ಭಾರತದ ಸಿಂಧೂ ಕಣಿವೆ ನಾಗರಿಕತೆ ಕಣ್ಮರೆಯಾಗಿದ್ದು ಏಕೆ ? ಕಾರಣ ಹೇಳಿದ ಐಐಟಿ ವಿಜ್ಞಾನಿಗಳು…

ನವದೆಹಲಿ: ಭಾರತದ ಅತಿದೊಡ್ಡ ರಹಸ್ಯ ಯಾವುದೆಂದರೆ ಸಿಂಧೂ ಕಣಿವೆ ನಾಗರಿಕತೆಯು ಹೇಗೆ ಮತ್ತು ಏಕೆ ಕಣ್ಮರೆಯಾಯಿತು ಎಂಬುದು. ಈಗ, ಗಾಂಧಿನಗರದ ಐಐಟಿ ಸಂಶೋಧಕರು ಒಂದು ಹೊಸ ಸಿದ್ಧಾಂತವನ್ನು ಮಂಡಿಸಿದ್ದಾರೆ. ಹರಪ್ಪ, ಮೊಹೆಂಜೋದಾರೋ, ರಾಖಿಗಢಿ ಮತ್ತು ಲೋಥಾಲ್‌ನಂತಹ ನಗರಗಳನ್ನು ಈ ಪ್ರದೇಶಗಳ ಜನರು  ತ್ಯಜಿಸಲು ಕಾರಣವಾದದ್ದು ಸರಣಿ ರೂಪದಲ್ಲಿ ಬಂದ ದೀರ್ಘಾವಧಿಯ ಬರಗಾಲಗಳು ಎಂದು ಅವರು ಪ್ರತಿಪಾದಿಸಿದ್ದಾರೆ.
ಸಿಂಧೂ-ಸರಸ್ವತಿ ನಾಗರಿಕತೆ ಎಂದೂ ಕರೆಯಲ್ಪಡುವ ಸಿಂಧೂ ಕಣಿವೆ ನಾಗರಿಕತೆಯು (IVC), ಸುಮಾರು 5,000ರಿಂದ 3,500 ವರ್ಷಗಳ ಹಿಂದೆ ಈಗಿನ ವಾಯುವ್ಯ ಭಾರತ ಮತ್ತು ಪಾಕಿಸ್ತಾನದಲ್ಲಿ ಪ್ರದೇಶಗಳಲ್ಲಿ ಪ್ರವರ್ಧಮಾನಕ್ಕೆ ಬಂದಿತು. ಇದು ವಿಶ್ವದ ಅತ್ಯಂತ ಪ್ರಾಚೀನ ನಗರ ಸಮಾಜಗಳಲ್ಲಿ ಒಂದಾಗಿದೆ.
ಈ ನಾಗರಿಕತೆಯು ಎಷ್ಟು ಮುಂದುವರಿದಿತ್ತೆಂದರೆ, ನಗರಗಳಲ್ಲಿ ಒಳಚರಂಡಿ ವ್ಯವಸ್ಥೆಗಳಿದ್ದವು ಮತ್ತು 5,000 ವರ್ಷಗಳ ಹಿಂದೆಯೇ ‘ಡ್ಯಾನ್ಸಿಂಗ್ ಗರ್ಲ್’ (ನೃತ್ಯ ಮಾಡುವ ಹುಡುಗಿ)ಯಂತಹ ಸುಂದರ ಲೋಹದ ಕಲಾಕೃತಿಗಳನ್ನು ರಚಿಸಲಾಗಿತ್ತು.
ಅದರ ಸುಧಾರಿತ ನಗರಗಳು, ನೀರಿನ ನಿರ್ವಹಣೆ ಮತ್ತು ವ್ಯಾಪಾರ ಜಾಲಗಳಿಗೆ ಹೆಸರುವಾಸಿಯಾದ ಸಿಂಧೂ ಕಣಿವೆ ನಾಗರಿಕತೆಯ ಅವನತಿಯು ದೀರ್ಘಕಾಲದಿಂದ ಪುರಾತತ್ವಶಾಸ್ತ್ರಜ್ಞರು ಮತ್ತು ಇತಿಹಾಸಕಾರರನ್ನು ಗೊಂದಲಕ್ಕೀಡು ಮಾಡಿದೆ.  ಗಾಂಧಿನಗರದ ಐಐಟಿಯ ವಿಮಲ್ ಮಿಶ್ರಾ ಮತ್ತು ಸಹೋದ್ಯೋಗಿಗಳು ನಡೆಸಿದ ಇತ್ತೀಚಿನ ಸಂಶೋಧನೆಯು, ಹಲವಾರು ತೀವ್ರ ಬರಗಾಲಗಳು ನಾಗರಿಕತೆಯು ಕ್ರಮೇಣವಾಗಿ ಕಣ್ಮರೆಯಾಗಲು ಪ್ರಮುಖ ಪಾತ್ರವಹಿಸಿವೆ ಎಂಬುದಕ್ಕೆ ಬಲವಾದ ಪುರಾವೆಗಳನ್ನು ಒದಗಿಸುತ್ತದೆ. ‘ಕಮ್ಯುನಿಕೇಷನ್ಸ್ ಅರ್ಥ್ ಅಂಡ್ ಎನ್ವಿರಾನ್‌ಮೆಂಟ್’ ಜರ್ನಲ್‌ನಲ್ಲಿ ಪ್ರಕಟವಾದ ಹನ್ನೊಂದು ಪುಟಗಳ ಸಂಶೋಧನಾ ಪ್ರಬಂಧವು, ನೀರಿನ ಕೊರತೆಯೇ ಈ ಸಮೃದ್ಧ ನಾಗರಿಕತೆಯನ್ನು ಕೊನೆಗೊಳಿಸಿತು ಎಂದು ಸೂಚಿಸುತ್ತದೆ.
ಹವಾಮಾನ ಬದಲಾವಣೆ ಮತ್ತು ನೀರಿನ ಕೊರತೆ
ಸಿಂಧೂ ನದಿಯು ನಾಗರಿಕತೆಯ ಜೀವನಾಡಿಯಾಗಿತ್ತು, ಕೃಷಿ, ವ್ಯಾಪಾರ ಮತ್ತು ದೈನಂದಿನ ಜೀವನಕ್ಕೆ ಆಧಾರವಾಗಿತ್ತು. ಆದಾಗ್ಯೂ, ಐತಿಹಾಸಿಕ ಹವಾಮಾನ ದಾಖಲೆಗಳು (ಪ್ಯಾಲಿಯೋಕ್ಲೈಮೇಟ್ ದಾಖಲೆಗಳು) ಮತ್ತು ಹವಾಮಾನ ಸಿಮ್ಯುಲೇಶನ್‌ಗಳು ಈ ಪ್ರದೇಶವು ಭಾರತೀಯ ಬೇಸಿಗೆ ಮತ್ತು ಚಳಿಗಾಲದ ಮಾನ್ಸೂನ್‌ಗಳಲ್ಲಿನ ಬದಲಾವಣೆಗಳಿಂದಾಗಿ ಗಮನಾರ್ಹ ಜಲ-ಹವಾಮಾನದ ವ್ಯತ್ಯಾಸವನ್ನು ಅನುಭವಿಸಿದೆ ಎಂದು ಬಹಿರಂಗಪಡಿಸುತ್ತವೆ. ಸಂಶೋಧಕರು ಹೆಚ್ಚು ರೆಸಲ್ಯೂಶನ್‌ನ ಹವಾಮಾನ ಮಾದರಿಗಳು ಮತ್ತು ಭೂವೈಜ್ಞಾನಿಕ ಪ್ರಾಕ್ಸಿಗಳನ್ನು (ಕಲ್ಲಿನ ಹನಿಗಳು ಮತ್ತು ಸರೋವರದ ಸೆಡಿಮೆಂಟ್‌ಗಳು) ಬಳಸಿಕೊಂಡು ಸಾವಿರಾರು ವರ್ಷಗಳ ಮಳೆ ಮತ್ತು ನದಿ ಹರಿವಿನ ಮಾದರಿಗಳನ್ನು ಪುನರ್‌ ನಿರ್ಮಿಸಿದ್ದಾರೆ.
ಅವರ ಸಂಶೋಧನೆಗಳು ನಾಗರಿಕತೆಯ ಜೀವಿತಾವಧಿಯಲ್ಲಿ ಸರಾಸರಿ ವಾರ್ಷಿಕ ಮಳೆ 10-20 ಪ್ರತಿಶತದಷ್ಟು ಕಡಿಮೆಯಾಗಿ, ತಾಪಮಾನವು ಸುಮಾರು 0.5 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಿದೆ ಎಂಬುದನ್ನು ತೋರಿಸುತ್ತವೆ.
4,450 ಮತ್ತು 3,400 ವರ್ಷಗಳ ಹಿಂದೆ, ತಲಾ 85 ವರ್ಷಗಳಿಗಿಂತ ಹೆಚ್ಚು ಕಾಲದ ವರೆಗೆ ಉಳಿದ ನಾಲ್ಕು ಪ್ರಮುಖ ಬರಗಾಲಗಳನ್ನು ಗುರುತಿಸಲಾಗಿದೆ. ಅತ್ಯಂತ ತೀವ್ರವಾದ ಬರಗಾಲವು 164 ವರ್ಷಗಳ ಕಾಲ ಉಳಿದಿದ್ದು, ಸಿಂಧೂ ಕಣಿವೆ ನಾಗರಿಕತೆಯ ಪ್ರದೇಶದ 91 ಪ್ರತಿಶತಕ್ಕಿಂತ ಹೆಚ್ಚು ಭಾಗದ ಮೇಲೆ ಪರಿಣಾಮ ಬೀರಿತ್ತು.
ನೆಲೆಗಳು ಮತ್ತು ಕೃಷಿಯ ಮೇಲೆ ಪರಿಣಾಮ
ಆರಂಭದಲ್ಲಿ,  ಸಿಂದೂ ಕಣಿವೆ ನಾಗರಿಕತೆಯ ನೆಲೆಗಳು ಹೇರಳವಾದ ಮಳೆಯಿರುವ ಪ್ರದೇಶಗಳಲ್ಲಿ ಕೇಂದ್ರೀಕೃತವಾಗಿದ್ದವು. ಬರಗಾಲಗಳು ಹೆಚ್ಚಾಗುತ್ತಿದ್ದಂತೆ, ಸಮುದಾಯಗಳು ವಿಶ್ವಾಸಾರ್ಹ ನೀರಿನ ಮೂಲಗಳನ್ನು ಹುಡುಕುತ್ತಾ ಸಿಂಧೂ ನದಿಯ ಹತ್ತಿರ ಸ್ಥಳಾಂತರಗೊಂಡವು. ಜಲವಿಜ್ಞಾನದ ಸಿಮ್ಯುಲೇಶನ್‌ಗಳು ಈ ಬರಗಾಲಗಳೊಂದಿಗೆ ನದಿಯ ಹರಿವಿನಲ್ಲಿ ವಿಚಲನಗಳು ಉಂಟಾಗಿ, ನದಿಯ ದಡದಲ್ಲಿಯೂ ನೀರಿನ ಕೊರತೆಗೆ ಕಾರಣವಾಯಿತು ಎಂದು ತೋರಿಸುತ್ತವೆ.
ಸಸ್ಯಗಳ ಅವಶೇಷಗಳ (ಆರ್ಕಿಯೋ-ಬೊಟಾನಿಕಲ್ ಸಾಕ್ಷ್ಯ) ಪುರಾವೆಗಳ ಪ್ರಕಾರ, ರೈತರು ಗೋಧಿ ಮತ್ತು ಬಾರ್ಲಿಯಿಂದ ಬರ-ನಿರೋಧಕ ಸಿರಿಧಾನ್ಯಗಳಿಗೆ (Millets) ಬದಲಾಯಿಸುವ ಮೂಲಕ ಹೊಂದಿಕೊಂಡರು, ಆದರೆ ಈ ಕ್ರಮಗಳು ದೀರ್ಘಕಾಲದ ಬರಗಾಲದ ಪರಿಣಾಮವನ್ನು ಸಂಪೂರ್ಣವಾಗಿ ಸರಿದೂಗಿಸಲು ಸಾಧ್ಯವಾಗಲಿಲ್ಲ.
ಸರೋವರದ ಮಟ್ಟದ ದಾಖಲೆಗಳು ಮತ್ತು ಗುಹೆಯ ದತ್ತಾಂಶಗಳು ಪ್ರಮುಖ ಬರಗಾಲದ ಅವಧಿಯಲ್ಲಿ ನೀರಿನ ಪ್ರದೇಶಗಳು ಮತ್ತು ಮಳೆಯ ಕುಸಿತವನ್ನು ತೋರಿಸುವ ಮೂಲಕ ಹವಾಮಾನ ಮಾದರಿಗಳನ್ನು ಸಮರ್ಥಿಸುತ್ತವೆ.
ಕೊನೆಯ, ಶತಮಾನದಷ್ಟು ಸುದೀರ್ಘವಾದ ಬರಗಾಲ (3,531–3,418 ವರ್ಷಗಳ ಹಿಂದೆ) ವ್ಯಾಪಕ ನಗರ-ತ್ಯಜಿಸುವಿಕೆಯ ಪುರಾತತ್ವ ಸಾಕ್ಷ್ಯಕ್ಕೆ ಹೊಂದಿಕೆಯಾಗುತ್ತದೆ. ದೊಡ್ಡ ನಗರಗಳನ್ನು ತ್ಯಜಿಸಲಾಯಿತು ಮತ್ತು ಜನಸಂಖ್ಯೆಯು ಚಿಕ್ಕ, ಗ್ರಾಮೀಣ ಸಮುದಾಯಗಳಾಗಿ ಚದುರಿಹೋಯಿತು.
ಹಠಾತ್ ಆಗಿದ್ದಲ್ಲ, ನಿಧಾನವಾಗಿ ಆಗಿದ್ದು….
ಹಠಾತ್ ಸಂಭವಿಸಿದ ಹಿಂದಿನ ಸಿದ್ಧಾಂತಗಳಿಗೆ ವಿರುದ್ಧವಾಗಿ, ಪುರಾವೆಗಳು ನಿಧಾನ, ಸಂಕೀರ್ಣವಾದ ಅವನತಿ ಪ್ರಕ್ರಿಯೆಯನ್ನು ಸೂಚಿಸುತ್ತವೆ. ಸಿಂದೂ ಕಣಿವೆ ನಾಗರಿಕತೆಯ ಕಣ್ಮರೆಯು ಹವಾಮಾನ, ಸಾಮಾಜಿಕ ಮತ್ತು ಆರ್ಥಿಕ ಒತ್ತಡಗಳ ಸಂಯೋಜನೆಯಿಂದ ರೂಪುಗೊಂಡಿತು. ದೀರ್ಘಕಾಲದ ಬರಗಳು ಒಂದು ಪ್ರಮುಖ ಅಂಶವಾಗಿದ್ದರೂ, ಸಮುದಾಯಗಳು ವಲಸೆ, ಬೆಳೆ ವೈವಿಧ್ಯೀಕರಣ ಮತ್ತು ವ್ಯಾಪಾರದ ಮೂಲಕವೂ ಹೊಂದಿಕೊಂಡವು. ನಾಗರಿಕತೆಯು ಸಣ್ಣ ಘಟಕಗಳಾಗಿ ವಿಭಜನೆಯಾಯಿತು, ಇದು ಸಂಪೂರ್ಣ ಕಣ್ಮರೆಯಾಗುವ ಬದಲು ರೂಪಾಂತರವನ್ನು ಗುರುತಿಸುತ್ತದೆ.
ಇಂದಿನ ಸಮಾಜಕ್ಕೆ ಪಾಠಗಳು
ಸಿಂಧೂ ಕಣಿವೆ ನಾಗರಿಕತೆಯ ಕಥೆಯು ಪರಿಸರ ಒತ್ತಡಕ್ಕೆ ಸಂಕೀರ್ಣ ಸಮಾಜಗಳ ದುರ್ಬಲತೆಯ ಬಗ್ಗೆ ಎಚ್ಚರಿಕೆಯ ಕಥೆಯಾಗಿ ಕಾರ್ಯನಿರ್ವಹಿಸುತ್ತದೆ. ಇದು ನೀರಿನ ನಿರ್ವಹಣೆ ಮತ್ತು ಹವಾಮಾನ ಹೊಂದಾಣಿಕೆಯ ಮಹತ್ವವನ್ನು ಒತ್ತಿಹೇಳುತ್ತದೆ, ಆಧುನಿಕ ಸಮಾಜಗಳು ಹವಾಮಾನ ಬದಲಾವಣೆ ಮತ್ತು ನೀರಿನ ಕೊರತೆಯಿಂದ ಹೆಚ್ಚುತ್ತಿರುವ ಅಪಾಯಗಳನ್ನು ಎದುರಿಸುತ್ತಿರುವಾಗ ಇದು ಪ್ರಸ್ತುತವಾಗಿರುವ ಪಾಠಗಳಾಗಿವೆ. ಹವಾಮಾನ ಬದಲಾವಣೆಯಿಂದಾಗಿ ಭೂಗೋಳ ಬೆಚ್ಚಗಾಗುತ್ತಿದ್ದಂತೆ, ಭಾರತದ ಮಾನ್ಸೂನ್‌ಗೆ ಹೆಚ್ಚಿನ ಮಳೆ ಸೇರ್ಪಡೆಯಾಗುತ್ತದೆ ಎಂದು ಹವಾಮಾನ ಸಂಶೋಧಕರು ಭಾವಿಸುತ್ತಾರೆ. ಇದು ಒಂದು ಸಕಾರಾತ್ಮಕ ಅಂಶವಾಗಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement