
ಚೀನಾವು 78,000 ಟನ್ ತೂಕದ, ಪರಮಾಣು ವಿಸ್ಫೋಟಗಳನ್ನೂ ತಡೆದುಕೊಳ್ಳುವ ಸಾಮರ್ಥ್ಯ ಇರುವ ಬೃಹತ್ ಕೃತಕ ದ್ವೀಪವೊಂದನ್ನು ನಿರ್ಮಿಸುತ್ತಿದೆ…! ಇದು ಸಂಚಾರಿ (mobile) ದ್ವೀಪವಾಗಿದ್ದು, ಇದು ನೀರಿನಲ್ಲಿ ಅರ್ಧ ಮುಳುಗುವ ಹಾಗೂ ಎರಡು ಹಲ್‌ಗಳನ್ನು (twin-hull) ಹೊಂದಿರುವ ಪ್ಲಾಟ್‌ಫಾರ್ಮ್ ಆಗಿದೆ.
ಈ ದ್ವೀಪವು ಹೊಸ ಸರಬರಾಜುಗಳ ಅಗತ್ಯವಿಲ್ಲದೆ ನಾಲ್ಕು ತಿಂಗಳವರೆಗೆ 238 ಜನರಿಗೆ ಆಶ್ರಯ ನೀಡಬಲ್ಲದು. ಇದು ಚೀನಾದ ಫುಜಿಯಾನ್ (Fujian) ವಿಮಾನ ವಾಹಕ ನೌಕೆಯಷ್ಟೇ ದೊಡ್ಡದಾಗಿದೆ.
ದ್ವೀಪವು 138 ಮೀಟರ್ ಉದ್ದ ಮತ್ತು 85 ಮೀಟರ್ ಅಗಲವಿರಲಿದ್ದು, ಮುಖ್ಯ ಡೆಕ್ ನೀರಿನಿಂದ 45 ಮೀಟರ್ ಎತ್ತರದಲ್ಲಿರುತ್ತದೆ. ಇದು 6 ರಿಂದ 9 ಮೀಟರ್ ವರೆಗಿನ ಒರಟಾದ ಸಮುದ್ರ ಅಲೆಗಳನ್ನು ಮತ್ತು ಅತ್ಯಂತ ಪ್ರಬಲ ಉಷ್ಣವಲಯದ ಚಂಡಮಾರುತವಾದ ವರ್ಗ 17 ರ (Category 17) ಟೈಫೂನ್‌ಗಳನ್ನು ಕೂಡ ತಡೆದುಕೊಳ್ಳಲಿದೆಯಂತೆ. ಯೋಜನೆಯ ವಿನ್ಯಾಸ ಮತ್ತು ನಿರ್ಮಾಣ ಕಾರ್ಯಗಳು ಭರದಿಂದ ಸಾಗುತ್ತಿದ್ದು, 2028 ರ ವೇಳೆಗೆ ಇದನ್ನು ಕಾರ್ಯಾಚರಣೆಗೆ ಸಿದ್ಧಪಡಿಸುವ ಗುರಿ ಹೊಂದಲಾಗಿದೆ.

ಪರಮಾಣು ರಕ್ಷಣೆ:
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್‌ನ ವರದಿಯ ಪ್ರಕಾರ, ಈ ದ್ವೀಪ ನಿರ್ಮಾಣಕ್ಕೆ “ಮೆಟಾಮೆಟೀರಿಯಲ್” ಸ್ಯಾಂಡ್‌ವಿಚ್ ಪ್ಯಾನೆಲ್‌ಗಳನ್ನು ಬಳಸಲಾಗುತ್ತಿದೆ ಈ ತಂತ್ರಜ್ಞಾನವು “ಭಯಾನಕ ಆಘಾತಗಳನ್ನು (catastrophic shocks) ಸೌಮ್ಯ ಒತ್ತಡಗಳಾಗಿ ಪರಿವರ್ತಿಸುವ” ಸಾಮರ್ಥ್ಯ ಹೊಂದಿರುತ್ತವೆ. ಈ ವಿನ್ಯಾಸವು ಮಿಲಿಟರಿ ಪರಮಾಣು ಸ್ಫೋಟ ಪ್ರತಿರೋಧಕ್ಕಾಗಿ ಇರುವ GJB 1060.1-1991 ಎಂಬ ಮಿಲಿಟರಿ ಮಾನದಂಡವನ್ನು ಉಲ್ಲೇಖಿಸುತ್ತದೆ. ಅಂದರೆ, ಈ ರಚನೆಯು ಪರಮಾಣು ದಾಳಿಯ ಅತ್ಯಂತ ಕೆಟ್ಟ ಸನ್ನಿವೇಶವನ್ನೂ ನಿಭಾಯಿಸಬಲ್ಲದು.
ಅಧಿಕೃತವಾಗಿ ಆಳ ಸಮುದ್ರದ ಆಲ್-ವೆದರ್ ರೆಸಿಡೆಂಟ್ ಫ್ಲೋಟಿಂಗ್ ರಿಸರ್ಚ್ ಫೆಸಿಲಿಟಿ ಎಂದು ಕರೆಯಲ್ಪಡುವ ಇದು ಚೀನಾದ “ದೂರದ ಸಮುದ್ರ ತೇಲುವ ಮೊಬೈಲ್ ದ್ವೀಪ”ವಾಗಿದ್ದು, ಇದು ಒಂದು ದಶಕದ ಸಂಶೋಧನೆ ಮತ್ತು ಯೋಜನೆಯ ನಂತರ ಬಂದಿದೆ.
ಈ ದ್ವೀಪವನ್ನು ಚೀನಾವು ನಾಗರಿಕ ವಿಜ್ಞಾನ ಮೂಲಸೌಕರ್ಯ ಎಂದು ಹೇಳುತ್ತಿದ್ದರೂ, ಅದರ ವಿನ್ಯಾಸವು ಮಿಲಿಟರಿ ಮಾನದಂಡಗಳನ್ನು ಆಧರಿಸಿರುವುದು ಗಮನಾರ್ಹವಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ