶದಲ್ಲಿ ವಿಮಾನಗಳ ಸಂಚಾರದಲ್ಲಿ ವ್ಯಾಪಕ ವಿಳಂಬ ಮತ್ತು ದಟ್ಟಣೆಗೆ ಕಾರಣವಾಯಿತು.
ಹಿರಿಯ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರ ಪ್ರಕಾರ, “ಆಟೋ ಟ್ರ್ಯಾಕ್ ಸಿಸ್ಟಮ್‌ಗೆ ಮಾಹಿತಿ ನೀಡುವ ಎಎಂಎಸ್‌ಎಸ್‌ (AMSS)ನಲ್ಲಿ ಸಮಸ್ಯೆ ಇದೆ. ನಿಯಂತ್ರಕರು ವಿಮಾನಗಳ ಯೋಜನೆಯನ್ನು ಕೈಯಾರೆ ಸಿದ್ಧಪಡಿಸುತ್ತಿದ್ದು, ಇದಕ್ಕೆ ಬಹಳ ಸಮಯ ಬೇಕಾಗುತ್ತಿದೆ ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ʼವಂದೇ ಮಾತರಂ'ಗೆ ಅವಮಾನಿಸಿದರೆ ಜೈಲು ಶಿಕ್ಷೆ: ಸಂಸತ್ತಿನಲ್ಲಿ ಮಸೂದೆ ಮಂಡಿಸಲಿರುವ ಅಮಿತ್ ಶಾ

ಕಾಸಕೇಡಿಂಗ್ ಪರಿಣಾಮ
ಭಾರತದ ಅತ್ಯಂತ ಕಾರ್ಯನಿರತ ವಿಮಾನ ನಿಲ್ದಾಣವಾದ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ದಿನಕ್ಕೆ 1,500ಕ್ಕೂ ಹೆಚ್ಚು ವಿಮಾನಗಳ ಸಂಚಾರವನ್ನು ನಿರ್ವಹಿಸುತ್ತದೆ. ಈ ವ್ಯತ್ಯಯದಿಂದಾಗಿ ಬೆಳಗ್ಗೆ ಸಂಪೂರ್ಣ ವಿಮಾನಗಳ ಆಗಮನ ಮತ್ತು ನಿರ್ಗಮನದ ಮೇಲೆ ಭಾರೀ ಪರಿಣಾಮ ಬೀರಿದೆ. ಫ್ಲೈಟ್‌ ಟ್ರ್ಯಾಕಿಂಗ್ ವೆಬ್‌ಸೈಟ್ Flightradar24 ಪ್ರಕಾರ, ಬೆಳಗ್ಗೆ 9 ಗಂಟೆಯ ಹೊತ್ತಿಗೆ ವಿಮಾನಗಳ ನಿರ್ಗಮನದಲ್ಲಿ ಸರಾಸರಿ 45 ರಿಂದ 50 ನಿಮಿಷಗಳ ವಿಳಂಬ ಉಂಟಾಗಿತ್ತು.
ವಿಮಾನಯಾನ ಸಂಸ್ಥೆಗಳಿಂದ ಪ್ರಯಾಣಿಕರಿಗೆ ಎಚ್ಚರಿಕೆ:
ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (DIAL) ವಕ್ತಾರರು ಎಟಿಸಿ ವ್ಯವಸ್ಥೆಯಲ್ಲಿನ ತಾಂತ್ರಿಕ ಸಮಸ್ಯೆಯಿಂದಾಗಿ ವಿಮಾನ ಸಂಚಾರಕ್ಕೆ ವ್ಯತ್ಯಯವಾಗಿರುವುದನ್ನು ದೃಢಪಡಿಸಿದ್ದಾರೆ. ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (AAI) ಜೊತೆಗೂಡಿ ಸಾಮಾನ್ಯ ಸ್ಥಿತಿಯನ್ನು ಶೀಘ್ರವಾಗಿ ಮರುಸ್ಥಾಪಿಸಲು ತಂಡಗಳು ಶ್ರಮಿಸುತ್ತಿವೆ ಎಂದು ಅವರು ತಿಳಿಸಿದ್ದಾರೆ.
ಈ ನಡುವೆ, ಇಂಡಿಗೋ, ಸ್ಪೈಸ್‌ಜೆಟ್ ಮತ್ತು ಏರ್ ಇಂಡಿಯಾ ಸೇರಿದಂತೆ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ಸಾಧ್ಯವಿರುವ ವ್ಯತ್ಯಯಗಳ ಬಗ್ಗೆ ಮುನ್ಸೂಚನೆ ನೀಡುವ ಪ್ರಯಾಣದ ಸಲಹೆಗಳನ್ನು ಪ್ರಕಟಿಸಿವೆ. ಇಂಡಿಗೋ ತನ್ನ X ಖಾತೆಯಲ್ಲಿ, “ಏರ್ ಟ್ರಾಫಿಕ್ ಕಂಟ್ರೋಲ್ ಸಿಸ್ಟಮ್‌ನಲ್ಲಿನ ತಾಂತ್ರಿಕ ಸಮಸ್ಯೆಯಿಂದಾಗಿ ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಗಳು ವಿಳಂಬವಾಗುತ್ತಿವೆ” ಎಂದು ಪೋಸ್ಟ್ ಮಾಡಿದೆ. ಸ್ಪೈಸ್‌ಜೆಟ್ ಸಹ, ದೆಹಲಿಯಲ್ಲಿನ ಎಟಿಸಿ ದಟ್ಟಣೆಯಿಂದಾಗಿ ಎಲ್ಲ ನಿರ್ಗಮನ ಮತ್ತು ಆಗಮನಗಳು “ಪ್ರಭಾವಿತವಾಗಬಹುದು” ಎಂದು ತಿಳಿಸಿದೆ.
ಏರ್ ಇಂಡಿಯಾ ಸಂಸ್ಥೆಯು, “ನಮ್ಮ ನಿಯಂತ್ರಣಕ್ಕೆ ಮೀರಿದ ಈ ಅನಿರೀಕ್ಷಿತ ಅಡಚಣೆಯಿಂದಾಗಿ ಉಂಟಾದ ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ. ನಿಮ್ಮ ತಾಳ್ಮೆಯನ್ನು ಶ್ಲಾಘಿಸುತ್ತೇವೆ. ವಿಮಾನ ನಿಲ್ದಾಣದಲ್ಲಿ ನಮ್ಮ ಸಿಬ್ಬಂದಿ ಪ್ರಯಾಣಿಕರ ಅನಾನುಕೂಲತೆಯನ್ನು ಕಡಿಮೆ ಮಾಡಲು ತಕ್ಷಣದ ನೆರವು ನೀಡುತ್ತಿದ್ದಾರೆ” ಎಂದು ಹೇಳಿದೆ.

ಪ್ರಮುಖ ಸುದ್ದಿ :-   ತೃಣಮೂಲ ಬಂಡಾಯ ಸಂಸದರನ್ನು ಯಾಕೆ ಆಹ್ವಾನಿಸಿದ್ದೀರಿ ? : ಸರ್ವಪಕ್ಷ ಸಭೆಗೆ ಕೆಲಕಾಲ ಬಹಿಷ್ಕರಿಸಿದ ವಿಪಕ್ಷಗಳು

ಪ್ರಯಾಣಿಕರ ಪರದಾಟ:
ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಉದ್ದನೆಯ ಸರತಿ ಸಾಲುಗಳು, ವಿಮಾನದೊಳಗೆ ವಿಸ್ತೃತ ಕಾಯುವ ಸಮಯ ಮತ್ತು ಅನೇಕ ಬಾರಿ ಮರು-ನಿಗದಿಗೊಳಿಸುವ ತೊಂದರೆಗಳನ್ನು ಎದುರಿಸಿದರು. ಹಲವರು ವಿಮಾನಯಾನ ಸಂಸ್ಥೆಗಳಿಂದ ಸ್ಪಷ್ಟತೆ ಇಲ್ಲದೆ ಗಂಟೆಗಟ್ಟಲೆ ಸಿಲುಕಿರುವ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ದೂರಿದ್ದಾರೆ.
ಸಾಮಾನ್ಯ ಸ್ಥಿತಿಗೆ ಮರಳಲು ಹಲವು ಗಂಟೆಗಳ ಅಗತ್ಯ:
ತಾಂತ್ರಿಕ ತಜ್ಞರು ಸಂಪೂರ್ಣ ಕಾರ್ಯವನ್ನು ಪುನಃಸ್ಥಾಪಿಸಲು ಪ್ರಯತ್ನಗಳನ್ನು ಮುಂದುವರೆಸಿದ್ದರೂ, ಇದನ್ನು (Backlog) ನಿವಾರಿಸಲು ಹಲವಾರು ಗಂಟೆಗಳು ಬೇಕಾಗಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಲಕ್ನೋ, ಜೈಪುರ, ಚಂಡೀಗಢ ಮತ್ತು ಅಮೃತಸರ ವಿಮಾನ ನಿಲ್ದಾಣಗಳಲ್ಲೂ ವಿಳಂಬದ ಪರಿಣಾಮ ಉಂಟಾಗುವ ನಿರೀಕ್ಷೆಯಿದೆ.
“ಎಟಿಸಿ ಕಾರ್ಯಾಚರಣೆಗಳು ಸ್ಥಿರವಾಗಿವೆ, ಆದರೆ ಸಾಮಾನ್ಯಕ್ಕಿಂತ ನಿಧಾನವಾಗಿವೆ. ಪುನಃಸ್ಥಾಪನೆ ಕಾರ್ಯ ಪ್ರಗತಿಯಲ್ಲಿದೆ,” ಎಂದು ಮಧ್ಯಾಹ್ನದ ಸುಮಾರಿಗೆ ಹಿರಿಯ ಎಎಐ ಅಧಿಕಾರಿಯೊಬ್ಬರು ತಿಳಿಸಿದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement