ಅಮೆರಿಕ ವೀಸಾ ನಿರಾಕರಣೆ ; ಮನನೊಂದು ವೈದ್ಯೆ ಆತ್ಮಹತ್ಯೆ

ಹೈದರಾಬಾದ್ : ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ 38 ವರ್ಷದ ಮಹಿಳಾ ವೈದ್ಯೆಯೊಬ್ಬರು ಅಮೆರಿಕ ವೀಸಾ ಸಿಗದ ಕಾರಣ ಖಿನ್ನತೆಯಿಂದ ಹೈದರಾಬಾದ್‌ನಲ್ಲಿರುವ ತಮ್ಮ ಫ್ಲಾಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಈ ಘಟನೆಯು ಶನಿವಾರ ಬೆಳಕಿಗೆ ಬಂದಿದ್ದು, ನಗರದ ಬೇರೆ ಪ್ರದೇಶದಲ್ಲಿ ನೆಲೆಸಿರುವ ಅವರ ಕುಟುಂಬ ಸದಸ್ಯರು ಬಾಗಿಲು ತಟ್ಟಿದರೂ ಯಾವುದೇ ಪ್ರತಿಕ್ರಿಯೆ ಬಾರದೆ ಕಾರಣ ಬಾಗಿಲನ್ನು ಒಡೆದು ಒಳಗೆ ಪ್ರವೇಶಿಸಿದ್ದಾರೆ. ಆಗ ವೈದ್ಯೆ ಮೃತಪಟ್ಟಿರುವುದು ಕಂಡುಬಂದಿದೆ.
ಪೊಲೀಸರ ಪ್ರಕಾರ, ಡಾ. ರೋಹಿಣಿ ಎಂದು ಗುರುತಿಸಲಾದ ವೈದ್ಯೆಯು ಬಾಗಿಲು ತೆರೆಯದೇ ಇದ್ದಾಗ, ಅವರ ಮನೆಗೆಲಸದವರು ಕುಟುಂಬ ಸದಸ್ಯರಿಗೆ ಈ ವಿಷಯ ತಿಳಿಸಿದ್ದಾರೆ. ಆಗ ಮನೆಯವರು ಬಂದ ನಂತರ ಬಾಗಿಲು ಒಡೆದು ಒಳ ಪ್ರವೇಶಿಸಿದಾಗ ಗೊತ್ತಾಗಿದೆ.
ಮರಣೋತ್ತರ ಪರೀಕ್ಷೆ (ಪೋಸ್ಟ್‌ಮಾರ್ಟಂ) ನಂತರ ಮೃತದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ವೈದ್ಯೆಯು ಶುಕ್ರವಾರ ರಾತ್ರಿ ಅತಿಯಾದ ನಿದ್ರೆ ಮಾತ್ರೆಗಳನ್ನು ಸೇವಿಸಿರಬಹುದು ಅಥವಾ ಇಂಜೆಕ್ಷನ್ ತೆಗೆದುಕೊಂಡಿರಬಹುದು ಎಂದು ಪ್ರಾಥಮಿಕ ಮಾಹಿತಿಯ ಆಧಾರದ ಮೇಲೆ ಅಧಿಕಾರಿಗಳು ಶಂಕಿಸಿದ್ದಾರೆ. ಆದರೆ, ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿರುವುದರಿಂದ ಸಾವಿಗೆ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಉದ್ಧವ್‌ಗೆ ಭಾರಿ ಹಿನ್ನಡೆ ; ಶಿಂಧೆ ಬಣದ ಜೊತೆ ಶಿವಸೇನೆ(ಯುಬಿಟಿ) 6 ಸಂಸದರ ವಿಲೀನಕ್ಕೆ ಲೋಕಸಭೆ ಸ್ಪೀಕರ್ ಅನುಮೋದನೆ

ಖಿನ್ನತೆ ಹಾಗೂ ವೀಸಾ ನಿರಾಕರಣೆಯ ಉಲ್ಲೇಖ
ಮನೆಯಲ್ಲಿ ಸೂಸೈಡ್ ನೋಟ್ (ಆತ್ಮಹತ್ಯಾ ಪತ್ರ) ಪತ್ತೆಯಾಗಿದ್ದು, ಅದರಲ್ಲಿ ಅವರು ಖಿನ್ನತೆಗೆ ಒಳಗಾಗಿರುವುದಾಗಿ ಬರೆದಿದ್ದಾರೆ. ಅಲ್ಲದೆ, ವೀಸಾ ಅರ್ಜಿಯ ನಿರಾಕರಣೆಯ ಬಗ್ಗೆಯೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ವೈದ್ಯೆಯ ತಾಯಿಯಾದ ಲಕ್ಷ್ಮಿ ಅವರು, ತಮ್ಮ ಮಗಳು ಉದ್ಯೋಗಕ್ಕಾಗಿ ಅಮೆರಿಕಕ್ಕೆ ಹೋಗಲು ಬಹಳ ಕಾತರಳಾಗಿದ್ದಳು. ಆದರೆ, ವೀಸಾ ನಿರಾಕರಣೆಯಾದ ಕಾರಣ ತೀವ್ರ ಖಿನ್ನತೆಗೆ ಒಳಗಾಗಿದ್ದಳು ಎಂದರು. ಡಾ. ರೋಹಿಣಿ ಹತ್ತಿರದಲ್ಲಿ ಗ್ರಂಥಾಲಯಗಳು ಇರುವುದರಿಂದ ಹೈದರಾಬಾದ್‌ನ ಪದ್ಮ ರಾವ್ ನಗರದಲ್ಲಿ ನೆಲೆಸಿದ್ದರು. ಆಕೆ ಆಂತರಿಕ ಔಷಧ ವಿಜ್ಞಾನದಲ್ಲಿ (Internal Medicine) ವಿಶೇಷ ತಜ್ಞರಾಗಲು ಬಯಸಿದ್ದರು ಎಂದು ತಾಯಿ ಲಕ್ಷ್ಮಿ ಹೇಳಿದರು.
“ಅವಳು ಅತ್ಯಂತ ಬುದ್ಧಿವಂತ ವಿದ್ಯಾರ್ಥಿನಿ. 2005 ಮತ್ತು 2010 ರ ನಡುವೆ ಕಿರ್ಗಿಸ್ತಾನ್‌ನಲ್ಲಿ ತನ್ನ ಎಂ.ಬಿ.ಬಿ.ಎಸ್ (MBBS) ಪೂರ್ಣಗೊಳಿಸಿದ್ದಳು. ಆಕೆಯ ಶೈಕ್ಷಣಿಕ ದಾಖಲೆ ಅತ್ಯುತ್ತಮವಾಗಿತ್ತು ಮತ್ತು ಭವಿಷ್ಯದ ಬಗ್ಗೆ ದೊಡ್ಡ ಕನಸುಗಳನ್ನು ಹೊಂದಿದ್ದಳು,” ಎಂದು ಲಕ್ಷ್ಮಿ ಹೇಳಿದ್ದಾರೆ.

ಭಾರತದಲ್ಲಿಯೇ ಉಳಿದು ವೈದ್ಯಕೀಯ ವೃತ್ತಿ ಮಾಡುವಂತೆ ತಾನು ಸಲಹೆ ನೀಡಿದ್ದರೂ, ಅಮೆರಿಕದಲ್ಲಿ ಪ್ರತಿ ದಿನದ ರೋಗಿಗಳ ಸಂಖ್ಯೆ ಸೀಮಿತವಾಗಿದೆ ಮತ್ತು ಆದಾಯ ಉತ್ತಮವಾಗಿದೆ ಎಂದು ಮಗಳು ವಾದಿಸಿದ್ದಳು ಎಂದು ಲಕ್ಷ್ಮಿ ತಿಳಿಸಿದರು. ವೀಸಾ ಅನುಮೋದನೆಗಾಗಿ ಕಾಯುತ್ತಿದ್ದಾಗ ನಿರಾಕರಣೆಯಾದ ಕಾರಣ ಆಕೆಯ ನಿರಾಶೆ ಮತ್ತು ಖಿನ್ನತೆಯು ಇತ್ತೀಚಿನ ವಾರಗಳಲ್ಲಿ ಹೆಚ್ಚಾಗಿತ್ತು. ಇದು ಆಕೆಯನ್ನು ಮಾನಸಿಕವಾಗಿ ದಣಿಸಿ, ಒಂಟಿಯಾಗಿ ಮಾಡಿತ್ತು ಎಂದು ತಾಯಿ ಹೇಳಿದ್ದಾರೆ.
ಡಾ. ರೋಹಿಣಿ ಮದುವೆಯಾಗಿರಲಿಲ್ಲ ಮತ್ತು ತಮ್ಮ ಸಂಪೂರ್ಣ ಗಮನವನ್ನು ವೈದ್ಯಕೀಯ ವೃತ್ತಿಗೆ ಮೀಸಲಿಟ್ಟಿದ್ದರು ಎಂದು ಲಕ್ಷ್ಮಿ ತಿಳಿಸಿದರು. ಈ ಸಂಬಂಧ, ಚಿಲಕಲ್‌ಗುಡಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ಉಪವಾಸ ಸತ್ಯಾಗ್ರಹದ 21ನೇ ದಿನ : ಜಂತರ್ ಮಂತರ್‌ನಿಂದ ಸೋನಂ ವಾಂಗ್ಚುಕ್‌ರನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement