ವೀಡಿಯೊಗಳು..| ಪರ್ತಗಾಳಿ ಮಠದಲ್ಲಿ 77 ಅಡಿ ಎತ್ತರದ ಭಗವಾನ್‌ ಶ್ರೀರಾಮನ ಕಂಚಿನ ಪ್ರತಿಮೆ ಅನಾವರಣ ಮಾಡಿದ ಪ್ರಧಾನಿ ಮೋದಿ

ಪರ್ತಗಾಳಿ (ಗೋವಾ) : ಪರ್ತಗಾಳಿ ಮಠವು ಪರಂಪರೆ ಹಾಗೂ ಆಧುನಿಕತೆಯ ಜೊತೆ ಸೇತುವೆಯಾಗುವ ಪ್ರಮುಖ ಭೂಮಿಯಕೆಯಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಆಶಿಸಿದರು.
ಪರ್ತಗಾಳಿ ಜೋವೋತ್ತಮ ಮಠದಲ್ಲಿ ಶುಕ್ರವಾರ 77 ಅಡಿ ಎತ್ತರದ ರಾಮನ ಕಂಚಿನ ಮೂರ್ತಿಯನ್ನು ಅನಾವರಣ ಮಾಡಿ, ರಾಮಾಯಣ ಥೀಮ್‌ ಪಾರ್ಕ್‌ ಉದ್ಘಾಟಿಸಿ, ಮಠದ 550 ನೇ ವರ್ಷದ ಅಂಗವಾಗಿ ಕೇಂದ್ರ ಸರ್ಕಾರ ಹೊರ ತಂದ ನಾಣ್ಯ ಹಾಗೂ ಅಂಚೆ ಚೀಟಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಉದ್ಘಾಟನೆಯಾದ ಭಗವಾನ್‌ ಶ್ರೀರಾಮನ ಪ್ರತಿಮೆ, ಥೀಮ್‌ ಪಾರ್ಕ್‌ ಹಾಗೂ ತ್ರಿಡಿ ಚಿತ್ರವು ಮಠಕ್ಕೆ ಹೊಸ ಆಯಾಮ ನೀಡಿದೆ. ಅದು ಮುಂದಿನ ಪೀಳಿಗೆಗೆ ಜ್ಞಾನ, ಪ್ರೇರಣೆ ಹಾಗೂ ಸಾಧನೆಯ ಸ್ಥಾಯಿ ಕೇಂದ್ರವಾಗಿ ಬೆಳೆಯಲಿ, ಆಧ್ಯಾತ್ಮದ ಚೇತನ ನೀಡಲಿ ಎಂದು ಹಾರೈಸಿದರು.  ಶ್ರೀರಾಮ ನಾಮ ಜಪ ಯಜ್ಞ ಮತ್ತು ರಾಮ ರಥಯಾತ್ರೆಗಳು ದೇಶದಾದ್ಯಂತ ಲಕ್ಷಾಂತರ ಭಕ್ತರನ್ನು ಒಗ್ಗೂಡಿಸಿ ಸಾಮೂಹಿಕ ಶಕ್ತಿಯನ್ನು ಸಾರಿದವು ಎಂದರು.
ದೇಶ, ಸಮಾಜದಲ್ಲಿ ಪರಿವರ್ತನೆ ವಿವಿಧ ಸವಾಲುಗಳ ನಡುವೆ ಮಠವು ತನ್ನ ದಿಕ್ಕು ಬಿಡಲಿಲ್ಲ, ಉದ್ದೇಶ ಬಿಡಲಿಲ್ಲ. ಮಠವು ಜನರಿಗೆ ದಿಕ್ಕು ತೋರಿಸುವ ಕೇಂದ್ರವಾಯಿತು. ಇದೇ ಮಠದ ಪ್ರಮುಖ ಗುರುತು. ಮಠವನ್ನು ಸ್ಥಾಪಿಸಿದ ಉದ್ದೇಶವು ಸಾಧನೆಯನ್ನು ಸೇವೆ ಜೊತೆ ಜೋಡಿಸುವುದು, ಪರಂಪರೆಯನ್ನು ಲೋಕ ಕಲ್ಯಾಣದ ಜತೆ ಜೋಡಿಸುವುದಾಗಿದೆ. ಆಧ್ಯಾತ್ಮದ ಮೂಲ ಉದ್ದೇಶ ಜೀವನಕ್ಕೆ ಸ್ಥಿರತೆ, ಸಮತೋಲನ, ಮೌಲ್ಯ ಪ್ರಧಾನ ಮಾಡುವುದಾಗಿದೆ. ಮಠದ 550 ವರ್ಷದ ಯಾತ್ರೆ ಸಮಾಜವನ್ನು ಕಠಿಣ ಸಮಯದಲ್ಲೂ ಸಂಬಾಳಿಸಿಕೊಂಡು ಬಂತು. ಒಂದು ಸಂಸ್ಥೆಯು ಸತ್ಯ ಮತ್ತು ಸೇವೆಯ ಅಡಿಪಾಯದ ಮೇಲೆ ನಿಂತಾಗ, ಅದು ಕಾಲದ ಬದಲಾವಣೆಯಿಂದ ಅಲುಗಾಡುವುದಿಲ್ಲ, ಬದಲಿಗೆ ಸಮಾಜಕ್ಕೆ ಸಹಿಷ್ಣುತೆಯ ಶಕ್ತಿಯನ್ನು ನೀಡುತ್ತದೆ. ಪರ್ತಗಾಳಿ ಮಠವು ಭಾರತದ ಪಶ್ಚಿಮ ಕರಾವಳಿಗೆ ಆಧ್ಯಾತ್ಮಿಕ ಶಕ್ತಿ ನೀಡುವ ಕೇಂದ್ರವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಮಠದ ಜೊತೆ ಜೋಡಿಸಿಕೊಂಡ ಸಮಾಜದ ಕುಟುಂಬಗಳು ಉತ್ಕೃಷ್ಟ ಜೀವನ ನಡೆಸುತ್ತಿವೆ. ವ್ಯಾಪಾರ, ಶಿಕ್ಷಣ, ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಪ್ರತಿಭೆಯಿಂದ ಗುರುತಿಸಿಕೊಂಡಿದೆ. ಇಂಥ ಪರಿವಾರಗಳ ಸಫಲಲತೆಗೆ ಮಠ ನೀಡಿದ ಸಂಸ್ಕಾರವೇ ಕಾರಣ. ಮಠವು ವಿನಮ್ರತೆ, ಸಂಸ್ಕಾರ, ಸೇವಾ ಮನೋಭಾವವನ್ನು ಹೇಳಿಕೊಡುತ್ತದೆ. ಮುಂದಿನ ಪೀಳಿಗೆಗಳಿಗೂ ಮಠವು ಇದೇ ರೀತಿ ಪ್ರೇರಣೆ ನೀಡುತ್ತಿರಲಿ ಎಂದು ಆಶಿಸಿದರು.

ಸೇವಾ ಭಾವನೆ ಮಠದ ಗುರುತು. ಸಮಾಜದ ಪ್ರತಿ ವರ್ಗಕ್ಕೂ ಮಠವು ಬೆಂಬಲ ನೀಡಿದೆ. ಕಷ್ಟಕರ ಪರಿಸ್ಥಿತಿ ಬಂದಾಗ ಗೋವಾದ ಜನ ಬೇರೆಡೆ ಹೋಗಬೇಕಾಯಿತು. ಆಗ  ಮಠವು ಸಮುದಾಯಕ್ಕೆ ಬೆಂಬಲ ನೀಡಿತ್ತು. ಹೊಸ ಸ್ಥಳಗಳಲ್ಲಿ ಮಠ, ಮಂದಿರ ಸ್ಥಾಪನೆ ಮಾಡಿತ್ತು. ಮಠವು ಮಾನವತೆ, ಸಂಸ್ಕೃತಿಯ ರಕ್ಞಣೆ ಮಾಡಿತು. ಈಗ ಶಿಕ್ಷಣ ಸಂಸ್ಥೆಗಳು, ಹಾಸ್ಟೆಲ್‌ ಸೌಲಭ್ಯ ಒದಗಿಸುವ ಜೊತೆಗೆ, ವೃದ್ಧರ ಸೇವೆಯ ಜೊತೆ ಲೋಕ ಕಲ್ಯಾಣ ಕಾರ್ಯಗಳನ್ನು ಮಾಡುತ್ತಿದೆ. ಅಧ್ಯಾತ್ಮ ಮತ್ತು ಸೇವೆ ಒಟ್ಟಿಗೆ ಹೋದರೆ ಸಮಾಜಕ್ಕೆ ಮುಂದೆ ಹೋಗುವ ಶಕ್ತಿ  ದೊರೆಯುತ್ತದೆ ಎಂದರು.

ಮಠದ ಸಂಸ್ಥಾಪಕರಾದ ಶ್ರೀಮದ್‌ ನಾರಾಯಣ ತೀರ್ಥರು ಉತ್ತರ ಭಾರತದ ಪ್ರಯಾಣದ ಸಮಯದಲ್ಲಿ ವಾರಾಣಸಿಯಲ್ಲಿ ಕೇಂದ್ರವನ್ನು ಸ್ಥಾಪಿಸಿ, ಮಠದ ಆಧ್ಯಾತ್ಮಿಕ ಪ್ರವಾಹವನ್ನು ದಕ್ಷಿಣದಿಂದ ಉತ್ತರಕ್ಕೆ ವಿಸ್ತರಿಸಿದರು. ವಾರಾಣಸಿಯ ಸಂಸದನಾಗಿರುವ ತನಗೆ ಇದು ಹೆಮ್ಮೆಯ ವಿಷಯ ಎಂದರು.
ಸಾಧು ಸಂತರ ಜತೆ ಕುಳಿತುಕೊಳ್ಳುವುದರಿಂದ ಆಧ್ಯಾತ್ಮಿಕ ಅನುಭವ ಉಂಟಾಗುತ್ತದೆ. ಇಲ್ಲಿ ಸೇರಿದ ಭಕ್ತಗಣದ ಪ್ರಾರ್ಥನೆಯಿಂದ ಜೀವನದ ಶಕ್ತಿ ಇನ್ನಷ್ಟು ಹೆಚ್ಚಿದೆ. ನಾನು ಇಲ್ಲಿ ನಿಮ್ಮ ಮಧ್ಯೆ ಉಪಸ್ಥಿತನಿರಲು ತುಂಬಾ ಭಾಗ್ಯವಂತ ಎಂದುಕೊಂಡಿದ್ದೇನೆ.  ಮಠವು 550 ವರ್ಷ ಪೂರೈಸುತ್ತಿರುವ ಐತಿಹಾಸಿಕ ಸನ್ನಿವೇಶದಲ್ಲಿ ಸ್ವಾಮಿಗಳು ಹಾಗೂ ಎಲ್ಲರಿಗೂ ಈ ಐತಿಹಾಸಿಕ ಸಂದರ್ಭದ ಶುಭವನ್ನು ಹಾರೈಸುತ್ತೇನೆ ಎಂದರು.

ಈ ಮಠಕ್ಕೆ ಶಕ್ತಿಯ ನಿರಂತರ ಹರಿವು ದ್ವೈತ ವೇದಾಂತದ ದೈವಿಕ ಅಡಿಪಾಯವನ್ನು ಸ್ಥಾಪಿಸಿದ ಮಹಾನ್ ಗುರು ಪರಂಪರೆಯಿಂದ ಬಂದಿದೆ. 1475 ರಲ್ಲಿ ಶ್ರೀಮದ್ ನಾರಾಯಣ ತೀರ್ಥ ಸ್ವಾಮೀಜಿ ಸ್ಥಾಪಿಸಿದ ಈ ಮಠವು, ಜಗದ್ಗುರು ಶ್ರೀ ಮಧ್ವಾಚಾರ್ಯರ ಜ್ಞಾನ ಪರಂಪರೆಯ ವಿಸ್ತರಣೆಯಾಗಿದೆ. ಈ ಪರಂಪರೆಗೆ ಸಂಬಂಧಿಸಿದ ಕುಟುಂಬಗಳು ಶಿಸ್ತು, ಜ್ಞಾನ, ಕಠಿಣ ಪರಿಶ್ರಮ ಮತ್ತು ಉತ್ಕೃಷ್ಟತೆಯನ್ನು ತಮ್ಮ ಜೀವನದ ಅಡಿಪಾಯವಾಗಿಸಿಕೊಂಡಿದ್ದಾರೆ. ವ್ಯಾಪಾರದಿಂದ ಹಣಕಾಸಿನವರೆಗೆ, ಶಿಕ್ಷಣದಿಂದ ತಂತ್ರಜ್ಞಾನದವರೆಗೆ ಅವರಲ್ಲಿ ಕಾಣುವ ಪ್ರತಿಭೆ, ನಾಯಕತ್ವ ಮತ್ತು ಸಮರ್ಪಣೆಯಲ್ಲಿ ಈ ಜೀವನ ದೃಷ್ಟಿಯ ಆಳವಾದ ಮುದ್ರೆ ಇದೆ ಎಂದು ಹೇಳಿದರು.

ಪರ್ತಗಾಳಿ ಮಠದಲ್ಲಿ ಪ್ರತಿಷ್ಠಾಪಿಸಲಾದ 77 ಅಡಿ ಎತ್ತರದ ಕಂಚಿನ ಶ್ರೀರಾಮನ ಪ್ರತಿಮೆಯನ್ನು ಅನಾವರಣಗೊಳಿಸಿದ ಪ್ರಧಾನಿ ಮೋದಿ, ಮೂರು ದಿನಗಳ ಹಿಂದೆ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಮಂದಿರದ ಮೇಲೆ ಧರ್ಮ ಧ್ವಜವನ್ನು ಹಾರಿಸುವ ಸೌಭಾಗ್ಯ ಲಭಿಸಿತ್ತು. ಇಂದು ಇಲ್ಲಿ ಭವ್ಯವಾದ ಶ್ರೀರಾಮನ ಪ್ರತಿಮೆಯನ್ನು ಅನಾವರಣಗೊಳಿಸಿರುವುದು ಸಂತಸ ತಂದಿದೆ ಎಂದು ಹೇಳಿದರು.
ಇಂದು ಭಾರತವು ಗಮನಾರ್ಹವಾದ ಸಾಂಸ್ಕೃತಿಕ ಪುನರುತ್ಥಾನಕ್ಕೆ ಸಾಕ್ಷಿಯಾಗಿದೆ. ಅಯೋಧ್ಯೆಯ ರಾಮ ಮಂದಿರದ ಮರುಸ್ಥಾಪನೆ, ಕಾಶಿ ವಿಶ್ವನಾಥ ಧಾಮದ  ಮರುಅಭಿವೃದ್ಧಿ ಮತ್ತು ಉಜ್ಜಯಿನಿಯ ಮಹಾಕಾಲ ಮಹಾಲೋಕದ ವಿಸ್ತರಣೆ, ಇವೆಲ್ಲವೂ ರಾಷ್ಟ್ರವು ಹೊಸ ಶಕ್ತಿಯೊಂದಿಗೆ ತನ್ನ ಆಧ್ಯಾತ್ಮಿಕ ಪರಂಪರೆಯನ್ನು ಪುನರುಜ್ಜೀವನಗೊಳಿಸುತ್ತಿರುವುದನ್ನು ತೋರಿಸುತ್ತವೆ” ಎಂದರು.
ರಾಮಾಯಣ ಸರ್ಕ್ಯೂಟ್, ಕೃಷ್ಣ ಸರ್ಕ್ಯೂಟ್, ಗಯಾ ಜಿಯಲ್ಲಿನ ಅಭಿವೃದ್ಧಿ ಕಾರ್ಯಗಳು ಮತ್ತು ಕುಂಭಮೇಳದ ನಿರ್ವಹಣೆಯಂತಹ ಉಪಕ್ರಮಗಳು, ಇಂದಿನ ಭಾರತವು ತನ್ನ ಸಾಂಸ್ಕೃತಿಕ ಗುರುತನ್ನು ಹೊಸ ಸಂಕಲ್ಪ ಮತ್ತು ಆತ್ಮವಿಶ್ವಾಸದಿಂದ ಹೇಗೆ ಮುನ್ನಡೆಸುತ್ತಿದೆ ಎಂಬುದಕ್ಕೆ ಉದಾಹರಣೆಗಳಾಗಿವೆ ಎಂದರು.
ಪರ್ತಗಾಳಿ ಮಠದ ಮಠಾಧೀಶರಾದ ಶ್ರೀ ವಿದ್ಯಾಧೀಶ ಶ್ರೀಪಾದ ವಡೇರ ಸ್ವಾಮೀಜಿ  ಆಶೀರ್ವಚನ ನೀಡಿ,  ಪ್ರಧಾನಿ ಮೋದಿ ಅವರು ಚಾತುರ್ಮಾಸ್ಯ, ನವರಾತ್ರಿ ವ್ರತ ಮಾಡಿ ದೇಶದ ಜನರಿಗೆ ಮಾದರಿಯಾಗಿದ್ದಾರೆ. 2047 ರಲ್ಲಿ ಭಾರತ ವಿಕಸಿತವಾಗಿ ಮಾಡಲು ಏಕಾದಶಿ ಉಪವಾಸ ಮಾಡಿ ಎಂದು ಸಲಹೆ ನೀಡಿದರು.
ಮೋದಿ ಅವರು ಪ್ರಧಾನಿ ಆಗುತ್ತಾರೆ ಎಂಬುದು ಗೋವಾದಲ್ಲೇ ಮೊದಲ ಬಾರಿ ಘೋಷಣೆಯಾಗಿತ್ತು. ಮೋದಿ ಅವರ ಸಾಧನೆಯ ಹಿಂದೆ ಅವರ ತಾಯಿ ಹೀರಾಬೆನ್‌ ಮೋದಿ ಅವರಿದ್ದಾರೆ. ಅವರು ವಜ್ರದಂಥ ಪುತ್ರನನ್ನು ಕೊಟ್ಟಿದ್ದಾರೆ. ಅವರು ಧರ್ಮ ಪುತ್ರನನ್ನು ಕೊಟ್ಟಿದ್ದಾರೆ. ಅವರ ವಜ್ರದಂತೆ ಪ್ರಕಾಶಿಸುತ್ತಿದ್ದಾರೆ. ಪರಿಣಾಮ ಭಾರತವೂ ಪ್ರಕಾಶಿಸುತ್ತಿದೆ ಎಂದರು. ಎಲ್ಲರ ಬೆಂಬಲ ಸಿಕ್ಕಿದ್ದರಿಂದ ಪ್ರಭು ಶ್ರೀರಾಮನ ಪ್ರತಿಮೆ ಸ್ಥಾಪನೆಯಾಗಿದೆ. ವಿಕಸಿತ ಭಾರತ ನಿರ್ಮಾಣಕ್ಕೆ ಪ್ರಭು ಶ್ರೀರಾಮ ಆಶೀರ್ವಾದ ನೀಡಲಿ ಎಂದು ಹಾರೈಸಿದರು.
ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ ಸಾವಂತ ಮಾತನಾಡಿ, ಗೋವಾ ಆಧ್ಯಾತ್ಮಿಕ ನೆಲ. ಅದನ್ನು ಮುಂದಿನ ಪೀಳಿಗೆಗೆ ಮುಂದುವರಿಸಿಕೊಂಡು ಹೋಗುವ  ಪರ್ತಗಾಳಿ ದೇಶದ ಪ್ರಮುಖ ಪ್ರವಾಸೋದ್ಯಮ ತಾಣವಾಗಲಿದೆ. ಗೋವಾ ಸರ್ಕಾರದ ಆಧ್ಯಾತ್ಮಿಕ ಪ್ರವಾಸೋದ್ಯಮಕ್ಕೆ ಇದು ನಾಂದಿಯಾಗಲಿದೆ ಎಂದರು.
 ಹಿಂದೆ ಗೋವಾ ಆಳಿದ ಹಲವರು ಇಲ್ಲಿನ ಸನಾತನ ಸಂಸ್ಕೃತಿಗೆ ಹಾನಿ ಮಾಡಲು ಯತ್ನಿಸಿದರು. ಅಂಥ ಸಂದರ್ಭದಲ್ಲಿ ಸಂಸ್ಕೃತಿ ಉಳಿಸಲು ಪರ್ತಗಾಳಿ ಸೇರಿದಂತೆ ಇಲ್ಲಿನ ಮಠಗಳ ಕಾರ್ಯ ದೊಡ್ಡದಿದೆ. ಅಖಂಡ ಆಧ್ಯಾತ್ಮಿಕ ಪರಂಪರೆ ಉಳಿಸಿದ್ದಕ್ಕೆ ಸ್ವಾಮಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. 550 ಕೋಟಿ ರಾಮ ಜಪ ಮಾಡಿದ ಭಕ್ತರಿಗೆ ಆಭಾರಿಯಾಗಿದ್ದೇನೆ ಎಂದರು.
ಪರ್ತಗಾಳಿ ಮಠದ ಕೇಂದ್ರ ಸಮಿತಿ ಅಧ್ಯಕ್ಷ ಶ್ರೀನಿವಾಸ ಡೆಂಪೊ ಸ್ವಾಗತಿಸಿದರು. ಗೋವಾದ ರಾಜ್ಯಪಾಲ ಪುಸಪತಿ ಅಶೋಕ ಗಜಪತಿ ರಾಜು, ಕೇಂದ್ರ ಸಚಿವ ಶ್ರೀಪಾದ ಎಸ್ಸೋ ನಾಯಕ, ಗೋವಾದ ಸಚಿವರಾದ ದಿಗಂಬರ ಕಾಮತ್‌, ರಮೇಶ ತವಡಕರ, ಆರ್‌.ಆರ್‌.ಕಾಮತ್‌ ಮೊದಲಾದವರು ವೇದಿಕೆಯಲ್ಲಿದ್ದರು.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement