
ಅಹಮದಾಬಾದ್: ಗುಜರಾತ್ ಹೈಕೋರ್ಟ್ ಡಿಸೆಂಬರ್ 1, 2025 ರಂದು ಅಸಾಮಾನ್ಯ ವಿಚ್ಛೇದನ ಪ್ರಕರಣದ ವಿಚಾರಣೆ ನಡೆಸಲಿದೆ. ತನ್ನ ಪತ್ನಿಯು ಬೀದಿ ನಾಯಿಗಳನ್ನು ಅಪಾರ್ಟ್‌ಮೆಂಟ್‌ಗೆ ತಂದು, ಅವುಗಳೊಂದಿಗೆ ಅದೇ ಹಾಸಿಗೆಯಲ್ಲಿ ಮಲಗುವಂತೆ ಒತ್ತಾಯಿಸುತ್ತಾರೆ ಎಂದು ಆರೋಪಿಸಿ ಪತಿಯು ವಿವಾಹ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ.
2006 ರಲ್ಲಿ ವಿವಾಹವಾದ ಈ ಕ್ರೈಸ್ತ ದಂಪತಿ ಒಂದು ದಶಕದ ಹಿಂದೆ ಪ್ರಾರಂಭವಾದ ದೀರ್ಘ ಕಾನೂನು ಹೋರಾಟದಲ್ಲಿ ಸಿಲುಕಿದ್ದಾರೆ. ಪತಿಯು ಹಲವಾರು ಕ್ರೌರ್ಯ ಮತ್ತು ಅವಮಾನದ ಘಟನೆಗಳನ್ನು ಉಲ್ಲೇಖಿಸಿದ್ದಾರೆ. ಆದರೆ, ಅವರ ಮುಖ್ಯ ದೂರು ಪತ್ನಿಯ “ಬೀದಿ ನಾಯಿಗಳ ಮೇಲಿನ ಅತಿಯಾದ ಒಲವು” ಎಂಬುದಾಗಿದೆ. ಈ ಗೀಳು ಅವರ ವೈವಾಹಿಕ ಸಾಮರಸ್ಯವನ್ನು ಹಾಳು ಮಾಡಿದೆ ಎಂದು ಪತಿಯು ಪ್ರತಿಪಾದಿಸಿದ್ದಾರೆ ಎಂದು ʼಲಾ ಚಕ್ರʼ ವರದಿ ಮಾಡಿದೆ.
ಪತಿಯ ಆರೋಪಗಳು…
ವಸತಿ ಸಮುದಾಯದ ಸ್ಪಷ್ಟ ಆಕ್ಷೇಪಣೆಗಳ ಹೊರತಾಗಿಯೂ ಪತ್ನಿಯು ಬೀದಿ ನಾಯಿಯನ್ನು ಮನೆಗೆ ತಂದಾಗ ದಾಂಪತ್ಯವು ಹಳಸಲು ಶುರುವಾಯಿತು. ನಾಯಿಯಿಂದ ಸುರಕ್ಷತೆ ಮತ್ತು ನೈರ್ಮಲ್ಯ ಸಮಸ್ಯೆಗಳಾಗಿದ್ದು, ಆರ್ಥಿಕ ನಿರ್ಬಂಧಗಳಿಂದಾಗಿ ಸಾಕುವುದು ಕಷ್ಟಕರವಾಗಿತ್ತು ಎಂದು ಪತಿ ಆರೋಪಿಸಿದ್ದಾರೆ.
ಪತ್ನಿಯು ಹೆಚ್ಚು ನಾಯಿಗಳನ್ನು ಮನೆಗೆ ತರುತ್ತಲೇ ಇದ್ದಳು. ಇತರ ನಿವಾಸಿಗಳು ನಾಯಿ ಕಡಿತ ಮತ್ತು ನೈರ್ಮಲ್ಯವಿಲ್ಲದ ವಾತಾವರಣದ ಬಗ್ಗೆ ದೂರು ನೀಡಿದ ನಂತರ ಪೊಲೀಸರ ಕರೆ ಮತ್ತು ಸಾಮಾಜಿಕ ಬಹಿಷ್ಕಾರಕ್ಕೆ ಕಾರಣವಾಗಿ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತು ಎಂದು ಅವರು ಹೇಳಿದ್ದಾರೆ.
ಪತ್ನಿ ನಾಯಿಗಳಿಗೆ ಆಹಾರ ನೀಡಿ ಅದನ್ನು ಸ್ವಚ್ಛಗೊಳಿಸಲು ತನ್ನನ್ನು ಒತ್ತಾಯಿಸಿದ್ದಾಳೆ. ಅವುಗಳನ್ನು ತಮ್ಮ ಹಾಸಿಗೆಯ ಮೇಲೆ ಮಲಗಲು ಬಿಡುತ್ತಿದ್ದಳು ಎಂದು ಪತಿ ಹೇಳಿಕೊಂಡಿದ್ದಾರೆ. ಒಂದು ನಾಯಿ, ತಾನು ತನ್ನ ಪತ್ನಿಯ ಪಕ್ಕದಲ್ಲಿ ಮಲಗಲು ಪ್ರಯತ್ನಿಸಿದರೆ ಕಚ್ಚುತ್ತಿತ್ತು ಎಂದು ಅವರು ಆರೋಪಿಸಿದ್ದಾರೆ. ಈ ಅನುಭವ “ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸಾತ್ಮಕವಾಗಿತ್ತು” ಎಂದು ಅವರು ವಿವರಿಸಿದ್ದಾರೆ ಎಂದು ವರದಿ ಹೇಳಿದೆ.

ಏಪ್ರಿಲ್ ಫೂಲ್ ಪ್ರಾಂಕ್
ವರದಿ ಪ್ರಕಾರ, ಪತಿಯು ಏಪ್ರಿಲ್ ಫೂಲ್ ಪ್ರಾಂಕ್ ಅನ್ನು ಸಹ ವಿಚ್ಛೇದನಕ್ಕೆ ಆಧಾರವಾಗಿ ಉಲ್ಲೇಖಿಸಿದ್ದಾರೆ. ಪತ್ನಿ ರೇಡಿಯೋ ಕಾರ್ಯಕ್ರಮದಲ್ಲಿ ತನಗೆ ಅನೈತಿಕ ಸಂಬಂಧವಿದೆ ಎಂದು ಸುಳ್ಳು ಕರೆ ಮಾಡಿ ಅವಮಾನಿಸಿದ್ದರು. ಅದು ಪ್ರಸಾರವಾದ ನಂತರ ಸ್ನೇಹಿತರು ಮತ್ತು ಸಹೋದ್ಯೋಗಿಗಳ ಮುಂದೆ ತನಗೆ ಅವಮಾನ ಮತ್ತು ಹಾಸ್ಯಕ್ಕೊಳಗಾಗಬೇಕಾಯಿತು ಎಂದು ಪತಿ ಹೇಳಿದ್ದಾರೆ.
ಪತ್ನಿಯ ವರ್ತನೆಯಿಂದ ಉಂಟಾದ ಮಾನಸಿಕ ಒತ್ತಡವು ಮಧುಮೇಹ ಸೇರಿದಂತೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಯಿತು. ಇದು ಅಂತಿಮವಾಗಿ 2011 ರಲ್ಲಿ ವೈವಾಹಿಕ ಮನೆಯನ್ನು ತೊರೆಯುವಂತೆ ಮಾಡಿತು ಎಂದು ಅವರು ಹೇಳಿದ್ದಾರೆ.
ಪತಿ ಮೊದಲು 2012 ರಲ್ಲಿ ಬೆಂಗಳೂರಿನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು, ಆದರೆ ನ್ಯಾಯಾಂಗದ ವ್ಯಾಪ್ತಿ ಸಮಸ್ಯೆಗಳಿಂದಾಗಿ 2016 ರಲ್ಲಿ ಅದನ್ನು ಹಿಂತಿರುಗಿಸಲಾಯಿತು.
ನಂತರ ಅವರು ಅಹಮದಾಬಾದ್‌ನಲ್ಲಿ ಮರು-ಅರ್ಜಿ ಸಲ್ಲಿಸಿದರು. ಆದರೆ, ಕುಟುಂಬ ನ್ಯಾಯಾಲಯವು ಫೆಬ್ರವರಿ 2024 ರಲ್ಲಿ ಅದನ್ನು ವಜಾಗೊಳಿಸಿತು. ಪತ್ನಿಯ ಕ್ರಿಯೆಗಳು ಕ್ರೌರ್ಯ ಅಥವಾ ಹಿಂಸೆ ನೀಡುವ ಉದ್ದೇಶವನ್ನು ಹೊಂದಿದ್ದವು ಎಂದು ಸಾಬೀತುಪಡಿಸಲು ವಿಫಲರಾಗಿದ್ದಾರೆ ಎಂದು ನ್ಯಾಯಾಲಯ ಹೇಳಿತ್ತು.
ಹೈಕೋರ್ಟ್‌ನಲ್ಲಿ ಮೇಲ್ಮನವಿ
ಗುಜರಾತ್ ಹೈಕೋರ್ಟ್ ಮಾರ್ಚ್ 2024 ರಲ್ಲಿ ಅವರ ಮೇಲ್ಮನವಿಯನ್ನು ಅಂಗೀಕರಿಸಿತು ಮತ್ತು ಪತ್ನಿಗೆ ನೋಟಿಸ್ ಜಾರಿ ಮಾಡಿತು. ನವೆಂಬರ್ 11, 2025 ರಂದು,ವಿಭಾಗೀಯ ಪೀಠವು ಎರಡೂ ಪಕ್ಷಗಳು ಸಂಭವನೀಯ ಇತ್ಯರ್ಥಕ್ಕಾಗಿ ಪ್ರಯತ್ನಿಸಲು ಪ್ರೋತ್ಸಾಹಿಸಿತು.
ಇತ್ತೀಚಿನ ವಿಚಾರಣೆಯಲ್ಲಿ, ಪತಿಯ ವಕೀಲರು ಪ್ರಕರಣದ ಇತ್ಯರ್ಥಕ್ಕಾಗಿ ಪತ್ನಿ ₹ 2 ಕೋಟಿ ಬೇಡಿಕೆ ಇಡುತ್ತಿದ್ದಾರೆ, ಆದರೆ ಪತಿಯು ತನ್ನ ಉದ್ಯೋಗ ಮತ್ತು ಆರ್ಥಿಕ ಸ್ಥಿತಿಯನ್ನು ಉಲ್ಲೇಖಿಸಿ ಕೇವಲ ₹ 15 ಲಕ್ಷ ನೀಡಲು ಸಿದ್ಧರಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಆದರೆ, ಪತ್ನಿಯ ವಕೀಲರು ಪತಿಯು ಯಾವುದೇ ಕ್ರೌರ್ಯವನ್ನು ಸಾಬೀತುಪಡಿಸಲು ವಿಫಲರಾಗಿದ್ದಾರೆ ಮತ್ತು ಅವರ ಕುಟುಂಬದ ಆಸ್ತಿ ಮತ್ತು ಆದಾಯವನ್ನು ಪರಿಗಣಿಸಿ, ಅವರು “ಸೂಕ್ತವಾದ” ಪರಿಹಾರ ಮೊತ್ತವನ್ನು ನೀಡಲು ಶಕ್ತರಾಗಿದ್ದಾರೆ ಎಂದು ವಾದಿಸಿದ್ದಾರೆ.
ಪತ್ನಿ ಎಲ್ಲ ಆರೋಪಗಳನ್ನು ನಿರಾಕರಿಸಿದ್ದು, ತಾನು ಎಂದಿಗೂ ಬೀದಿ ನಾಯಿಗಳನ್ನು ಎತ್ತಿಕೊಂಡು ಬಂದಿಲ್ಲ ಎಂದು ಹೇಳಿದ್ದಾರೆ. ವಾಸ್ತವವಾಗಿ, ಬೀದಿ ಪ್ರಾಣಿಗಳನ್ನು ನೋಡಿಕೊಳ್ಳುವ ಟ್ರಸ್ಟ್‌ನೊಂದಿಗೆ ಕೆಲಸ ಮಾಡುತ್ತಿದ್ದ ಪತಿಯೇ ನಾಯಿಗಳನ್ನು ಮನೆಗೆ ತಂದಿದ್ದಾಗಿ ಅವರು ಹೇಳಿಕೊಂಡಿದ್ದಾರೆ.
ರೇಡಿಯೋ ಪ್ರಾಂಕ್ ಅನ್ನು ಆಯೋಜಿಸಿದ್ದಾಗಿ ಅವರು ಒಪ್ಪಿಕೊಂಡರು ಆದರೆ ಅದರಿಂದ ತಾವುದೇ ತೊಂದರೆಯಾಗಿಲ್ಲ ಮತ್ತು ಪತಿಯ ಮಾನಹಾನಿ ಮಾಡಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ, ಅವರ ಆರೋಗ್ಯ ಸಮಸ್ಯೆಗಳಲ್ಲಿ ತಮ್ಮ ಯಾವುದೇ ಪಾತ್ರವಿಲ್ಲ ಎಂದು ಅವರು ಹೇಳಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ