ವೀಡಿಯೊ | ಪ್ರೋಟೋಕಾಲ್ ಮೀರಿ ವಿಮಾನ ನಿಲ್ದಾಣಕ್ಕೆ ತೆರಳಿ ರಷ್ಯಾ ಅಧ್ಯಕ್ಷರನ್ನು ಸ್ವಾಗತಿಸಿದ ಪ್ರಧಾನಿ ಮೋದಿ..! ರಷ್ಯಾಕ್ಕೆ ಅಚ್ಚರಿ

ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು, ಗುರುವಾರ (ಡಿಸೆಂಬರ್‌ 4)ಸಂಜೆ ದೆಹಲಿ ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಸ್ವಾಗತಿಸಿದರು. ಉಭಯ ನಾಯಕರು ಒಂದೇ ಕಾರಿನಲ್ಲಿ ಹೊರಡುವ ಮುನ್ನ, ಪರಸ್ಪರ ಹಸ್ತಲಾಘವ ಮಾಡಿ, ಆಲಿಂಗಿಸಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು.
ಈ ಭೇಟಿಯ ಸಂದರ್ಭದಲ್ಲಿ, ಪ್ರಧಾನಿ ಮೋದಿ ಅವರು ಪ್ರೋಟೋಕಾಲ್ (ಶಿಷ್ಟಾಚಾರ) ಮುರಿದು ತಮ್ಮ ಆತ್ಮೀಯ ಮಿತ್ರರಾದ ರಷ್ಯಾದ ಅಧ್ಯಕ್ಷರಿಗೆ ವೈಯಕ್ತಿಕವಾಗಿ ವಿಮಾನ ನಿಲ್ದಾಣಕ್ಕೆ ಬಂದು ಸ್ವಾಗತಿಸಿದ್ದು, ರಷ್ಯಾದ ಅಧಿಕಾರಿಗಳಿಗೆ ಅಚ್ಚರಿ ಮೂಡಿಸಿದೆ ಎಂದು ರಷ್ಯಾದ ಸರ್ಕಾರಿ ಸುದ್ದಿ ಸಂಸ್ಥೆ ‘ಸ್ಪುಟ್ನಿಕ್’ ವರದಿ ಮಾಡಿದೆ.
ಭಾರತದ ನೆಲದಲ್ಲಿ ಪುತಿನ್ ಅವರನ್ನು ವೈಯಕ್ತಿಕವಾಗಿ ಸ್ವಾಗತಿಸುವ ಪ್ರಧಾನಿ ಮೋದಿ ಅವರ ಈ ನಡೆಯ ಬಗ್ಗೆ ರಷ್ಯಾದ ಕಡೆಯವರಿಗೆ ಮುಂಚಿತವಾಗಿ ಮಾಹಿತಿ ನೀಡಲಾಗಿರಲಿಲ್ಲ ಎಂದು ವರದಿಯು ತಿಳಿಸಿದೆ. ಬಿಜೆಪಿಯು ಸಹ ಈ ಬಗ್ಗೆ ‘X’ ನಲ್ಲಿ ಪೋಸ್ಟ್ ಮಾಡಿದ್ದು, ವಾಡಿಕೆಯ ಪದ್ಧತಿಗಿಂತ ಭಿನ್ನವಾಗಿ, ಪ್ರಧಾನಿ ಮೋದಿ ಅವರು ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪುತಿನ್ ಅವರನ್ನು ವೈಯಕ್ತಿಕವಾಗಿ ಸ್ವಾಗತಿಸಿದರು ಎಂದು ಹೇಳಿದೆ.

ಇಬ್ಬರು ನಾಯಕರಿಂದ ಮಹತ್ವದ ಮಾತುಕತೆ
ಅಧ್ಯಕ್ಷ ಪುತಿನ್ ಅವರು ಎರಡು ದಿನಗಳ ಕಾಲ ಭಾರತದಲ್ಲಿ ಇರಲಿದ್ದು, ನಾಳೆ, ಶುಕ್ರವಾರ (ಡಿಸೆಂಬರ್‌ 5) ಪ್ರಧಾನಿ ಮೋದಿ ಅವರೊಂದಿಗೆ 23ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ (Annual Summit) ಭಾಗವಹಿಸಲಿದ್ದಾರೆ. ಗುರುವಾರ (ಡಿಸೆಂಬರ್‌ 4)ರಾತ್ರಿ , ಪ್ರಧಾನಿ ಮೋದಿ ಅವರು ತಮ್ಮ ಅಧಿಕೃತ ನಿವಾಸದಲ್ಲಿ ಪುತಿನ್ ಅವರಿಗಾಗಿ ಖಾಸಗಿ ಭೋಜನ ಕೂಟವನ್ನು ಏರ್ಪಡಿಸಿದ್ದಾರೆ.
ಒಂದೇ ಕಾರಿನಲ್ಲಿ ಪಯಣ
ಉಭಯ ನಾಯಕರು ಪ್ರಧಾನಿ ಮೋದಿ ಅವರು ಬಳಸುವ ಟೊಯೋಟಾ ಫಾರ್ಚುನರ್ (Toyota Fortuner) ಕಾರಿನಲ್ಲಿ ವಿಮಾನ ನಿಲ್ದಾಣದಿಂದ ಒಟ್ಟಿಗೆ ಪ್ರಯಾಣಿಸಿದರು. ಕಳೆದ ಸೆಪ್ಟೆಂಬರ್‌ನಲ್ಲಿ ಚೀನಾದಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆಯ (SCO) ಶೃಂಗಸಭೆಯ ಸಮಯದಲ್ಲಿ ಪುತಿನ್ ಅವರು ಪ್ರಧಾನಿ ಮೋದಿ ಅವರಿಗೆ ತಮ್ಮ ಅಧಿಕೃತ ಕಾರಿನಲ್ಲಿ ಪಯಣಿಸಲು ಆಹ್ವಾನ ನೀಡಿದ್ದರು.

ವಾಣಿಜ್ಯ ವಿಸ್ತರಣೆಯೇ ಮುಖ್ಯ ಗಮನ
ಶುಕ್ರವಾರ ಪ್ರಧಾನಿ ಮೋದಿ ಮತ್ತು ಪುತಿನ್ ನಡುವೆ ಮಹತ್ವದ ಮಾತುಕತೆ ನಡೆಯಲಿದೆ. ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಬೆಳೆಯುತ್ತಿರುವ ವ್ಯಾಪಾರ ಮತ್ತು ಆರ್ಥಿಕ ಸಹಕಾರವನ್ನು ವಿಸ್ತರಿಸುವುದೇ ಮಾತುಕತೆಗಳ ಪ್ರಮುಖ ಕೇಂದ್ರಬಿಂದುವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತವು ರಷ್ಯಾದಿಂದ ಸಮುದ್ರ ಉತ್ಪನ್ನಗಳು, ಆಲೂಗಡ್ಡೆ, ದಾಳಿಂಬೆ, ಸಂಸ್ಕರಿಸಿದ ಆಹಾರಗಳು, ಗ್ರಾಹಕ ಸರಕುಗಳು ಮತ್ತು ಔಷಧಗಳ ರಫ್ತು ಹೆಚ್ಚಿಸಲು ಒತ್ತು ನೀಡುತ್ತಿದೆ.
ಭಾರತವು ರಷ್ಯಾದ ರಸಗೊಬ್ಬರಗಳ ಮೇಲೆ ಹೆಚ್ಚು ಅವಲಂಬಿತವಾಗಿದ್ದು, ವಾರ್ಷಿಕವಾಗಿ 30 ರಿಂದ 50 ಲಕ್ಷ ಟನ್ ರಸಗೊಬ್ಬರಗಳನ್ನು ಆಮದು ಮಾಡಿಕೊಳ್ಳುತ್ತಿದೆ ಮತ್ತು ಈ ಸಹಕಾರವನ್ನು ಮತ್ತಷ್ಟು ಗಾಢಗೊಳಿಸುವ ನಿರೀಕ್ಷೆಯಿದೆ.

ಪ್ರಮುಖ ಸುದ್ದಿ :-   ಉದ್ಧವ್‌ಗೆ ಭಾರಿ ಹಿನ್ನಡೆ ; ಶಿಂಧೆ ಬಣದ ಜೊತೆ ಶಿವಸೇನೆ(ಯುಬಿಟಿ) 6 ಸಂಸದರ ವಿಲೀನಕ್ಕೆ ಲೋಕಸಭೆ ಸ್ಪೀಕರ್ ಅನುಮೋದನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement