ನವದೆಹಲಿ: ‘ಸಂಚಾರ ಸಾಥಿ’ (Sanchar Saathi) ಅಪ್ಲಿಕೇಶನ್ ಬಳಕೆದಾರರಿಗೆ ಕಡ್ಡಾಯವಲ್ಲ, ಅದನ್ನು ಬಳಸಲು ಇಚ್ಛಿಸದೇ ಇದ್ದವರು ಅದನ್ನು ಡಿಲೀಟ್ ಮಾಡಬಹುದು ಎಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.
ಈ ಅಪ್ಲಿಕೇಶನ್ ಅನ್ನು ಮೊಬೈಲ್‌ಗಳಲ್ಲಿ ಮೊದಲೇ ಅಳವಡಿಸಲು (Pre-install) ಕೇಂದ್ರ ಸರ್ಕಾರ ನೀಡಿದ್ದ ನಿರ್ದೇಶನವು ಖಾಸಗಿತನ ಮತ್ತು ಸರ್ಕಾರದ ಕಣ್ಗಾವಲಿನ (State Surveillance)ಬಗ್ಗೆ ವಿಪಕ್ಷಗಳಿಂದ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಸಚಿವರು ಈ ಸ್ಪಷ್ಟನೆ ನೀಡಿದ್ದಾರೆ.
ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ದೂರಸಂಪರ್ಕ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ, ಈ ಅಪ್ಲಿಕೇಶನ್ ಯಾವುದೇ ರೀತಿಯ ಬೇಹುಗಾರಿಕೆ ಅಥವಾ ಕರೆಗಳ ಮೇಲೆ ನಿಗಾ ಇಡುವುದಿಲ್ಲ ಎಂದು ಒತ್ತಿ ಹೇಳಿದರು. ಇದು ಸರ್ಕಾರವೇ ಅಭಿವೃದ್ಧಿಪಡಿಸಿದ ಸೈಬರ್ ಸುರಕ್ಷತಾ (Cybersecurity) ಅಪ್ಲಿಕೇಶನ್ ಆಗಿದೆ.
“ನಿಮಗೆ ಬೇಕಿದ್ದರೆ ಅದನ್ನು ಆಕ್ಟಿವ್ ಮಾಡಿ; ಬೇಡವೆಂದರೆ ಸಕ್ರಿಯಗೊಳಿಸಬೇಡಿ… ಸಂಚಾರ್ ಸಾಥಿ ಬೇಡವೆಂದರೆ ಅದನ್ನು ಡಿಲೀಟ್ ಮಾಡಬಹುದು. ಇದು ಐಚ್ಛಿಕ ಎಂದು ಸಿಂಧಿಯಾ ತಿಳಿಸಿದರು.
ಈ ಅಪ್ಲಿಕೇಶನ್ ಮೊಬೈಲ್‌ನಲ್ಲಿದ್ದರೂ ಬಳಕೆದಾರರು ಸಕ್ರಿಯಗೊಳಿಸಿದ ನಂತರವಷ್ಟೇ ಕಾರ್ಯನಿರ್ವಹಿಸುತ್ತದೆ ಮತ್ತು ಯಾವುದೇ ಸಮಯದಲ್ಲಿ ಅದನ್ನು ಡಿಲೀಟ್ ಮಾಡಬಹುದು ಎಂದು ಅವರು ಹೇಳಿದರು.
ಸೈಬರ್ ವಂಚನೆಗಳನ್ನು ತಡೆಯಲು ಹೆಚ್ಚಿನ ಜನರಿಗೆ ಈ ಸಾಧನವನ್ನು ತಲುಪಿಸುವ ಏಕೈಕ ಉದ್ದೇಶದಿಂದ ಮೊಬೈಲ್ ತಯಾರಕರಿಗೆ ಈ ನಿರ್ದೇಶನ ನೀಡಲಾಗಿದೆ ಎಂದು ಸಿಂಧಿಯಾ ಹೇಳಿದರು.
ಜನವರಿ 2025 ರಲ್ಲಿ ಪ್ರಾರಂಭಿಸಲಾದ ‘ಸಂಚಾರ್ ಸಾಥಿ’ ಅಪ್ಲಿಕೇಶನ್ ಬಳಸಿದರೆ ಮೊಬೈಲ್ ಕಳ್ಳತನವಾದರೆ ಅಥವಾ ಕಳೆದುಹೋದರೆ ಬ್ಲಾಕ್ ಮಾಡಬಹುದು. ಅಷ್ಟೇ ಅಲ್ಲದೇ ಈ ಫೋನ್ ದೇಶದ ಬೇರೆ ಕಡೆ ಬಳಕೆಯಾಗುತ್ತಿದ್ದರೂ ಕಾನೂನು ಸಂಸ್ಥೆಗಳಿಗೆ ಎಲ್ಲಿ ಈ ಫೋನ್ ಸಕ್ರಿಯವಾಗಿದೆ ಎಂಬ ಮಾಹಿತಿ ಸುಲಭವಾಗಿ ಲಭ್ಯವಾಗುತ್ತದೆ. ಸೈಬರ್ ಅಪರಾಧ, ನಕಲಿ ಐಇಎಂಐ ಸಂಖ್ಯೆ ಬಳಸಿ ನಡೆಸುವ ಕೃತ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಈ ಆ್ಯಪ್ ಅಳವಡಿಸುವುದನ್ನು ಕಡ್ಡಾಯ ಮಾಡಿತ್ತು.
ಸಂಚಾರ್ ಸಾಥಿ ಪೋರ್ಟಲ್ ಅನ್ನು 20 ಕೋಟಿಗೂ ಹೆಚ್ಚು ಬಾರಿ ಡೌನ್‌ಲೋಡ್ ಮಾಡಲಾಗಿದೆ ಮತ್ತು ಅಪ್ಲಿಕೇಶನ್ ಸ್ವತಃ 1.5 ಕೋಟಿಗೂ ಹೆಚ್ಚು ಡೌನ್‌ಲೋಡ್‌ಗಳನ್ನು ಹೊಂದಿದೆ ಎಂದು ಸಿಂಧಿಯಾ ಹೈಲೈಟ್ ಮಾಡಿದ್ದಾರೆ. ಈ ಅಪ್ಲಿಕೇಶನ್ 1.14 ಕೋಟಿಗೂ ಹೆಚ್ಚು ನೋಂದಣಿಗಳನ್ನು ಪಡೆದಿದ್ದು, ಗೂಗಲ್ ಪ್ಲೇಸ್ಟೋರ್‌ನಿಂದ 1 ಕೋಟಿಗೂ ಹೆಚ್ಚು ಡೌನ್‌ಲೋಡ್ ಮತ್ತು ಆಪಲ್ ಸ್ಟೋರ್‌ನಿಂದ 9.5 ಲಕ್ಷಕ್ಕೂ ಹೆಚ್ಚು ಡೌನ್‌ಲೋಡ್‌ಗಳು ಆಗಿವೆ. ಸುಮಾರು 20 ಲಕ್ಷ ಕದ್ದ ಫೋನ್‌ಗಳನ್ನು ಪತ್ತೆಹಚ್ಚಲಾಗಿದೆ ಮತ್ತು 7.5 ಲಕ್ಷ ಫೋನ್‌ಗಳನ್ನು ಅವುಗಳ ಮಾಲೀಕರಿಗೆ ಹಿಂತಿರುಗಿಸಲಾಗಿದೆ, ಎಲ್ಲವೂ ಸಂಚಾರ್ ಸಾಥಿಯಿಂದಾಗಿ” ಎಂದು ಅವರು ಮಾಹಿತಿ ನೀಡಿದರು.
ಅಪ್ಲಿಕೇಶನ್, ಕರೆ ಮೇಲ್ವಿಚಾರಣೆ ಮಾಡುವುದು ಅಥವಾ ಬೇಹುಗಾರಿಕೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು ಬಳಕೆದಾರರು ಅದರ ಸಕ್ರಿಯಗೊಳಿಸುವಿಕೆಯ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಿರುತ್ತಾರೆ ಮತ್ತು ಅದನ್ನು ಯಾವುದೇ ಸಮಯದಲ್ಲಿ ಅವರು ಡಿಲೀಟ್ ಮಾಡಬಹುದು, ಇದು ಸಂಪೂರ್ಣವಾಗಿಅವರ ಆಯ್ಕೆಯಾಗಿರುತ್ತದೆ. ಈ ಅಪ್ಲಿಕೇಶನ್ ಇರುವುದು ಗ್ರಾಹಕರ ರಕ್ಷಣೆಯ ಬಗ್ಗೆ” ಎಂದು ಅವರು ಹೇಳಿದರು, ಗ್ರಾಹಕರು ತಮ್ಮ ಸುರಕ್ಷತೆ ದೃಷ್ಟಿಯಿಂದ ಈ ಕ್ರಮಕ್ಕೆ ಮುಂದಾಗಲಾಗಿದೆ ಎಂದು ಒತ್ತಿ ಹೇಳಿದರು. ಸಂಚಾರ್ ಸಾಥಿ ಬಳಕೆಯನ್ನು ಸರ್ಕಾರ ಪ್ರೋತ್ಸಾಹಿಸುತ್ತಿದ್ದರೂ, ಅದನ್ನು ಮೊಬೈಲ್‌ನಲ್ಲಿ ಇಟ್ಟುಕೊಳ್ಳುವುದು ಬಿಡುವುದು ಸಂಪೂರ್ಣವಾಗಿ ಬಳಕೆದಾರರಿಗೆ ಬಿಟ್ಟದ್ದು ಎಂದು ಒತ್ತಿ ಹೇಳಿದರು.
ಆಪಲ್, ಸ್ಯಾಮ್‌ಸಂಗ್, ಗೂಗಲ್, ವಿವೋ, ಒಪ್ಪೊ ಮತ್ತು ಶಿಯೋಮಿ ಸೇರಿದಂತೆ ಪ್ರಮುಖ ಹ್ಯಾಂಡ್‌ಸೆಟ್ ತಯಾರಕರು ಭಾರತದಲ್ಲಿ ಫೋನ್‌ಗಳನ್ನು ತಯಾರಿಸುತ್ತಾರೆ, ಈ ಕಂಪನಿಗಳು ಕೇಂದ್ರ ಸರ್ಕಾರದ ಆದೇಶವನ್ನು ಪಾಲಿಸಬೇಕಾಗುತ್ತದೆ.


ನಿಮ್ಮ ಕಾಮೆಂಟ್ ಬರೆಯಿರಿ