ಬೆಂಗಳೂರು: ಕರ್ನಾಟಕ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ (Chief minister) ಹುದ್ದೆಯ ಕುರಿತಂತೆ ನಡೆಯುತ್ತಿರುವ ಆಂತರಿಕ ಸಂಘರ್ಷ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ಪಕ್ಷದ ಹೈಕಮಾಂಡ್ ಮಧ್ಯಪ್ರವೇಶಿಸಿದೆ.
ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರ ನಡುವೆ ಮಹತ್ವದ ಸಭೆ ನಿಗದಿಯಾಗಿದ್ದು, ಅದರ ನಂತರ ಗೊಂದಲಕ್ಕೆ ಪರಿಹಾರ ಕಂಡುಕೊಳ್ಳುವ ಸಲುವಾಗಿ, ನವೆಂಬರ್ 29 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಇಬ್ಬರನ್ನೂ ದೆಹಲಿಗೆ ಕರೆಸಿಕೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ಅಧಿಕಾರ ಹಂಚಿಕೆ ತಿಕ್ಕಾಟ
ಕಾಂಗ್ರೆಸ್ ಸರ್ಕಾರವು ನವೆಂಬರ್ 20 ರಂದು ತನ್ನ ಐದು ವರ್ಷಗಳ ಅವಧಿಯ ಅರ್ಧ ಭಾಗವನ್ನು ಪೂರೈಸಿದ ನಂತರ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಊಹಾಪೋಹಗಳು ಹೆಚ್ಚಾಗಿದ್ದು, ಆಡಳಿತ ಪಕ್ಷದೊಳಗೆ ಅಧಿಕಾರದ ಜಟಾಪಟಿ ತೀವ್ರಗೊಂಡಿದೆ. 2023 ರಲ್ಲಿ ಸಿದ್ದರಾಮಯ್ಯ ಮತ್ತು ಶಿವಕುಮಾರ ನಡುವೆ “ಅಧಿಕಾರ ಹಂಚಿಕೆ” ಒಪ್ಪಂದ ನಡೆದಿದೆ ಎಂಬ ಚರ್ಚೆಯ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಮಹತ್ವ ಪಡೆದಿದೆ.
ರಾಹುಲ್ ಗಾಂಧಿಯವರನ್ನು ಭೇಟಿ ಮಾಡುವ ಅವಕಾಶ ದೊರೆತಿರುವುದನ್ನು ಶಿವಕುಮಾರ ಬೆಂಬಲಿಗರು ಸಕಾರಾತ್ಮಕ ಬೆಳವಣಿಗೆ ಎಂದು ಪರಿಗಣಿಸಿದ್ದಾರೆ.
ಎರಡೂವರೆ ವರ್ಷಗಳ ಹಿಂದೆ ನಡೆದಿದೆ ಎನ್ನಲಾದ ಅಧಿಕಾರ ಹಂಚಿಕೆ ಬದ್ಧತೆಯ ಕುರಿತು ಇಬ್ಬರೂ ನಾಯಕರು ರಾಹುಲ್ ಗಾಂಧಿ ಅಥವಾ ಕಾಂಗ್ರೆಸ್ ವರಿಷ್ಠ ನಾಯಕರ ಮುಂದೆ ತಮ್ಮ ವಾದ ಮಂಡಿಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ, ಎರಡೂ ಬಣಗಳು ತಮ್ಮ ಕಾರ್ಯತಂತ್ರಗಳನ್ನು ಸಿದ್ಧಪಡಿಸಿಕೊಳ್ಳುತ್ತಿವೆ ಎನ್ನಲಾಗಿದೆ.
ಏತನ್ಮಧ್ಯೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ನಿವಾಸದಲ್ಲಿ ಹಿರಿಯ ಸಚಿವರು ಹಾಗೂ ಆಪ್ತ ನಾಯಕರ ಜಿ. ಪರಮೇಶ್ವರ, ಸತೀಶ್ ಜಾರಕಿಹೊಳಿ, ಎಚ್.ಸಿ. ಮಹದೇವಪ್ಪ, ಕೆ. ವೆಂಕಟೇಶ್ ಮತ್ತು ಕೆ.ಎನ್. ರಾಜಣ್ಣ ಅವರೊಂದಿಗೆ ಸಭೆ ನಡೆಸಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ಮತ್ತು ಶಿವಕುಮಾರ ನಡುವೆ ಒಮ್ಮತ ಮೂಡದಿದ್ದರೆ, ಮತ್ತು ಪಕ್ಷವು ಮುಖ್ಯಮಂತ್ರಿ ಸ್ಥಾನಕ್ಕೆ ಮೂರನೇ ಅಭ್ಯರ್ಥಿಯನ್ನು ನೇಮಿಸುವ ಬಗ್ಗೆ ಪರಿಗಣಿಸಿದರೆ, ಹೈಕಮಾಂಡ್ ಮುಂದೆ ಯಾವ ನಿಲುವು ತೆಗೆದುಕೊಳ್ಳಬೇಕು ಎಂಬುದರ ಕುರಿತು ಚರ್ಚೆಗಳು ನಡೆಯುತ್ತಿವೆ ಎನ್ನಲಾಗಿದೆ.
“ಗೊಂದಲ ಬಗೆಹರಿಸುತ್ತೇನೆ”: ಖರ್ಗೆ
ಈ ಮಧ್ಯೆ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಕರ್ನಾಟಕದ ನಾಯಕತ್ವ ವಿಷಯದ ಕುರಿತು ಚರ್ಚಿಸಲು ನವದೆಹಲಿಯಲ್ಲಿ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸೇರಿದಂತೆ ಹಿರಿಯ ನಾಯಕರ ಸಭೆಯನ್ನು ಕರೆಯುವುದಾಗಿ ಹೇಳಿದ್ದಾರೆ.
ಈ ಸಮಸ್ಯೆ ಕುರಿತು ಚರ್ಚಿಸಿ, ಗೊಂದಲಕ್ಕೆ ತೆರೆ ಎಳೆಯುವುದಾಗಿ ಅವರು ಹೇಳಿದ್ದಾರೆ. “ನಾನು ದೆಹಲಿಗೆ ಹೋದ ನಂತರ ಮೂರ್ನಾಲ್ಕು ಪ್ರಮುಖ ನಾಯಕರನ್ನು ಕರೆದು ಚರ್ಚಿಸುತ್ತೇನೆ. ಚರ್ಚೆಯ ಬಳಿಕ ಮುಂದಿನ ಹೆಜ್ಜೆ ಬಗ್ಗೆ ತಿಳಿಸುತ್ತೇನೆ. ಈ ಮೂಲಕ ಇರುವ ಗೊಂದಲವನ್ನು ಕೊನೆಗೊಳಿಸುತ್ತೇವೆ” ಎಂದು ಖರ್ಗೆ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರನ್ನು ದೆಹಲಿಗೆ ಕರೆಯಲಾಗುತ್ತದೆಯೇ ಎಂಬ ಪ್ರಶ್ನೆಗೆ, “ಖಂಡಿತವಾಗಿಯೂ ನಾವು ಅವರನ್ನು ಕರೆಸಿ, ಚರ್ಚಿಸಿ ವಿಷಯವನ್ನು ಇತ್ಯರ್ಥಪಡಿಸುತ್ತೇವೆ. ನಾನು ಎಲ್ಲರನ್ನೂ ಕರೆದು ಚರ್ಚಿಸುತ್ತೇನೆ.ಎಲ್ಲರೊಂದಿಗೆ ಚರ್ಚಿಸಿದ ನಂತರ ಒಂದು ನಿರ್ಧಾರಕ್ಕೆ ಬರಲಾಗುವುದು” ಎಂದು ಅವರು ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ