ನವದೆಹಲಿ : ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ ಅವರು ಸೋಮವಾರ (ಡಿಸೆಂಬರ್ 1) ರಕ್ಷಿಸಿದ ಒಂದು ಬೀದಿ ನಾಯಿಯನ್ನು ತಮ್ಮ ಕಾರಿನಲ್ಲಿ ಸಂಸತ್ತಿಗೆ ಕರೆತಂದಿರುವುದು ವಿವಾದಕ್ಕೆ ಕಾರಣವಾಗಿದೆ. ಚಳಿಗಾಲದ ಅಧಿವೇಶನದಲ್ಲಿ ಭಾಗವಹಿಸಲು ಚೌಧರಿ ಇಂದು ಸಂಸತ್ತಿಗೆ ಆಗಮಿಸಿದಾಗ ಅಚ್ಚರಿಯಾಗುವಂತೆ, ಅವರ ಜೊತೆ ಒಂದು ನಾಯಿಮರಿಯೂ ಇತ್ತು. ಅವರು ನಾಯಿಮರಿಯನ್ನು ತಮ್ಮ ಕಾರಿನಲ್ಲಿ ಮನೆಗೆ ಕಳುಹಿಸಿದರೂ, ಆ ಅಸಾಮಾನ್ಯ ಸಂಗಾತಿ ಸಂಸದೀಯ ಶಿಷ್ಟಾಚಾರದ ಕುರಿತು ಚರ್ಚೆಗೆ ನಾಂದಿ ಹಾಡಿತು.
ಇದು ಆಡಳಿತ ಪಕ್ಷದ ಕೆಲವು ಸದಸ್ಯರು ನಾಟಕ ಮಾಡುತ್ತಿದ್ದಾರೆ ಎಂದು ಆರೋಪಿಸಲು ಕಾರಣವಾಯಿತು.
ಈ ವಿವಾದಕ್ಕೆ ಪ್ರತಿಕ್ರಿಯಿಸಿದ ಚೌಧರಿ, “ಒಳಗೆ ಕುಳಿತವರು ಕಚ್ಚುತ್ತಾರೆ, ನಾಯಿಗಳಲ್ಲ” ಎಂದು ಹೇಳಿದರು.
ಈ ವಿಷಯ ಟೀಕೆಗೆ ಒಳಗಾಗಿದ್ದಕ್ಕೆ ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ ಅಸಮಾಧಾನ ವ್ಯಕ್ತಪಡಿಸಿದರು. ದಿನದ ಆರಂಭದಲ್ಲಿ ಆ ನಾಯಿ ಮರಿಯನ್ನು ರಕ್ಷಿಸಲಾಗಿದೆ, ಅದನ್ನು ಪಶುವೈದ್ಯರ ಬಳಿಗೆ ಕರೆದುಕೊಂಡು ಹೋಗುತ್ತಿರುವುದಾಗಿ ಚೌಧರಿ ತಿಳಿಸಿದರು. ಬೀದಿ ನಾಯಿಯನ್ನು ರಕ್ಷಿಸಲು ಯಾವುದೇ ಕಾನೂನು ಇಲ್ಲದಿರುವಾಗ ಆಡಳಿತ ಪಕ್ಷದ ಸಂಸದರು ಆಕ್ಷೇಪ ವ್ಯಕ್ತಪಡಿಸುವುದು ಯಾಕೆ ಎಂದು ಪ್ರಶ್ನಿಸಿದರು.
ತಮ್ಮ ಕಾರಿನಲ್ಲಿ ನಾಯಿ ಇದ್ದ ಬಗ್ಗೆ ಕೇಳಿದಾಗ, “ಈ ಸರ್ಕಾರಕ್ಕೆ ಪ್ರಾಣಿಗಳು ಇಷ್ಟವಿಲ್ಲ. ಪ್ರಾಣಿಗಳಿಗೆ ಧ್ವನಿ ಇಲ್ಲ. ಅದು (ನಾಯಿ) ಕಾರಿನಲ್ಲಿದ್ದರೆ, ಅವರಿಗೇನು ಸಮಸ್ಯೆ? ಅದು ತುಂಬಾ ಚಿಕ್ಕದಾಗಿದೆ, ಅದು ಕಚ್ಚುವಂತೆ ಕಾಣುತ್ತದೆಯೇ? ಸಂಸತ್ತಿನ ಒಳಗೆ ಕುಳಿತವರು ಕಚ್ಚುತ್ತಾರೆ, ನಾಯಿಗಳಲ್ಲ ಎಂದು ಅವರು ಹೇಳಿದರು.
“ನಾನು ನಾಯಿಯನ್ನು ರಕ್ಷಿಸಬಾರದು ಎಂದು ಹೇಳುವ ಕಾನೂನು ಯಾವುದು? ಎಂದು ಪ್ರಶ್ನಿಸಿದ ಅವರು, ತಾವೊಬ್ಬ ನಾಯಿ ಪ್ರೇಮಿ, ತಮ್ಮ ಮನೆಯಲ್ಲಿ ಕೆಲವು ಸಾಕು ನಾಯಿಗಳಿವೆ ಎಂದು ಅವರು ಎಂದು ಹೇಳಿದ್ದಾರೆ.
ಆದರೆ, ಬಿಜೆಪಿ ಸಂಸದ ಜಗದಂಬಿಕಾ ಪಾಲ ಅವರು ರೇಣುಕಾ ಚೌಧರಿ ಅವರು “ತಮಾಷೆ” (ನಾಟಕೀಯತೆ) ಮಾಡುತ್ತಿದ್ದಾರೆ ಮತ್ತು ನಾಯಿಯನ್ನು ಸಂಸತ್ತಿಗೆ ತರುವ ಮೂಲಕ ಶಿಷ್ಟಾಚಾರವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದರು. ಸರಿಯಾದ ದಾಖಲೆಗಳಿಲ್ಲದೆ ಸದಸ್ಯರು ಯಾರನ್ನೂ ಸಂಸತ್ತಿನೊಳಗೆ ಕರೆತರಲು ಸಾಧ್ಯವಿಲ್ಲ ಎಂದು ಅವರು ವಾದಿಸಿದರು ಮತ್ತು ಕ್ರಮಕ್ಕೆ ಆಗ್ರಹಿಸಿದರು.
“ನೀವು ಸಮಸ್ಯೆಗಳ ಬಗ್ಗೆ ಚರ್ಚಿಸಲು ಗಂಭೀರವಾಗಿಲ್ಲ… ಇಂತಹ ತಮಾಷೆಯಿಂದ ನೀವು ಸಂಸತ್ತನ್ನು ಗೇಲಿ ಮಾಡುತ್ತಿದ್ದೀರಿ… ಅವರು ಸದನದ ಸದಸ್ಯರಾಗಿದ್ದು, ಇಂತಹ ನಾಟಕದಲ್ಲಿ ತೊಡಗುವ ಬದಲು ಸಾರ್ವಜನಿಕ ಮಹತ್ವದ ವಿಷಯಗಳನ್ನು ಪ್ರಸ್ತಾಪಿಸಬೇಕು ಎಂದು ಹೇಳಿದರು.
“ಅವರ ವಿರುದ್ಧ ಸದನದ ಚೇರ್ಮನ್ ಕ್ರಮ ಕೈಗೊಳ್ಳಬೇಕು,” ಎಂದು ಪಾಲ್ ಒತ್ತಾಯಿಸಿದರು. ಸಂಸತ್ತಿನ ಆವರಣದೊಳಗೆ ನಾಯಿಗಳು ಅಥವಾ ಪ್ರಾಣಿಗಳನ್ನು ಕರೆತರುವುದು ಸಮ್ಮತವಲ್ಲ ಎಂದು ಬಿಜೆಪಿ ಸದಸ್ಯರು ಹೇಳಿದರು.


ನಿಮ್ಮ ಕಾಮೆಂಟ್ ಬರೆಯಿರಿ