ಅಹಮದಾಬಾದ್: ಗುಜರಾತ್ ಭಯೋತ್ಪಾದನಾ ನಿಗ್ರಹ ದಳ(ATS)ವು ಮೂವರು ಐಸಿಸ್ (ISIS) ಉಗ್ರರನ್ನು ಬಂಧಿಸಿದ್ದು, ಅವರಲ್ಲಿ ಓರ್ವ ವೈದ್ಯ ಅತಿ ಹೆಚ್ಚು ವಿಷಕಾರಿಯಾದ ‘ರಿಸಿನ್’ (Ricin) ರಾಸಾಯನಿಕ ತಯಾರಿಕೆಗೆ ಸಿದ್ಧತೆ ನಡೆಸಿದ್ದ ಎಂಬ ಸಂಗತಿ ಸೋಮವಾರ ಬಹಿರಂಗವಾಗಿದೆ. ಈ ವೈದ್ಯ ದೇಶದ ಮೂರು ಪ್ರಮುಖ ನಗರಗಳಲ್ಲಿ ಹೆಚ್ಚು ಜನಸಂದಣಿಯಿರುವ ಆಹಾರ ಮಾರುಕಟ್ಟೆಗಳು ಸೇರಿದಂತೆ ಹಲವು ಸ್ಥಳಗಳ ಮೇಲೆ ಕಣ್ಗಾವಲು ಇರಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಈ ವೈದ್ಯ ಕಳೆದ ಆರು ತಿಂಗಳಿಂದ ದೆಹಲಿಯ ಆಜಾದ್‌ಪುರ ಮಂಡಿ, ಅಹಮದಾಬಾದ್‌ನ ನರೋಡ ಹಣ್ಣಿನ ಮಾರುಕಟ್ಟೆ ಮತ್ತು ಲಕ್ನೋದಲ್ಲಿರುವ ಆರ್‌ಎಸ್‌ಎಸ್ ಕಚೇರಿಗಳ ಮೇಲೆ ಪತ್ತೆ ಕಾರ್ಯ ನಡೆಸಿದ್ದ. ಅತಿ ಹೆಚ್ಚು ಸಾರ್ವಜನಿಕ ಚಟುವಟಿಕೆ ಮತ್ತು ದಟ್ಟಣೆಯಿರುವ ಈ ಸ್ಥಳಗಳನ್ನು ಸಂಭಾವ್ಯ ದಾಳಿಗೆ ಪ್ರಮುಖ ಗುರಿಗಳಾಗಿ ಪರಿಗಣಿಸಲಾಗಿತ್ತು.
ಬಂಧಿತ ವೈದ್ಯನನ್ನು ಹೈದರಾಬಾದ್ ಮೂಲದ ಅಹ್ಮದ್ ಮೊಹಿಯುದ್ದೀನ್ ಸೈಯದ್ (35) ಎಂದು ಗುರುತಿಸಲಾಗಿದೆ. ಹರಳು ಸಸ್ಯದ ಬೀಜಗಳಿಂದ (Castor Plant Seeds) ಹೊರತೆಗೆಯಲಾಗುವ ಪ್ರೋಟೀನ್‌ನಿಂದ ತಯಾರಾಗುವ ‘ರಿಸಿನ್’ ಅನ್ನು ದಾಳಿಗಾಗಿ ಶಸ್ತ್ರಾಸ್ತ್ರವಾಗಿ (Weaponise) ಪರಿವರ್ತಿಸುವ ಮಾರ್ಗಗಳನ್ನು ಆತ ಅನ್ವೇಷಿಸುತ್ತಿದ್ದ ಎಂದು ಎಟಿಎಸ್ ಹೇಳಿದೆ.
ನವೆಂಬರ್ 7 ರಂದು ಗಾಂಧಿನಗರದ ಅದಲಾಜ್ ಬಳಿ ಸಯ್ಯದ್ ನನ್ನು ಬಂಧಿಸಲಾಯಿತು ಮತ್ತು ಆತನಿಂದ ಎರಡು ಗ್ಲಾಕ್ ಪಿಸ್ತೂಲ್‌ಗಳು, ಒಂದು ಬೆರೆಟ್ಟಾ ಪಿಸ್ತೂಲ್, 30 ಜೀವಂತ ಗುಂಡುಗಳು ಮತ್ತು ನಾಲ್ಕು ಲೀಟರ್ ಕ್ಯಾಸ್ಟರ್ ಆಯಿಲ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗುಂಪಿನ ನಿರ್ವಾಹಕ ಅಬು ಖದೀಜಾ ಅಫ್ಘಾನಿಸ್ತಾನದಿಂದ ಕಾರ್ಯನಿರ್ವಹಿಸುತ್ತಿದ್ದಾನೆ ಮತ್ತು ಇಸ್ಲಾಮಿಕ್ ಸ್ಟೇಟ್ ಖೋರಾಸನ್ ಪ್ರಾಂತ್ಯ (ISKP) ನೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಅವರು ಡ್ರೋನ್‌ಗಳನ್ನು ಬಳಸಿಕೊಂಡು ಪಾಕಿಸ್ತಾನ ಗಡಿಯುದ್ದಕ್ಕೂ ಶಸ್ತ್ರಾಸ್ತ್ರಗಳ ವಿತರಣೆಯನ್ನು ಸಂಘಟಿಸಿದ್ದಾರೆ ಎಂದು ನಂಬಲಾಗಿದೆ.
ಎಟಿಎಸ್ ತನಿಖೆ
“ಒಂದು ದೊಡ್ಡ ಭಯೋತ್ಪಾದಕ ದಾಳಿಯನ್ನು ಕಾರ್ಯಗತಗೊಳಿಸಲು, ಅಹ್ಮದ್ ಮೊಹಿಯುದ್ದೀನ್ ಸೈಯದ್ ‘ರೈಜಿನ್’ (ರಿಸಿನ್) ಎಂಬ ಅತ್ಯಂತ ಮಾರಕ ವಿಷವನ್ನು ತಯಾರಿಸಲು ಸಿದ್ಧತೆ ನಡೆಸಿದ್ದ. ಈ ಉದ್ದೇಶಕ್ಕಾಗಿ, ಆತ ಈಗಾಗಲೇ ಅಗತ್ಯ ಸಂಶೋಧನೆಗಳನ್ನು ಪ್ರಾರಂಭಿಸಿ, ಉಪಕರಣಗಳು, ಕಚ್ಚಾ ವಸ್ತುಗಳನ್ನು ಸಂಗ್ರಹಿಸಿ, ವಿಷದ ತಯಾರಿಕೆಗೆ ಬೇಕಾದ ಆರಂಭಿಕ ರಾಸಾಯನಿಕ ಸಂಸ್ಕರಣೆಯನ್ನು ಪ್ರಾರಂಭಿಸಿದ್ದ” ಎಂದು ಗುಜರಾತ್ ಎಟಿಎಸ್ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ರಿಸಿನ್ ದೊಡ್ಡ ಪ್ರಮಾಣದಲ್ಲಿ ಮಾರಕವಾಗಿದ್ದರೂ, ತಜ್ಞರ ಪ್ರಕಾರ ರಿಸಿನಿನ ಅಪರಾಧ ಬಳಕೆಯ ಪ್ರಕರಣಗಳು ವಿರಳವಾಗಿವೆ ಮತ್ತು ಸಕಾಲಕ್ಕೆ ವೈದ್ಯಕೀಯ ನೆರವು ಸಿಕ್ಕರೆ ಚಿಕಿತ್ಸೆ ಸಾಧ್ಯವಿದೆ.
ಐಸಿಸ್ ಸಂಪರ್ಕ
ಎಟಿಎಸ್ ಮತ್ತು ಕೇಂದ್ರೀಯ ಸಂಸ್ಥೆಗಳು ವಶಪಡಿಸಿಕೊಂಡ ವಸ್ತುಗಳು ಮತ್ತು ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ವಿಶ್ಲೇಷಿಸುತ್ತಿದ್ದು, ರಾಸಾಯನಿಕಗಳ ಮೂಲ ಮತ್ತು ರಿಸಿನ್‌ನ ಯಾವುದೇ ಪ್ರಯೋಗಾತ್ಮಕ ತಯಾರಿಕೆ ಪ್ರಾರಂಭವಾಗಿದೆಯೇ ಎಂದು ತನಿಖೆ ನಡೆಸುತ್ತಿದೆ.
ಉತ್ತರ ಪ್ರದೇಶದ ಇಬ್ಬರು ಮತ್ತು ಹೈದರಾಬಾದ್‌ನ ಓರ್ವ ಸೇರಿದಂತೆ ಮೂವರು ಉಗ್ರರನ್ನು ಕೇಂದ್ರೀಯ ಸಂಸ್ಥೆಗಳ ಸಹಯೋಗದೊಂದಿಗೆ ಬಂಧಿಸಲಾಗಿದೆ. ಬಂಧಿತರು ರಾಜ್ಯಗಳಾದ್ಯಂತ ಕಾರ್ಯನಿರ್ವಹಿಸುತ್ತಿರುವ ಐಸಿಸ್-ಸಂಯೋಜಿತ ದೊಡ್ಡ ನೆಟ್‌ವರ್ಕ್ ಮತ್ತು ಹಲವಾರು ‘ಸ್ಲೀಪರ್ ಸೆಲ್‌ಗಳ’ ಭಾಗವಾಗಿದ್ದಾರೆ ಎಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ. ಉಳಿದ ಇಬ್ಬರು ಬಂಧಿತ ಉಗ್ರರನ್ನು ಉತ್ತರ ಪ್ರದೇಶದ ಆಜಾದ್ ಸುಲೇಮಾನ್ ಶೇಖ್ ಮತ್ತು ಮೊಹಮ್ಮದ್ ಸುಹೈಲ್ ಮೊಹಮ್ಮದ್ ಸಲೀಂ ಎಂದು ಗುರುತಿಸಲಾಗಿದೆ.
ಅಹ್ಮದ್ ಮೊಹಿಯುದ್ದೀನ್ ಸೈಯದ್ ಚೀನಾದಿಂದ ಎಂಬಿಬಿಎಸ್ ಪದವಿ ಪಡೆದಿದ್ದಾನೆ. ಈತ ಐಸಿಸ್‌ನ ಪ್ರಾದೇಶಿಕ ಶಾಖೆಯಾದ ಇಸ್ಲಾಮಿಕ್ ಸ್ಟೇಟ್ – ಖೊರಾಸಾನ್ ಪ್ರಾವಿನ್ಸ್ (ISKP) ಸದಸ್ಯನಾದ ಅಬು ಖಾದಿಮ್ ಜೊತೆ ಸಂಪರ್ಕದಲ್ಲಿದ್ದ ಎನ್ನಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ