ವೀಡಿಯೊ…| ಆಘಾತಕಾರಿ ಘಟನೆ : ಅಭ್ಯಾಸದ ವೇಳೆ ಬಾಸ್ಕೆಟ್‌ ಬಾಲ್‌ ಕಂಬ ಮುರಿದುಬಿದ್ದು ರಾಷ್ಟ್ರಮಟ್ಟದ ಆಟಗಾರ ಸಾವು

ರೋಹ್ಟಕ್: ಹರ್ಯಾಣದ ರೋಹ್ಟಕ್ ನಲ್ಲಿ ಮಂಗಳವಾರ ನಡೆದ ಭೀಕರ ಘಟನೆಯಲ್ಲಿ, 16 ವರ್ಷದ ರಾಷ್ಟ್ರಮಟ್ಟದ ಬಾಸ್ಕೆಟ್‌ಬಾಲ್ ಆಟಗಾರ ತರಬೇತಿ ಪಡೆಯುತ್ತಿದ್ದಾಗ ಕಬ್ಬಿಣದ ಬಾಸ್ಕೆಟ್‌ಬಾಲ್ ಕಂಬ ಕುಸಿದು ಬಿದ್ದು ಸಾವಿಗೀಡಾಗಿದ್ದಾರೆ.
ಎನ್‌ಡಿಟಿವಿ ವರದಿಯ ಪ್ರಕಾರ, ಈ ಘಟನೆ ರೋಹ್ಟಕ್‌ನ ಲಖನ್ ಮಜ್ರಾದ ಕೋರ್ಟ್‌ನಲ್ಲಿ ನಡೆದಿದೆ. ಬಾಸ್ಕೆಟ್‌ಬಾಲ್ ಆಟಗಾರ ಹಾರ್ದಿಕ್ ಅವರು ಅಭ್ಯಾಸ ಮಾಡುತ್ತಿದ್ದಾಗ ಬಾಸ್ಕೆಟ್‌ಬಾಲ್ ಕಂಬವು ಮುರಿದು ಅವರ ಮೇಲೆ ಮುರಿದುಬಿದ್ದಿದೆ. ಸ್ನೇಹಿತರು ತಕ್ಷಣವೇ ಸಹಾಯಕ್ಕೆ ಧಾವಿಸಿದ್ದಾರೆ, ಆದರೂ ಆಟಗಾರನನ್ನು ಉಳಿಸಲಾಗಲಿಲ್ಲ.

ಹಾರ್ದಿಕ್‌ ಏಕಾಂಗಿಯಾಗಿ ಅಭ್ಯಾಸ ಮಾಡುತ್ತಿದ್ದಾಗ ಈ ದುರಂತ ಸಂಭವಿಸಿದೆ. ಘಟನೆಯ ಸಿಸಿಟಿವಿ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ, ಆ ವೀಡಿಯೊದಲ್ಲಿ ಹಾರ್ದಿಕ್ ಬಾಸ್ಕೆಟ್‌ಬಾಲ್ ಹೂಪ್‌ಗೆ (ವಲಯ) ಟಚ್‌ ಮಾಡಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ಈ ವೇಳೆ ಅಸ್ಥಿರವಾಗಿದ್ದ ಲೋಹದ ಕಂಬವು ಇದ್ದಕ್ಕಿದ್ದಂತೆ ಮುರಿದು, ನೇರವಾಗಿ ಅವರ ಎದೆಯ ಮೇಲೆ ಬಿದ್ದಿದೆ. ಪಕ್ಕದಲ್ಲಿ ಅಭ್ಯಾಸ ಮಾಡುತ್ತಿದ್ದ ಇತರ ಆಟಗಾರರು ತಕ್ಷಣವೇ ಧಾವಿಸಿ ಬಂದು, ಬಿದ್ದ ಕಂಬವನ್ನು ಎತ್ತಿ ತಕ್ಷಣವೇ ಆಸ್ಪತ್ರೆಗೆ ಒಯ್ದರೂ ಮಾರ್ಗ ಮಧ್ಯೆಯೇ ಹಾರ್ದಿಕ್ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದ ಹಾರ್ದಿಕ್:
ಮೃತನ ಅಕ್ಕಪಕ್ಕದವರನ್ನು ಉಲ್ಲೇಖಿಸಿರುವ ಎನ್‌ಡಿಟಿವಿ ವರದಿಯ ಪ್ರಕಾರ, ಹಾರ್ದಿಕ್ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದ ಮತ್ತು ಇತ್ತೀಚೆಗೆ ತರಬೇತಿ ಶಿಬಿರದಿಂದ ಹಿಂದಿರುಗಿದ್ದರು. ಹಾರ್ದಿಕ್‌ ಅವರ ತಂದೆ ಸಂದೀಪ ರಾಠಿ ಅವರು, ತಮ್ಮ ಹಿರಿಯ ಮಗ ಮತ್ತು ಕಿರಿಯ ಮಗ ಇಬ್ಬರನ್ನೂ ಮನೆ ಸಮೀಪದ ಕ್ರೀಡಾ ಕ್ಲಬ್‌ಗೆ ಸೇರಿಸಿದ್ದರು ಎನ್ನಲಾಗಿದೆ.
ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಆಟಗಾರನ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ದುರಂತ ಘಟನೆಗೆ ಗೌರವ ಸೂಚಕವಾಗಿ, ಹರ್ಯಾಣ ಒಲಿಂಪಿಕ್ ಅಸೋಸಿಯೇಷನ್ (HOA) ರಾಜ್ಯಾದ್ಯಂತ ಎಲ್ಲಾ ಕ್ರೀಡಾ ಉತ್ಸವಗಳು ಮತ್ತು ಕಾರ್ಯಕ್ರಮಗಳನ್ನು ಮೂರು ದಿನಗಳ ಕಾಲ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ ಎಂದು ವರದಿಯು ಹೇಳಿದೆ.

ಪ್ರಮುಖ ಸುದ್ದಿ :-   ವಿಡಿಯೊ | ಸಿಜೆಪಿ ಸಂಸ್ಥಾಪಕ ಅಭಿಜೀತ ದೀಪ್ಕೆ ಮುಖಕ್ಕೆ ಶಾಯಿ ಎಸೆದ ಮಹಿಳೆ ; ಹೈಡ್ರಾಮಾಕ್ಕೆ ಸಾಕ್ಷಿಯಾದ ಜಂತರ್ ಮಂತರ್‌ ಪ್ರತಿಭಟನೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement