ಉಜ್ಜಯಿನಿ (ಮಧ್ಯಪ್ರದೇಶ): ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಭೀಕರ ಘಟನೆಯೊಂದು ನಡೆದಿದ್ದು, ನಾಲ್ವರು ದುಷ್ಕರ್ಮಿಗಳು ಒಬ್ಬ ಕಾರ್ಮಿಕನಿಂದ ಕೇವಲ ₹500 ದೋಚಲು ಆತನ ಕಾಲನ್ನು ರೈಲ್ವೆ ಹಳಿಯ ಮೇಲೆ ಇಟ್ಟು ರೈಲಿಗೆ ಸಿಲುಕಿಸಿ ಕತ್ತರಿಸಿದ್ದಾರೆ. ಬಳಿಕ ಆತನ ಕಾಲನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಕೊಂಡೊಯ್ಯಲು ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಬುಧವಾರ ಈ ದುರಂತ ಸಂಭವಿಸಿದೆ. ಲಖಾ ಎಂಬ ಕಾರ್ಮಿಕನನ್ನು ನಾಲ್ವರು ವ್ಯಕ್ತಿಗಳು ಹೊಡೆದು ₹500 ದೋಚಿದ್ದಾರೆ. ನಂತರ ಆತನ ಕಾಲನ್ನು ಬಲವಂತವಾಗಿ ರೈಲ್ವೆ ಹಳಿಯ ಮೇಲೆ ಇಟ್ಟು, ಹಾದುಹೋಗುತ್ತಿದ್ದ ರೈಲಿಗೆ ಸಿಕ್ಕಿಸಿ ತುಂಡರಿಸಿದ್ದಾರೆ. ಘಟನೆಯ ಬಳಿಕ ಆತ ಪ್ರಜ್ಞೆ ಕಳೆದುಕೊಂಡಿದ್ದ.
ಪೊಲೀಸರ ನಿರ್ಲಕ್ಷ್ಯದ ಆರೋಪ:
ಕೆಲವು ಗಂಟೆಗಳ ನಂತರ ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ಆಗಮಿಸಿ ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ತುಂಡರಿಸಿದ ಕಾಲು ಅಲ್ಲೇ ರೈಲ್ವೆ ಹಳಿಗಳ ಬಳಿ ಇದೆ, ದಯವಿಟ್ಟು ಅದನ್ನೂ ತೆಗೆದುಕೊಂಡು ಬನ್ನಿ ಎಂದು ಲಖಾ ಗೋಗರೆದರೂ, ಪೊಲೀಸರು ಆತನ ಮಾತನ್ನು ಕೇಳದೆ, ಕೇವಲ ಗಾಯಗೊಂಡ ವ್ಯಕ್ತಿಯನ್ನು ಮಾತ್ರ ಆಸ್ಪತ್ರೆಗೆ ಸೇರಿಸಿದ್ದಾರೆ ಎನ್ನಲಾಗಿದೆ.
ಮರುದಿನ ಬೆಳಿಗ್ಗೆಯಾದರೂ, ಲಖಾ ಆಸ್ಪತ್ರೆಯಲ್ಲಿದ್ದಾಗ ಬೇರೊಂದು ತಂಡದ ಪೊಲೀಸರಿಗೆ ಕಾಲು ಹಳಿ ಬಳಿಯೇ ಇರುವುದನ್ನು ಕಂಡು ಅದನ್ನು ಮನವರಿಕೆ ಮಾಡಿದ್ದಾರೆ. ಅದರ ನಂತರ, ಸಹಾಯಕ ಸಬ್ ಇನ್ಸ್‌ಪೆಕ್ಟರ್ ಒಬ್ಬರು ಆ ಕಾಲನ್ನು ಪ್ಲಾಸ್ಟಿಕ್ ಚೀಲದಲ್ಲಿ ತಂದಿದ್ದಾರೆ. ಆದರೆ, ಅಲ್ಲಿಗೆ ಬರಲು 12 ಗಂಟೆಗಳಿಗೂ ಹೆಚ್ಚು ಸಮಯ ಕಳೆದಿದ್ದರಿಂದ, ತುಂಡರಿಸಿದ ಕಾಲನ್ನು ಮರಳಿ ಜೋಡಿಸುವ ಯಾವುದೇ ಶಸ್ತ್ರಚಿಕಿತ್ಸೆಯ ಪ್ರಯತ್ನ ಮಾಡಲು ಸಾಧ್ಯವಾಗಲಿಲ್ಲ.
ಕಾರ್ಮಿಕನ ಕಣ್ಣೀರ ಕಥೆ…
ಉಜ್ಜಯಿನಿಯ ಚರಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಾಲದುನಾ ಗ್ರಾಮದ ನಿವಾಸಿ ಲಖಾ ತಮ್ಮ ಭೀಕರ ಅನುಭವವನ್ನು ಹೇಳಿಕೊಂಡಿದ್ದಾರೆ:
“ನಾನು ನಿಲ್ದಾಣದ ಬಳಿ ಕೂಲಿಯಾಗಿ ಕೆಲಸ ಮಾಡುತ್ತೇನೆ. ರಾತ್ರಿ 8 ಗಂಟೆ ಸುಮಾರಿಗೆ ಊಟ ತೆಗೆದುಕೊಂಡು ದೇವಾಸ್ ಗೇಟ್‌ಗೆ ಹಿಂತಿರುಗುತ್ತಿದ್ದೆ. ಆವಾಗ ನಾಲ್ಕು ಜನ ನನ್ನನ್ನು ತಡೆದು, ಹೊಡೆದು ನನ್ನಲ್ಲಿದ್ದ ₹500 ಕದ್ದರು. ಕಣ್ತೆರೆದು ನೋಡಿದಾಗ, ನನ್ನ ಒಂದು ಕಾಲು ಇರಲಿಲ್ಲ, ಇನ್ನೊಂದರಿಂದ ರಕ್ತ ಸೋರುತ್ತಿತ್ತು. ನಾನು ಕೂಗಿದರೂ ಯಾರೂ ಬರಲಿಲ್ಲ. ಎರಡು ಗಂಟೆಗಳ ನಂತರ ಪೊಲೀಸರು ಬಂದು ಆಂಬ್ಯುಲೆನ್ಸ್‌ಗೆ ಹಾಕಿದರು. ನನ್ನ ಕಾಲನ್ನೂ ತೆಗೆದುಕೊಂಡು ಬನ್ನಿ ಎಂದು ನಾನು ಬೇಡಿಕೊಂಡರೂ ಅವರು ಕೇಳಲಿಲ್ಲ” ಎಂದು ಹೇಳಿದ್ದಾರೆ.
ಪೊಲೀಸ್ ಅಧಿಕಾರಿಗಳ ಪ್ರತಿಕ್ರಿಯೆ:
ಹಿರಿಯ ಜಿಆರ್‌ಪಿ ಅಧಿಕಾರಿಗಳನ್ನು ಈ ಘಟನೆಯ ಬಗ್ಗೆ ಕೇಳಿದಾಗ, ಅವರು ಕಾರ್ಮಿಕನನ್ನು ದರೋಡೆ ಮಾಡಲಾಗಿದೆ ಎಂಬುದನ್ನು ನಿರಾಕರಿಸಿದರು. ಆದರೆ, ಆ ಕಾಲನ್ನು ಏಕೆ ಬಿಟ್ಟು ಹೋದರು ಅಥವಾ ಅದನ್ನು ಮರಳಿ ತರಲು ಏಕೆ ಅರ್ಧ ದಿನ ವಿಳಂಬವಾಯಿತು ಎಂಬುದಕ್ಕೆ ಯಾವುದೇ ಸೂಕ್ತ ಉತ್ತರವನ್ನು ನೀಡಲಿಲ್ಲ.
ದರೋಡೆ ನಡೆದಿಲ್ಲ ಎಂದು ಹೇಳುವ ಮೂಲಕ ಜಿಆರ್‌ಪಿ ಅಧಿಕಾರಿಗಳು ಪ್ರಕರಣ ದಾಖಲಿಸುವುದನ್ನೂ ವಿಳಂಬ ಮಾಡಿದ್ದಾರೆ ಎನ್ನಲಾಗಿದೆ. ಸುದ್ದಿಗಾರರು ಜಿಆರ್‌ಪಿ ಪೊಲೀಸ್ ವರಿಷ್ಠಾಧಿಕಾರಿ ಪದ್ಮವಿಲೋಚನ ಶುಕ್ಲಾ ಅವರನ್ನು ಕೇಳಿದಾಗ, ಯಾವುದೇ ನಿರ್ಲಕ್ಷ್ಯ ಆಗಿದೆಯೇ ಎಂದು ಕೇಳಿದ್ದಕ್ಕೆ, ಅವರು “ಸಾಕ್ಷ್ಯ ನೀಡಿ, ನಾವು ಕ್ರಮ ಕೈಗೊಳ್ಳುತ್ತೇವೆ” ಎಂದು ಎಂದಷ್ಟೆ ಹೇಳಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ