
ಬೆಳಗಾವಿ : ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಗ್ರಾಮದಲ್ಲಿರುವ ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ ಕೇವಲ ಎರಡು ದಿನಗಳ ಅವಧಿಯಲ್ಲಿ ಒಟ್ಟು 28 ಕೃಷ್ಣ ಮೃಗಗಳು ಏಕಾಏಕಿ ಮೃತಪಟ್ಟಿದ್ದು, ಆತಂಕಕ್ಕೆ ಕಾರಣವಾಗಿದೆ.
ನವೆಂಬರ್ 13 ರಂದು ಮೃಗಾಲಯದಲ್ಲಿ 8 ಕೃಷ್ಣ ಮೃಗಗಳ ಮೃತಪಟ್ಟಿದ್ದವು. ಇಂದು ಶನಿವಾರ (ನವೆಂಬರ್ 15) ಒಂದೇ ದಿನ 20 ಕೃಷ್ಣ ಮೃಗಗಳು ಮತ್ತೆ ಮೃತಪಟ್ಟಿವೆ ಎಂದು ವರದಿಯಾಗಿವೆ.
ನವೆಂಬರ್ 13 ರಂದು ಸಾವಿಗೀಡಾದ ಕೃಷ್ಣಮೃಗಳ ಮರಣೋತ್ತರ ಪರೀಕ್ಷೆ ನಡೆಸಿ, ಸ್ಯಾಂಪಲ್ ಸಂಗ್ರಹಿಸಿ ಮೈಸೂರಿನ ಲ್ಯಾಬ್ಗೆ ರವಾನೆ ಮಾಡಲಾಗಿದೆ. ಲ್ಯಾಬ್ನಿಂದ ವರದಿ ಬರುವ ಮುನ್ನವೇ ಇಂದು, ಶನಿವಾರ ಮತ್ತೆ 20 ಕೃಷ್ಣಮೃಗಗಳು ಸಾವಿಗೀಡಾಗಿವೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಕೃಷ್ಣ ಮೃಗಗಳು ಬ್ಯಾಕ್ಟೀರಿಯಾ ಸೋಂಕಿನಿಂದ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಮೃಗಾಲಯದಲ್ಲಿ ಒಟ್ಟು 38 ಕೃಷ್ಣಮೃಗಳಿದ್ದು ಆ ಪೈಕಿ 28 ಸಾವಿಗೀಡಾಗಿವೆ. ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

ತನಿಖೆಗೆ ಆದೇಶ
ಕರ್ನಾಟಕ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಸಾವಿನ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಸಾವಿನ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು.
ಪ್ರಾಥಮಿಕ ವರದಿಗಳು ಈ ಜಿಂಕೆಗಳು ಸಾಂಕ್ರಾಮಿಕ ರೋಗದಿಂದ ಸಾವಿಗೀಡಾಗಿವೆ ಎಂದು ಸೂಚಿಸುತ್ತವೆ ಮತ್ತು ಮೃಗಾಲಯದಲ್ಲಿನ ಯಾವುದೇ ಇತರ ಪ್ರಾಣಿಗಳಿಗೆ ಸೋಂಕು ತಗುಲದಂತೆ ತಡೆಯಲು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅರಣ್ಯ ಸಚಿವರು ತಿಳಿಸಿದ್ದಾರೆ.
ಈ ಸಾವುಗಳು ಕಲುಷಿತ ನೀರು ಮತ್ತು ಆಹಾರವನ್ನು ಸೇವಿಸುವುದರಿಂದ ಸಂಭವಿಸಿವೆಯೇ ಅಥವಾ ಬೆಕ್ಕುಗಳಂತಹ ಸಾಕು ಪ್ರಾಣಿಗಳಿಂದ ರೋಗ ಹರಡಿದೆಯೇ ಎಂಬುದನ್ನು ತನಿಖೆ ಮಾಡಲು ಮತ್ತು ಸೂಕ್ತ ಕ್ರಮ ಕೈಗೊಳ್ಳಲು ತಜ್ಞರ ಸಮಿತಿಯನ್ನು ರಚಿಸಬೇಕು ಎಂದು ಹೇಳಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ