ಕಾಡಿಗೆ ಬಿಟ್ಟು ಬಂದರೂ ಮತ್ತೆ ಅದೇ ಅರಳಿಮರದ ಜಾಗಕ್ಕೆ ಬಂದ ನಾಗಿಣಿ; ಅದನ್ನು ನೋಡಲು ಜನರ ದಂಡು

ಧಾರ: ಮಧ್ಯಪ್ರದೇಶದ ಧಾರ ಜಿಲ್ಲೆಯ ಗಂಧವಾನಿ ಪ್ರದೇಶದ ಸಣ್ಣ ಗ್ರಾಮವಾದ ಸಾಲಿ ಒಂದು ನಾಗಿಣಿ(ಹೆಣ್ಣು ನಾಗರ ಹಾವು)ಯ ಕಾರಣದಿಂದ ರಾಜ್ಯಾದ್ಯಂತ ಚರ್ಚೆಯ ಕೇಂದ್ರಬಿಂದುವಾಗಿದೆ. ಗ್ರಾಮದ ರಸ್ತೆ ಬದಿಯ ಒಂದೇ ಸ್ಥಳದಲ್ಲಿ ಹಲವು ದಿನಗಳಿಂದ ನಿರಂತರವಾಗಿ ಕಾಣಿಸಿಕೊಳ್ಳುತ್ತಿರುವ ನಾಗಿಣಿ ಗ್ರಾಮಸ್ಥರಲ್ಲಿ ಆಶ್ಚರ್ಯ, ಕುತೂಹಲ ಮತ್ತು ಭಕ್ತಿಭಾವ ಮೂಡಿಸಿದೆ. ಅಷ್ಟೇ ಅಲ್ಲದೆ, ಅರಣ್ಯ ಇಲಾಖೆ ರಕ್ಷಿಸಿ ಕಾಡಿಗೆ ಬಿಟ್ಟ ನಂತರವೂ ನಾಗಿಣಿಯುಮತ್ತೆ ಅದೇ ಸ್ಥಳಕ್ಕೆ ವಾಪಸ್‌ ಬಂದಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಗ್ರಾಮಸ್ಥರ ಮಾಹಿತಿ ಪ್ರಕಾರ, ನಾಗಿಣಿ ಮೊದಲ ಬಾರಿ ಕಾಣಿಸಿಕೊಂಡಾಗ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿತ್ತು. ತಕ್ಷಣ ಸ್ಥಳಕ್ಕೆ ಬಂದ ಅಧಿಕಾರಿಗಳು ನಾಗಿಣಿಯನ್ನು ಸುರಕ್ಷಿತವಾಗಿ ಹಿಡಿದು ಗ್ರಾಮದಿಂದ ದೂರದ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದರು. ಆದರೆ ಕೆಲವೇ ಗಂಟೆಗಳಲ್ಲಿ ನಾಗಿಣಿ ಮತ್ತೆ ಅದೇ ಸ್ಥಳದಲ್ಲಿ ಕಾಣಿಸಿಕೊಂಡಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಬಳಿಕ ಅದು ಅಲ್ಲಿಂದ ತೆರಳದೆ ನಿರಂತರವಾಗಿ ಅದೇ ಪ್ರದೇಶದಲ್ಲಿ ತಂಗಿರುವುದು ಜನರ ಗಮನ ಸೆಳೆದಿದೆ.

ಸ್ಥಳೀಯ ನಿವಾಸಿಯೊಬ್ಬರ ಪ್ರಕಾರ, ನಾಗಿಣಿ ಹಗಲು-ರಾತ್ರಿ ಬಹುತೇಕ ಒಂದೇ ಸ್ಥಳದ ಸುತ್ತಮುತ್ತಲೇ ಕಾಣಿಸಿಕೊಳ್ಳುತ್ತಿದ್ದು, ಇದರಿಂದ ಗ್ರಾಮಸ್ಥರು ಹಾಗೂ ಹೊರಗಿನಿಂದ ಬರುವವರ ಕುತೂಹಲ ಹೆಚ್ಚಾಗಿದೆ.
ಶ್ರಾವಣ ಮಾಸ ಹಾಗೂ ನಾಗಪಂಚಮಿ ಹಬ್ಬದ ಸಂದರ್ಭದಲ್ಲಿ ಈ ಘಟನೆ ಮತ್ತಷ್ಟು ಗಮನ ಸೆಳೆಯಿತು. ನಾಗಿಣಿಯನ್ನು ನೋಡಲು ಸುತ್ತಮುತ್ತಲಿನ ಗ್ರಾಮಗಳಿಂದ ಜನರು ಸಾಲಿ ಗ್ರಾಮಕ್ಕೆ ಆಗಮಿಸಿದರು. ಗ್ರಾಮಸ್ಥರ ಪ್ರಕಾರ, ನಾಗಪಂಚಮಿ ದಿನವೇ ಸುಮಾರು 5,000 ರಿಂದ 7,000 ಜನರು ನಾಗಿಣಿಯನ್ನು ವೀಕ್ಷಿಸಲು ಬಂದಿದ್ದರು. ಅನೇಕ ಭಕ್ತರು ನಾಗಿಣಿಗೆ ಪೂಜೆ ಸಲ್ಲಿಸಿ ಆರಾಧನೆಯನ್ನೂ ನಡೆಸಿದರು.
ಭಾರಿ ಜನಸಂದಣಿಯ ನಡುವೆಯೂ ನಾಗಿಣಿ ಶಾಂತವಾಗಿ ವರ್ತಿಸಿರುವುದು ಜನರಲ್ಲಿ ಮತ್ತಷ್ಟು ಆಶ್ಚರ್ಯ ಮೂಡಿಸಿದೆ. ಇದೇ ಕಾರಣದಿಂದ ಈ ಘಟನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ವ್ಯಾಪಕ ಚರ್ಚೆ ನಡೆಯುತ್ತಿದೆ.
ಗ್ರಾಮಸ್ಥರು ಈ ಘಟನೆಯನ್ನು ಸ್ಥಳೀಯ ಆರಾಧ್ಯ ದೈವವಾದ ಭೀಲಟ್ ದೇವರ ಚಮತ್ಕಾರ ಎಂದು ಹಲವರು ನಂಬಿದ್ದಾರೆ. ಈ ನಂಬಿಕೆಯ ಹಿನ್ನೆಲೆಯಲ್ಲಿ ನಾಗಿಣಿ ಕಾಣಿಸಿಕೊಳ್ಳುವ ಸ್ಥಳದಲ್ಲೇ ಭೀಲಟ್ ದೇವರ ದೇವಾಲಯ ನಿರ್ಮಿಸಲು ಗ್ರಾಮಸ್ಥರು ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ.

ಪ್ರಮುಖ ಸುದ್ದಿ :-   ಗಂಡನ ಕೊಂದು, ದೇಹ ಕತ್ತರಿಸಿ, ಕರುಳು ಹೊರತೆಗೆದು ಚೀಲದಲ್ಲಿ ತುಂಬುತ್ತಿದ್ದ ಪತ್ನಿ; ಮನೆ ಮಾಲೀಕ ಕಂಡಾಗ ಕಟ್ಟಡದಿಂದ ಜಿಗಿದಳು...

ಇನ್ನೊಂದೆಡೆ, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅವರ ಪ್ರಕಾರ, ನಾಗಿಣಿ ಸಂಪೂರ್ಣ ಆರೋಗ್ಯವಾಗಿದ್ದು ಯಾವುದೇ ಅಪಾಯದ ಲಕ್ಷಣಗಳು ಕಂಡುಬಂದಿಲ್ಲ. ಮೊದಲು ಅದನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಪ್ರಯತ್ನ ಮಾಡಲಾಗಿತ್ತು. ಆದರೆ ಗ್ರಾಮಸ್ಥರ ಪ್ರಕಾರ ಅದು ಮತ್ತೆ ಹಿಂದಿರುಗಿದೆ.
ನಾಗಿಣಿಯ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಈ ಘಟನೆ ಸ್ಥಳೀಯ ಮಟ್ಟವನ್ನು ಮೀರಿ ರಾಜ್ಯದ ವಿವಿಧ ಭಾಗಗಳ ಗಮನ ಸೆಳೆದಿದೆ. ಪರಿಣಾಮವಾಗಿ ಇತರ ಜಿಲ್ಲೆಗಳಿಂದಲೂ ಜನರು ಸಾಲಿ ಗ್ರಾಮಕ್ಕೆ ಆಗಮಿಸುತ್ತಿದ್ದಾರೆ. ಜನರ ಸುರಕ್ಷತೆಯ ದೃಷ್ಟಿಯಿಂದ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಎಚ್ಚರಿಕೆ ವಹಿಸಿದ್ದು, ನಾಗಿಣಿಯ ಹತ್ತಿರ ಹೋಗದಂತೆ ಸಾರ್ವಜನಿಕರಿಗೆ ಮನವಿ ಮಾಡಿವೆ. ಭಕ್ತಿ ಮತ್ತು ನಂಬಿಕೆಯ ಜೊತೆ ಎಚ್ಚರಿಕೆಯಿಂದ ವರ್ತಿಸುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಹಾವುಗಳು ಯಾಕೆ ಪುನಃ ಮೊದಲಿನ ಸ್ಥಳಕ್ಕೆ ಬರುತ್ತವೆ..?
ನಾಗರಹಾವು ಸೇರಿದಂತೆ ಅನೇಕ ಹಾವುಗಳನ್ನು ಒಂದು ಪ್ರದೇಶದಿಂದ ಹಿಡಿದು ಬೇರೆಡೆಗೆ ಸ್ಥಳಾಂತರಿಸಿದ ಬಳಿಕ ಅವು ಮತ್ತೆ ತಮ್ಮ ಮೊದಲಿನ ಪ್ರದೇಶಕ್ಕೆ ಮರಳಲು ಪ್ರಯತ್ನಿಸುತ್ತವೆ. ಕಾರಣ, ಅವುಗಳಿಗೆ ತಮ್ಮ ವಾಸಸ್ಥಳದ ಬಗ್ಗೆ ಅತ್ಯಂತ ನಿಖರವಾದ ಅರಿವು ಇರುತ್ತದೆ. ಆಹಾರ, ನೀರು ಮತ್ತು ಸುರಕ್ಷಿತ ಆಶ್ರಯದಂತಹ ಅಗತ್ಯ ಸಂಪನ್ಮೂಲಗಳನ್ನು ಹುಡುಕಲು ಹಾವುಗಳು ವಾಸನೆ ಗುರುತುಗಳು, ಭೌಗೋಳಿಕ ಲಕ್ಷಣಗಳು ಹಾಗೂ ತಮ್ಮ ನೆನಪಿನ ಶಕ್ತಿಯ ಮೇಲೆ ವಾಪಸ್‌ ಬರುತ್ತವೆ.
ಸ್ಥಳಾಂತರಗೊಂಡ ಹಾವು ಹೊಸ ಮತ್ತು ಅಪರಿಚಿತ ಪರಿಸರದಲ್ಲಿದ್ದಾಗ, ಗೊಂದಲ ಮತ್ತು ಒತ್ತಡಕ್ಕೆ ಒಳಗಾಗುತ್ತದೆ. ಈ ಕಾರಣದಿಂದ ಅದು ತನ್ನ ಹಳೆಯ, ಪರಿಚಿತ ಹಾಗೂ ಸುರಕ್ಷಿತ ಪ್ರದೇಶವನ್ನು ಮತ್ತೆ ಹುಡುಕುವ ಉದ್ದೇಶದಿಂದ ದೂರದವರೆಗೆ ಸಂಚರಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ ಸ್ಥಳಾಂತರಿಸಿದ ಹಾವುಗಳು ಮತ್ತೆ ಅದೇ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತವೆ ಎಂದು ಅನೇಕ ತಜ್ಞರು ಹೇಳುತ್ತಾರೆ.

ಪ್ರಮುಖ ಸುದ್ದಿ :-   ಗಂಡನ ಕೊಂದು, ದೇಹ ಕತ್ತರಿಸಿ, ಕರುಳು ಹೊರತೆಗೆದು ಚೀಲದಲ್ಲಿ ತುಂಬುತ್ತಿದ್ದ ಪತ್ನಿ; ಮನೆ ಮಾಲೀಕ ಕಂಡಾಗ ಕಟ್ಟಡದಿಂದ ಜಿಗಿದಳು...

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement