ಕಲಬುರಗಿ: ಇನ್ನೋವಾ ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಸೇರಿ ಮೂವರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಜಿಲ್ಲೆಯ ಜೇವರ್ಗಿಯ ಗೌನಳ್ಳಿ ಕ್ರಾಸ್ ಬಳಿ ಮಂಗಳವಾರ ನಡೆದಿದೆ ಎಂದು ವರದಿಯಾಗಿದೆ.
ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಮಹಾಂತೇಶ ಬೀಳಗಿ (51) ಹಾಗೂ ಇವರ ಸಹೋದರ ಸಂಬಂಧಿಗಳಾದ ಶಂಕರ ಬೀಳಗಿ (55) ಹಾಗೂ ಈರಣ್ಣ (53) ಎಂಬವರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಚಾಲಕ ಹಾಗೂ ಮತ್ತೊಬ್ಬರಿಗೆ ಗಾಯಗಳಾಗಿವೆ.
ಮಹಾಂತೇಶ ಬೀಳಗಿ ಅವರು ತಮ್ಮ ಸಂಬಂಧಿಕರ ಮದುವೆಗೆಂದು ಕಲಬುರಗಿಗೆ ಕಾರಿನಲ್ಲಿ ಹೊರಟಿದ್ದರು ಎನ್ನಲಾಗಿದೆ. ಜೇವರ್ಗಿ ತಾಲೂಕಿನ ಗೌನಳ್ಳಿ ಕ್ರಾಸ್ ಬಳಿ ಕಾರಿನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಸ್ಥಳದಲ್ಲಿಯೇ ಶಂಕರ ಬೀಳಗಿ ಮತ್ತು ಈರಣ್ಣ ಬೀಳಗಿ ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ತೀವ್ರವಾಗಿ ಗಾಯಗೊಂಡ ಮಹಾಂತೇಶ ಬೀಳಗಿ ಮತ್ತು ಇತರರನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೆ ಬೆಸ್ಕಾಂ ಎಂಡಿ ಮಹಾಂತೇಶ ಬೀಳಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮಹಾಂತೇಶ ಬೀಳಗಿ ಅವರು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ, ದಾವಣಗೆರೆ, ಉಡುಪಿ ಜಿಲ್ಲಾಧಿಕಾರಿ ಸೇರಿದಂತೆ ಕರ್ನಾಟಕದ ಬೇರೆ ಬೇರೆ ಕಡೆ ಕಾರ್ಯನಿರ್ವಹಿಸಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ