ಥಾಯ್ಲೆಂಡ್‌ನ ಬೌದ್ಧ ದೇವಾಲಯವೊಂದರಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಸತ್ತು ಹೋಗಿದ್ದಾರೆಂದು ನಂಬಲಾದ ಮಹಿಳೆಯೊಬ್ಬರು ಅಂತ್ಯಸಂಸ್ಕಾರಕ್ಕೆ ಮುನ್ನವೇ ಶವಪೆಟ್ಟಿಗೆಯೊಳಗೆ ಜೀವಂತವಾಗಿ ಪತ್ತೆಯಾಗಿದ್ದಾರೆ.
ಈ ಘಟನೆ ಬ್ಯಾಂಕಾಕ್‌ನ ಹೊರವಲಯದಲ್ಲಿರುವ ನೊಂಥಬುರಿಯ ವಾಟ್ ರಾಟ್ ಪ್ರಕೋಂಗ್ ಥಾಮ್ (Wat Rat Prakhong Tham) ದೇವಾಲಯದಲ್ಲಿ ನಡೆದಿದೆ. ಒಂದು ಪಿಕಪ್ ಟ್ರಕ್‌ನ ಹಿಂಭಾಗದಲ್ಲಿ ಇರಿಸಲಾಗಿದ್ದ ಬಿಳಿ ಶವಪೆಟ್ಟಿಗೆಯಿಂದ ಅಸಾಮಾನ್ಯ ಚಲನೆಯನ್ನು ದೇವಾಲಯದ ಸಿಬ್ಬಂದಿ ಗಮನಿಸಿದ್ದಾರೆ.
ದೇವಾಲಯವು ನಂತರ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, 65 ವರ್ಷದ ಆ ಮಹಿಳೆ ಶವಪೆಟ್ಟಿಗೆಯೊಳಗೆ ಮಲಗಿರುವುದು ಕಂಡುಬಂದಿದೆ. ಆದರೆ ಬಟ್ಟೆಯಿಂದ ಮುಚ್ಚಿದ್ದರೂ ಉಸಿರಾಡುತ್ತಾ, ಚಲಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸಿದೆ. ಮೊದಲಿಗೆ, ಶವಪೆಟ್ಟಿಗೆಯೊಳಗೆ ಲಘು ‘ಬಡಿಯುವ’ ಶಬ್ದ ಕೇಳಿದ ನಂತರ ಸಿಬ್ಬಂದಿಗೆ ಅನುಮಾನ ಶುರುವಾಗಿದೆ. ದೇವಾಲಯದ ಪ್ರಧಾನ ವ್ಯವಸ್ಥಾಪಕ ಪೈರಾತ್ ಸೂಡ್ತೂಪ್ (Pairat Soodthoop) ಅವರು, ಆ ಶಬ್ದದಿಂದ ತಾವು ಗೊಂದಲ ಮತ್ತು ಆತಂಕಕ್ಕೆ ಒಳಗಾಗಿದ್ದೆವು ಎಂದು ಹೇಳಿದ್ದಾರೆ.
“ನನಗೆ ಸ್ವಲ್ಪ ಆಶ್ಚರ್ಯವಾಯಿತು, ಆದ್ದರಿಂದ ಶವಪೆಟ್ಟಿಗೆಯನ್ನು ತೆರೆಯಲು ಹೇಳಿದೆವು, ಆಗ ಎಲ್ಲರೂ ಬೆಚ್ಚಿಬಿದ್ದರು” ಎಂದು ಪೈರಾತ್ ಹೇಳಿದ್ದಾರೆ. “ಮಹಿಳೆ ಕಣ್ಣುಗಳನ್ನು ಸ್ವಲ್ಪ ತೆರೆಯುತ್ತಾ, ಶವಪೆಟ್ಟಿಗೆಯ ಬದಿಯಲ್ಲಿ ಬಡಿಯುತ್ತಿರುವುದನ್ನು ನಾನು ನೋಡಿದೆ. ಅವರು ಬಹುಶಃ ಬಹಳ ಸಮಯದಿಂದ ಬಡಿಯುತ್ತಿರಬೇಕು ಎಂದು ಅವರು ಹೇಳಿದ್ದಾರೆ.
ಮಹಿಳೆಯ ಸಹೋದರ ನೀಡಿರುವ ಮಾಹಿತಿಯ ಪ್ರಕಾರ, ಅವರು ಕಳೆದ ಎರಡು ವರ್ಷಗಳಿಂದ ಹಾಸಿಗೆ ಹಿಡಿದಿದ್ದರು ಮತ್ತು ಅವರ ಆರೋಗ್ಯ ಸ್ಥಿತಿ ತುಂಬಾ ಹದಗೆಟ್ಟಿತ್ತು. ಎರಡು ದಿನಗಳ ಹಿಂದೆ, ಅವರ ಉಸಿರಾಟ ನಿಂತುಹೋಗಿದೆ ಎಂದು ಕುಟುಂಬದವರು ಭಾವಿಸಿ, ಅವರು ಮರಣ ಹೊಂದಿದ್ದಾರೆ ಎಂದು ತೀರ್ಮಾನಿಸಿದ್ದರು.
ಮಹಿಳೆಯ ಸಹೋದರರು ಆಕೆಯನ್ನು ಶವಪೆಟ್ಟಿಗೆಯಲ್ಲಿ ಇಟ್ಟು, ಅವರ ಅಂಗಾಂಗ ದಾನದ ಇಚ್ಛೆಯಂತೆ ಬ್ಯಾಂಕಾಕ್‌ನ ಆಸ್ಪತ್ರೆಯೊಂದಕ್ಕೆ ಸುಮಾರು 500 ಕಿಲೋಮೀಟರ್ ದೂರ ಪ್ರಯಾಣಿಸಿದ್ದಾರೆ. ಆದರೆ, ಅಧಿಕೃತ ಮರಣ ಪ್ರಮಾಣಪತ್ರವಿಲ್ಲದೆ ದೇಹವನ್ನು ಸ್ವೀಕರಿಸಲು ಆಸ್ಪತ್ರೆ ನಿರಾಕರಿಸಿದೆ. ನಂತರ ಅವರು ಉಚಿತ ಅಂತ್ಯಸಂಸ್ಕಾರಕ್ಕಾಗಿ ದೇವಾಲಯವನ್ನು ಸಂಪರ್ಕಿಸಿದ್ದಾರೆ. ಆದರೆ, ಅಗತ್ಯ ದಾಖಲೆಗಳಿಲ್ಲದೆ ಅಂತ್ಯಸಂಸ್ಕಾರವನ್ನು ನಡೆಸಲು ಸಾಧ್ಯವಿಲ್ಲ ಎಂದು ದೇವಾಲಯದ ಸಿಬ್ಬಂದಿ ತಿಳಿಸಿದ್ದಾರೆ.
ಪೈರಾತ್ ಅವರು ಮರಣ ಪ್ರಮಾಣಪತ್ರ ಪಡೆಯುವ ಪ್ರಕ್ರಿಯೆ ಬಗ್ಗೆ ವಿವರಿಸುತ್ತಿದ್ದಾಗ, ಶವಪೆಟ್ಟಿಗೆಯಿಂದ ಈ ಅನಿರೀಕ್ಷಿತ ಬಡಿಯುವ ಶಬ್ದ ಕೇಳಿಬಂದಿದೆ. ಮಹಿಳೆ ಜೀವಂತವಾಗಿದ್ದಾರೆ ಎಂದು ಅರಿತ ತಕ್ಷಣ, ದೇವಾಲಯದ ಸಿಬ್ಬಂದಿ ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದರು. ತುರ್ತು ಚಿಕಿತ್ಸೆ ಖಚಿತಪಡಿಸಿಕೊಳ್ಳಲು ಅವರ ವೈದ್ಯಕೀಯ ವೆಚ್ಚವನ್ನು ಭರಿಸಲು ಸಹ ದೇವಾಲಯವು ಒಪ್ಪಿಕೊಂಡಿದೆ.
ಈ ಘಟನೆಯಿಂದ ಪ್ರತ್ಯಕ್ಷದರ್ಶಿಗಳು ಮತ್ತು ಸಿಬ್ಬಂದಿ ತೀವ್ರ ಆಘಾತಕ್ಕೆ ಒಳಗಾಗಿದ್ದರು, ಆದರೆ ಸಮಯಕ್ಕೆ ಸರಿಯಾಗಿ ಈ ದೊಡ್ಡ ತಪ್ಪನ್ನು ಕಂಡುಹಿಡಿದು, ಆಗಬಹುದಾಗಿದ್ದ ದುರಂತವನ್ನು ತಪ್ಪಿಸಿದ್ದಕ್ಕಾಗಿ ನಿರಾಳರಾಗಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ