ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ (National Highways) ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಪ್ರಯಾಣಿಕರಿಗೆ ಸುಗಮ ಪ್ರಯಾಣಕ್ಕೆ ಅನುಕೂಲವಾಗಲು ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ (NHAI), ಟೆಲಿಕಾಂ-ಆಧಾರಿತ ಸುರಕ್ಷತಾ ಎಚ್ಚರಿಕೆ ವ್ಯವಸ್ಥೆಯನ್ನು ರಾಷ್ಟ್ರೀಯ ಹೆದ್ದಾರಿಗಳ ಜಾಲದಾದ್ಯಂತ ಪರಿಚಯಿಸಲು ರಿಲಯನ್ಸ್ ಜಿಯೋ (Reliance Jio) ಜೊತೆ ಒಪ್ಪಂದಕ್ಕೆ (MoU) ಸಹಿ ಹಾಕಿದೆ.
ಜಿಯೋದ ಅಸ್ತಿತ್ವದಲ್ಲಿರುವ 4G ಮತ್ತು 5G ನೆಟ್ವರ್ಕ್ ಅನ್ನು ಬಳಸಿಕೊಂಡು, ಅಪಘಾತ-ಪೀಡಿತ ಪ್ರದೇಶಗಳು, ದನಕರುಗಳ ವಲಯಗಳು, ಮಂಜು-ಪೀಡಿತ ಪ್ರದೇಶಗಳು ಮತ್ತು ತುರ್ತು ಸಂಚಾರ ಮಾರ್ಗದ ಬದಲಾವಣೆಗಳಂತಹ ಗುರುತಿಸಲಾದ ಅಪಾಯಕಾರಿ ಸ್ಥಳಗಳನ್ನು ಪ್ರಯಾಣಿಕರು ಸಮೀಪಿಸುತ್ತಿದ್ದಂತೆ ಅವರ ಮೊಬೈಲ್ ಫೋನ್ಗಳಿಗೆ ಮುನ್ಸೂಚನೆ ಎಚ್ಚರಿಕೆಗಳು ಬರಲಿವೆ.
ಈ ಉಪಕ್ರಮದ ಮುಖ್ಯ ಉದ್ದೇಶವು ರಾಷ್ಟ್ರೀಯ ಹೆದ್ದಾರಿ ಬಳಕೆದಾರರಿಗೆ ಸಮಯಕ್ಕೆ ಸರಿಯಾದ ಮಾಹಿತಿಯನ್ನು ಒದಗಿಸುವ ಮೂಲಕ ರಸ್ತೆ ಸುರಕ್ಷತೆಯನ್ನು ಬಲಪಡಿಸುವುದಾಗಿದೆ. ಅಲ್ಲದೆ, ಅವರಿಗೆ ವಾಹನ ಚಾಲನೆಗೆ ಅನುಕೂಲವಾಗಲಿದೆ. ಈ ಬಗ್ಗೆ ಎಚ್ಚರಿಕೆಗಳನ್ನು ರಾಷ್ಟ್ರೀಯ ಹೆದ್ದಾರಿ ಬಳಕೆದಾರರಿಗೆ SMS, WhatsApp, ಮತ್ತು ಹೆಚ್ಚಿನ ಆದ್ಯತೆಯ ಕರೆಗಳ ಮೂಲಕ ಕಳುಹಿಸಲಾಗುತ್ತದೆ.
ಈ ವ್ಯವಸ್ಥೆಯನ್ನು ಹಂತಹಂತವಾಗಿ ಎನ್ಎಚ್ಎಐ (NHAI)ಯ ಡಿಜಿಟಲ್ ವೇದಿಕೆಗಳಾದ ‘ರಾಜಮಾರ್ಗಯಾತ್ರಾ’ (Rajmargyatra) ಮೊಬೈಲ್ ಅಪ್ಲಿಕೇಶನ್ ಮತ್ತು ತುರ್ತು ಸಹಾಯವಾಣಿ ಸಂಖ್ಯೆ 1033 ರೊಂದಿಗೆ ಸಂಯೋಜಿಸಲಾಗುತ್ತದೆ.
ಈ ಸ್ವಯಂಚಾಲಿತ ವ್ಯವಸ್ಥೆ(automated system)ಯು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಥವಾ ಅದರ ಸಮೀಪದಲ್ಲಿರುವ ಎಲ್ಲಾ ಜಿಯೋ ಮೊಬೈಲ್ ಬಳಕೆದಾರರಿಗೆ ಕಾರ್ಯನಿರ್ವಹಿಸುತ್ತದೆ ಮತ್ತು ಅಪಾಯಕಾರಿ ವಲಯವನ್ನು ಪ್ರವೇಶಿಸುವ ಮುನ್ನವೇ ಎಚ್ಚರಿಕೆ ನೀಡುತ್ತದೆ. ಈ ಕಾರ್ಯತಂತ್ರದ ಪಾಲುದಾರಿಕೆಯು ದೇಶದಲ್ಲಿ 50 ಕೋಟಿಗಿಂತಲೂ ಹೆಚ್ಚು ಚಂದಾದಾರರನ್ನು ಹೊಂದಿರುವ ಜಿಯೋದ ಡಿಜಿಟಲ್ ಮೂಲಸೌಕರ್ಯವನ್ನು ಬಳಸಿಕೊಳ್ಳಲಿದೆ.


ನಿಮ್ಮ ಕಾಮೆಂಟ್ ಬರೆಯಿರಿ