ಇದು ಅಮೆರಿಕದ ನಿದ್ದೆಗೆಡಿಸುವ ಆಫರ್‌….! ಭಾರತಕ್ಕೆ ಮಹತ್ವದ ಸ್ಟೆಲ್ತ್ ಯುದ್ಧ ವಿಮಾನದ ತಂತ್ರಜ್ಞಾನ ನೀಡುವ ಆಫರ್‌ ನೀಡಿದ ರಷ್ಯಾ…!

ನವದೆಹಲಿ : ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರು ಮುಂದಿನ ತಿಂಗಳು ಭಾರತಕ್ಕೆ ಭೇಟಿ ನೀಡುವ ಮೊದಲು, ರಷ್ಯಾವು ಮಹತ್ವದ ಮಿಲಿಟರಿ ತಂತ್ರಜ್ಞಾನದ ಆಫರ್‌ ಅನ್ನು ಭಾರತಕ್ಕೆ ನೀಡಿದೆ. ಭಾರತದ ಬಹುಕಾಲದ ಮಿತ್ರರಾಷ್ಟ್ರವಾದ ರಷ್ಯಾ, ದೇಶದ ಭವಿಷ್ಯದ ಯುದ್ಧ ವಿಮಾನಗಳ ಅಗತ್ಯಗಳನ್ನು ಪೂರೈಸಲು, ಹೊಸ ಪೀಳಿಗೆಯ ಐದನೇ ತಲೆಮಾರಿನ (Fifth-Generation) ಎಸ್‌ಯು-57 (Su-57) ಸ್ಟೆಲ್ತ್ ಫೈಟರ್ ಜೆಟ್‌ನ ತಂತ್ರಜ್ಞಾನವನ್ನು ಸಂಪೂರ್ಣ ಮತ್ತು ಅನಿಯಂತ್ರಿತವಾಗಿ ನೀಡುವ ಆಫರ್‌ ನೀಡಿದೆ.
ರಷ್ಯಾದ ಸರ್ಕಾರಿ ಸ್ವಾಮ್ಯದ ರಕ್ಷಣಾ ಸಮೂಹ ಸಂಸ್ಥೆ ರೋಸ್ಟೆಕ್ (Rostec) ನ ಸಿಇಒ ಆದ ಸೆರ್ಗೆ ಚೆಮೆಜೋವ್ ಅವರ ಪ್ರಕಾರ, ಆರಂಭದಲ್ಲಿ ರಷ್ಯಾದಲ್ಲಿ ತಯಾರಿಸಿದ ಎಸ್‌ಯು-57 ಯುದ್ಧ ವಿಮಾನಗಳನ್ನು ಪೂರೈಸುವುದು ಮತ್ತು ನಂತರ ಹಂತ ಹಂತವಾಗಿ ಅದರ ಉತ್ಪಾದನೆಯನ್ನು ಭಾರತಕ್ಕೆ ವರ್ಗಾಯಿಸುವುದು ಈ ಪ್ರಸ್ತಾಪದ ಮುಖ್ಯ ಉದ್ದೇಶವಾಗಿದೆ.
ಇದೇ ವೇಳೆ, ರಷ್ಯಾ ತನ್ನ ಏಕ-ಎಂಜಿನ್ ಸ್ಟೆಲ್ತ್ ಫೈಟರ್ ವಿಮಾನವಾದ ಎಸ್‌ಯು-75 ಚೆಕ್‌ಮೇಟ್ (Su-75 Checkmate) ಅನ್ನು ಸಹ ಭಾರತಕ್ಕೆ ನೀಡುವ ಸಾಧ್ಯತೆಯಿದೆ ಎಂದು ವರದಿಗಳು ಹೇಳಿವೆ.
ಇಷ್ಟೊಂದು ಉನ್ನತ ಮಟ್ಟದ ರಕ್ಷಣಾ ತಂತ್ರಜ್ಞಾನವನ್ನು ಬೇರೆ ಯಾವುದೇ ರಾಷ್ಟ್ರವು ಈವರೆಗೆ ಭಾರತಕ್ಕೆ ನೀಡಲು ಮುಂದಾಗಿಲ್ಲ. ಒಂದು ವೇಳೆ ಭಾರತ ಈ ಪ್ರಸ್ತಾಪವನ್ನು ಒಪ್ಪಿಕೊಂಡರೆ, ಪಾಶ್ಚಿಮಾತ್ಯ ರಾಷ್ಟ್ರಗಳು ಭಾರತದ ಜೊತೆಗೆ ಹಲವು ಬಾರಿ ಹಂಚಿಕೊಳ್ಳಲು ನಿರಾಕರಿಸಿದ ತಂತ್ರಜ್ಞಾನದಿಂದ ಭಾರತವು ಸ್ವತಂತ್ರವಾಗಿ ಸುಧಾರಿತ ಸ್ಟೆಲ್ತ್ ಯುದ್ಧ ವಿಮಾನಗಳನ್ನು ನಿರ್ಮಿಸಲು ಸಾಧ್ಯವಾಗುತ್ತದೆ.

ಪ್ರಮುಖ ಸುದ್ದಿ :-   ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ; ಕಕ್ಷೆ ತಲುಪಿದ ಸ್ಕೈರೂಟ್‌ನ ಖಾಸಗಿ ರಾಕೆಟ್ ‘ವಿಕ್ರಂ-1’

ರಷ್ಯಾ ಹೇಳಿದ್ದೇನು…?
ದುಬೈ ಏರ್ ಶೋ 2025 ರ ಸಂದರ್ಭದಲ್ಲಿ ಸುದ್ದಿಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ರೋಸ್ಟೆಕ್ ಸಿಇಒ ಚೆಮೆಜೋವ್, ಎಂಜಿನ್, ಸೆನ್ಸರ್‌ಗಳು, ಸ್ಟೆಲ್ತ್ ಸಾಮಗ್ರಿಗಳು ಮತ್ತು ಹೆಚ್ಚಿನ ತಂತ್ರಜ್ಞಾನ ಸೇರಿದಂತೆ ಸಂಪೂರ್ಣ ಐದನೇ ತಲೆಮಾರಿನ ಯುದ್ಧ ವಿಮಾನಗಳ ತಂತ್ರಜ್ಞಾನ ಹಾಗೂ ಅದರ ನಿರ್ಮಾಣ ವ್ಯವಸ್ಥೆಯನ್ನು ಭಾರತಕ್ಕೆ ನೀಡಲು ರಷ್ಯಾ ಸಿದ್ಧವಿದೆ ಎಂದು ಹೇಳಿದ್ದಾರೆ.
ಎರಡೂ ರಾಷ್ಟ್ರಗಳ ನಡುವಿನ ದಶಕಗಳಷ್ಟು ಹಳೆಯದಾದ ಸಹಕಾರವನ್ನು ಉಲ್ಲೇಖಿಸಿದ ಅವರು, ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಭಾರತದ ಕಡೆಯಿಂದ ಬರುವ ಯಾವುದೇ ಬೇಡಿಕೆ “ಸಂಪೂರ್ಣವಾಗಿ ಸ್ವೀಕಾರಾರ್ಹ” ಎಂದು ಭರವಸೆ ನೀಡಿದರು. “ಭಾರತ ಮತ್ತು ರಷ್ಯಾ ಹಲವು ವರ್ಷಗಳಿಂದ ಪಾಲುದಾರ ರಾಷ್ಟ್ರಗಳಾಗಿವೆ. ಭಾರತವು ನಿರ್ಬಂಧಗಳಲ್ಲಿದ್ದಾಗಲೂ ನಾವು ಅದರ ಭದ್ರತೆಗಾಗಿ ಶಸ್ತ್ರಾಸ್ತ್ರಗಳನ್ನು ಪೂರೈಸಿದ್ದೇವೆ. ಇಂದು, ನಾವು ಅದೇ ವಿಧಾನವನ್ನು ಮುಂದುವರಿಸಿದ್ದೇವೆ, ಭಾರತಕ್ಕೆ ಅಗತ್ಯವಿರುವ ಮಿಲಿಟರಿ ಉಪಕರಣಗಳನ್ನು ಪೂರೈಸುತ್ತಿದ್ದೇವೆ ಮತ್ತು ಸಹಕಾರವನ್ನು ಇನ್ನಷ್ಟು ಹೆಚ್ಚಿಸುವಲ್ಲಿ ನಮ್ಮ ಪರಸ್ಪರ ಹಿತಾಸಕ್ತಿಗಳನ್ನು ಖಚಿತಪಡಿಸಿಕೊಳ್ಳುತ್ತಿದ್ದೇವೆ ಎಂದು ಚೆಮೆಜೋವ್ ತಿಳಿಸಿದರು.

ನಂತರ, ರಷ್ಯಾದ ಸರ್ಕಾರಿ ಶಸ್ತ್ರಾಸ್ತ್ರ ರಫ್ತುದಾರ ರೋಸೊಬೊರೊನೆಕ್ಸ್ಪೋರ್ಟ್ (Rosoboronexport) ನ ಹಿರಿಯ ಪ್ರತಿನಿಧಿಯೊಬ್ಬರು ಮಾತನಾಡಿ, ಮುಂದಿನ ಪೀಳಿಗೆಯ ವಿಮಾನಗಳಿಗಾಗಿ ಏರ್ ವೆಪನ್‌ಗಳ ಉತ್ಪಾದನೆಗೆ ಪರವಾನಗಿಯನ್ನು ಭಾರತಕ್ಕೆ ರಷ್ಯಾವು ನೀಡುತ್ತಿದೆ ಎಂದು ತಿಳಿಸಿದರು. ಎಂಜಿನ್‌ಗಳು, ಆಪ್ಟಿಕ್ಸ್, ಎಇಎಸ್‌ಎ (AESA) ರೇಡಾರ್, ಎಐ (AI) ಅಂಶಗಳು, ಕಡಿಮೆ-ಸಿಗ್ನೇಚರ್ ತಂತ್ರಜ್ಞಾನಗಳು ಮತ್ತು ಆಧುನಿಕ ಏರ್ ವೆಪನ್‌ಗಳು ಸೇರಿದಂತೆ ಹೊಸ-ಪೀಳಿಗೆಯ ತಂತ್ರಜ್ಞಾನಗಳ ‘ತಂತ್ರಜ್ಞಾನ ವರ್ಗಾವಣೆ’ ಮತ್ತು ‘ತಾಂತ್ರಿಕ ಕಲಿಕೆ’ ಯನ್ನು ರಷ್ಯಾ ಭಾರತಕ್ಕೆ ನೀಡುತ್ತಿದೆ ಎಂದು ಅವರು ಒತ್ತಿ ಹೇಳಿದರು.
ಎಸ್‌ಯು-75 ಚೆಕ್‌ಮೇಟ್ ಪ್ರಸ್ತಾಪ
ನಿವೃತ್ತ ಭಾರತೀಯ ವಾಯುಪಡೆಯ ಸ್ಕ್ವಾಡ್ರನ್ ಲೀಡರ್ ಮತ್ತು ರಕ್ಷಣಾ ವಿಶ್ಲೇಷಕ ವಿಜಯಿಂದರ್ ಕೆ. ಠಾಕೂರ್ ಅವರು, ರಷ್ಯಾದ ಈ ಹೊಸ ಪ್ರಸ್ತಾಪದಲ್ಲಿ ಏಕ-ಎಂಜಿನ್ ಎಸ್‌ಯು-75 ಚೆಕ್‌ಮೇಟ್ ಅನ್ನು ಸಹ ಸೇರಿಸುವ ಸಾಧ್ಯತೆಯಿದೆ ಎಂದಿದ್ದಾರೆ. ರಷ್ಯಾವು ಎಸ್‌ಯು-75 ಉತ್ಪಾದನೆಯನ್ನು ಭಾರತದಲ್ಲಿ ಸ್ಥಾಪಿಸಲು ಉತ್ಸುಕತೆ ತೋರಿಸಿದೆ ಮತ್ತು ಅದಕ್ಕೆ ಭಾರತವು ಅತ್ಯಂತ ತಾರ್ಕಿಕ ಆಯ್ಕೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪುತಿನ್ ಅವರ ಭಾರತ ಭೇಟಿ
ರಷ್ಯಾದ ಅಧ್ಯಕ್ಷ ಪುಟಿನ್ ಅವರು 23ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲು ಡಿಸೆಂಬರ್‌ನಲ್ಲಿ ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ. ಈ ಭೇಟಿಯಲ್ಲಿ ರಕ್ಷಣಾ ವಲಯದಲ್ಲಿ ಪ್ರಮುಖ ಘೋಷಣೆಗಳು ಹೊರಬೀಳುವ ಸಾಧ್ಯತೆ ಇದ್ದು, ಅದಕ್ಕಾಗಿ ರಾಜತಾಂತ್ರಿಕ ಸಿದ್ಧತೆಗಳು ಈಗಾಗಲೇ ನಡೆಯುತ್ತಿವೆ.

ಪ್ರಮುಖ ಸುದ್ದಿ :-   ಮೊದಲು ಹಾಲಿನಲ್ಲಿ ನಿದ್ದೆ ಮಾತ್ರೆ...ನಂತರ ಹಾಸಿಗೆ ಮೇಲೆ ವಿಷದ ಹಾವು ! ಗಂಡನ ಕೊಲೆಗೆ ಪತ್ನಿಯ ಭಯಾನಕ ಸಂಚು...!

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement